ಕೃತಿಚೌರ್ಯದ ಕಥೆ

Update: 2017-03-08 18:48 GMT

ಕೃತಿಚೌರ್ಯವು ತಡೆಹಿಡಿಯಬೇಕಾದ ಒಂದು ಅಪವಾದ. ಕೃತಿಚೌರ್ಯದ ಮೂಲೋದ್ದೇಶವೇನೆಂದು ಅಧ್ಯಯನ ಮಾಡಬಹುದು: ಇದರಲ್ಲಿ ತಾತ್ವಿಕವಾಗಿ ಯೋಚಿಸುವುದಕ್ಕೇನೂ ಉಳಿದಿಲ್ಲ. ಮೊದಲನೆಯದಾಗಿ ಯಾವುದೊಂದು ವಸ್ತುವಿಗೆ ಮನಸೋತಾಗ ಅದನ್ನು ಸುಲಭವಾಗಿ ತನ್ನದನ್ನಾಗಿಸುವ ಹಪಾಹಪಿಕೆ. ಆನಂತರ ಅದು ಯಾವುದೇ ಕಷ್ಟವಿಲ್ಲದೆ ತನ್ನ ಹೆಸರಿನಲ್ಲಿ ವಿಜೃಂಭಿಸಲಿ ಎಂಬ ಆಸೆ-ದುರಾಸೆ.


ಇತ್ತೀಚೆಗೆ ಉತ್ಸಾಹಿ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬ ಇನ್ನೊಂದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರ ಪ್ರಕಟಿತ ಲೇಖನವನ್ನು ತನ್ನ ಹೆಸರಿನೊಂದಿಗೆ ಕನ್ನಡದ ಎರಡು ಪತ್ರಿಕೆಗಳಲ್ಲಿ ಪ್ರಕಟಿಸಿದನಂತೆ. ಇದನ್ನು ಮೂಲ ಲೇಖಕರು ಪತ್ತೆ ಹಚ್ಚಿ ಆ ಪತ್ರಿಕೆಗಳಿಗೆ ತಿಳಿಸಿದ ಆನಂತರ ಆ ವಿದ್ಯಾರ್ಥಿಯು ತಾನು ಉದ್ದೇಶಪೂರ್ವಕವಾಗಿ ಹಾಗೆ ಮಾಡಿಲ್ಲವೆಂದೂ ಆಕಸ್ಮಿಕವಾಗಿ ಅದು ಮಿಂಚಂಚೆ (ಇಂಗ್ಲಿಷ್ ಮೈಲಿಗೆಯಾದ ಮಹಾನುಭಾವರೊಬ್ಬರು ಇ-ಮೈಲಿಗೆ ಕನ್ನಡದಲ್ಲಿ ಕಂಡುಹಿಡಿದ ಒಂದು ಪದ!)ಯಲ್ಲಿ ಪತ್ರಿಕೆಗಳಿಗೆ ಸಾಗಿತೆಂದೂ ಹೇಳಿ ಒಟ್ಟಿನಲ್ಲಿ ಪ್ರಕರಣ ಸುಖಾಂತ ಕಂಡಿತೆಂದು ಸಾಮಾಜಿಕ ತಾಣಗಳಲ್ಲಿ ವರದಿಯಾಗಿದೆ. ಆ ಎರಡು ಪತ್ರಿಕೆಗಳ ಪೈಕಿ ಒಂದು ಪತ್ರಿಕೆ ಈ ಕುರಿತು ಸ್ಪಷ್ಟೀಕರಣವನ್ನು ಮುದ್ರಿಸಿ ಇನ್ನು ಮುಂದೆ ಆ ವ್ಯಕ್ತಿಯ ಬರಹಗಳನ್ನು ಪ್ರಕಟಿಸುವುದಿಲ್ಲವೆಂದು ಅಭಯ ನೀಡಿದರೆ ಇನ್ನೊಂದು ಪತ್ರಿಕೆ ಏನನ್ನೂ ಪ್ರಕಟಿಸದೆ ಮೂಲ ಲೇಖಕರ ಆಗ್ರಹಕ್ಕೆ ಪಾತ್ರವಾಗಿದೆ. ಇರಲಿ; ಇದೇನೂ ಮಹಾ ಸಂಗತಿಯಲ್ಲ.

