ಠುಸ್ಸಾದ ಮುಂಬೈ ಮೇಯರ್ ಸ್ಪರ್ಧೆ

Update: 2017-03-07 19:01 GMT

ಇಡೀ ದೇಶವೇ ಕುತೂಹಲಗೊಂಡಿದ್ದ ಮುಂಬೈ ಮಹಾನಗರ ಪಾಲಿಕೆಗೆ ಮಾರ್ಚ್ 8ರಂದು ನಡೆಯುವ ಮೇಯರ್ ಆಯ್ಕೆಯಲ್ಲಿ ಶಿವಸೇನೆ ಮತ್ತು ಬಿಜೆಪಿಯಲ್ಲಿ ಯಾರು ಆರಿಸಿ ಬರುವರು ಎಂಬ ಚರ್ಚೆಯು ಶನಿವಾರದಂದು ‘ಠುಸ್’ ಎನಿಸಿತು. ಹಲವು ದಿನಗಳಿಂದ ಪರಸ್ಪರ ಕಚ್ಚಾಟದಲ್ಲಿ ತೊಡಗಿಸಿಕೊಂಡವರು ಮಾರ್ಚ್ 8ರಂದು ಏನಾಗುವುದೋ ಎಂದು ತುದಿಗಾಲಲ್ಲಿ ನಿಂತವರಿಗೆಲ್ಲ ಈಗ ನಿರಾಶೆ !

ಕಾರಣ ತಾನು ಅಣ್ಣನಂತೆ ತಮ್ಮನಿಗೆ (ಶಿವಸೇನೆಗೆ) ಮೇಯರ್-ಉಪಮೇಯರ್ ಸ್ಥಾನ ಬಿಟ್ಟುಕೊಟ್ಟ ಬಿಜೆಪಿಯ ಫಡ್ನವೀಸ್ ಅವರು ‘‘ಮಹಾನಗರ ಪಾಲಿಕೆಯ ಯಾವುದೇ ಸ್ಥಾನಗಳು ತಮಗೆ ಬೇಡ. ದೂರ ನಿಂತೇ ಪಾರದರ್ಶಕತೆಯ ಬಗ್ಗೆ ನಿಗಾ ಇರಿಸುತ್ತೇವೆ. ಇದು ಮುಂಬೈ ಹಿತಕ್ಕಾಗಿ ಮಾಡಿದ ನಿರ್ಧಾರ’’ ಎಂದು ಹೇಳುವ ಮೂಲಕ ಶಿವಸೇನೆಗೆ ಖುಷಿ ಉಂಟು ಮಾಡಿದರೆ, ಅತ್ತ ಮಹಾರಾಷ್ಟ್ರ ಸರಕಾರವು ದೊಡ್ಡ ಸಂಕಟವೊಂದರಿಂದ ಪಾರಾಯಿತು ಎನ್ನಬಹುದು. ಬಿಜೆಪಿ ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ. ವಾರ್ಡ್ ಕ್ರಮಾಂಕ 87ರಲ್ಲಿ ಆಯ್ಕೆಯಾದ ಶಿವಸೇನೆಯ ವಿಶ್ವನಾಥ ಮಹಾಡೇಶ್ವರ ಮೇಯರ್ ಆಗಿ ಹಾಗೂ ಹೇಮಾಂಗಿ ವರ್ಲೀಕರ್ ಉಪಮೇಯರ್ ಸ್ಥಾನಕ್ಕೆ ಆಯ್ಕೆಗೊಳ್ಳುವುದು ಖಚಿತವೆನಿಸಿದೆ. ಬಿಜೆಪಿಯ ಯಾವನೇ ಅಭ್ಯರ್ಥಿ ಮೇಯರ್-ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ.

