ಅಸ್ಪಶ್ಯರ ಧರ್ಮಾಂತರ ಮತ್ತು ಅವರ ರಾಜಕೀಯ ಹಕ್ಕು

Update: 2017-02-23 18:38 GMT

ಭಾಗ-1

ಅಸ್ಪಶ್ಯರು ಧರ್ಮಾಂತರ ಮಾಡಿಕೊಂಡರೆ ಅವರಿಗೆ 1935ರ ಕಾಯ್ದೆಯಂತೆ ಯಾವ ರಾಜಕೀಯ ಹಕ್ಕುಗಳನ್ನು ಕೊಡಲಾಗಿ ದೆಯೋ, ಅವುಗಳನ್ನು ಅನುಭವಿಸುವ ಹಕ್ಕು ಇರುವುದೋ ಇಲ್ಲವೋ ಎಂಬುದೊಂದು ದೊಡ್ಡ ವಾದಗ್ರಸ್ತ ಪ್ರಶ್ನೆ. ಧರ್ಮಾಂತರದ ಘೋಷಣೆ ಮಾಡುವ ಮೊದಲು ಈ ಪ್ರಶ್ನೆಯನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಲ್ಲ ಕೋನಗಳಿಂದಲೂ ವಿಚಾರ ಮಾಡಿದ್ದರು. ಈ ಪ್ರಶ್ನೆಯನ್ನು ಸ್ಪಶ್ಯರೂ, ಅಸ್ಪಶ್ಯರೂ ಸಭೆಗಳಲ್ಲಿ ಮತ್ತು ವರ್ತಮಾನ ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಎತ್ತಿದ್ದಾರೆ. ಆಗೆಲ್ಲ ಸಾಹೇಬರು ಅವರಿಗೆ ಕಡ್ಡಿ ಮುರಿದಂತೆ ಉತ್ತರ ಕೊಟ್ಟಿದ್ದಾರೆ ಮತ್ತು ಅಸ್ಪಶ್ಯರು ಧರ್ಮಾಂತರ ಮಾಡಿದರೆ, ಅವರಿಗೆ ಅಸ್ಪಶ್ಯರೆಂದು ಸಿಗುವ ರಾಜಕೀಯ ಹಕ್ಕು, ಧರ್ಮಾಂತರದ ನಂತರವೂ ಅನುಭವಿಸಲು ಸಿಗುತ್ತದೆ ಎಂದು ತಮ್ಮ ವಿಚಾರ ಪ್ರಕಟಿಸಿದ್ದಾರೆ. ಈ ವಿಷಯದಲ್ಲಿ ಸಂಶಯ ಇರುವವರ ಸಂದೇಹ ನಿವೃತ್ತಿಗಾಗಿ, ‘ಜನತೆ’ಯ 25 ಜುಲೈ ಮತ್ತು 1 ಆಗಸ್ಟ್ 1936ರ ಜೊತೆ ಅಂಕಣದಲ್ಲಿ ಬರೆದ, ಮೇಲಣ ಶೀರ್ಷಿಕೆಯ ಅಗ್ರಲೇಖನ ಇಂತಿದೆ:

ಅಸ್ಪಶ್ಯ ವರ್ಗವು ಹಿಂದೂಧರ್ಮವನ್ನು ತ್ಯಜಿಸಿ, ಪರಧರ್ಮವನ್ನು ಅಂಗೀಕಾರ ಮಾಡುವ ತನ್ನ ಮನೋದಯ ವನ್ನು ವ್ಯಕ್ತ ಮಾಡಿದಂದಿನಿಂದ ಹಿಂದೂಗಳಲ್ಲಿ ದೊಡ್ಡ ಕಳವಳವೇ ಉಂಟಾಗಿದೆ. ಧರ್ಮಾಂತರದ ಚಳವಳಿಯನ್ನು ಅಡಗಿಸಲು ಹಿಂದೂಗಳು ಬಲವಾದ ಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಯಾವ ಮಾರ್ಗವನ್ನು ಅವಲಂಬಿಸುತ್ತಿದ್ದಾರೋ, ಆ ಮಾರ್ಗವು ನ್ಯಾಯಾನ್ಯಾಯದ ಪರಿಜ್ಞಾನವಿರುವ ಯಾವುದೇ ವ್ಯಕ್ತಿಗೆ ಶಿಷ್ಟಸಮ್ಮತವಾಗುವಂತಿಲ್ಲ ಎಂದು ನಮಗೆ ಖಂಡಿತವಿದೆ. ಯಾವ್ಯಾವಾಗ ಅಸ್ಪಶ್ಯರು ಸ್ವಾಭಿಮಾನ ಸಂರಕ್ಷಣೆಗಾಗಿ ಸ್ವತಂತ್ರತೆಯ ಮಾರ್ಗದಲ್ಲಿ ಹೆಜ್ಜೆಯಿಟ್ಟು ತಮ್ಮ ಪ್ರಗತಿ ಸಾಧಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದರೋ, ಆವಾಗೆಲ್ಲ ಹಿಂದೂಗಳು, ಜಾತಿ ಹಿತದ ಮತ್ತು ಶ್ರೇಷ್ಠತೆಯ ಭಾವನೆಗೆ ಬಲಿಬಿದ್ದು, ಅಸ್ಪಶ್ಯರನ್ನು ಸುಮ್ಮನಿರಿಸಲು ಹಿಂದಿನಿಂದಲೂ ಯಾವ ಶಸ್ತ್ರದ ಉಪಯೋಗ ಮಾಡುತ್ತಾ ಬಂದಿದ್ದಾರೋ, ಆ ಶಸ್ತ್ರವನ್ನೇ ಅಸ್ಪಶ್ಯರ ಧರ್ಮಾಂತರದ ಘೋಷಣೆ ಯನ್ನು ವಿರೋಧಿಸಲು ಉಪಯೋಗಕ್ಕೆ ತರುವ ಉಪಕ್ರಮವನ್ನು ಅವರು ಆರಂಭಿಸಿದ್ದಾರೆ. ಹಿಂದೂ ಜಮೀನ್ದಾರರು ಅಸ್ಪಶ್ಯರಿಂದ ಜಮೀನು ಪಡೆದುಕೊಳ್ಳುತ್ತಾರೆ. ಹಾಗೆಯೇ, ಹಿಂದೂಗಳು ಅಸ್ಪಶ್ಯರ ಮೇಲೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

ಆದರೆ ಅಸ್ಪಶ್ಯರನ್ನು ಗುಲಾಮಗಿರಿಯಲ್ಲಿ ಅದ್ದಿ ಇಡಲೆಂದು ಯೋಜಿಸಿರುವ ಈ ಪುರಾತನ ಉಪಾಯದಿಂದ ಏನೂ ಉಪಯೋಗವಾಗದೆ, ಅಸ್ಪಶ್ಯರ ಧರ್ಮಾಂತರದ ಚಳವಳಿ, ಅಪ್ರತಿಹತವಾಗಿ ಎಲ್ಲೆಡೆಯೂ ಪಸರಿಸುತ್ತಿದೆ.

