ಸರಕಾರ ಮುಚ್ಚಿಡುತ್ತಿರುವುದೇನು ?

Update: 2017-04-04 05:36 GMT

"ಯಾವ ಸರಕಾರ ಜನರಿಂದ ಮಾಹಿತಿಯನ್ನು ಮುಚ್ಚಿಡುವುದಕ್ಕೆ ಹವಣಿಸುವುದೋ ಆ ಸರಕಾರ ಜನರು ತಿಳಿಯಬಾರದ ಅಕ್ರಮಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಶಾಮೀಲಾಗಿದೆ ಎಂದು ಅರ್ಥ. ಆರ್‌ಟಿಐಯನ್ನು ದುರ್ಬಲಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ನಿರ್ಧಾರ ಈ ಕಾರಣಕ್ಕಾಗಿಯೇ ಪ್ರಶ್ನಾರ್ಹವಾಗುತ್ತದೆ."

ಆರ್‌ಟಿಐ ಕಾಯ್ದೆಯ ಮೂಲಕ ದು ರ್ಬಲಗೊಳ್ಳುತ್ತಿರುವ ಪ್ರಜಾಸತ್ತೆಯ ಬುನಾದಿಯನ್ನು ತುಸು ಗಟ್ಟಿಗೊಳಿಸಿರುವುದಕ್ಕಾಗಿ ನಾವು ಈ ಹಿಂದಿನ ಯುಪಿಎ ಸರಕಾರವನ್ನು ಸದಾ ಸ್ಮರಿಸಬೇಕಾಗುತ್ತದೆ. ಮತದಾನದ ಸಂದರ್ಭದಲ್ಲಿ ಮಾತ್ರ ‘ಒಂದು ದಿನದ ರಾಜ’ನಾಗಿ ಮೆರೆಯುತ್ತಿದ್ದ ಈ ದೇಶದ ಪ್ರಜೆಯ ಪ್ರಶ್ನಿಸುವ ಹಕ್ಕಿಗೆ ಈ ಮಾಹಿತಿ ಹಕ್ಕು ಅಪಾರ ಶಕ್ತಿಯನ್ನು ಕೊಟ್ಟಿತು. ಈ ಕಾಯ್ದೆ ಜಾರಿಗೊಂಡ ಬಳಿಕ ಪ್ರತೀ ಪ್ರಜೆಯೂ ತನಗೆ ಬೇಕಾಗಿರುವ ಮಾಹಿತಿಯನ್ನು ಪಡೆಯುವ ಹಕ್ಕುಗಳನ್ನು ಹೊಂದುವ ಮೂಲಕ ಹೋರಾಟಗಾರನಾಗಿ ಆತ ಪತ್ರಕರ್ತನೇ ಆಗಬೇಕಾಗಿಲ್ಲ, ಮಾಹಿತಿ ಹಕ್ಕಿನ ಆಧಾರದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿಟದರೆ ಕಚೇರಿಯೊಳಗಿರುವ ಅಧಿಕಾರಿ ಕುಳಿತಲ್ಲೇ ಬೆವರುವಂತಹ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಯಿತು. 