ಮುಂಬೈ ಮನಪಾದ ಮೇಯರ್ ಸ್ಥಾನಕ್ಕಾಗಿ ಶಿವಸೇನೆ-ಬಿಜೆಪಿ - ಕಾಂಗ್ರೆಸ್ ನಡುವೆ ಶನಿವಾರದ ತನಕವೂ ಒಳಗಿಂದೊಳಗೇ ತೀವ್ರ ಪ್ರಯತ್ನಗಳು ನಡೆದಿತ್ತು. ಇದೀಗ ಶನಿವಾರ ಮೇಯರ್- ಉಪಮೇಯರ್ ಸ್ಥಾನಕ್ಕೆ ಶಿವಸೇನೆಯಿಂದ ನಾಮಪತ್ರ ಸಲ್ಲಿಸಲಾಗಿದೆ. ಬುಧವಾರ ಅಧಿಕೃತ ಘೋಷಣೆಯಾಗಲಿದೆ. ‘‘ಬಿಜೆಪಿಯ ಕೋರ್ ಕಮಿಟಿಯ ಬೈಠಕ್‌ನಲ್ಲಿ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ನಿಲ್ಲಿಸುವುದು ಬೇಡವೆಂದು ತೀರ್ಮಾನ ಮಾಡಲಾಯಿತು’’ ಎಂದು ಮುಖ್ಯಮಂತ್ರಿ ಘೋಷಿಸಿದರು. ಜೊತೆಗೆ ‘‘ಬಹುಮತಕ್ಕಾಗಿ ಸ್ಪರ್ಧೆ ನಡೆದರೆ ಬಿಜೆಪಿಯು ಶಿವಸೇನೆಗೇ ಮತ ಹಾಕುವುದು’’ ಎಂದೂ ಫಡ್ನವೀಸ್ ಹೇಳಿದರು. ಮೇಯರ್ ಮಾತ್ರವಲ್ಲ, ಮನಪಾದ ಯಾವ ಸ್ಥಾನಕ್ಕೂ ಬಿಜೆಪಿ ಸ್ಪರ್ಧಿಸಲಾರದು.

ಮುಂಬೈ ಮಹಾನಗರ ಪಾಲಿಕೆಯ ಆಡಳಿತವನ್ನು ಶಿವಸೇನೆಗೆ ಉಡುಗೊರೆಯಾಗಿ ನೀಡುವ ಮೂಲಕ ಬಿಜೆಪಿ ತನ್ನ ಸರಕಾರವನ್ನು ಉಳಿಸಿಕೊಂಡಂತಾಗಿದೆ.

ಏನು ಅಪಾಯವಿತ್ತು?

ಬಿಜೆಪಿ ಒಂದು ವೇಳೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ಉಪಮೇಯರ್‌ಗೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದ್ದರೆ ಐದು ವರ್ಷ ಕಾಲ ಸರಿಯಾಗಿ ಆಡಳಿತ ನಡೆಸಲು ಶಿವಸೇನೆ ಖಂಡಿತಾ ಬಿಡಲಾರದು. ಪ್ರತೀ ದಿನ ಏನಾದರೂ ತೊಂದರೆ ಕೊಡುವ ಸಾಧ್ಯತೆಗಳಿತ್ತು. ಮಾರ್ಚ್ 6ರಿಂದ ರಾಜ್ಯ ವಿಧಾನಸಭೆ ಬಜೆಟ್ ಸತ್ರ ಆರಂಭವಾಗಿದೆ. ಒಂದು ವೇಳೆ ಮನಪಾದ ಮೇಯರ್ ಚುನಾವಣೆಯಲ್ಲಿ ಶಿವಸೇನೆಯನ್ನು ಸೋಲಿಸಿದ ಪಕ್ಷದಲ್ಲಿ ಬಜೆಟ್ ಅಧಿವೇಶನಕ್ಕೆ ಬಹಳ ತೊಂದರೆ ಬರಬಹುದಿತ್ತು. ಒಂದು ವೇಳೆ ವಿಪಕ್ಷವು ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಶಿವಸೇನೆ ವಿಪಕ್ಷದ ಜೊತೆ ಸೇರುವ ಸಾಧ್ಯತೆಗಳೂ ಇದ್ದುವು.