ಅಸ್ಪಶ್ಯರನ್ನು ಅಂಕೆಗೆ ತರುವ ಹಳೆಯ ಉಪಾಯವು ಸಾಲದೆಂದು, ಹಿಂದೂಗಳು ಅಸ್ಪಶ್ಯರನ್ನು ದಂಗುಬಡಿಸುವ ಹೊಸದೊಂದು ಉಪಾಯವನ್ನು ಆರಿಸಿಕೊಂಡಿದ್ದಾರೆ. ಅಸ್ಪಶ್ಯರು ಧರ್ಮಾಂತರ ಹೊಂದಿದರೆ, ಅವರಿಗೆ ಹೊಸ ಸಂವಿಧಾನದಂತೆ ಪ್ರಾಪ್ತವಾದ ರಾಜಕೀಯ ಹಕ್ಕುಗಳಿಗೆ ಚ್ಯುತಿ ಬಂದಂತೆ ಎಂದು ಸಾರುತ್ತಿದ್ದಾರೆ. ಈ ವರೆಗೆ, ಅಸ್ಪಶ್ಯರು ಧರ್ಮಾಂತರ ಮಾಡಿದರೆ ಅವರ ರಾಜಕೀಯ ಹಕ್ಕು ನಷ್ಟವಾಗುವುದು ಎಂಬ ಸೂಚನೆಯನ್ನು, ಅಸ್ಪಶ್ಯ ವರ್ಗದೊಡನೆ ಸಹಾನುಭೂತಿಯಿದ್ದ ಕೆಲ ಸ್ಪಶ್ಯ ಹಿಂದೂಗಳು ಆಗಾಗ ಕೊಡುತ್ತಾ ಬಂದಿದ್ದಾರೆ. ಇವರು ಅಸ್ಪಶ್ಯ ವರ್ಗದ ವಿರೋಧಿಗಳಾಗಿರದೆ, ಹಿತಚಿಂತಕರೇ ಆಗಿದ್ದಾರೆ. ಆದರೆ ಇದನ್ನೇ ಇವರ ವಿರೋಧಿಗಳು ಬೆದರಿಕೆ ಎಂದು ಗ್ರಹಿಸಿದ್ದಾರೆ. ದಿ. 21ರ ‘ಜನ್ಮಭೂಮಿ’ ಎಂಬ ಗುಜರಾತಿ ದೈನಿಕದಲ್ಲಿ, ಧರ್ಮಾಂತರವಾದರೆ ತಮಗೆ ಸಿಗಲಿದ್ದ ರಾಜಕೀಯ ಸವಲತ್ತು ನಷ್ಟವಾಗುವುದೆಂದು ಅಸ್ಪಶ್ಯರು ಭೀತರಾಗಿದ್ದಾರೆ ಎಂದು ಪ್ರಕಟಿಸಲಾಗಿತ್ತು.

ಅಂಬೇಡ್ಕರರೂ ಇದರಿಂದ ಗಲಿಬಿಲಿಗೊಂಡು, ಚುನಾವಣೆಗೆ ಉಮೇದುವಾರನಾಗಿರಲೊಪ್ಪದೆ, ತಮ್ಮ ಅನುಯಾಯಿಗಳಿಗೂ ಅದೇ ಸಲಹೆ ಇತ್ತಿದ್ದಾರೆ. ‘ಬಾಂಬೇ ಕ್ರಾನಿಕಲ್’ನ ದಿ. 22ರ ಅಂಕಣದಲ್ಲಿ ಈ ಪತ್ರಿಕೆಯ ಪ್ರತಿನಿಧಿಯು ಡಾ. ಅಂಬೇಡ್ಕರರು, ಧರ್ಮಾಂತರದ ಕಾರಣ ರಾಜಕೀಯ ಹಕ್ಕು ಹಿಂದೆಗೆಯಲ್ಪಡುವುದೇ, ಏನೆಂದು ತಿಳಿಯಲು ಮುಂಬೈ ಸರಕಾರದೊಡನೆ ಪತ್ರ ವ್ಯವಹಾರ ನಡೆಸಿದಾಗ ಸರಕಾರವು, ಧರ್ಮಾಂತರ ಮಾಡಿದವರಿಗೆ, ಅಸ್ಪಶ್ಯರಿಗಾಗಿ ಕಾಯ್ದೆ ಕೌನ್ಸಿಲ್‌ನಲ್ಲಿ ಕಾದಿರಿಸಿದ ಸ್ಥಳಕ್ಕೆ ಉಮೇದುವಾರರಾಗುವುದು ಸಾಧ್ಯವಿಲ್ಲವೆಂದು ತಿಳಿಸಿತು ಎಂದು ಬರೆದಿದ್ದಾರೆ. ಈ ವಿಷಯದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಪ್ರತಿನಿಧಿಗೆ ಕೊಟ್ಟ ಸಂದರ್ಶನ, ಆ ಪತ್ರಿಕೆಯ ದಿ.24ರ ಅಂಕಣ ದಲ್ಲಿ ಪ್ರಕಟವಾಗಿದೆ. ಈ ಸಂದರ್ಶನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರರು ಅಸ್ಪಶ್ಯರಿಗೆ ದೊರಕಿದ ರಾಜಕೀಯ ಹಕ್ಕಿನ ಮೇಲೆ ಧರ್ಮಾಂತರ ದಿಂದಾಗಿ ಕಾಯ್ದೆಯ ದೃಷ್ಟಿಯಿಂದ ಆಗುವ ಪರಿಣಾಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸವಿಸ್ತಾರವಾಗಿ ವ್ಯಕ್ತಪಡಿಸಿದ್ದಾರೆ.