ಒಂದು ಕೃತಿಯನ್ನು ಯಥಾವತ್ತು ಪುನರಾವರ್ತಿಸುವುದನ್ನು ಮತ್ತು ಅದನ್ನೇ ಹೋಲುವಂತೆ ರಚಿಸುವುದನ್ನು ಮತ್ತು ಇಂತಹ ನಡವಳಿಕೆಗಳಿಗೆ ಕೃತಿ ಚೌರ್ಯ ಎಂದು ಹೆಸರು. ಕನ್ನಡದಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಕತ್ತಲಲ್ಲೇ ನಡೆದುಹೋಗಿ ಭೂಗತವಾದ ಪ್ರಕರಣಗಳೂ ಇವೆ. ಇತರ ಭಾಷೆಗಳಲ್ಲೂ ಇವೆ. ಮೂಲ ಯಾವುದು, ಕೃತಿಚೌರ್ಯ ಯಾವುದು ಎಂದು ಪತ್ತೆಹಚ್ಚಲಾಗದ ನಿದರ್ಶನಗಳೂ ಇವೆ. ಈ ಕೃತಿಚೌರ್ಯ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿಲ್ಲ; ಎಲ್ಲ ಬಗೆಯ ಕಲಾಪ್ರಕಾರಗಳಲ್ಲೂ ಇದೆ. ಆದರೂ ಸಾಹಿತ್ಯದಲ್ಲಿ ಮತ್ತು ಒಟ್ಟಿನಲ್ಲಿ ಅಕ್ಷರ ಪ್ರಪಂಚದಲ್ಲಿ ಮಾತ್ರ ಇದು ಢಾಳಾಗಿ ಕಾಣಿಸುತ್ತದೆ. ಸಿನೆಮಾಗಳು ಮತ್ತು ಸಿನೆಮಾ ಸಂಗೀತ, ಹಾಡುಗಳು ಇವೆಲ್ಲ ಕೃತಿಚೌರ್ಯದ ಸೀಮೆ ದಾಟಿ ಇನ್ನೆಲ್ಲೋ ಸಂಚರಿಸುತ್ತಿವೆ ಮತ್ತು ತಮ್ಮ ಇಂತಹ ಅಕ್ರಮ ಸಂಚಾರವನ್ನು ಬಹಳಷ್ಟು ಮಟ್ಟಿಗೆ ಸಕ್ರಮಗೊಳಿಸಿವೆ. ನಮ್ಮ ಅನೇಕ ಬಾಲಿವುಡ್ ಚಲನ ಚಿತ್ರಗಳು ಈಗಾಗಲೇ ಬಂದು-ಸಂದುಹೋದ ಹಾಲಿವುಡ್ ಚಲನಚಿತ್ರಗಳ ಯಥಾಪ್ರತಿಗಳಾಗಿವೆ.