ರಾಜ್ಯದ 8 ಜಿಲ್ಲಾ ಪರಿಷತ್‌ಗಳ ಆಡಳಿತ ಸುಗಮವಾಗಲು ಬಿಜೆಪಿಗೆ ಶಿವಸೇನೆಯ ಸಹಕಾರ ಬೇಕಾಗಿದೆ. ಮುಂಬೈ ಮನಪಾ ಮೇಯರ್ ಆಸೆಗೆ ಹೋದರೆ ಬಿಜೆಪಿ 8 ಜಿಲ್ಲಾ ಪರಿಷತ್ ಆಡಳಿತ ಕಳಕೊಳ್ಳುವ ಸಾಧ್ಯತೆಗಳೂ ಇದ್ದುವು.
ಬಿಜೆಪಿಯು ಒಂದೊಮ್ಮೆ ರಾಜ್‌ಠಾಕ್ರೆಯ ‘ಮನಸೇ’ ಜೊತೆಗೂಡಿ ಶಿವಸೇನೆಗೆ ಕಿರಿಕಿರಿ ಹುಟ್ಟಿಸಿದರೆ ಉತ್ತರ ಭಾರತೀಯರು ಬಿಜೆಪಿಯಿಂದ ಹಿಂದೆ ಸರಿಯುವ ಸಾಧ್ಯತೆಗಳೂ ಇದ್ದುವು. ಇದನ್ನೆಲ್ಲಾ ಗಮನಿಸಿಯೇ ಬಿಜೆಪಿ ಈ ತೀರ್ಮಾನಕ್ಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷವು ಬಿಜೆಪಿ ಮುಂಬೈ ಮತದಾರರಿಗೆ ಮೋಸ ಮಾಡಿದೆ ಎಂದು ಆರೋಪಿಸಿದೆ. ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಶಿವಸೇನೆಯನ್ನು ಭ್ರಷ್ಟಾಚಾರಿ, ಮಾಫಿಯಾ, ಹಫ್ತಾಖೋರ..... ಎಂದೆಲ್ಲ ಹೇಳಿತ್ತು. ಈಗ ಶಿವಸೇನೆಗೆ ಮತ್ತೆ ಆಡಳಿತ ಬಿಟ್ಟು ಕೊಡಲು ಬಿಜೆಪಿ ಒಪ್ಪಿದ್ದು ಹೇಗೆ....? ಇದು ವಿಪಕ್ಷಗಳ ಪ್ರಶ್ನೆ.

ಏನೇ ಇರಲಿ, ನಾಳೆ ಸ್ಪರ್ಧೆ ಇದ್ದರೆ ಶಿವಸೇನೆ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ. ಗೆಲುವು ಶಿವಸೇನೆಗೆ ಎಂದು ಎಲ್ಲರಿಗೂ ಗೊತ್ತು. ಯಾವುದೇ ರಾಜಕೀಯ ಪಾರ್ಟಿಗಳ ಅಂತಿಮ ಗುರಿ ಆಡಳಿತ ಪ್ರಾಪ್ತಿಯೇ ಆಗಿರುತ್ತದೆ. ದೇಶದ ಅರುವತ್ತಾರು ವರ್ಷಗಳ ಸಂಸದೀಯ ರಾಜನೀತಿಯ ಇತಿಹಾಸದಲ್ಲಿ ಈ ಸತ್ಯ ಮತ್ತೆ ಮತ್ತೆ ಎದುರು ಬರುತ್ತಲೇ ಇದೆ. ತಮ್ಮ ತಮ್ಮ ವಿಚಾರ ಧಾರೆಗಳ ಮುಲಾಮು ಹಚ್ಚುತ್ತಾ ಜನರನ್ನು ವಂಚಿಸುತ್ತಲೇ ಬಂದಿದೆ ಎನ್ನುವುದು ಮತದಾರರಲ್ಲಿ ಅನೇಕರ ಅಭಿಮತ. ಸೆಕ್ಯುಲರ್ ಮತ್ತು ಸಾಂಪ್ರದಾಯಿಕ ಪಕ್ಷಗಳ ಮುಖವಾಡಗಳನ್ನು ಧರಿಸಿರುವ ಹೆಚ್ಚಿನ ರಾಜಕೀಯ ಪಕ್ಷಗಳ ಕತೆ ಇದೇ ಆಗಿದೆ.

