ಕಾಶ್ಮೀರ ಸಮಸ್ಯೆ: ವಿಶ್ವಸಂಸ್ಥೆ ಮಧ್ಯಸ್ಥಿಕೆಗೆ ಭಾರತ ತಿರಸ್ಕಾರ

Update: 2017-03-11 03:30 GMT

ಹೊಸದಿಲ್ಲಿ, ಮಾ. 11: ಭಾರತ ಹಾಗೂ ಪಾಕಿಸ್ತಾನದ ನಡುವೆ ಕಗ್ಗಂಟಾಗಿ ಉಳಿದಿರುವ ಗಡಿ ವಿವಾದದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವ ವಿಶ್ವಸಂಸ್ಥೆಯ ನೂತನ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟ್ರೆಸ್ ಅವರ ಪ್ರಸ್ತಾವವನ್ನು ಭಾರತ ತಿರಸ್ಕರಿಸಿದೆ. ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ದ್ವಿಪಕ್ಷೀಯ ಪರಿಹಾರವಷ್ಟೇ ಸಾಧ್ಯ ಎಂಬ ತನ್ನ ವಾದವನ್ನು ಭಾರತ ಪುನರುಚ್ಚರಿಸಿದೆ.

ಕಾಶ್ಮೀರ ವಿಷಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ಹಿರಿಯ ಅಧಿಕಾರಿಗಳ ಜತೆ ಸಂವಾದ ಸಾಧ್ಯತೆಯನ್ನು ತೆರೆಯುವ ಬಗ್ಗೆ ಗುಟ್ರೆಸ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಸರಕಾರಿ ಮೂಲಗಳು, "ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ದ್ವಿಪಕ್ಷೀಯ ಮಾತುಕತೆಯಿಂದಷ್ಟೇ ಸಾಧ್ಯ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಸ್ಪಷ್ಟಪಡಿಸಿವೆ.

ಗುಟ್ರೆಸ್ ಅವರ ವಕ್ತಾರ ಫರ್ಹಾನ್ ಹಕ್ ಅವರು, "ಪ್ರಧಾನ ಕಾರ್ಯದರ್ಶಿಗಳು ಉಭಯ ದೇಶಗಳ ನಡುವಿನ ಚರ್ಚಾ ಪ್ರಕ್ರಿಯೆಯನ್ನು ಮುಂದುವರಿಸಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಿದ್ದಾರೆ. ಈ ಬಗ್ಗೆ ಅವರು ಪರಿಶೀಲಿಸುತ್ತಿದ್ದಾರೆ. ಈ ವಿಚಾರದಲ್ಲಿ ಅದಕ್ಕಿಂತ ಹೆಚ್ಚು ಏನೂ ಹೇಳುವಂತಿಲ್ಲ" ಎಂದು ಹೇಳಿದ್ದರು.

ಕಾಶ್ಮೀರ ಪರಿಸ್ಥಿತಿ ಬಗ್ಗೆ ಮತ್ತು ಗುಟ್ರೆಸ್ ಅವರು ಕಾಶ್ಮೀರ ವಿವಾದವನ್ನು ಅರ್ಥ ಮಾಡಿಕೊಂಡು ಪ್ರಧಾನಿ ಮೋದಿಯವರಿಗೆ ಮಾತನಾಡಿ, ಪಾಕಿಸ್ತಾನದ ಜತೆ ಮಾತುಕತೆ ಆರಂಭಿಸುವಂತೆ ಕೇಳಿಕೊಳ್ಳುತ್ತಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಹಕ್ ಉತ್ತರಿಸಿದರು.

ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಎಲ್ಲ ಅಗತ್ಯ ಕ್ರಮಗಳನ್ನು ವಿಶ್ವಸಂಸ್ಥೆ ಕೈಗೊಳ್ಳಲಿದೆ ಎಂದು ಇನ್ನೊಂದು ಪ್ರಶ್ನೆಗೆ ಹಕ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News