ನಮ್ಮ ಪತ್ರಿಕೆಗಳಲ್ಲಿ ಪ್ರಕಟವಾಗುವ ಕೆಲವು ಲೇಖನಗಳಿಗೆ ಪೂರಕವಾಗಿ ಪ್ರಕಟವಾಗುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ತೆಗೆದವುಗಳು. ಇವು ಗೂಗಲ್‌ಗೆ ಪ್ರವೇಶಿದರೆ ಮುಫತ್ತಾಗಿ ಸಿಕ್ಕುತ್ತವೆ. ಆ ಬಗ್ಗೆ ಜನರು ವಿಶೇಷ ಆಸಕ್ತಿ ಇಲ್ಲವೇ ಕಾಳಜಿಯನ್ನು ವಹಿಸಿಲ್ಲ. ಅಷ್ಟರ ಮಟ್ಟಿಗೆ ಕೃತಿಚೌರ್ಯರು ಸುರಕ್ಷಿತರು ಹೌದಾದರೂ ಅದು ತನ್ನ ಕಲಾ ಗಾಂಭೀರ್ಯವನ್ನು ಕಳೆದುಕೊಂಡಿದೆಯೆಂದು ಹೇಳಬಹುದು. ಯಾವುದರ ಬಗ್ಗೆ ಜನರು ಸಾಮಾನ್ಯವಾಗಿ ತಲೆಕೆಡಿಸಿಕೊಳ್ಳುವುದಿಲ್ಲವೋ ಅದು ರೂಢಿಗತವಾಗಿದೆ ಇಲ್ಲವೇ ಸಭ್ಯಕ್ಷೇತ್ರದ ವ್ಯಾಪ್ತಿಯಿಂದ ಹೊರಗಿದೆ ಮತ್ತು ಮಾರುಕಟ್ಟೆ ನಿಯಮಕ್ಕನುಸಾರವಾಗಿ ಅಥವಾ ಮನರಂಜನೆಗಾಗಿ ತನ್ನ ನಿಕಟ ಅಗತ್ಯಗಳಿಂದ ಹೆಚ್ಚಿನದದ್ದಾದ ಮುಖ್ಯ ವಾಹಿನಿಯ ಸಮಾಜಮುಖೀ ಧ್ಯಾನದಿಂದ ವಿಮುಖವಾಗಿದೆಯೆಂದು ಅರ್ಥ. ಈ ಅರ್ಥದಲ್ಲಿ ಬರಹದ ಜಗತ್ತು ತನ್ನ ಪ್ರಸ್ತುತತೆಯನ್ನು ಮನರಂಜನೆಯಿಂದ ತುಸುವಾದರೂ ಹೆಚ್ಚಾಗಿ ಕಾದುಕೊಂಡಿದೆಯೆಂಬುದು ಸಮಾಧಾನಕರ ವಿಚಾರ.

ಒಬ್ಬರು ತಾನು ಬರೆದದ್ದೆಂಬ ಕವಿತೆಯನ್ನು ಹಿರಿಯರೊಬ್ಬರಿಗೆ ತೋರಿಸಲು ಹೋದರಂತೆ. ಅವರು ಅದನ್ನು ಓದಿ ‘‘ಪದ್ಯವೇನೊ ಚೆನ್ನಾಗಿದೆ; ಆದರೆ ಇದನ್ನು ಎಪ್ಪತ್ತು ವರ್ಷಗಳ ಹಿಂದೆ ಬೇಂದ್ರೆ ಕಾಪಿ ಹೊಡೆದಿದ್ದಾರೆ!’’ ಎಂದು ಹೇಳಿದರಂತೆ. ಆ ಕವಿತೆಯ ಪ್ರತಿಯು ನೇರ ಕಸದ ಬುಟ್ಟಿ ಸೇರಿತೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಕೆಲವೇ ಕವಿತೆಗಳನ್ನು ಬರೆದ ನನ್ನ ‘ಬಂಟಮಲೆ’ ಎಂಬ ಕವಿತೆಯನ್ನು ಒಬ್ಬ ವಿದ್ಯಾರ್ಥಿ ಒಂದು ಕವಿಗೋಷ್ಠಿಯಲ್ಲಿ ಒಂದೇ ಒಂದು ಪದವನ್ನು -‘ಬಂಟಮಲೆ’ ಎಂಬಲ್ಲಿ ‘ಕಳಂಜಿಮಲೆ’ ಎಂದು ಮಾತ್ರ ಬದಲಾಯಿಸಿ ಯಥಾವತ್ತು ಓದಿದ. ನನಗೆ ಸಿಟ್ಟು ಬರಲಿಲ್ಲ. ಬದಲಾಗಿ ಅವನ ಬಗ್ಗೆ ಅನುಕಂಪ ಹುಟ್ಟಿತು. ಮನುಷ್ಯರಲ್ಲಿ ಕವಿಯಾಗಬೇಕೆಂಬ ಬಯಕೆ ಎಂತಹ ಅನರ್ಥಗಳಿಗೆ ದಾರಿ ಮಾಡಿಕೊಡುತ್ತದೆಂದು ತಿಳಿದು ಬೇಸರವಾಯಿತು. (ಒಂದು ರೀತಿಯಲ್ಲಿ ಯಾವುದೇ ಮೂಲ ಲೇಖಕನಿಗೆ ಇದೊಂದು ಹೆಮ್ಮೆಯ ಸಂಗತಿಯೂ ಹೌದು!) ಇಂತಹ ಘಟನೆಗಳು ಬೇಕಷ್ಟಿವೆ. ಕೃತಿಚೋರರಲ್ಲದ ಎಲ್ಲ ಬರಹಗಾರರೂ ಈ ಪಾಡನ್ನು ಒಂದಲ್ಲ ಒಂದು ಬಾರಿ ಅನುಭವಿಸಿರಲೇಬೇಕು!

