ಉತ್ತರ ಪ್ರದೇಶ: ಜನತೆಯ ಗಂಟಲಲ್ಲಿ ಯೋಗಿಯ ಮುಳ್ಳು

Update: 2017-03-23 18:59 GMT

ಗೋಮಾಂಸವನ್ನು ನಿಷೇಧಿಸಲು ಹೋಗಿ ಮಹಾರಾಷ್ಟ್ರ ಅನುಭವಿಸಿದ ಮುಜುಗರಗಳು ಮತ್ತು ತಾವೇ ಜಾರಿಗೆ ತಂದ ಕಾನೂನನ್ನು ತಾವೇ ತಿದ್ದಬೇಕಾದಂತಹ ಅಲ್ಲಿನ ಸರಕಾರದ ಅಸಹಾಯಕತೆಯಿಂದ ಉತ್ತರ ಪ್ರದೇಶದ ಬಿಜೆಪಿ ಪಾಠ ಕಲಿಯುವುದು ಬಹಳಷ್ಟಿದೆ. ಗೋವಾ ಮತ್ತು ಕೇರಳಗಳಲ್ಲಿ ಗೋಮಾಂಸವನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಬಿಜೆಪಿಯ ನಾಯಕರೇ ಘೋಷಿಸಿರುವುದು, ಅರುಣಾಚಲ ಪ್ರದೇಶದಲ್ಲಿ ಆರೆಸ್ಸೆಸ್ ಕಾರ್ಯಕರ್ತರೂ ಗೋಮಾಂಸವನ್ನು ಸೇವಿಸುತ್ತಾರೆ ಎನ್ನುವ ಅಂಶ ಹೊರಬಿದ್ದಿರುವುದರಿಂದ, ಬಿಜೆಪಿ ಅಲ್ಲೂ ಗೋಮಾಂಸದ ವಿಷಯದಲ್ಲಿ ಮುಖಭಂಗ ಅನುಭವಿಸಿರುವುದು ಇವೆಲ್ಲವೂ ಮಾಂಸಾಹಾರ ನಿಷೇಧವೆನ್ನುವುದು ಎಷ್ಟು ಸೂಕ್ಷ್ಮವಾದ ವಿಚಾರ ಎನ್ನುವುದನ್ನು ಅರ್ಥೈಸಿಕೊಳ್ಳಲು ಧಾರಾಳ ಸಾಕು.

ಆದರೆ ಮುಂದಿನ ಪರಿಣಾಮಗಳನ್ನು ಯೋಚಿಸದೆ ಕುರುಡು ದ್ವೇಷ ರಾಜಕಾರಣಕ್ಕಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಮಾಂಸಾಹಾರದ ವಿರುದ್ಧ ಸಮರ ಸಾರುವ ಸೂಚನೆಗಳನ್ನು ನೀಡಿದೆ. ಆದರೆ ಈ ಸಮರ ಅಂತಿಮವಾಗಿ ಬಿಜೆಪಿಯ ಗಂಟಲ ಮುಳ್ಳಾಗಿ ಪರಿಣಮಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಮರುದಿನವೇ ಎಲ್ಲ ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಅಮಿತ್ ಶಾ ಹೇಳಿಕೆ ನೀಡಿದ್ದರು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಿಜೆಪಿ ಸಚಿವ ಶ್ರೀಕಾಂತ್ ಶರ್ಮಾ ಈ ಹೇಳಿಕೆಯ ಕುರಿತು ಜಾರಿಕೆಯ ಉತ್ತರ ನೀಡಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ ಬೆನ್ನಿಗೇ, ತಳಸ್ತರದ ಸಂಘಪರಿವಾರ ಕಾರ್ಯಕರ್ತರು ಉನ್ಮತ್ತರಂತೆ ಕಸಾಯಿಖಾನೆಗಳ ವಿರುದ್ಧ ಮುಗಿಬಿದಿದ್ದಾರೆ. ಅದರ ಭಾಗವಾಗಿಯೇ ಹಲವು ಮಾಂಸ ಮತ್ತು ಮೀನಿನ ಅಂಗಡಿಗಳಿಗೆ ಬೆಂಕಿ ಬಿದ್ದಿದೆ. ವಿಪರ್ಯಾಸವೆಂದರೆ, ಬೆಂಕಿ ಹಚ್ಚಿದ ಕಾರ್ಯಕರ್ತರೇನೂ ಸಸ್ಯಾಹಾರಿಗಳಲ್ಲ. ಅವರೂ ಮಾಂಸಾಹಾರಿಗಳೇ ಆಗಿದ್ದಾರೆ. ಅವರ ಉದ್ದೇಶ ಬೆಂಕಿ ಹಚ್ಚುವುದೇ ಹೊರತು, ಮಾಂಸಾಹಾರವನ್ನು ತಡೆಯುವುದು ಆಗಿಲ್ಲ ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ.

