ದಲಿತ ಅಧಿಕಾರಿಗಳಿಗಿದು ಪಾಠ

Update: 2017-03-24 18:50 GMT

ಅಂಗನವಾಡಿ ತಾಯಂದಿರ ಬೃಹತ್ ಪ್ರತಿಭಟನೆ ಇಡೀ ಬೆಂಗಳೂರನ್ನು ನಡುಗಿಸಿದ ಬೆನ್ನಿಗೇ, ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿ ಇನ್ನೊಂದು ಬೃಹತ್ ರ್ಯಾಲಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ದಲಿತ ಹೋರಾಟಗಾರರು, ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಬೀದಿಗಿಳಿದು ಭಡ್ತಿ ಮೀಸಲಾತಿ ಸಂರಕ್ಷಣೆಗೆ ಸುಗ್ರೀವಾಜ್ಞೆ ತನ್ನಿ ಎಂದು ಹೋರಾಟ ಮಾಡಿದರು. ಭಡ್ತಿ ಮೀಸಲಾತಿಯ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನೂರಾರು ಸಂಖ್ಯೆಯ ದಲಿತ ಅಧಿಕಾರಿಗಳ ಬದುಕಿನ ಮೇಲೆ ಪರಿಣಾಮ ಬೀರುವುದರಿಂದ, ತಕ್ಷಣ ಭಡ್ತಿ ಮೀಸಲಾತಿ ಸಂರಕ್ಷಣೆಗೆ ಸುಗ್ರೀವಾಜ್ಞೆ ತನ್ನಿ ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಒಂದೆಡೆ ದಲಿತ ಪ್ರಾತಿನಿಧ್ಯದ ಹೆಸರಿನಲ್ಲೇ ಗೃಹ ಇಲಾಖೆಯನ್ನು ತನ್ನದಾಗಿಸಿಕೊಂಡ ಪರಮೇಶ್ವರ್ ಅವರು ವಿಧಾನಸೌಧದೊಳಗಿಂದ ಹೊರಬರಲೇ ಇಲ್ಲ. ಈ ಹೋರಾಟಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ವರ್ತಿಸಿದರು. ಈ ಭಡ್ತಿ ಮೀಸಲಾತಿಯ ಕುರಿತು ತನ್ನ ಸ್ಪಷ್ಟ ನಿಲುವೇನು ಎನ್ನುವುದನ್ನು ಅವರು ಈವರೆಗೆ ಬಹಿರಂಗ ಪಡಿಸಿಲ್ಲ. ಮಗದೊಂದೆಡೆ ಶ್ರೀನಿವಾಸ ಪ್ರಸಾದ್‌ರಂತಹ ಹಿರಿಯ ದಲಿತ ನಾಯಕ, ‘ಮೋದಿ ಬ್ರಿಗೇಡ್’ನ್ನು ಹಿಂಬಾಲಿಸುವ ಸಂಭ್ರಮದಲ್ಲಿದ್ದಾರೆ. ದಲಿತರ ಪ್ರತಿನಿಧಿಯಾಗಿ ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಂಡವರೆಲ್ಲರ ಬಾಯಿಗೆ ಬೀಗ ಬಿದ್ದಿದೆ.

ಇದಷ್ಟೇ ಅಲ್ಲ, ಪ್ರಗತಿಪರರು ಎನ್ನಿಸಿದವರಲ್ಲೂ ಭಡ್ತಿ ಮೀಸಲಾತಿಯ ಕುರಿತಂತೆ ಕೆಲವು ಗೊಂದಲ, ಅನುಮಾನಗಳಿವೆ. ಶಿಕ್ಷಣದಲ್ಲಿ ಮೀಸಲಾತಿ ಸರಿ, ಉದ್ಯೋಗದಲ್ಲಿಯೂ ಮೀಸಲಾತಿ ಸರಿ, ಭಡ್ತಿಯ ಸಂದರ್ಭದಲ್ಲಿ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು ಎನ್ನುವುದನ್ನು ಎಡಪಂಥೀಯರು, ಪ್ರಗತಿಪರ ಮುಂದಾಳುಗಳೂ ಮುಂದಿಡುವುದಿದೆ. ಆದುದರಿಂದಲೇ ಭಡ್ತಿ ಮೀಸಲಾತಿಯ ಕೂಗು ಕೇವಲ ಒಂದು ನಿರ್ದಿಷ್ಟ ದಲಿತವರ್ಗದ ಕೂಗಾಗಿಯಷ್ಟೇ ಪ್ರತಿಬಿಂಬಿತವಾಗುತ್ತಿದೆ. ಸಾಮಾಜಿಕ ನ್ಯಾಯದ ಕುರಿತಂತೆ ಮಾತನಾಡುವವರೂ ಭಡ್ತಿ ಮೀಸಲಾತಿಯ ಕುರಿತಂತೆ ಅಸಮಾಧಾನವನ್ನು ವ್ಯಕ್ತಿಪಡಿಸುತ್ತಿದ್ದಾರೆ. ಸರಕಾರವೂ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಮೀನಮೇಷ ಎಣಿಸುತ್ತಿರುವುದಕ್ಕೆ ಇದೇ ಕಾರಣ.