ಕೃತಿಚೌರ್ಯ ಸಾಮಾನ್ಯವಾಗಿ ಕವಿತೆಗಳಿಗೂ ಸಣ್ಣ ಕಥೆಗಳಿಗೂ ಸೀಮಿತವಾಗಿರುತ್ತದೆ. ಆದರೆ ಈ ಮೊದಲು ಆರಂಭದಲ್ಲಿ ಉಲ್ಲೇಖಿಸಿದ ರೀತಿಯ ಗದ್ಯ ಬರಹಗಳನ್ನು ಕೃತಿಚೌರ್ಯ ಮಾಡಬೇಕಾದರೆ ಅದಮ್ಯ ತಾಳ್ಮೆ, ಅಸಾಧಾರಣ ಧೈರ್ಯ ಬೇಕು. ಆದರೆ ಈ ರೀತಿ ಮಾಡಿದ್ದು ಬೇಗ ಗೊತ್ತಾಗುವುದಿಲ್ಲ. ಪದ್ಯ, ಹಾಡು ಇವೆಲ್ಲ ಬೇಗ ಓದುಗರ, ಕೇಳುಗರ ನಾಲಗೆಯಲ್ಲಿ ನಲಿಯುವುದರಿಂದ ಅವು ಬೇಗ ಕೃತಿ 

ಚೌರ್ಯವಾಗುತ್ತವೆ ಮತ್ತು ಅಷ್ಟೇ ವೇಗವಾಗಿ ಸಿಕ್ಕಿಬೀಳುತ್ತವೆ. ಹಿಂದೆ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ ‘ಸಾಕ್ಷಿ’ ಪತ್ರಿಕೆಯಲ್ಲಿ ಕೃತಿಚೌರ್ಯವಾದ ಒಂದು ಕಥೆ ಪ್ರಕಟವಾಗಿತ್ತು. ಇನ್ನೊಮ್ಮೆ ವಿಶ್ವವಿದ್ಯಾನಿಲಯವೊಂದರ ಪ್ರಾಧ್ಯಾಪಕರೊಬ್ಬರು ಡಾ.ಪ್ರಧಾನ ಗುರುದತ್ತ ಅವರು ಭಾಷಾಂತರದ ಬಗ್ಗೆ ಬರೆದ ವಿವರವಾದ ಪ್ರೌಢ ಕೃತಿಯೊಂದನ್ನು ತನ್ನ ಹೆಸರಿನಲ್ಲಿ ಶೀರ್ಷಿಕೆಯೊಂದನ್ನು ಮಾತ್ರ ಬದಲಿಸಿ ಪ್ರಕಟಿಸಿದರು. ಅದು ಗೊತ್ತಾಗಿ ಗುರುದತ್ತರು ಅವರ ಮೇಲೆ ಕಾನೂನು ಕ್ರಮ, ಪರಿಹಾರ ಕೇಳಲು ಉದ್ಯುಕ್ತರಾದಾಗ ಆ ಪುಸ್ತಕವನ್ನು ಕೃತಿಚೋರರು ಹಿಂದಕ್ಕೆ ಪಡೆದುಕೊಂಡರು. ಇಂತಹ ಪ್ರಕರಣಗಳ ಪಟ್ಟಿ ಮಾಡಬಹುದು. ಕೃತಿಯೊಂದನ್ನು ಮತ್ತೆ ಹೊಸದಾಗಿ ರಚಿಸುವುದು ಮತ್ತು ಅಲ್ಲಲ್ಲ್ಲಿ ತಿರುಚಿದಂತೆ ಮೂಲ ಕಥೆಯನ್ನು ಒಗ್ಗಿಸುವುದೂ ಕೃತಿಚೌರ್ಯವೇ ಎಂದು ಪ್ರಾಥಮಿಕ ಹಂತದ ಕೆಲವರು ನಂಬುತ್ತಾರೆ.

ಡಾ. ಯು.ಆರ್. ಅನಂತಮೂರ್ತಿಯವರ ಕಥೆಯೊಂದು ಕೃತಿಚೌರ್ಯವೆಂಬ ಗದ್ದಲ ಒಮ್ಮೆ ಹುಟ್ಟಿಕೊಂಡಿತ್ತು. ಅದು ಅವರಿಗೆ ಅಗತ್ಯವಿತ್ತೇ ಅಥವಾ Great men think alike ಎಂಬಂತೆ ಚಿಂತಕರು, ಪಂಡಿತರು, ಶ್ರೇಷ್ಠ ಬರಹಗಾರರು ಒಂದೇ ರೀತಿಯಲ್ಲಿ ಚಿಂತಿಸುವ ಅವಕಾಶಗಳಿವೆಯೆಂಬುದನ್ನು ನಂಬಬಾರದೇಕೆ ಎಂಬುದೂ ವಿವಾದಾಸ್ಪದವಾಗುತ್ತದೆ. ಭಾರತೀಸುತರ ‘ಎಡಕಲ್ಲು ಗುಡ್ಡದ ಮೇಲೆ’ ಪ್ರಕಟವಾದಾಗ ಅದು ಲಾರೆನ್ಸನ Lady Chatterley’s Lover ರೂಪಾಂತರವೆಂಬ ಅಭಿಪ್ರಾಯವಿದ್ದಿತು. ಇದು ಸತ್ಯವೂ ಹೌದು. ಇದೇ ರೀತಿ ಕುವೆಂಪು ಅವರ ‘ರಕ್ತಾಕ್ಷಿ’ಯೂ ಶೇಕ್ಸ್‌ಪಿಯರ್‌ನ ‘ಹ್ಯಾಮ್ಲೆಟ್’ ನಾಟಕವನ್ನು ದಟ್ಟವಾಗಿ ಹೋಲುವ ನಾಟಕ. ಆದರೆ ಇವೆಲ್ಲ ಕೃತಿಚೌರ್ಯಗಳಲ್ಲ. ಕೆಲವು ಬಾರಿ ನಾವು ಎಂದೋ ಓದಿದ ಘಟನೆ, ಕಥೆ ಇತ್ಯಾದಿಗಳು ಸುಪ್ತವಾಗಿ ಪ್ರಭಾವ ಬೀರಿ ಘನೀಭೂತವಾಗಿ ನೆನಪಿನಲ್ಲಿ ಸುಳಿದಾಡಿ ಹೊಸದೊಂದು ಸೃಷ್ಟಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಹೋಲಿಕೆಗಳು ಸಹಜ. ಈ ಅರ್ಥ ವ್ಯಾಪ್ತಿಯಲ್ಲಿ ಗ್ರಹಿಸಿದರೆ ಕೃತಿಚೌರ್ಯದ ಆಪಾದನೆಯನ್ನು ಮಾಡುವ ಮೊದಲು ಮೂಲ ಮತ್ತು ಕೃತಿಚೌರ್ಯ ಮಾಡಿದ್ದಾರೆಂದು ನಾವು ಆರೋಪಿಸುವ ಲೇಖಕರ ಸ್ಥಾನ-ಮಾನ, ಅರಿವಿನ ಆಳ-ಅಗಲ ಇವನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಗಂಭೀರವಾಗಿ ಯೋಚಿಸಿದರೆ ಮೂಲ ಯಾವುದು ಎಂಬುದನ್ನು ತಿಳಿಯಬೇಕು: ರಾಮಾಯಣ, ಮಹಾಭಾರತದಂತಹ ಪುರಾಣಗಳು ಎಷ್ಟೊಂದು ಬಗೆಯಲ್ಲಿ ವಿನ್ಯಾಸಗಳಲ್ಲಿ ಪುನರ್‌ಸೃಷ್ಟಿಗೊಂಡಿಲ್ಲ! ‘ತಿಣಿಕಿದನು ರಾಮಾಯಣದ ಕವಿಗಳ ಭಾರದಲಿ’ ಎಂದು ಕುಮಾರವ್ಯಾಸ ಹೇಳುವಾಗ ಆತನಿಗೆ ಈ ಗ್ರಹಿಕೆಯಿದ್ದಿರಬೇಕು. ‘ಕಾಲಿಡಲು ತೆರಪಿಲ್ಲ’ದಷ್ಟು ರಾಮಾಯಣಗಳಿರುವುದರಿಂದಲೇ ಆತ ಆಯ್ದುಕೊಂಡದ್ದು ಮಹಾಭಾರತವನ್ನು. ಅಲ್ಲೂ ಆಗಲೇ ಪಂಪ, ರನ್ನ ಮುಂತಾದವರು ಯಥಾಶಕ್ತಿ ವ್ಯವಸಾಯ ಮಾಡಿದ್ದರು. ಸ್ವಂತ ಸೃಷ್ಟಿಯನ್ನು ಆತನೂ ಬಯಸಲಿಲ್ಲ; ಆಯ್ದುಕೊಳ್ಳಲಿಲ್ಲ. ಅಂದರೆ ಆ ಕಾಲಕ್ಕೇ ಈ ಪುರಾಣಗಳನ್ನು ಒಂದು ತಾತ್ವಿಕ ವ್ಯಾಖ್ಯಾನಕ್ಕೆ ಒಳಗಾಗಿಸಿದ್ದರು. ಅದೆಂದರೆ ಪುರಾಣಗಳಾದ ಈ ಎರಡು ಕಥೆಗಳು (ಅವು ಹಗಲು-ಇರುಳುಗಳ ಅಜಗಜಾಂತರಗಳನ್ನು ಸಂಕೇತಿಸುವಂತೆ ಸೂರ್ಯ-ಚಂದ್ರ ವಂಶಗಳ ಕಥೆಗಳು!) ಅವರವರ ಭಾವಕ್ಕೆ, ಅವರವರ ಭಕುತಿಗೆ ಒಲಿದ ರೀತಿಯಲ್ಲಿ ಆಕೃತಿಯನ್ನು ಆಶಯವನ್ನು ಹೊಂದುತ್ತವೆ. ಹಾಗಾಗಿ ಪಂಪ, ರನ್ನ, ಕುಮಾರವ್ಯಾಸರು ಬರೆದ ಭಾರತ ಕೃತಿಚೌರ್ಯವಾಗಲು ಸಾಧ್ಯವಿಲ್ಲ. ವ್ಯಾಸರು ಈ ಬಗ್ಗೆ ಚಿಂತಿತರಾಗುವ ಪ್ರಮೇಯವಿಲ್ಲ. ರಾಮಾಯಣದ ಕಥೆಯೂ ಹೀಗೆಯೇ.