ಶಿವಸೇನೆಯ ಭಯ ಏನಿತ್ತು?
ಮಹಾರಾಷ್ಟ್ರದ ನಗರ ಪಾಲಿಕಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯ ಪ್ರಾಬಲ್ಯವನ್ನು ಕಂಡ ನಂತರ ಶಿವಸೇನೆಯು ‘‘ಮಹಾರಾಷ್ಟ್ರ ಮುಂದಿನ ದಿನಗಳಲ್ಲಿ ವಿಭಜನೆಯಾಗಲಿದೆ, ಮುಂಬೈ ಮರಾಠಿಗರ ಕೈ ತಪ್ಪಲಿದೆ’’ ಇತ್ಯಾದಿ ಮಾತುಗಳನ್ನು ಹೇಳಲಾರಂಭಿಸಿ ಮರಾಠಿಗರ ಅನುಕಂಪಗಳಿಸಲು ನೋಡುತ್ತಿತ್ತು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ರಾಜಕೀಯ ರಂಗದಲ್ಲಿ ಬಿಜೆಪಿ ಅಸ್ಪೃಶ್ಯ ಆಗಿದ್ದಾಗ ಶಿವಸೇನೆ ಬಿಜೆಪಿಯನ್ನು ಗೆಳೆಯನಾಗಿ ಸ್ವೀಕರಿಸಿತ್ತು. ಅಲ್ಲಿ ಹಿಂದುತ್ವದ ವಿಚಾರಗಳ ಬಂಧನವಿತ್ತು. ಆದರೆ ಆಡಳಿತದ ಕುರ್ಚಿಯಲ್ಲಿ ಸ್ವಾರ್ಥದ ರಾಜಕಾರಣ ಕಂಡು ಬಂದಿತ್ತು. ‘‘ಕೆಲವು ಪಕ್ಷಗಳು ತೀವ್ರಗತಿಯಿಂದ ಹೆಜ್ಜೆ ಇಟ್ಟರೂ ಕೆಲವೇ ದಿನಗಳಲ್ಲಿ ಅದು ಮುಗ್ಗರಿಸಿ ಬೀಳಬಹುದು’’ ಎಂದು ಶಿವಸೇನೆ ಬಿಜೆಪಿಯನ್ನು ಕುರಿತು ಪರೋಕ್ಷವಾಗಿ ಟೀಕಿಸುತ್ತಾ ಬಂತು. ಈ ಬಾರಿ ಚುನಾವಣೆ ತನಕ ಶಿವಸೇನೆ-ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪಗಳ ಮಳೆ ಸುರಿಸಿದ್ದು ಇಬ್ಬರಿಗೂ ಚುನಾವಣೋತ್ತರ ಮೈತ್ರಿಗೆ ಕಷ್ಟವಾಗಿತ್ತು. ಕೆಲವರು ಎರಡೂವರೆ ವರ್ಷ ಅವರ ಮೇಯರ್, ಮುಂದಿನ ಎರಡೂವರೆ ವರ್ಷ ಇವರ ಮೇಯರ್.....ಎಂಬ ಒಪ್ಪಂದದಲ್ಲಿ (ಕಲ್ಯಾಣ್-ಡೊಂಬಿವಲಿ ಮನಪಾದಂತೆ) ಮೈತ್ರಿ ಮಾಡಬಹುದು ಎಂದರೂ ಅದು ಸುಳ್ಳಾಯಿತು.

ಶಿವಸೇನೆ ಮಾತ್ರ ತನ್ನದೇ ಮೇಯರ್ ಎಂದು ‘ಸಾಮ್ನಾ’ದಲ್ಲಿ ಹೇಳಿಕೊಳ್ಳುತ್ತ ಬಂದಿತ್ತು. ಅತ್ತ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿ ನಿಲ್ಲಿಸಿದೆ. ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದೂ ಪ್ರಚಾರವಾಗಿತ್ತು.

ಇನ್ನೊಂದೆಡೆ-ಶಿವಸೇನಾ-ಕಾಂಗ್ರೆಸ್-ಎನ್.ಸಿ.ಪಿ. ಮೈತ್ರಿ ಏರ್ಪಟ್ಟರೆ ಮೇಯರ್ ಶಿವಸೇನೆಯ ಪಾಲಾಗುವ ಸಾಧ್ಯತೆಗಳೂ ಇವೆ ಎಂಬ ಬಗ್ಗೆಯೂ ಚರ್ಚೆ ಮುನ್ನೆಲೆಗೆ ಬಂದಿತ್ತು. ಆದರೆ ಬಿಜೆಪಿ ಸರಕಾರದ ಪಾಲುದಾರನಾಗಿರುವ ತನಕ ಶಿವಸೇನೆಗೆ ಬೆಂಬಲವಿಲ್ಲ ಎಂದಿತು ಕಾಂಗ್ರೆಸ್. ಹಾಗಿದ್ದೂ ಬಿಜೆಪಿಯ ಓಟವನ್ನು ತಡೆದು ನಿಲ್ಲಿಸಲು ಶಿವಸೇನೆಗೆ ಬೆಂಬಲಿಸುವ ಮೂಡ್ ಕಾಂಗ್ರೆಸ್‌ನ ಕೆಲವು ನಾಯಕರಲ್ಲಿತ್ತು.

ಶಿವಸೇನೆಗೆ 84 ನಗರ ಸೇವಕರು ದೊರೆತರೆ ಬಿಜೆಪಿಗೆ 82 ನಗರ ಸೇವಕರು ಈ ಬಾರಿ ದೊರೆತಿದ್ದಾರೆ. ಮುಂಬೈ ಮನಪಾ ಆಡಳಿತ ಕೈಗೆತ್ತಿಕೊಳ್ಳಲು ಬಿಜೆಪಿ - ಶಿವಸೇನೆ ಒಟ್ಟಾಗಬೇಕಾಗಿತ್ತು. ಆದರೆ ಇಬ್ಬರಿಗೂ ಅದು ಮನಸ್ಸಿಲ್ಲ. ಬಿಜೆಪಿ ಈಗ ಹಿಂದೆ ಸರಿಯಿತು. ಶಿವಸೇನಾ ಸುಪ್ರಿಮೋ ಬಾಳಾ ಸಾಹೇಬ ಠಾಕ್ರೆಯವರ ಅಂದಿನ ಟೀಮ್‌ನ ಇಬ್ಬರು ಪ್ರಮುಖ ನೇತಾರರಾದ ಚಾಣಕ್ಯ ಮನೋಹರ ಜೋಶಿ ಮತ್ತು ಲೀಲಾಧರ ಡಾಕೆ ಕೂಡಾ ‘ಮಾತೋಶ್ರೀ’ಗೆ ಬಂದು ಚರ್ಚೆ ನಡೆಸಿದ್ದರು. ಇವರಿಬ್ಬರೂ ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ.