ಧರ್ಮಾಂತರದಿಂದ ಅಸ್ಪಶ್ಯರ ರಾಜಕೀಯ ಹಕ್ಕು ನಷ್ಟವಾಗುವುದೆಂದು ಎಚ್ಚರಿಸುವ ವೃತ್ತಪತ್ರಗಳಿಗೆ ತಮ್ಮ ವಿಚಾರ ಸರಣಿ ತಪ್ಪಲ್ಲವೆಂಬುದು ಖಂಡಿತವಿಲ್ಲ.

ಆದರೆ, ಡಾ.ಅಂಬೇಡ್ಕರರು ತಮ್ಮ ಸಂದರ್ಶನವನ್ನು ಪ್ರಕಟಿಸಿದ ನಂತರ, ಯಾರೆಲ್ಲ ಸುಮಾರು ಒಂದು ವಾರದಿಂದ ನಿರ್ಲಜ್ಜರಾಗಿ ಕುಣಿಯುತ್ತಿದ್ದರೋ, ಅವರೆಲ್ಲ ಈಗ ಬಾಯಿಮುಚ್ಚಿ ಸುಮ್ಮನಿರುವುದು ಕಾಣುತ್ತಿದೆ. ಡಾ. ಅಂಬೇಡ್ಕರರು ತಮ್ಮ ತರ್ಕಶುದ್ಧ ವಿಚಾರಸರಣಿಯಿಂದ ಈ ವಿಷಯದ ಚರ್ಚೆಯನ್ನು ಎಷ್ಟೊಂದು ವಸ್ತುನಿಷ್ಠವಾಗಿ ಮಾಡಿದ್ದಾರೆಂದರೆ, ಅಸ್ಪಶ್ಯವರ್ಗದ ಪ್ರತಿಸ್ಪರ್ಧಿಗಳಿಗೆ ಧರ್ಮಾಂತರದಿಂದ ಅಸ್ಪಶ್ಯರ ರಾಜಕೀಯ ಹಕ್ಕು ನಷ್ಟವಾಗುವುದು ಎಂದಿದ್ದ ವಿಶ್ವಾಸ ಈಗ ಕುಂಠಿತವಾಗಿದೆ. ಎಷ್ಟೆಂದರೆ, ಯಾರೆಲ್ಲ ಮೊದಲ ದಿನ ಅಸ್ಪಶ್ಯರನ್ನು ತಬ್ಬಿಬ್ಬಾಗಿಸುವ ಅಗ್ರಲೇಖನ ಬರೆದರೋ, ಅವರೆಲ್ಲ ಮರುದಿನ ನಾಲಗೆ ಕಡಿದುಕೊಂಡು, ತಮ್ಮಿಂದ ತಪ್ಪಾಯ್ತೆಂದು ಪುನಃ ಲೇಖನ ಬರೆದು, ಡಾ.ಅಂಬೇಡ್ಕರರ ವಿವರಣೆ ಹಾಗೂ ಮಂಡಿಸಿದ ವಿಚಾರ ಸರಣಿ ಕಾಯ್ದೆಬದ್ಧವಾಗಿ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಧರ್ಮಾಂತರದಿಂದ ರಾಜಕೀಯ ಹಕ್ಕಿಗೆ ಬಾಧೆ ಬರುತ್ತದೋ ಇಲ್ಲವೋ ಎಂಬ ಬಗ್ಗೆ ಡಾ.