ಈ ಅರ್ಜಿಗಳು ಬಹಿರಂಗ ಪಡಿಸಿದ ಸತ್ಯದ ಆಧಾರದಲ್ಲಿ ಹಲವು ಜನನಾಯಕರೇ ಬೀದಿಗೆ ಬಿದ್ದಿದ್ದಿದೆ. ಹಲವು ಅಧಿಕಾರಿಗಳು ಅಮಾನತಾದ್ದಿದೆ. ಪ್ರಜಾಸತ್ತೆ ಅಧಿಕಾರಶಾಹಿಯ ಕಪಿ ಮುಷ್ಟಿಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಅವನ ಮುಷ್ಟಿಯೊಳಗಿಂತ ಸತ್ಯವನ್ನು ಹೊರತೆಗೆಯುವ ಇಕ್ಕಳದ ಮಾತ್ರವಹಿಸಿತು ಈ ಕಾಯ್ದೆ. ಮಾಹಿತಿ ಹಕ್ಕು ಕೆಲವು ಬಾರಿ ದುರ್ಬಳಕೆಯಾಗಿರುವುದು ನಿಜವೇ ಇದ್ದರೂ, ಅದು ಸದ್ಬಳಕೆಯಾಗಿರುವ ಪ್ರಮಾಣಕ್ಕೆ ಹೋಲಿಸಿದರೆ ಅದು ತೀರಾ ಸಣ್ಣ ನಷ್ಟ. ಈ ಕಾಯ್ದೆಯನ್ನು ಜಾರಿಗೊಳಿಸಿದ ಯುಪಿಎ ಸರಕಾರವೇ ಹಲವು ಬಾರಿ ಮುಜುಗರಕ್ಕೊಳಗಾಗುವ ಸನ್ನಿವೇಶ ನಿರ್ಮಾಣವಾಯಿತು. ಆರ್‌ಟಿಐ ಕಾಯ್ದೆಯ ಮೂಲಕವೇ ಯುಪಿಎ ಸರಕಾರದ ಹಲವು ಹಗರಣಗಳು ಬಹಿರಂಗವಾಯಿತು. ಸರಕಾರದೊಳಗಿರುವ ಕೆಲವು ಶಕ್ತಿಗಳು ಕಾಯ್ದೆಯನ್ನು ದುರ್ಬಲಗೊಳಿಸಲು ಅಂದಿನ ಯುಪಿಎ ಪ್ರಧಾನಿಯ ಮೇಲೆ ಒತ್ತಡ ಹಾಕಲು ಆರಂಭಿಸಿದವು. ಅಂತಿಮವಾಗಿ ತಾನೇ ಜಾರಿಗೆ ತಂದ ಕಾಯ್ದೆಯನ್ನು ತಾನೇ ದುರ್ಬಲಗೊಳಿಸಬೇಕಾದಂತಹ ಪರಿಸ್ಥಿತಿಗೆ ಯುಪಿಎ ಸರಕಾರ ಸಿಲುಕಿಕೊಂಡಿತು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯ ತೀವ್ರ ಆಕ್ಷೇಪದ ಕಾರಣದಿಂದಾಗಿ ತನ್ನ ನಿರ್ಧಾರದಿಂದ ಅಂದಿನ ಸರಕಾರ ಹಿಂದೆ ಸರಿಯಿತು.

2005ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದು, ಈವರೆಗೆ 10 ಮಿಲಿಯನ್‌ಗೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ನೂರಾರು ಅಕ್ರಮಗಳು ಈ ಅರ್ಜಿಗಳಿಂದಾಗಿ ಬಹಿರಂಗಗೊಂಡಿವೆ. ಹಲವು ರಾಜಕೀಯ ನಾಯಕರು ಸಾರ್ವಜನಿಕವಾಗಿ ಮುಜುಗರ ಅನುಭವಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಕೆಲವು ದುಷ್ಟ ಶಕ್ತಿಗಳು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬಾಯಿ ಮುಚ್ಚಿಸಲು ವಿಫಲರಾಗಿ ಸಾರ್ವಜನಿಕವಾಗಿ ಹತ್ಯೆ ಮಾಡುವಂತಹ ಕ್ರೌರ್ಯಕ್ಕೆ ಇಳಿದರು. ಆದರೆ ಈ ಹತ್ಯೆಗಳೂ ಸತ್ಯವನ್ನು ಇನ್ನಷ್ಟು ಜ್ವಲಿಸುವಂತೆ ಮಾಡಿದವು. ಅಕ್ರಮ, ಭ್ರಷ್ಟಾಚಾರದ ವಿರುದ್ಧ ಜನಚಳವಳಿಯನ್ನು ಹುಟ್ಟು ಹಾಕಿದವು.ಈ ಕಾರಣಕ್ಕಾಗಿಯೇ ನೂತನ ಮೋದಿ ನೇತೃತ್ವದ ಸರಕಾರಕ್ಕೆ ಆರ್‌ಟಿಐ ಕಾಯ್ದೆ ಗಂಟಳೊಳಗೆ ಸಿಕ್ಕಿಕೊಂಡ ಮುಳ್ಳಾಗಿ ಪರಿಣಮಿಸಿದೆ.
 
