ಭಾರತದಲ್ಲೇ ಅತಿ ಹೆಚ್ಚು ಆತ್ಮಹತ್ಯೆ : ದೇಶದ 5 ಕೋಟಿಗೂ ಹೆಚ್ಚು ಮಂದಿಗೆ ಖಿನ್ನತೆಯ ಸಮಸ್ಯೆ

Update: 2017-02-24 14:14 GMT

 ಹೊಸದಿಲ್ಲಿ, ಫೆ.24: ಭಾರತದಲ್ಲಿ ಐದು ಕೋಟಿಗೂ ಹೆಚ್ಚು ಮಂದಿ ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಪ್ರಕರಣ ಭಾರತದಲ್ಲೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಭಾರತದಂತಹ ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಖಿನ್ನತೆಯು ಆತ್ಮಹತ್ಯೆಗೆ ಮೂಲ ಕಾರಣವಾಗಿದೆ ಎಂದು ಡಬ್ಲೂಎಚ್‌ಒ ತಿಳಿಸಿದೆ. ಖಿನ್ನತೆಯ ಕಾರಣದಿಂದ ಐದು ಕೋಟಿಗೂ ಹೆಚ್ಚು ಮಂದಿ, ಆತಂಕದ ಕಾರಣದಿಂದ ಮೂರು ಕೋಟಿಗೂ ಹೆಚ್ಚು ಮಂದಿ ಭಾರತೀಯರು ಬಳಲುತ್ತಿದ್ದಾರೆ ಎಂದು -ಖಿನ್ನತೆ ಮತ್ತು ಇತರ ಸಾಮಾನ್ಯ ಮಾನಸಿಕ ಅಸ್ವಸ್ಥತೆ- ಜಾಗತಿಕ ಆರೋಗ್ಯ ಅಭಿಪ್ರಾಯ ಎಂಬ ವರದಿಯಲ್ಲಿ ತಿಳಿಸಲಾಗಿದೆ.

ವಿಶ್ವದಾದ್ಯಂತ ಸಂಭವಿಸುವ ಮೂರನೇ ಎರಡಂಶದಷ್ಟು ಆತ್ಮಹತ್ಯೆ ಪ್ರಕರಣ ಕೆಳ ಮತ್ತು ಮಧ್ಯಮ ಆದಾಯವಿರುವ ರಾಷ್ಟ್ರಗಳಲ್ಲಿ ಸಂಭವಿಸುತ್ತವೆ. ವಿಶ್ವದಾದ್ಯಂತ 322 ಮಿಲಿಯ ಜನತೆ ಖಿನ್ನತೆಯಿಂದ ಬಳಲುತ್ತಿದ್ದು ಇವರಲ್ಲಿ ಸುಮಾರು ಅರ್ಧಾಂಶದಷ್ಟು ಮಂದಿ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. (ಇದರಲ್ಲಿ ಬೃಹತ್ ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತ ಸೇರಿದೆ.)

 2005ರಿಂದ 2015ರ ನಡುವಿನ ಅವಧಿಯಲ್ಲಿ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಶೇ. 18.4ರಷ್ಟು ಏರಿಕೆಯಾಗಿದೆ. 2015ರಲ್ಲಿ ಭಾರತದಲ್ಲಿ 5,66,75,969 ಖಿನ್ನತೆ ಕಾಯಿಲೆಯ ಪ್ರಕರಣ ವರದಿಯಾಗಿದ್ದು ಇದು ದೇಶದ ಜನಸಂಖ್ಯೆಯ ಶೇ.4.5ರಷ್ಟು ಆಗಿದೆ. ಇದೇ ವೇಳೆ, ಭಾರತದಲ್ಲಿ ಆತಂಕದ ಸಮಸ್ಯೆಯಿಂದ ಬಳಲುತ್ತಿರುವವರು 3,84,25,093 ಮಂದಿಯಾಗಿದ್ದು ಇದು ಜನಸಂಖ್ಯೆಯ ಶೇ.3ರ ಪ್ರಮಾಣವಾಗಿದೆ ಎಂದು ಡಬ್ಲೂಎಚ್‌ಒ ವರದಿ ತಿಳಿಸಿದೆ.

   ಖಿನ್ನತೆ ಸಂಬಂಧಿ ಸಮಸ್ಯೆಯಲ್ಲಿ, ಭಾರತದಲ್ಲಿ ಅಶಕ್ತತೆಯೊಂದಿಗೆ ಒಟ್ಟು ಜೀವಿತಾವಧಿ (ಇಯರ್ಸ್‌ ಲಿವ್ಡ್ ವಿತ್ ಡಿಸೆಬಿಲಿಟಿ- ವೈಎಲ್‌ಡಿ)1,00,504,11 ಆಗಿದ್ದು ಇದು ಒಟ್ಟಾರೆ ವೈಎಲ್‌ಡಿಯ ಶೇ.7.1ರಷ್ಟು ಆಗಿರುತ್ತದೆ. ಅಲ್ಲದೆ ಆತಂಕದ ಸಮಸ್ಯೆಯಲ್ಲಿ ವೈಎಲ್‌ಡಿ 35,19,527 ಆಗಿದ್ದು ಇದು ಒಟ್ಟು ವೈಎಲ್‌ಡಿಯ ಶೇ.2.5 ಆಗಿದೆ.

