ಲೋಪವೆಸಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ: ಸಂಸ್ಕೃತಿ ಸಚಿವೆ ಉಮಾಶ್ರೀ ಎಚ್ಚರಿಕೆ

Update: 2017-02-21 14:27 GMT

ಬೆಂಗಳೂರು, ಫೆ. 21: ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸುವ ಉನ್ನತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಎಚ್ಚರಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಜಾಗೃತಿ ಸಮಿತಿ ಅಧಿಕಾರೇತರ ಸದಸ್ಯರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೆಳಹಂತದಿಂದ ಹಿಡಿದು ಉನ್ನತ ಶ್ರೇಣಿ ಅಧಿಕಾರಿಗಳ ವರೆಗೂ ಎಲ್ಲರೂ ಕನ್ನಡ ಬಳಕೆ ಮಾಡಬೇಕು ಎಂದರು.

ಕನ್ನಡ ಜಾಗೃತಿ ಸಮಿತಿಗಳು ಎಲ್ಲ್ಲ ಹಂತಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಕ್ರಿಯಾಶೀಲವಾಗಿರಲು ಇದು ಸಕಾಲ ಎಂದ ಅವರು, ಕನ್ನಡ ಕಾವಲುಗಾರರು ಬೇರು ಮಟ್ಟದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಶೀಲರಾಗಬೇಕು ಎಂದರು.

ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ. ಪ್ರಾದೇಶಿಕ ಭಾಷೆಯನ್ನು ಉಳಿಸಲು ಎಲ್ಲರೂ ಶ್ರಮಿಸಬೇಕು. ಮಾತ್ರವಲ್ಲ, ಆ ನಿಟ್ಟಿನಲ್ಲಿ ಚಿಂತನಾ ಶೀಲ ಮತ್ತು ಪ್ರಯೋಗಶೀಲರಾಗಬೇಕು ಎಂದು ಉಮಾಶ್ರೀ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಇದೇ ವೇಳೆ ಮಹದೇವ ಬಣಕಾರರ ‘ಆಂಗ್ಲರ ಆಡಳಿತದಲ್ಲಿ ಕನ್ನಡ ಹಾಗೂ ಕನ್ನಡಪರ ಆಜ್ಞೆಗಳು-ಆದೇಶಗಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸಹಜವಾಗಿ ಆಡಳಿತ ಭಾಷೆಯಾಗಿ ಅರಳಿದ ಕನ್ನಡವನ್ನು ಈಗ ಒತ್ತಾಯದ ಮೂಲಕ ಆಡಳಿತ ಭಾಷೆಯನ್ನಾಗಿಸಲು ಪ್ರಯತ್ನಿಸುತ್ತಿರುವ ದುಃಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ವರ್ತಮಾನ ಕಟ್ಟಲು ಆಗದು: ಚರಿತ್ರೆಯನ್ನು ಮರೆತು ವರ್ತಮಾನ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಬ್ರಿಟಿಷರ ಆಡಳಿತ ಕಾಲದಲ್ಲಿ ಕನ್ನಡ ಬಳಕೆಯಾಗಿರುವ ವಿಧಾನ ಹಾಗೂ ರಾಜ್ಯ ಸರಕಾರವು ಕಾಲಕಾಲಕ್ಕೆ ಜಾರಿಗೊಳಿಸಿದ ಕನ್ನಡಪರ ಆದೇಶಗಳನ್ನು ಮನನ ಮಾಡಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ತಿಳಿಸಿದರು.

ಸಾರ್ವಜನಿಕ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಪ್ರಯೋಗಾಲಯಗಳಲ್ಲಿ ಆಗುತ್ತಿರುವ ಕನ್ನಡ ಭಾಷೆಯ ಅಪಬಳಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಜಾಗೃತ ಸಮಿತಿಯ ಸದಸ್ಯರು ಕಾರ್ಯನಿರತರಾಗಬೇಕೆಂದು ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಹೇಳಿದರು.
ಜ್ಞಾನದ ಪಠ್ಯಗಳನ್ನು ಕನ್ನಡದಲ್ಲಿ ರೂಪಿಸಿ ಪ್ರಕಟಿಸುವ ಮೂಲಕ ವಿಜ್ಞಾನ ಶಿಕ್ಷಣವನ್ನು ಕನ್ನಡದಲ್ಲಿಯೇ ಪಡೆಯಲು ಪ್ರೋತ್ಸಾಹ ಮತ್ತು ವಿಜ್ಞಾನ ಶಿಕ್ಷಣವನ್ನು ಜನಪ್ರಿಯಗೊಳಿಸುವ ಕಾರ್ಯವನ್ನು ಸರಕಾರ ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ ಸಲಹೆ ನೀಡಿದರು.

ಕನ್ನಡಕ್ಕೆ ಸಮಸ್ಯೆ ಎದುರಾದಾಗ ಆದೇಶ-ಸಂದೇಶ ಯಾವುದೂ ಇಲ್ಲದೆ ಕೇವಲ ಒಂದು ಕನ್ನಡ ಬಾವುಟವನ್ನು ಹಿಡಿದು ಬೀದಿಗೆ ಇಳಿಯುವ ಕನ್ನಡಪರ ಸಂಘಟನೆಯ ಕಾರ್ಯಕರ್ತರಿಂದಲೇ ಕನ್ನಡ ಉಳಿದಿದೆಯೇ ಹೊರತು ಶಾಸಕರು, ಸಾಹಿತಿಗಳಿಂದ ಅಲ್ಲ ಎಂದು ಪ್ರೊ.ಚಂದ್ರಶೇಖರ ಪಾಟೀಲ್ ನುಡಿದರು.