ಅಂಬೇಡ್ಕರರು, ಮಹಾರ್ ಪರಿಷತ್‌ನಲ್ಲಿ ಮಾಡಿದ ಭಾಷಣದಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ‘ಜನತೆ’ಯ ಓದುಗರು ಆ ಭಾಷಣವನ್ನು ಓದಿರುವುದರಿಂದ ಪುನಃ ಆ ವಿಷಯದ ಚರ್ಚೆಯನ್ನು ‘ಜನತೆ’ಯಲ್ಲಿ ಮಾಡುವ ಆವಶ್ಯಕತೆಯಿಲ್ಲ. ಆದರೆ ಈ ವಿಷಯ ಅತ್ಯಂತ ಮಹತ್ವದ್ದಾಗಿದ್ದು, ಅಸ್ಪಶ್ಯ ಸಮಾಜವು ನವೀನ ರಾಜಕೀಯ ಸಂವಿಧಾನದ ವಿಷಯದಲ್ಲಿ ಜ್ಞಾನಹೀನವಾಗಿರುವುದರಿಂದ ಈ ವಿಷಯದಲ್ಲಿ ಅವರನ್ನು ದಿಕ್ಕು ತಪ್ಪಿಸಲು ಯಾರಿಗೂ ಆಗುವುದಿಲ್ಲವಾಗಿ, ಪುನಃ ಚರ್ಚೆ ಮಾಡ ಬೇಕಾಗಿ ಬಂದಿದೆ. ಕಳೆದ ವಾರ ಹಿಂದೂ ವಿರೋಧಿಗಳು ಎಬ್ಬಿಸಿದ ಬಿರುಗಾಳಿಯಲ್ಲಿ, ಅನೇಕ ವಿಷಯಗಳು ಮಂಡಿಸಲ್ಪಟ್ಟವು. ಇವುಗಳಲ್ಲಿ ಮೊದಲ ಪ್ರಮುಖ ವಿಷಯವೆಂದರೆ, ಅಸ್ಪಶ್ಯರು ಹಿಂದೂ ಧರ್ಮವನ್ನು ತ್ಯಜಿಸಿ, ಹಿಂದೂ ದೇವರುಗಳನ್ನೂ, ಧರ್ಮ ಗ್ರಂಥಗಳನ್ನೂ ಮನ್ನಿಸದಿರುವ ನಿರ್ಧಾರಕ್ಕೆ ಬಂದಿರುವುದರಿಂದ, ಅವರಿಗೆ ಕೊಡಲಾದ ರಾಜಕೀಯ ಹಕ್ಕುಗಳನ್ನು ಉಪಭೋಗಿಸಲು ಅವರು ಅಪಾತ್ರರಾಗಿರುತ್ತಾರೆ ಎಂಬುದು. ಅಂದರೆ, ಆ ಹಕ್ಕುಗಳನ್ನು ಉಳಿಸಿಕೊಳ್ಳಬೇಕಾದರೆ, ಅಸ್ಪಶ್ಯರು ಹಿಂದೂ ಧರ್ಮದಲ್ಲೇ ಉಳಿಯಬೇಕು ಎಂಬುದು ತಾತ್ಪರ್ಯ.

ತಾವು ಹಿಂದೂಗಳಲ್ಲವೆಂದು ಅವರು ಅನ್ನುವುದಾದರೆ, ಅವರು ತಮ್ಮ ರಾಜಕೀಯ ಹಕ್ಕನ್ನು ಕಳಕೊಂಡಂತೆಯೇ. ಮೀನುಗಾರನು ಬಲೆಯನ್ನು ಬೀಸಿ ಹರವಿ, ಅದರೊಳಕ್ಕೆ ಬಂದ ಮೀನುಗಳನ್ನು ಹಿಡಿಯಲು ಯತ್ನಿಸುವಂತೆ ಅಸ್ಪಶ್ಯರನ್ನೂ ತಮ್ಮ ಜಾಲದಲ್ಲಿ ಸಿಕ್ಕಿಸುವ ಹಿಂದೂಗಳ ಯತ್ನ ಸಫಲವಾಗುವಂತಿಲ್ಲ. ಹಾಗಾಗಲು ಹಿಂದೂ ಅನ್ನುವುದು ಯಾರನ್ನು ಎಂಬ ಬಗ್ಗೆ ಕಾಯ್ದೆಬದ್ಧ ವ್ಯಾಖ್ಯೆ ಇರುವುದು ಅಗತ್ಯ. ಆದರೆ ಇದುವರೆಗೆ ಹಿಂದೂ ಎಂಬ ಶಬ್ದದ ಸರ್ವಸಾಮಾನ್ಯ ವ್ಯಾಖ್ಯೆಯನ್ನು ಯಾರೂ ಕೊಟ್ಟಿಲ್ಲ. ಹಿಂದೂ ಧರ್ಮದ ವ್ಯಾಖ್ಯೆ ಮಾಡುವುದು ಎಷ್ಟು ಕಷ್ಟವೆಂದರೆ ಯಾವುದೇ ಧರ್ಮದ ಅನುಯಾಯಿ ಅಲ್ಲದವರು, ಹಿಂದೂ ಧರ್ಮದ ಅನುಯಾಯಿ ಎಂದು ತಜ್ಞರೊಬ್ಬರು ವ್ಯಾಖ್ಯಾನಿಸಿದ್ದಾರೆ. ಸ್ವತಃ ಹಿಂದೂ ಮಹಾಸಭೆಯೇ, ಹಿಂದೂಸ್ಥಾನದಲ್ಲಿ ಉತ್ಪನ್ನವಾದ ಯಾವುದೇ ಧರ್ಮದ ಅನುಯಾಯಿ, ಹಿಂದೂ ಎಂದು ವ್ಯಾಖ್ಯಾನಿಸಿದೆ ಮತ್ತು ಹಿಂದೂ ಎಂಬ ಶಬ್ದದಲ್ಲಿ ಸನಾತನಿ, ಆರ್ಯಸಮಾಜ, ಜೈನ, ಸಿಖ್ಖ, ಬೌದ್ಧ ಮತ್ತು ಬ್ರಾಹ್ಮೋ ಮುಂತಾದ ಎಲ್ಲರ ಸಮಾವೇಶ ಇದೆಯೆಂದು ತನ್ನ ನಿಯಮಾವಳಿಗಳಲ್ಲಿ ಹೇಳಿದೆ. ಎಲ್ಲಿ ಹಿಂದೂ ಯಾರು ಮತ್ತು ಯಾರೂ ಹಿಂದೂ ಅಲ್ಲ ಎಂಬುದೇ ಅನಿಶ್ಚಿತವಿರುವಾಗ ಅಲ್ಲಿ ಅಸ್ಪಶ್ಯರನ್ನು ಹಿಂದೂ ಅಥವಾ ಅಲ್ಲ ಅನ್ನುವ ಯತ್ನ ನಿಷ್ಫಲವೇ ಆಗುತ್ತದೆ. ಹಿಂದೂ ಧರ್ಮವು ಎಂಥ ಜಾಲವೆಂದರೆ, ಸಡಿಲ ನಾಲಗೆಯ, ಕೆಚ್ಚೆದೆಯ ವ್ಯಕ್ತಿ ಮಾತ್ರ ಅಲ್ಲಿ ಹೊಕ್ಕು ಹೊರಬರಬಹುದು. ಇಂತಹ ಸ್ಥಿತಿಯಲ್ಲಿ ಹಿಂದೂಗಳು ಎತ್ತಿದ ಈ ಪ್ರಶ್ನೆಯ ಬಗ್ಗೆ ವಿಚಾರ ಮಾಡುವ ಆವಶ್ಯಕತೆಯೇ ಇಲ್ಲ. ಆದರೆ ಪ್ರಶ್ನೆ ಮಹತ್ವದ್ದಾದ್ದರಿಂದ ಇಂತಹ ಪ್ರಾಸ್ತಾವಿಕ ವಿಷಯದ ಬಗ್ಗೆ ಉತ್ತರ ಹುಡುಕಿ ಬಿಟ್ಟು ಬಿಡುವುದು ನಮಗೆ ಯೋಗ್ಯವಾಗಿ ಕಾಣುವುದಿಲ್ಲ.