ಅಂದರೆ ಕಸಾಯಿಖಾನೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿರುವ ಮುಸ್ಲಿಮರನ್ನು ಸದೆ ಬಡಿಯಲು, ಅವರಿಗೆ ಬೆದರಿಕೆ ಒಡ್ಡುವುದಕ್ಕಾಗಿ ಇದನ್ನು ಬಳಸಲಾಗುತ್ತಿದೆ. ನಿಜಕ್ಕೂ ಸರಕಾರಕ್ಕಾಗಲಿ, ಸಂಘಪರಿವಾರಕ್ಕಾಗಲಿ ಗೋಮಾಂಸ ಅಥವಾ ಇನ್ನಾವುದೇ ಮಾಂಸವನ್ನು ನಿಷೇಧಿಸುವ ಉದ್ದೇಶವಿದ್ದಿದ್ದರೆ, ಉತ್ತರ ಪ್ರದೇಶದಿಂದ ವಿದೇಶಗಳಿಗೆ ರಫ್ತಾಗುವ ಮಾಂಸಗಳ ಸಂಸ್ಕರಣಾ ಘಟಕಗಳನ್ನು ಮೊದಲು ಮುಚ್ಚಬೇಕಾಗಿತ್ತು. ಅದೇನೇ ಇರಲಿ, ಇದೀಗ ಯೋಗಿ ಆದಿತ್ಯನಾಥ್ ಸರಕಾರದ ಮುಂದೆ ತನ್ನದೇ ಪಕ್ಷ ನೀಡಿರುವ ಭರವಸೆಗಳು ಅತೀ ದೊಡ್ಡ ಸವಾಲಾಗಿ ನಿಂತಿದೆ. ದಲಿತರು, ಮುಸ್ಲಿಮರು ಮತ್ತು ಹಿಂದುಳಿದವರ್ಗಗಳ ಆಹಾರವಾಗಿರುವ ಮಾಂಸಾಹಾರವನ್ನೇ ನಿಷೇಧ ಮಾಡಿದರೆ ಆ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಅಸ್ತವ್ಯಸ್ತವಾಗಲಿವೆ. ಅದರ ನೇರ ಪರಿಣಾಮ ಅನುಭವಿಸಬೇಕಾಗಿರುವುದು ಉತ್ತರ ಪ್ರದೇಶ ಸರಕಾರವೇ ಆಗಿದೆ.

ಪಶುಸಂಗೋಪನಾ ಇಲಾಖೆಯ ಅಂಕಿಅಂಶಗಳ ಪ್ರಕಾರ 2014-15ರ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ 7,515.14 ಲಕ್ಷ ಕಿಲೊ ಕೋಣದ ಮಾಂಸ, 1171.65 ಲಕ್ಷ ಕಿಲೊ ಆಡಿನ ಮಾಂಸ, 230.99 ಲಕ್ಷ ಕಿಲೊ ಕುರಿ ಮಾಂಸ ಮತ್ತು 1410.32 ಲಕ್ಷ ಕಿಲೊ ಹಂದಿ ಮಾಂಸವನ್ನು ಉತ್ಪಾದಿಸಲಾಗಿದೆ. ಪ್ರಸಕ್ತ ಭಾರತದಲ್ಲಿ ಸರಕಾರದಿಂದ ಅನುಮೋದನೆ ಪಡೆದ 72 ಮಾಂಸ ಸಂಸ್ಕರಣಾ ಘಟಕಗಳಿವೆ. ಅವುಗಳಲ್ಲಿ 38 ಉತ್ತರ ಪ್ರದೇಶದಲ್ಲಿವೆ. 2011ರಲ್ಲಿ ಕೃಷಿ ಮತ್ತು ಸಂಸ್ಕರಿತ ಆಹಾರ ರಫ್ತು ಅಭಿವೃದ್ಧಿ ಮಂಡಳಿ (ಎಪಿಇಡಿಎ) ಬಿಡುಗಡೆ ಮಾಡಿದ ಸರಕಾರಿ ಅನುಮೋದಿತ ಕಸಾಯಿಖಾನೆಗಳ ಪಟ್ಟಿಯಲ್ಲಿ ದೇಶಾದ್ಯಂತ ಕೇವಲ 30 ಉಳಿದಿದ್ದವು ಮತ್ತು ಅವುಗಳಲ್ಲಿ ಅರ್ಧದಷ್ಟು ಉತ್ತರ ಪ್ರದೇಶದಲ್ಲಿದ್ದವು. 2014ರಲ್ಲಿ ಎಪಿಇಡಿಎ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸರಕಾರಿ ಅನುಮೋದಿತ ಕಸಾಯಿಖಾನೆಗಳ ಸಂಖ್ಯೆ 53ಕ್ಕೆ ತಲುಪಿತ್ತು. ಮುಂದಿನ ವರ್ಷ ಮತ್ತೆ ಈ ಪಟ್ಟಿಗೆ 11 ಕಸಾಯಿಖಾನೆಗಳು ಸೇರುವ ಮೂಲಕ ಈ ಸಂಖ್ಯೆ 62ಕ್ಕೆ ತಲುಪಿತು. ಪ್ರಸ್ತುತ 38 ಕಸಾಯಿಖಾನೆಗಳಲ್ಲಿ ಏಳು ಅಲಿಗಡದಲ್ಲಿವೆೆ, ಐದು ಘಾಝಿಯಾಬಾದ್‌ನಲ್ಲಿದೆ ಮತ್ತು 37 ಘಟಕಗಳು ಕೋಣದ ಮಾಂಸವನ್ನು ಉತ್ಪಾದಿಸಿ ರಫ್ತು ಮಾಡುತ್ತವೆ.

ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯು 2014ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಉತ್ತರ ಪ್ರದೇಶವು ದೇಶದಲ್ಲೇ ಅತೀಹೆಚ್ಚು (ಶೇ.19.1) ಮಾಂಸ ಉತ್ಪಾದಿಸುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (ಶೇ.15.2) ಮತ್ತು ಪಶ್ಚಿಮ ಬಂಗಾಳ(ಶೇ.10.9)ವಿದೆ. ವರದಿಯಲ್ಲಿ ತಿಳಿಸಿರುವಂತೆ 2008ರಿಂದ 2013ರ ಐದು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶವು ನಿರಂತರವಾಗಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡು ಬಂದಿದೆ. 2007ರಲ್ಲಿ ನಡೆಸಲಾದ 18ನೆ ಜಾನುವಾರು ಗಣತಿಯು, ಉತ್ತರ ಪ್ರದೇಶವು ದೇಶದಲ್ಲೇ ಅತೀಹೆಚ್ಚು ಗೋವುಗಳ ಸಂತತಿಯನ್ನು ಹೊಂದಿರುವ ರಾಜ್ಯವಾಗಿದೆ ಎಂಬುದನ್ನು ತೋರಿಸುತ್ತದೆ. 2012ರಲ್ಲಿ ನಡೆಸಲಾದ ಜಾನುವಾರು ಗಣತಿ ಕೂಡಾ ಈ ಅಂಕಿಯನ್ನು ದೃಢೀಕರಿಸುತ್ತದೆ.