ಇತ್ತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದಿಲ್ಲಿಗೆ ಹೋಗಿ ಬಂದರೂ ಇಲ್ಲಿ ಮೌನವಾಗಿಯೇ ಇರುವುದು ಬಿಜೆಪಿಯ ಹಲವರಿಗೆ ಗೊಂದಲವಾಗಿತ್ತು. ನಿಜ ಸಂಗತಿ ಏನೆಂದು ಈಗ ತಿಳಿಯಿತು. ಶಿವಸೇನೆ ತನ್ನ 84 ನಗರ ಸೇವಕರ ಜೊತೆ ಹಾಗೂ 4 ಪಕ್ಷೇತರರರನ್ನು ಸೇರಿಸಿ ಕೊಂಕಣ ಭವನಕ್ಕೆ ಹೋಗಿ ಆಯುಕ್ತ ಕಾರ್ಯಾಲಯದಲ್ಲಿ ತನ್ನ 88 ನಗರ ಸೇವಕರನ್ನು ರಿಜಿಸ್ಟರ್ ಮಾಡಿಸಿತ್ತು.

ರಾಜ್ ಠಾಕ್ರೆ ಮತ್ತು ಬಿಜೆಪಿ ನಡುವೆ ಮಾತುಕತೆ
ಮುಂಬೈ ಮನಪಾದಲ್ಲಿ ಶಿವಸೇನೆಯ ಮೇಯರ್ ಆಗದಂತೆ ಬಿಜೆಪಿ ರಾಜ್‌ಠಾಕ್ರೆಯ ‘ಮನಸೇ’ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಜೊತೆಗೂ ಮಾತುಕತೆ ನಡೆಸಿತ್ತು. ಈ ಬಾರಿ ಮನಪಾದಲ್ಲಿ ‘ಮನಸೇ’ಗೆ ಕೇವಲ 7 ಸೀಟುಗಳು ದೊರೆತಿದ್ದರೆ ಬಿಜೆಪಿಗೆ 82 ಸೀಟುಗಳು ದೊರೆತಿವೆೆ. ಈಗಾಗಲೇ 4 ಪಕ್ಷೇತರರು ಬಿಜೆಪಿಗೆ ಬೆಂಬಲಿಸಿದ್ದು ಒಟ್ಟು ಸಂಖ್ಯೆ 93 ಸದ್ಯಕ್ಕಿದೆ. ಅತ್ತ ಶಿವಸೇನೆ 84 ಹಾಗೂ 4 ಪಕ್ಷೇತರರು ಸೇರಿ ಅದರ ಬಲ 88 ಈ ತನಕವಿದೆ.

ಬಿಜೆಪಿ ಮತ್ತು ‘ಮನಸೇ’ ತಮ್ಮದೇ ಆದ ಸಮೀಕರಣ ಮಾಡುತ್ತಿದ್ದವು. ‘ಮನಸೇ’ ಕೇವಲ 7 ನಗರ ಸೇವಕರನ್ನು ಹೊಂದಿ ಕೂಡಾ ಮೇಯರ್ ಸ್ಥಾನವನ್ನು ಬಿಜೆಪಿ ಬೆಂಬಲದಿಂದ ತಾನು ಪಡೆದುಕೊಳ್ಳಬಹುದು, ‘ಮನಸೇ’ಯ ಮರಾಠಿ ಮೇಯರ್ ಕನಸು ಕೂಡಾ ಈ ಮೂಲಕ ಪೂರ್ಣಗೊಳ್ಳುವ ಸಾಧ್ಯತೆಗಳಿದ್ದವು ಎಂದೆಲ್ಲ ಸಮೀಕ್ಷೆ ನಡೆದಿತ್ತು. ಅತ್ತ ಬಿಜೆಪಿಯು ಶಿವಸೇನೆಗೆ ಸಡ್ಡು ಹೊಡೆದು ಸ್ಥಾಯಿ ಸಮಿತಿಯನ್ನು ತಾನು ವಶಪಡಿಸಿಕೊಳ್ಳಬಹುದು ಎಂದುಕೊಂಡಿತ್ತು.

