ನ್ಯಾಯಾಲಯದಿಂದ ಹೊರಗೆ ವಿವಾದ ಇತ್ಯರ್ಥಪಡಿಸಿ: ಸುಪ್ರೀಂಕೋರ್ಟ್

Update: 2017-03-21 07:13 GMT

 ಹೊಸದಿಲ್ಲಿ, ಮಾ.21: ಎರಡು ದಶಕಗಳಿಂದ ಬಾಕಿ ಇರುವ ಬಾಬ್ರಿ ಮಸೀದಿ-ರಾಮಮಂದಿರ ವಿವಾದವನ್ನು ನ್ಯಾಯಾಲಯದಿಂದ ಹೊರಗೆ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಮಂಗಳವಾರ ವಾದಿ-ಪ್ರತಿವಾದಿಗಳಿಗೆ ಸಲಹೆ ನೀಡಿದ್ದು, ಭಾರತದ ಮುಖ್ಯ ನ್ಯಾಯಾಧೀಶರು ಸ್ವ-ಇಚ್ಛೆಯಿಂದ ಸಂಧಾನಕಾರರಾಗಿ ಕಾರ್ಯನಿರ್ವಹಿಸಲು ಸಿದ್ಧ ಎಂದು ಹೇಳಿದೆ.

 ವಿವಾದ ಅತ್ಯಂತ ಸೂಕ್ಷ್ಮವಾಗಿರುವ ಕಾರಣ ಶೀಘ್ರವೇ ವಿಚಾರಣೆ ನಡೆಸಬೇಕೆಂದು ಅರ್ಜಿದಾರ, ಭಾರತೀಯ ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯವನ್ನು ಆಗ್ರಹಿಸಿದರು. ಮಾ.31 ಅಥವಾ ಅದಕ್ಕಿಂತ ಮೊದಲೇ ಅಯೋಧ್ಯಾ ಪ್ರಕರಣವನ್ನು ನ್ಯಾಯಾಲಯದಿಂದ ಹೊರಗೆ ಇತ್ಯರ್ಥಪಡಿಸಿಕೊಳ್ಳುವಂತೆ ಸುಬ್ರಮಣಿಯನ್ ಸ್ವಾಮಿಗೆ ಸುಪ್ರೀಂಕೋರ್ಟ್ ಸೂಚಿಸಿತು.

ಅರ್ಜಿದಾರರು ಹಾಗೂ ಪ್ರತಿವಾದಿಗಳ ನಡುವೆ ಮಾತುಕತೆ ನಡೆಸಿ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸ್ವಾಮಿಗೆ ಸಲಹೆ ನೀಡಿದ ಸುಪ್ರೀಂಕೋರ್ಟ್,ಒಂದು ವೇಳೆ ಮಾತುಕತೆ ವಿಫಲವಾದರೆ, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ವಿವಾದ ಇತ್ಯರ್ಥಕ್ಕಾಗಿ ಸಂಧಾನಕಾರರನ್ನು ನೇಮಕ ಮಾಡಲಿದೆ ಎಂದು ಹೇಳಿದೆ.

‘‘ಮಸೀದಿಯನ್ನು ಸರಯೂ ನದಿ ದಂಡೆಯಲ್ಲಿ ನಿರ್ಮಿಸಬೇಕು ಹಾಗೂ ವಿವಾದಿತ ಭೂಮಿಯನ್ನು ರಾಮ ಮಂದಿರಕ್ಕೆ ಹಸ್ತಾಂತರಿಸಬೇಕು. ಪರಸ್ಪರ ಒಪ್ಪಂದದೊಂದಿಗೆ ವಿವಾದವನ್ನು ಪರಿಹರಿಸಿಕೊಳ್ಳುವ ಅಗತ್ಯವಿದೆ. ಚರ್ಚೆಯ ಮೂಲಕ ವಿವಾದಕ್ಕೆ ಪರಿಹಾರ ಸಿಗುವ ವಿಶ್ವಾಸ ನನಗಿದೆ’’ ಎಂದು ‘ಸಿಎನ್‌ಎನ್ ನ್ಯೂಸ್ 18’ಗೆ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.

 ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಉಮಾಭಾರತಿ ವಿರುದ್ಧ ವಿಚಾರಣೆಯು ವಿಳಂಬವಾಗಿರುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಈ ತಿಂಗಳಾರಂಭದಲ್ಲಿ ಆತಂಕವ್ಯಕ್ತಪಡಿಸಿತ್ತು. ಆರೋಪಿಗಳನ್ನು ಜಂಟಿಯಾಗಿ ವಿಚಾರಣೆಗೆ ಗುರಿಪಡಿಸುವಂತೆ ಸಲಹೆ ನೀಡಿತ್ತು.

ಮಾ.22ಕ್ಕೆ ವಿಚಾರಣೆಯನ್ನು ಮುಂದೂಡಿದ ಸುಪ್ರೀಂಕೋರ್ಟ್, ಲಕ್ನೋ ಹಾಗೂ ರಾಯ್‌ಬರೇಲಿಯಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ ವಿಚಾರಣೆ ಒಟ್ಟಿಗೆ ನಡೆಸುವಂತೆ ಆದೇಶಿಸಿದೆ.

 ಅಡ್ವಾಣಿ, ಜೋಶಿ, ಉಮಾಭಾರತಿ ಹಾಗೂ ಉತ್ತರಪ್ರದೇಶದ ಆಗಿನ ಮುಖ್ಯಮಂತ್ರಿ ಹಾಗೂ ಹಾಲಿ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಮತ್ತಿತರರನ್ನು ಅಲಹಾಬಾದ್ ಹೈಕೋರ್ಟ್ ದೋಷಮುಕ್ತಗೊಳಿಸಿದ್ದನ್ನು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಪ್ರಶ್ನಿಸಿದೆ.

ಕಳೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಎಲ್ಲ ಆರೋಪಿಗಳಿಂದ ಪ್ರತಿಕ್ರಿಯೆ ಕೇಳಿತ್ತು.

1992ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News