ರಾಜಕೀಯ ಹಕ್ಕು ಅನುಭವಿಸಲು, ಅಸ್ಪಶ್ಯರನ್ನು ಹಿಂದೂಗಳೆಂದೇ ಪರಿಗಣಿಸಬೇಕೇ ಎಂಬ ಪ್ರಶ್ನೆಗೆ ಎರಡು ಮಜಲುಗಳಿವೆ. ಒಂದು, ಹಿಂದೂ ಧರ್ಮವನ್ನು ತ್ಯಜಿಸಿದರೆ, ಅವರ ರಾಜಕೀಯ ಹಕ್ಕಿನ ಮೇಲೆ ಯಾವ ಪರಿಣಾಮವಾಗುವುದೆಂಬುದು, ಮತ್ತಿನ್ನೊಂದು, ಸ್ವಧರ್ಮವನ್ನು ತೊರೆದು ಪರಧರ್ಮವನ್ನು ಅಂಗೀಕರಿಸಿದರೆ ಅವರ ರಾಜಕೀಯ ಹಕ್ಕಿನ ಮೇಲೆ ಯಾವ ಪರಿಣಾಮ ಆಗುವುದೆಂಬುದು. ಹಿಂದೂಗಳು ಪ್ರಸ್ತುತಪಡಿಸಿದ ವಿಷಯವನ್ನು ವಾಚಕರ ತಿಳುವಳಿಕೆಗಾಗಿ ಒಂದೊಂದಾಗಿಯೇ ವಿಚಾರ ಮಾಡುವುದು ಯುಕ್ತ. ಮೊದಲಾಗಿ, ಹಿಂದೂ ಧರ್ಮವನ್ನು ತ್ಯಜಿಸಿದರೆ ಏನಾಗುವುದು? ಅವರ ರಾಜಕೀಯ ಹಕ್ಕನ್ನು ಕಳಕೊಳ್ಳಬೇಕಾಗುವುದೇ? ಈ ಕುರಿತು ವಿಚಾರ ಮಾಡುವಾಗ ಗವರ್ಮೆಂಟ್ ಆಫ್ ಇಂಡಿಯಾ ಆ್ಯಕ್ಟ್‌ನಂತೆ ವಿಭಿನ್ನ ಜಾತಿಗಳಿಗೆ ಯಾವ ಪ್ರತಿನಿಧಿತ್ವ ಕೊಡಲಾಗಿದೆಯೆಂದು ತಿಳಿಸುವ ಕಲಮಿನ ಪರಿಚಯ ಮಾಡಿಕೊಳ್ಳುವುದು ಅತ್ಯಂತ ಅಗತ್ಯ. ಯಾರು ಈ ವಿಷಯವನ್ನೆತ್ತಿರುವರೋ ಅವರು ಕಾಯ್ದೆಯಲ್ಲಿ ಮಾಡಲಾಗಿರುವ ಅಸ್ಪಶ್ಯ ವರ್ಗದ ವ್ಯಾಖ್ಯೆಯೆಡೆಗೆ ಲಕ್ಷ ಹರಿಸಬೇಕೆಂದು ನಮ್ಮ ಸೂಚನೆ. ಈ ವ್ಯಾಖ್ಯೆ, ಗವರ್ಮೆಂಟ್ ಆಫ್ ಇಂಡಿಯಾ ಆ್ಯಕ್ಟ್‌ನ ಮೊದಲನೆ ಪರಿಚ್ಛೇದದ 26ನೆ ಕಲಮಿನಲ್ಲಿ ಕೊಡಲಾಗಿದೆ. ಈ ಕಲಮಿನಲ್ಲಿ ಅಸ್ಪಶ್ಯ ವರ್ಗ ಎಂಬ ಪದ ಪ್ರಯೋಗ ಇಲ್ಲವೇ ಇಲ್ಲ. ಇಲ್ಲಿರುವುದು ‘ಶೆಡ್ಯೂಲ್ಡ್ ಕಾಸ್ಟ್’ ಅನ್ನುವ ಪದಪ್ರಯೋಗ. ಈ ಶಬ್ದ ಪ್ರಯೋಗದಿಂದ 26ನೆ ಕಲಮಿನಲ್ಲಿ ಕೊಟ್ಟಿರುವ ವ್ಯಾಖ್ಯೆ, ಧರ್ಮದ ಮೇಲೆ ಅವಲಂಬಿತವಲ್ಲ ಎಂಬುದು ಸ್ಪಷ್ಟವಿದೆ.