ಗೋವುಗಳ ಸಂಖ್ಯೆಯು ಉತ್ತರ ಪ್ರದೇಶದಲ್ಲಿ ಶೇ.29 ಏರಿಕೆಯನ್ನು ಕಂಡಿದ್ದು 2,38,12,000ದಿಂದ 3,06,25,000ಕ್ಕೆ ಏರಿದೆ. ಆಂಧ್ರಪ್ರದೇಶದಲ್ಲಿ ಅವುಗಳ ಸಂಖ್ಯೆಯು 1,32,71,000ದಿಂದ ಕುಸಿದು 1,06,22,000 ಅಂದರೆ 20% ಇಳಿಕೆ ಕಂಡಿದೆ. ನಿಷೇಧದಿಂದ ರಫ್ತಿನಿಂದ ಬರುವ ಆದಾಯದ ಮೇಲೆ ಕನಿಷ್ಟ ರೂ 11,350 ಕೋಟಿಯ (2015-16) ಹೊಡೆತ ಬೀಳಲಿದೆ. 2015-16ರಲ್ಲಿ ಉತ್ತರ ಪ್ರದೇಶವು 5,65,958.20 ಮೆಟ್ರಿಕ್ ಟನ್ ಕೋಣದ ಮಾಂಸವನ್ನು ರಫ್ತು ಮಾಡಿದೆ. ನಿಷೇಧದಿಂದ ಉಂಟಾಗುವ ಈ ಬೃಹತ್ ನಿರ್ವಾತವನ್ನು ರಾಜ್ಯ ಇನ್ನಾವ ಉದ್ಯಮಗಳಿಂದ ತುಂಬಿಸಿಕೊಳ್ಳುತ್ತವೆ ಎನ್ನುವುದರ ಯಾವ ದೂರಗಾಮಿ ಯೋಜನೆಗಳೂ ಯೋಗಿ ನೇತೃತ್ವದ ಸರಕಾರದಲ್ಲಿಲ್ಲ. ವಿಪರ್ಯಾಸವೆಂದರೆ ಈ ಮಾಂಸೋದ್ಯಮದ ಹಣವೇ ಇಲ್ಲಿನ ರಾಜಕೀಯ ಪಕ್ಷಗಳನ್ನೂ ಮುನ್ನಡೆಸುತ್ತಿವೆೆ. ಮಾಂಸ ಸಂಸ್ಕರಣಾ ಘಟಕಗಳಲ್ಲಿ ಬಿಜೆಪಿಯ ಜನಪ್ರತಿನಿಧಿಗಳೂ ಸೇರಿದಂತೆ ಹಲವು ಮುಖಂಡರು ಹಣ ಹೂಡಿದ್ದಾರೆ. ಮಾಂಸೋದ್ಯಮವೇನಾದರೂ ಶಾಶ್ವತವಾಗಿ ನಿಂತರೆ ಉತ್ತರ ಪ್ರದೇಶ ಪ್ರತೀ ವರ್ಷ 11 ಸಾವಿರ ಕೋಟಿಗೂ ಅಧಿಕ ಹಣವನ್ನು ಕಳೆದುಕೊಳ್ಳಲಿದೆ. ಇದು ಆ ರಾಜ್ಯದ ಆರ್ಥಿಕ ಬೆನ್ನುಮೂಳೆಯನ್ನೇ ಮುರಿದು ಹಾಕುತ್ತದೆ. ಅಷ್ಟೇ ಅಲ್ಲ, ಉದ್ಯಮದೊಂದಿಗೆ ಸಂಬಂಧ ಹೊಂದಿರುವ ಸಹಸ್ರಾರು ರೈತರು, ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಬಡತನ ಹೆಚ್ಚುತ್ತದೆ. ಜೊತೆಗೆ ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ.

ಗ್ರಾಮೀಣ ಪ್ರದೇಶದ ಹೈನೋದ್ಯಮದ ಮೇಲೂ ಇದು ಭಾರೀ ದುಷ್ಪರಿಣಾಮವನ್ನು ಬೀರಲಿದೆ. ಮಾಂಸಾಹಾರ ಸಾಂಸ್ಕೃತಿಕವಾಗಿ ಉತ್ತರಪ್ರದೇಶ ಬಹುಜನರನ್ನು ಬೆಸೆದುಕೊಂಡಿದೆ. ದಲಿತರು, ಮುಸ್ಲಿಮರು, ಹಿಂದುಳಿದವರ್ಗಗಳ ಹಬ್ಬ ಹರಿದಿನಗಳಲ್ಲೂ ಮಾಂಸಾಹಾರ, ಬಾಡೂಟಗಳು ಮಹತ್ವವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮಾಂಸಾಹಾರದ ವಿರುದ್ಧ ಸರಕಾರವೇನಾದರೂ ಕಾರ್ಯಾಚರಣೆಗೆ ಇಳಿದರೆ, ಛಿದ್ರವಾಗಿರುವ ಬಹುಜನರು ಒಂದಾಗಲು ಅದೇ ಕಾರಣವಾಗಬಹುದು. ಮತ್ತು ಏರಿದಷ್ಟೇ ವೇಗದಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ ನೆಲಕಚ್ಚುವುದಕ್ಕೂ ಇದು ಹೇತುವಾಗಬಹುದು. ಆದುದರಿಂದ, ಮಾಂಸ ನಿಷೇಧ ಹೇಗೆ ಉತ್ತರ ಪ್ರದೇಶ ಜನರ ಗಂಟಲ ಮುಳ್ಳಾಗಿದೆಯೋ, ಹಾಗೆಯೇ ಯೋಗಿಯ ಗಂಟಲಲ್ಲಿ ಸಿಕ್ಕಿಕೊಂಡಿರುವ ಮುಳ್ಳು ಕೂಡ ಹೌದು. ಈ ಮುಳ್ಳನ್ನು ಹೇಗೆ ಹೊರತೆಗೆಯುತ್ತಾರೆ ಎನ್ನುವುದರ ಮೇಲೆ ಉತ್ತರ ಪ್ರದೇಶದ ಸಾಮಾಜಿಕ, ರಾಜಕೀಯ ಭವಿಷ್ಯ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News