ಭಡ್ತಿ ನೀಡುವ ಸಂದರ್ಭದಲ್ಲಿ ಇಲಾಖೆಗಳಲ್ಲಿ ಜಾತಿ, ವರ್ಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕಾಗಿದೆ. ಕೇಂದ್ರ ಸರಕಾರದ ಹಿರಿಯ ಶ್ರೇಣಿಯ ಕಾರ್ಯದರ್ಶಿ ಹುದ್ದೆಗಳನ್ನೇ ತೆಗೆದುಕೊಳ್ಳೋಣ. ಮೀಸಲಾತಿ ತನ್ನ ಉದ್ದೇಶವನ್ನು ನಿಜಕ್ಕೂ ಸಾಧಿಸಿಕೊಂಡಿದ್ದೇ ಆಗಿದ್ದರೆ, ಆ ಹುದ್ದ್ದೆಗಳಲ್ಲಿ ಒಬ್ಬನಾದರೂ ಪರಿಶಿಷ್ಟ ಜಾತಿಯ ಅಧಿಕಾರಿ ಇರಬೇಕಾಗಿತ್ತು. ಆದರೆ ಸುಮಾರು 150 ಮಂದಿಯಲ್ಲಿ ಒಬ್ಬನೇ ಒಬ್ಬ ಪರಿಶಿಷ್ಟ ಜಾತಿಯ ಅಧಿಕಾರಿ ಇಲ್ಲ. ಇದು ಆಕಸ್ಮಿಕವಂತೂ ಖಂಡಿತ ಅಲ್ಲ. ಅಪರ ಕಾರ್ಯದರ್ಶಿ ಹುದ್ದೆಗಳಲ್ಲಿ ಬರೇ ಎರಡೋ ಮೂರೋ ಅಧಿಕಾರಿಗಳಷ್ಟೇ ಎಸ್ಸಿ ಎಸ್ಟಿಗಳಿದ್ದಾರೆ.

ಯಾಕೆ ಈ ಮಹತ್ವದ ಹುದ್ದೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ದಲಿತರ ಅನುಪಸ್ಥಿತಿ ಕಾಣಿಸಿಕೊಂಡಿದೆ? ಕೇಂದ್ರ ಸರಕಾರದ 73 ಇಲಾಖೆಗಳಲ್ಲಿ 25 ಸಾವಿರಕ್ಕೂ ಅಧಿಕ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ ಎಂದು ವರದಿಗಳು ಹೇಳುತ್ತವೆ. ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವ ಭರವಸೆಯನ್ನು ಜನನಾಯಕರು ನೀಡುತ್ತಾ ಬರುತ್ತಿದ್ದಾರೆ. ಆದರೆ ಯಾರಿಗೂ ಅದನ್ನು ಪ್ರಾಮಾಣಿಕವಾಗಿ ಈಡೇರಿಸುವ ಇಚ್ಛೆ ಇದ್ದಂತಿಲ್ಲ. ಕೆಲವೊಮ್ಮೆ ಆ ಬ್ಯಾಕ್‌ಲಾಗ್ ಹುದ್ದೆಗಳನ್ನು ಖಾಲಿ ಇರಿಸಿ, ತಾತ್ಕಾಲಿಕವಾಗಿ ಬೇರೆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡ ಉದಾಹರಣೆಗಳೂ ಇವೆ. ಬಹುತೇಕ ಇಲಾಖೆಗಳ ಮುಖ್ಯಸ್ಥರು ಮೇಲ್ಜಾತಿಗೆ ಸೇರಿದವರೇ ಇರುವುದು ಖಂಡಿತ ಆಕಸ್ಮಿಕ ಅಲ್ಲ. ಹಾಗೆಯೇ ಭಡ್ತಿಯ ಹಿಂದೆಯೂ ವಶೀಲಿಬಾಜಿ, ಅಕ್ರಮಗಳು ನಡೆಯುತ್ತಿರುವುದು ಗುಟ್ಟಿನ ವಿಷಯವೇನೂ ಅಲ್ಲ. ಮೀಸಲಾತಿಯಿಂದ ಕಾಲೇಜು ಸೀಟು ಪಡೆದ ವಿದ್ಯಾರ್ಥಿ, ಇಲಾಖೆಯಲ್ಲಿ ಹುದ್ದೆ ಪಡೆದ ಅಭ್ಯರ್ಥಿಯ ಬಗ್ಗೆ ಮೇಲ್ಜಾತಿಯ ಅಭ್ಯರ್ಥಿಗಳಿಗೆ ಒಂದು ರೀತಿಯ ತುಚ್ಛೀಕಾರ ಇರುತ್ತದೆ. ಅಸಮಾಧಾನ, ದ್ವೇಷ ಹೊಗೆಯಾಡುತ್ತಿರುತ್ತದೆ. ಈತ ತನ್ನದೇನನ್ನೋ ಕಿತ್ತುಕೊಂಡು ಅನುಭವಿಸುತ್ತಿದ್ದಾನೆ ಎಂಬ ಮನಸ್ಥಿತಿಯಲ್ಲೇ ದಲಿತ ಸಿಬ್ಬಂದಿಯನ್ನು ನೋಡುವುದಿದೆ.