ಚುನಾವಣಾಪೂರ್ವ ಶಿವಸೇನೆ ಜೊತೆ ಮೈತ್ರಿಗೆ ಮನಸ್ಸು ಮಾಡಿದ್ದ ‘ಮನಸೇ’, ತನ್ನ ಪ್ರತಿನಿಧಿಯಾಗಿ ಬಾಲಾ ನಾಂದ್ ಗಾಂವ್ಕರ್‌ರನ್ನು ಶಿವಸೇನೆ ನಾಯಕರಲ್ಲಿ ಮಾತುಕತೆಗೆ ಕಳುಹಿಸಿತ್ತು. ಆದರೆ ಉದ್ಧವ್ ಠಾಕ್ರೆ ಮಾತನಾಡಲು ತಯಾರಿರಲಿಲ್ಲ. ಅಲ್ಲದೆ ಇಲ್ಲಿ ‘ಮನಸೇ’ಗೆ ಅವಮಾನವೂ ಆಗಿತ್ತು. ಒಂದು ವೇಳೆ ಬಿಜೆಪಿ ಬೆಂಬಲದಲ್ಲಿ ‘ಮನಸೇ’ನ ಮೇಯರ್ ಬಂದರೆ ಆ ಮೂಲಕ ಶಿವಸೇನೆಯ ವಿರುದ್ಧ ರಾಜ್ ಠಾಕ್ರೆ ಸೇಡು ತೀರಿಸಿಕೊಂಡ ಹಾಗೂ ಆಗಬಹುದಿತ್ತು. ಆ ಸಂಗತಿಯೂ ಇನ್ನಿಲ್ಲ. ಯಾಕೆಂದರೆ ರಾಜ್ ಠಾಕ್ರೆಯ ಸಹಾಯದಿಂದ ಬಿಜೆಪಿ ಮುಂಬೈ ಮನಪಾದಲ್ಲಿ ಜೊತೆಗೂಡಿದರೆ ಇದರಿಂದ ಉತ್ತರ ಭಾರತೀಯ ಮತದಾರರು ತೀವ್ರ ಬೇಸರಗೊಳ್ಳುವ ಸಾಧ್ಯತೆಗಳಿವೆ ಎಂದು ಬಿಜೆಪಿ ವಲಯದಲ್ಲಿ ಕೇಳಿಬಂತು. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಗಳೂ ಇತ್ತು. ರಾಜ್ ಠಾಕ್ರೆಯ ‘ಮನಸೇ’ ಕಾರ್ಯಕರ್ತರು ಉತ್ತರ ಭಾರತೀಯರನ್ನು ಥಳಿಸಿದ್ದು ಮುಂಬೈಯಲ್ಲಿ ಇಂದಿಗೂ ಕಪ್ಪುಚುಕ್ಕೆಯಾಗಿ ಉಳಿದಿದೆ.

ಅಂತೂ ಈಗ ಬಿಜೆಪಿ ಅಪಾಯದಿಂದ ಪಾರಾಯಿತು. ಮುಂಬೈ ಮನಪಾದ ಬೆಸ್ಟ್ ಸಮಿತಿ ಅಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಅಧ್ಯಕ್ಷತೆ ಯಾವುದೂ ತನಗೆ ಬೇಡ ಎಂದಿದೆ ಬಿಜೆಪಿ. ಮನಪಾದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲೂ ಕುಳಿತುಕೊಳ್ಳುವುದಿಲ್ಲವಂತೆ. ಆದರೆ ಪಾರದರ್ಶಕತೆ ವಿಷಯದಲ್ಲಿ ತನಗೆ ವಿರೋಧ ಮಾಡಬೇಕಾದ ಸಂದರ್ಭದಲ್ಲಿ ಮಾಡಲಿದೆಯಂತೆ.!

Writer - ಶ್ರೀನಿವಾಸ ಜೋಕಟ್ಟೆ

contributor

Editor - ಶ್ರೀನಿವಾಸ ಜೋಕಟ್ಟೆ

contributor

Similar News