ಆಸ್ಕರ್ ವೇದಿಕೆಯಲ್ಲಿ ಕುರ್ ಆನ್ ಉಲ್ಲೇಖ

Update: 2017-03-02 06:41 GMT

ಲಾಸ್ ಏಂಜಲಿಸ್ ಮಾ.2: ಹಾಲಿವುಡ್ ನ ಡೊಲ್ಬಿ ಥಿಯೇಟರಿನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ ‘ದಿ ವೈಟ್ ಹೆಲ್ಮೆಟ್ಸ್’ ಸಿರಿಯಾದ ರಾಯೆದ್ ಸಾಲೆಹ್ ಅವರ ವೈಟ್ ಹೆಲ್ಮೆಟ್ಸ್ ಸಿವಿಲ್ ಡಿಫೆನ್ಸ್ ಗ್ರೂಪಿನ ಕಾರ್ಯಚಟುವಟಿಕೆಯ ಕಥಾವಸ್ತು ಹೊಂದಿದೆ.

ಯುದ್ಧ ಪೀಡಿತ ಸಿರಿಯಾದಲ್ಲಿ ಬಿಳಿ ಹೆಲ್ಮೆಟ್ ಧಾರಿಗಳಾಗಿರುವ ಈ ಗುಂಪಿನ ಸ್ವಯಂಸೇವಕರು ವಿರೋಧಿ ಬಣಗಳ ವಶದಲ್ಲಿರುವ ಸ್ಥಳಗಳಲ್ಲಿ ಸರಕಾರ ಹಾಗೂ ರಷ್ಯಾ ವಾಯು ಸೇನೆಯಿಂದ ಬಾಂಬ್ ದಾಳಿಗೊಳಗಾದವರ ಸಹಾಯಕ್ಕೆ ಧಾವಿಸಿ ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಟ್ಟಡಗಳ ಅವಶೇಷಗಳೆಡೆಯಿಂದ ಬದುಕುಳಿದವರನ್ನು ರಕ್ಷಿಸುವ ಕಷ್ಟಕರ ಕಾರ್ಯದಲ್ಲಿ ವೈಟ್ ಹೆಲ್ಮೆಟ್ಸ್ ತಂಡ ಹೇಗೆ ನಿರತವಾಗಿದೆ ಎಂಬುದನ್ನು ಈ ಸಾಕ್ಷ್ಯಚಿತ್ರ ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ.

ವೈಟ್ ಹೆಲ್ಮೆಟ್ಸ್ ಗುಂಪಿನ ನಾಯಕ ರಾಯೆದ್ ಸಾಲೆಹ್ ಹಾಗೂ ಸಂಘಟನೆಯ ರಕ್ಷಣಾ ಕಾರ್ಯಕರ್ತರೂ ಸಾಕ್ಷ್ಯಚಿತ್ರದ ಕ್ಯಾಮರಾಮ್ಯಾನ್ ಕೂಡ ಆಗಿದ್ದ ಖಾಲೆದ್ ಖತೀಬ್ ಅವರಿಗೆ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕ ವೀಸಾ ನೀಡಿತ್ತಾದರೂ ಸಿರಿಯಾದಲ್ಲಿನ ವಾಯು ದಾಳಿಯಿಂದಾಗಿ ಸಾಲೆಹ್ ಅವರಿಗೆ ಬರಲು ಸಾಧ್ಯವಾಗಿಲ್ಲದೇ ಇದ್ದರೆ ಖತೀಬ್ ಅವರ ಪಾಸ್ ಪೋರ್ಟನ್ನು ಸಿರಿಯಾ ಸರಕಾರ ರದ್ದುಗೊಳಿಸಿತ್ತು.

ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದು ದುರದೃಷ್ಟಕರವಾದರೂ ಚಿತ್ರದ ಸಾಧನೆ ತಮಗೆ ಹೆಮ್ಮೆಯುಂಟು ಮಾಡಿದೆ ಎಂದು ಖತೀಬ್ ಹೇಳಿದ್ದಾರೆ.

ಸಾಲೆಹ್ ಹಾಗೂ ಖತೀಬ್ ಬದಲಿಗೆ ಒರ್ಲಾಂಡ ವೊನ್ ಎನ್ಸೀಡೆಲ್ ಹಾಗೂ ಚಿತ್ರ ನಿರ್ಮಾಪಕಿ ಜೊಯನ್ನ ನಟಸೇಗರ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಎನ್ಸೀಡೆಲ್ ಅವರು ಸಾಲೆಹ್ ಅವರ ಸಂದೇಶವನ್ನು ಓದಿದರು. ‘‘ನಮ್ಮ ಸಂಘಟನೆ ಪವಿತ್ರ ಕುರ್ ಆನ್ ನ ಸೂಕ್ತವೊಂದರಿಂದ ಪ್ರೇರೇಪಿತವಾಗಿದೆ. ''ಒಂದು ಜೀವವನ್ನು ಉಳಿಸಿದರೆ ಮಾನವ ಕುಲವನ್ನೇ ಉಳಿಸಿದಂತೆ'' (ಇದು ಪವಿತ್ರ ಕುರ್ ಆನ್ ನ 5ನೆ ಅಧ್ಯಾಯದಲ್ಲಿರುವ 32ನೆ ಸೂಕ್ತ). ಇಲ್ಲಿಯ ತನಕ ನಾವು 82,000ಕ್ಕೂ ಅಧಿಕ ನಾಗರಿಕರ ಪ್ರಾಣ ಉಳಿಸಿದ್ದೇವೆ. ಸಿರಿಯಾ ಮತ್ತು ವಿಶ್ವದ ಇತರೆಡೆಗಳಲ್ಲಿ ನಡೆಯುತ್ತಿರುವ ರಕ್ತದೋಕುಳಿಯನ್ನು ನಿಲ್ಲಿಸಲು ಶ್ರಮಿಸುವಂತೆ ನಾನು ಎಲ್ಲರನ್ನೂ ಕೇಳಿಕೊಳ್ಳುತ್ತೇನೆ’’ ಎಂದು ಸಾಲೆಹ್ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News