    2015ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಮರಣಹೊಂದಿದವರ ಸಂಖ್ಯೆ 7,88,000 ಆಗಿದ್ದರೆ , ಆತ್ಮಹತ್ಯೆಗೆ ಯತ್ನಿಸಿದರೂ ಮರಣ ಹೊಂದದವರ ಸಂಖ್ಯೆ ಇದಕ್ಕೂ ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿಶ್ವದಾದ್ಯಂತ 2015ರಲ್ಲಿ ಸಾವಿಗೆ ಪ್ರಮುಖ ಕಾರಣದ ಪಟ್ಟಿಯಲ್ಲಿ ಅಗ್ರ 20ರ ಸಾಲಿನಲ್ಲಿ ‘ಆತ್ಮಹತ್ಯೆ’ ಸ್ಥಾನ ಪಡೆದಿದೆ. ಅಲ್ಲದೆ ವಿಶ್ವದಾದ್ಯಂತ ಸಂಭವಿಸುವ ಸಾವಿನಲ್ಲಿ ಸುಮಾರು ಶೇ.1.5ರಷ್ಟು ಪ್ರಮಾಣ ಆತ್ಮಹತ್ಯೆಯ ಕಾರಣದಿಂದ ನಡೆಯುತ್ತದೆ. ಓರ್ವ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದೇ ಕಾಲದಲ್ಲಿ ಆತ್ಕಹತ್ಯೆಗೆ ಮುಂದಾಗಬಹುದು ಮತ್ತು 2015ರಲ್ಲಿ 15ರಿಂದ 29ರ ವಯೋಮಾನದವರಲ್ಲಿ ಎರಡನೇ ಪ್ರಮುಖ ಮರಣ ಕಾರಣವೆಂದರೆ ಆತ್ಮಹತ್ಯೆ ಎಂದು ವರದಿ ತಿಳಿಸಿದೆ.

     ಡಬ್ಲೂಎಚ್‌ಒ ಪ್ರಕಾರ, ಆತ್ಮಹತ್ಯೆಯ ಪ್ರಮಾಣ ಪ್ರದೇಶ ಮತ್ತು ಲಿಂಗಾಧಾರಿತವಾಗಿದೆ. ಕೆಳ ಮತ್ತು ಮಧ್ಯಮ ಆದಾಯವಿರುವ ದೇಶಗಳಾದ ಪಶ್ಚಿಮ ಮೆಡಿಟರೇನಿಯನ್ ಮತ್ತು ಅಮೆರಿಕನ್ ಪ್ರದೇಶದ ಮಹಿಳೆಯರಲ್ಲಿ 1 ಲಕ್ಷ ಜನಸಂಖ್ಯೆಯಲ್ಲಿ 5ಕ್ಕೂ ಕಡಿಮೆ ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಇದೇ ವೇಳೆ ಶ್ರೀಮಂತ ದೇಶಗಳಲ್ಲಿ ಮತ್ತು ಆಫ್ರಿಕಾ, ಯುರೋಪ್ ಮತ್ತು ಆಗ್ನೇಯ ಏಷ್ಯಾ ಪ್ರದೇಶದ ಕೆಳ-ಮಧ್ಯಮ ಆದಾಯವಿರುವ ದೇಶಗಳಲ್ಲಿ 1 ಲಕ್ಷ ಜನಸಂಖ್ಯೆಯಲ್ಲಿ 20 ಅಥವಾ ಹೆಚ್ಚು ಮಂದಿ ಪುರುಷರು ಆತ್ಮಹತ್ಯೆಗೆ ಮುಂದಾಗುತ್ತಾರೆ.

 ವಿಶ್ವದಲ್ಲಿ ಪ್ರತೀ 40 ಸೆಕೆಂಡುಗಳಿಗೆ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 2015ರಲ್ಲಿ ವಿಶ್ವದಾದ್ಯಂತ ಸಂಭವಿಸಿದ ಆತ್ಮಹತ್ಯೆಯಲ್ಲಿ ಶೇ.78ರಷ್ಟು ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಖಿನ್ನತೆಯು ಅಶಕ್ತತೆಗೆ ಪ್ರಮುಖ ಕಾರಣವಾಗಿದೆ ಮತ್ತು ಖಿನ್ನತೆಗೆ ಒಳಗಾಗುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News