ಕನ್ನಡಪರ ಕಾರ್ಯಕರ್ತರು ಹಾಗೂ ಸ್ಥಳೀಯ ಮಟ್ಟದ ಸ್ವಾಭಿಮಾನಿ ಕನ್ನಡಿಗರನ್ನು ಒಳಗೊಳ್ಳುವ ಮೂಲಕ ಕನ್ನಡ ಭಾಷೆ ಅನುಷ್ಠಾನಕ್ಕೆ ಮುಂದಾಗಬೇಕು. ಕನ್ನಡದ ಕೆಲಸ ಸ್ವಪ್ರೇರಣೆಯಿಂದ ಆಗಬೇಕು ಮತ್ತು ಅದಕ್ಕೆ ಜನಾಂದೋಲನದ ಸ್ವರೂಪ ನೀಡಬೇಕು. ಚಳವಳಿ ಇಲ್ಲದೆ ಚಲನೆ ಸಾಧ್ಯವಿಲ್ಲವೆಂದು ಚಂಪಾ ಹೇಳಿದರು.

ಸಮಾರೋಪ ಭಾಷಣ ಮಾಡಿದ ಡಾ.ಕೆ.ಮರುಳಸಿದ್ದಪ್ಪ, ಪ್ರೀತಿ-ವಿಶ್ವಾಸ, ಅನುಸಂಧಾನದ ಮೂಲಕ ಮಾತ್ರ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯ. ಬೇರಿನ ಜೊತೆ ಸಂಪರ್ಕವಿಟ್ಟುಕೊಂಡರೆ ಮಾತ್ರ ಚಿಗುರಿಗೆ ಜೀವ. ಅದೇ ರೀತಿಯಲ್ಲಿ ಕನ್ನಡ ಜಾಗೃತಿ ಸಮಿತಿ ಪ್ರಾಧಿಕಾರದ ಆಶಯಗಳನ್ನು ಬೇರುಮಟ್ಟದಲ್ಲಿ ತಲುಪಿಸಲು ಸಂಪರ್ಕ ಜಾಲದಂತೆ ಕಾರ್ಯನಿರ್ವಹಿಸಬೇಕು ಎಂದರು.

 ಭಾರತೀಯ ಚರಿತ್ರೆಯಲ್ಲಿ ಬಳಕೆಯಿಲ್ಲದ ಭಾಷೆಯು ಬಳಕೆಯಲ್ಲಿರುವ ಭಾಷೆಯ ಮೇಲೆ ದಬ್ಬಾಳಿಕೆ ಮಾಡಿರುವುದು ಕಂಡುಬಂದಿದೆ. ಇದು ವಿಪರ್ಯಾಸ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡುವ ಮೂಲಕ ಮತ್ತು ಕೇಂದ್ರ, ಸಿಬಿಎಸ್ಸಿ, ಕೇಂಬ್ರಿಡ್ಜ್ ಯಾವುದೇ ಶಾಲೆಗಳು ಸ್ಥಳೀಯವಾಗಿ ಪ್ರಾರಂಭಿಸಲು ಆಯಾ ರಾಜ್ಯದ ಅನುಮತಿ ಪಡೆಯಬೇಕು ಮತ್ತು ಕಡ್ಡಾಯವಾಗಿ ಸ್ಥಳೀಯ ಭಾಷೆಯ ಶಿಕ್ಷಣ ನೀಡಬೇಕೆಂದು ಅವರು ಸೂಚಿಸಿದರು.

ಮಹದೇವ ಬಣಕಾರರ ಪತ್ನಿ ಪಾರ್ವತಮ್ಮ, ಸೊಸೆ ಪುಷ್ಪಾ ಬಸವರಾಜ, ನಟ ದೊಡ್ಡಣ್ಣ, ಪ್ರಕಾಶ್ ಜೈನ್, ಗಿರೀಶ್ ಪಟೇಲ್, ದಿನೇಶ್, ಪ್ರಭಾಕರ ಪಾಟೀಲ್, ರಾ.ನಂ.ಚಂದ್ರಶೇಖರ್, ಪ್ರಾಧಿಕಾರದ ಕಾರ್ಯದರ್ಶಿ ಕೆ.ಮುರುಳೀಧರ ಸೇರಿದಂತೆ ಇನ್ನಿತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

‘ಮನುಷ್ಯನ ಮೊದಲ ಶತ್ರು ಜಾತಿ. ಹೀಗಾಗಿ ಜಾತಿಯನ್ನು ತೊಡೆದುಹಾಕುವುದರ ಜೊತೆಗೆ ನೆಲ, ಜಲ, ಭಾಷೆ ರಕ್ಷಣೆಗಾಗಿ ಬದ್ಧತೆ ಅಗತ್ಯ. ಭಾಷೆಯಿಲ್ಲದೆ ಕರ್ನಾಟಕಕ್ಕೆ ಬದುಕಿಲ್ಲ. ಕನ್ನಡ ಭಾಷೆ ಬಗೆಗಿನ ಜಾಗೃತಿ ಆಂದೋಲನ ಗ್ರಾಮೀಣ ಪ್ರದೇಶಕ್ಕೆ ತಲುಪಬೇಕು’
-ದೊಡ್ಡಣ್ಣ ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News