ಪೌರ ಕಾರ್ಮಿಕರ ಬೃಹತ್ ಪ್ರತಿಭಟನೆ : ಮಾ.8ರಿಂದ ಸ್ವಚ್ಛತಾ ಕಾರ್ಯ ಬಂದ್!

Update: 2017-03-03 14:59 GMT

ಬೆಂಗಳೂರು, ಮಾ.3: ಪರಿಷ್ಕರಣೆಯಾದ ಕನಿಷ್ಠ ವೇತನ ಸೇರಿ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ಮಾ. 8ರಂದು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸುವ ಮೂಲಕ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷ ವಿನಯ್, ಮಾ. 8 ಅಂತಾರಾಷ್ಟ್ರೀಯ ಮಹಿಳಾ ಕಾರ್ಮಿಕರ ದಿನವಾಗಿದ್ದು, ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಲಿದ್ದಾರೆ. ರಾಜ್ಯ ಸರಕಾರ 2016 ರ ಆ.4ರಂದು ಕನಿಷ್ಠ ವೇತನ ಪರಿಷ್ಕರಣೆಗೊಳಿಸುವುದಾಗಿ ಆದೇಶ ಹೊರಡಿಸಿತ್ತು. ಆದರೆ 8 ತಿಂಗಳು ಕಳೆದರೂ ಈವರೆಗೆ ಪೌರ ಕಾರ್ಮಿಕರಿಗೆ ಯಾವುದೇ ವೇತನ ಪರಿಷ್ಕರಣೆ ನೀಡಿಲ್ಲ. ವಾರದ ರಜೆ, ಹಬ್ಬ ಹಾಗೂ ರಾಷ್ಟ್ರೀಯ ರಜೆಗಳನ್ನು ನೀಡಬೇಕೆಂದು ಆದೇಶಿಸಲಾಗಿದ್ದರೂ, ಅನುಷ್ಠಾನಗೊಂಡಿಲ್ಲ ಎಂದು ಆರೋಪಿಸಿದರು.

ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಸೌಲಭ್ಯವನ್ನು ಒದಗಿಸಿಲ್ಲ. ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಮುಷ್ಕರವನ್ನು ಅನಿರ್ದಿಷ್ಟ ಕಾಲ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೀನಾ, ವನಜಮ್ಮ, ರಾಜೇಶ್ವರಿ, ಗಂಗಮ್ಮ, ರಂಗಮ್ಮ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News