ಮುನ್ನೂರು ರಾಮಾಯಣಗಳ ಕಥೆಯೂ ಹೀಗೆಯೇ. ಇನ್ನೂ ವಿಚಿತ್ರ ವಿಶೇಷವೆಂದರೆ ‘ಅಧ್ಯಾತ್ಮ ರಾಮಾಯಣ’ ಎಂಬ ಸಂಸ್ಕೃತ ರಾಮಾಯಣದಲ್ಲಿ ಸೀತೆಯನ್ನು ಅಯೋಧ್ಯೆಯಲ್ಲೇ ಉಳಿಸಿ ಶ್ರೀರಾಮನು ವನವಾಸಕ್ಕೆ ಹೊರಡಲನುವಾದಾಗ ಆಕೆ ‘‘ಬ್ರಾಹ್ಮಣರಿಂದ ಬಹಳ ಸಲ ಅನೇಕ ರಾಮಾಯಣಗಳನ್ನು ನಾನು ಕೇಳಿರುವೆನು. ಆದರೆ ಎಲ್ಲಿಯಾದರೂ ರಾಮನು ಸೀತೆಯನ್ನು ಬಿಟ್ಟು ಕಾಡಿಗೆ ಹೋದಂತಹ ಸಂದರ್ಭವುಂಟೇ?’’ (ರಾಮಾಯಣಾನಿ ಬಹುಶಃ ಶ್ರುತಾನಿ ಬಹುಭಿರ್ದ್ವಿಜೈ:/ ಸೀತಾಂ ವಿನಾ ವನಂ ರಾಮೋ ಗತಃ ಕಿಂ ಕುತ್ರಚಿದ್ವದ/)ಎನ್ನುತ್ತಾಳೆ. ಹೀಗೆ ಒಂದೇ ಕಥೆಯನ್ನನುಸರಿಸಿದಾಗಲೂ ಮತ್ತು ಅದನ್ನು ಕಥೆಯ ಪಾತ್ರಗಳ ಮೂಲಕ ಆಡಿಸಿದಾಗಲೂ ಮೂಲದ ಹಂದರವನ್ನು ಆಧರಿಸಿದರೆ ತಪ್ಪಿಲ್ಲವೆಂಬಂತೆ ಪರಂಪರೆಯೇ ಇದೆ. ಆದ್ದರಿಂದ ಒಂದು ಕಥಾನಕವನ್ನು ಎರಡು ರೀತಿಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಬಣ್ಣಿಸುವಾಗ ಅವರವರ ದೃಷ್ಟಿಕೋನಕ್ಕನುಗುಣವಾಗಿ ಭಿನ್ನತೆಯಿದ್ದರೂ ಕೆಲವೆಡೆ ಸಾಮ್ಯವಿರಬಹುದು.

ಬಸವಣ್ಣನ ಬಗ್ಗೆ ಬಂದ ಮೂರೋ ನಾಲ್ಕೋ ಕನ್ನಡ ನಾಟಕಗಳನ್ನು, ಹಾಗೆಯೇ ‘ನಾಗಮಂಡಲ’, ‘ಸಿರಿಸಂಪಿಗೆ’ ಮುಂತಾದ ನಾಟಕಗಳನ್ನು ಮತ್ತು ಒಂದೇ ಕವಿತೆಯನ್ನು ಅನೇಕರು ಅನುವಾದಿಸುವಾಗ (ಉದಾಹರಣೆಗೆ ಯೇಟ್ಸನ ಲಿಡಾ ಮತ್ತು ಹಂಸ) ಆಗುವ ಪರಿಣಾಮಗಳನ್ನು ಗಮನಿಸಿದರೆ ಈ ವಿಚಾರ ಗೊತ್ತಾಗಬಹುದು. ನಮ್ಮ ಅಕ್ಕಮಹಾದೇವಿಯ ಕಥೆಗೂ ಸಂತ ಮೀರಾಬಾಯಿಯ ಕಥೆಗೂ ಎಷ್ಟೊಂದು ಹೋಲಿಕೆಗಳಿಲ್ಲ! ಈ ವಿಚಾರವನ್ನು ಸರಿಯಾಗಿ ಗ್ರಹಿಸದಿದ್ದರೆ ಕೃತಿಚೌರ್ಯಕ್ಕೂ ಆಧರಿತ ಕೃತಿಗೂ ಪ್ರಭಾವಕ್ಕೂ ನಡುವೆ ಇರುವ ವ್ಯತ್ಯಾಸವು ಅಳಿಸಹೋಗುವ ಅಪಾಯವಿದೆ.