ಸಾಮ್ರಾಟ್ ಬಾದಶಹ ಮತ್ತು ಅವರ ಕೌನ್ಸಿಲ್, ಯಾವ ಜಾತಿಯನ್ನು ಈ ಪಟ್ಟಿಯಲ್ಲಿ ಸೇರಿಸಿದೆಯೋ, ಅದನ್ನು ಶೆಡ್ಯೂಲ್ಡ್ ಕಾಸ್ಟ್ ಅನ್ನಲಾಗುತ್ತದೆ. ಶೆಡ್ಯೂಲ್ಡ್ ಕಾಸ್ಟ್‌ನ ವ್ಯಾಖ್ಯೆ ಹೀಗಿದೆ. ಶೆಡ್ಯೂಲ್ಡ್ ಕಾಸ್ಟ್ ಅಂದರೆ, ಪೂರ್ವದ ಅಸ್ಪಶ್ಯರು ಮತ್ತು ಡಿಪ್ರೆಸ್ಡ್ ಕ್ಲಾಸಸ್ ಎಂದು ವ್ಯಾಖ್ಯೆಯಲ್ಲಿ ಹೇಳಲಾಗಿದೆ. ಹಾಗೆಯೇ ಯಾವ ಜಾತಿಯನ್ನು ಲಿಸ್ಟ್‌ನಲ್ಲಿ ಶೆಡ್ಯೂಲ್ಡ್ ಕಾಸ್ಟ್‌ನ ಅಡಿಯಲ್ಲಿ ಸೇರಿಸಲಾಗಿದೆಯೋ ಅದರ ಉಲ್ಲೇಖ ಮಾಡುತ್ತಾ ಹಿಂದೂ ಪೈಕಿ ಯಾವುದೋ ಒಂದು ಜಾತಿ ವಿಶೇಷಣಾತ್ಮಕ ವಚನವನ್ನೇನೂ ಉಪಯೋಗಿಸಿಲ್ಲ. ಇದು, ಪರಿಶಿಷ್ಟ 1, ಕಲಮು 26ರಲ್ಲಿ ಶೆಡ್ಯೂಲ್ಡ್ ಕಾಸ್ಟ್‌ನ ವ್ಯಾಖ್ಯೆಯಲ್ಲಿ ಎದ್ದು ಕಾಣುತ್ತದೆ. ಇಷ್ಟೇ ಅಲ್ಲ, ಶೆಡ್ಯೂಲ್ಡ್ ಕಾಸ್ಟ್‌ನ ವಿಷಯದಲ್ಲಿ ಪ್ರಕಟವಾದ ಸಾರ್ವಭೌಮ ಬಾದಶಹರ ಆರ್ಡರ್ ಇನ್ ಕೌನ್ಸಿಲ್‌ನಂತೆ, ಶೆಡ್ಯೂಲ್ಡ್ ಕಾಸ್ಟ್‌ನಲ್ಲಿ ಪ್ರಾಂತ ಪ್ರಾಂತಗಳಲ್ಲಿ ಯಾವ್ಯಾವ ಜಾತಿಯ ಸಮಾವೇಶ ನಡೆಸಬೇಕೆಂಬ ಪಟ್ಟಿ ಸಿದ್ಧವಾಗಿದೆಯೋ, ಅಲ್ಲೂ ಹಿಂದೂಗಳಲ್ಲಿ ಯಾವುದೋ ಜಾತಿ ಎಂಬ ವಿಶೇಷಣಾತ್ಮಕ ವಚನವನ್ನೇನೂ ಪ್ರಯೋಗಿಸಿಲ್ಲ. ಕೇವಲ ಜಾತಿಯ ಉಲ್ಲೇಖ ಮಾತ್ರ ಇದೆ. ರಾಜಕೀಯ ಹಕ್ಕಿಗಾಗಿ, ಹಿಂದೂ ಸಮಾಜದಲ್ಲಿ ಇಲ್ಲವೇ ಹಿಂದೂ ಧರ್ಮದಲ್ಲಿ ಉಳಿಯಬೇಕೆಂಬ ಷರತ್ತನ್ನು ಕಾಯ್ದೆ ಹಾಕಿಲ್ಲ ಎಂಬುದು ಈ ವ್ಯಾಖ್ಯೆಯಿಂದ ಸ್ಪಷ್ಟವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News