ಹೀಗಿರುವಾಗ, ಯಾವುದೇ ಇಲಾಖೆಗಳಲ್ಲಿ ದಲಿತ ಉದ್ಯೋಗಿ ಮಾನಸಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆ ಅತೀ ಹೆಚ್ಚು. ಈ ಕಾರಣದಿಂದಲೇ ಭಡ್ತಿ ಮೀಸಲಾತಿ ಇಲ್ಲವಾದರೆ, ದಲಿತ ಉದ್ಯೋಗಿಗಳು ಅವಕಾಶಗಳನ್ನು ಗಿಟ್ಟಿಸಿಕೊಂಡು ಮೇಲೇರುವುದು ಕಷ್ಟವಾಗುತ್ತವೆ. ಮಾತ್ರವಲ್ಲ, ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನಗಳವರೆಗೆ ಅವರು ತಲುಪುವುದೂ ಕಷ್ಟವಾಗಬಹುದು. ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಮುಂದಿನ ದಿನಗಳಲ್ಲಿ ಅತ್ಯುನ್ನತ ಸ್ಥಾನಗಳಲ್ಲಿ ದಲಿತರ ಪಾಲುದಾರಿಕೆ ಇನ್ನಷ್ಟು ಕುಸಿಯುವ ಸಾಧ್ಯತೆಗಳಿವೆ. ಆದುದರಿಂದ ಈ ತೀರ್ಪಿನ ವಿರುದ್ಧ ಸಂಘಟಿತ ಹೋರಾಟ ಅತ್ಯಗತ್ಯವಾಗಿದೆ. ರ್ಯಾಲಿಗಳು ರಾಜಕೀಯ ಶಕ್ತಿಗಳ ಮೇಲೆ ಒತ್ತಡ ಹೇರಲು ಸಹಾಯ ಮಾಡಬಹುದು. ಇದೇ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟದಿಂದ ಹೇಗೆ ಮತ್ತೆ ಭಡ್ತಿ ಮೀಸಲಾತಿಯನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆಯೂ ಕಾನೂನು ತಜ್ಞರು ಒಂದಾಗಿ ಚಿಂತಿಸಬೇಕಾಗಿದೆ.

ದಲಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಕಲಿಯಬೇಕಾದ ಪಾಠ ಒಂದಿದೆ. ಗುರುವಾರದ ರ್ಯಾಲಿಯಲ್ಲಿ ನೂರಾರು ಸಂಖ್ಯೆಯಲ್ಲಿ ದಲಿತ ಅಧಿಕಾರಿಗಳು ಬೀದಿಗಿಳಿದಿದ್ದರು. ಆದರೆ ಇವರು ಈ ಹಿಂದೆ ದಲಿತರ ಮೇಲೆ ದೌರ್ಜನ್ಯ ನಡೆದಾಗ, ವೇಮುಲಾ ಪರವಾಗಿ ದೇಶಾದ್ಯಂತ ಹೋರಾಟ ಸಂಘಟಿತವಾದಾಗ ತಮ್ಮ ತಮ್ಮ ಕುರ್ಚಿಯಲ್ಲಿ ಭದ್ರವಾಗಿ ಕುಳಿತು, ಇದು ನಮ್ಮ ಸಮಸ್ಯೆ ಅಲ್ಲವೇ ಅಲ್ಲ ಎಂಬ ಮನಸ್ಥಿತಿಯಲ್ಲಿದ್ದವರು. ಯಾವಾಗ ತಮ್ಮ ಕುರ್ಚಿಗೆ ಸಂಚಕಾರ ಬಂತೋ, ಆಗ ಅವರಿಗೆ ತಾವು ದಲಿತರು ಎನ್ನುವುದು ನೆನಪಿಗೆ ಬಂದಿದೆ ಮತ್ತು ದಲಿತ ಸಂಘಟನೆಗಳು, ಹೋರಾಟಗಳು ಬೇಕಾಗಿದೆ. ಇಂದು ದೇಶಾದ್ಯಂತ ಹಲವು ಸರಕಾರಿ ಕಚೇರಿಗಳಲ್ಲಿ ದಲಿತರು ಉತ್ತಮ ಹುದ್ದೆಯಲ್ಲಿದ್ದರೆ, ಅದು ದಲಿತರ ಸಂಘಟಿತ ಹೋರಾಟದ ಫಲವಾಗಿದೆ. ಆದರೆ ಇದೇ ದಲಿತರು ಸೂಕ್ತ ಸ್ಥಾನ ಸಿಕ್ಕಿದಾಕ್ಷಣ ಬಹುಬೇಗನೇ ತಾವು ಬಂದ ದಾರಿ, ತಮಗೆ ಬಿಡುಗಡೆ ನೀಡಿದ ಸಂಘಟನೆಗಳು, ಹೋರಾಟಗಳನ್ನು ಮರೆತು, ಪುರೋಹಿತಶಾಹಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತಾವೇ ನವ ಬ್ರಾಹ್ಮಣರಾಗಿ ಶೋಷಿತ ದಲಿತರಿಂದ, ಅವರ ಹೋರಾಟಗಳಿಂದ ಅಂತರವನ್ನು ಕಾಪಾಡಿಕೊಳ್ಳುತ್ತಾರೆ.

ತಮಗೆ ಸಿಗುತ್ತಿರುವ ವೇತನ, ಗೌರವ ಎಲ್ಲದರ ಹಿಂದೆ ಅಪಾರ ತ್ಯಾಗ, ಬಲಿದಾನಗಳಿವೆ ಎನ್ನುವುದನ್ನು ಮರೆತು, ತಮ್ಮನ್ನು ಶೋಷಣೆಗೈದವರೊಂದಿಗೆ ಕೈ ಜೋಡಿಸಿಕೊಂಡು ಹೋರಾಟಗಾರರ ವಿರುದ್ಧ ಮಾತನಾಡುತ್ತಾರೆ. ಸುಶಿಕ್ಷಿತ ದಲಿತರು ಈ ಸಂಘಟನೆಗಳನ್ನು ಜೀವಂತವಾಗಿಡಲು ಒಂದಿಷ್ಟು ಸಮಯ, ಹಣ, ಚಿಂತನೆಗಳನ್ನು ವ್ಯಯ ಮಾಡಿದ್ದರೆ ಅದು ಅವರಿಗೂ ಹೊಸ ತಲೆಮಾರಿಗೂ ಬಹಳಷ್ಟು ಸಹಾಯ ಮಾಡುತ್ತಿತ್ತು. ಸುಶಿಕ್ಷಿತ ದಲಿತರು ನವ ಬ್ರಾಹ್ಮಣರಂತೆ ಯೋಚನೆ ಮಾಡಲು ತೊಡಗಿದ ಕಾರಣದಿಂದಲೇ ನ್ಯಾಯಾಲಯಗಳು ಪದೇ ಪದೇ ದಲಿತ ವಿರೋಧಿ ತೀರ್ಪುಗಳನ್ನು ನೀಡುತ್ತಿವೆ. ರಾಜಕೀಯ ನಾಯಕರು ಬಹಿರಂಗವಾಗಿಯೇ ಮೀಸಲಾತಿ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಘೋಷಣೆ ಕೂಗಿದ ಎಲ್ಲ ಅಧಿಕಾರಿಗಳು ಇದೀಗ ತಮ್ಮ ತಮ್ಮ ಎದೆಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳುವ ಸಮಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News