ಕೃತಿಚೌರ್ಯವು ತಡೆಹಿಡಿಯಬೇಕಾದ ಒಂದು ಅಪವಾದ. ಕೃತಿಚೌರ್ಯದ ಮೂಲೋದ್ದೇಶವೇನೆಂದು ಅಧ್ಯಯನ ಮಾಡಬಹುದು: ಇದರಲ್ಲಿ ತಾತ್ವಿಕವಾಗಿ ಯೋಚಿಸುವುದಕ್ಕೇನೂ ಉಳಿದಿಲ್ಲ. ಮೊದಲನೆಯದಾಗಿ ಯಾವುದೊಂದು ವಸ್ತುವಿಗೆ ಮನಸೋತಾಗ ಅದನ್ನು ಸುಲಭವಾಗಿ ತನ್ನದನ್ನಾಗಿಸುವ ಹಪಾಹಪಿಕೆ. ಆನಂತರ ಅದು ಯಾವುದೇ ಕಷ್ಟವಿಲ್ಲದೆ ತನ್ನ ಹೆಸರಿನಲ್ಲಿ ವಿಜೃಂಭಿಸಲಿ ಎಂಬ ಆಸೆ-ದುರಾಸೆ. ಇವುಗಳ ಹಿಂದೆ ಇಂದಿನ ಅಪಾರ ಸಂಖ್ಯೆಯ ಬರಹಗಳ ಕಾಡಿನ ನಡುವೆ ತನ್ನ ಅಸ್ತಿತ್ವ ಮೂಲ ಲೇಖಕನಿಗಾಗಲೀ ಆತನನ್ನು ಅಥವಾ ಕನಿಷ್ಠ ಆ ಕೃತಿಯನ್ನು ಓದಿದವರು ತನ್ನ ಈ ಬರಹವನ್ನು ಓದಲಾರರೆಂದು ಅಥವಾ ತನ್ನ ಬರಹವನ್ನು ಓದಿದವರು ಆ ಮೂಲ ಲೇಖನವನ್ನು ಓದಿರಲಾರರೆಂಬ ಮತ್ತು ಈ ಎಲ್ಲ ಅಡೆತಡೆಗಳನ್ನು ದಾಟಿ ಯಾರಾದರೊಬ್ಬ ಓದಿದರೂ ಆತ ಇದನ್ನು ಪ್ರಸಾರ ಮಾಡಲಾರನೆಂಬ ನಿರೀಕ್ಷೆ. ಈ ಅಥವಾ ಇಂತಹ ಮನಸ್ಥಿತಿಯ ವ್ಯಕ್ತಿಗಳೇ ಕೃತಿಚೌರ್ಯವನ್ನೆಸಗುವುದು. ಹಾಗೆಂದು ಒಮ್ಮೆ ಈ ಯೋಜನೆ ತಲೆಕೆಳಗಾಗಿ ಆಘಾತವಾದರೆ ಆ ವ್ಯಕ್ತಿಯಲ್ಲಿರುವ ಸಹಜ ಪ್ರತಿಭೆಯೂ ಕಮರೀತು. ಆದ್ದರಿಂದ ಯಾವುದೇ ಕೃತಿಚೌರ್ಯದ ಗಂಭೀರತೆಯನ್ನು ಅಳೆಯದೆ ಖಂಡಿಸುವುದೂ ಸಲ್ಲದು. ವಾಲ್ಮೀಕಿಯೂ ಒಮ್ಮೆ ಕಳ್ಳನಾಗಿದ್ದವನೆ ಎಂದು ಕತೆಯಿದೆ. ವಿದ್ಯುಚ್ಚೋರನೆಂಬ ಋಷಿಯ ಕಥೆ ಓದಿದವರಿಗೆ, ಕೇಳಿದವರಿಗೆ ಕಳವಿನ ರಮ್ಯತೆ ಗೊತ್ತಾಗಬಹುದು ಮತ್ತು ಅದು ಹೇಗೆ ವೈರಾಗ್ಯಕ್ಕೆ ದಾರಿ ಮಾಡಿಕೊಟ್ಟಿತು ಎಂದು ಅರ್ಥವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News