ಕೋಮುವಾದ ಮತ್ತು ಕಾರ್ಪೊರೇಟ್ ಬೆಂಬಲದ ಜೊತೆಗೇ ಅಧಿಕಾರಕ್ಕೆ ಬಂದ ಮೋದಿ ಸರಕಾರ, ಮೊತ್ತ ಮೊದಲು ಮಾಡಿದ ಕೆಲಸವೇ ಜನಚಳವಳಿಗಳನ್ನು ಹತ್ತಿಕ್ಕುವುದು. ಪರಿಸರ ಹೋರಾಟಕ್ಕೆ ಮೀಸಲಾಗಿರುವ ಎಲ್ಲ ಎನ್‌ಜಿಒ ಸಂಘಟನೆಗಳ ವಿರುದ್ಧ ಕತ್ತಿ ಮಸೆಯಿತು.ಪರಿಸರ ಸಂಘಟನೆಗಳಿಗೆ ಬರುವ ನಿಧಿಯನ್ನು ತಡೆಯಿತು. ಬೃಹತ್ ಉದ್ಯಮಿಗಳ ವಿರುದ್ಧ ಜನರನ್ನು ಹೋರಾಟಕ್ಕೆ ಪ್ರೇರೇಪಿಸುವ ಬಹುತೇಕ ಸಂಘಟನೆಗಳನ್ನೂ ಅಭಿವೃದ್ಧಿ ವಿರೋಧಿ, ದೇಶವಿರೋಧಿ ಹಣೆಪಟ್ಟಿ ಕಟ್ಟಿ ಬಾಯಿ ಮುಚ್ಚಿಸಿತು. ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುವಾಗ, ರೈತರ ಭೂಮಿಯನ್ನು ಕಿತ್ತುಕೊಳ್ಳುವಾಗ ಅವರಿಂದ ಪ್ರತಿರೋಧ ಬರದಂತೆ ತಡೆಯಬೇಕಾದರೆ ಜನಚಳವಳಿಯನ್ನು ಮಟ್ಟಹಾಕುವುದು ಅತ್ಯಗತ್ಯ ಎನ್ನುವುದು ಮೋದಿ ಸರಕಾರಕ್ಕೆ ಸ್ಪಷ್ಟವಿತ್ತು.

ಆದರೆ ಮಾಹಿತಿ ಹಕ್ಕು ಹೋರಾಟಗಾರರು ಮಾತ್ರ ಅವರಿಗೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದ್ದಾರೆ. ಅವರಿಗೆ ಈ ದೇಶದ ಸಂವಿಧಾನ ಬೆಂಗಾವಲಾಗಿದೆ. ಅವರ ಜೊತೆಗೆ ಯಾವ ಎನ್‌ಜಿಓ ಸಂಘಟನೆಗಳೂ ಇಲ್ಲ. ಆರ್‌ಟಿಐ ಕಾರ್ಯಕರ್ತರೆಂದರೆ ಒಂಟಿ ಸೇನೆಯಿದ್ದಂತೆ. ಅವರ ತಂಟೆಗೆ ಹೋಗುವುದೆಂದರೆ ಸಂವಿಧಾನ ಮತ್ತು ಜನಸಮೂಹದ ಪ್ರತಿರೋಧವನ್ನು ಏಕಕಾಲದಲ್ಲಿ ಕಟ್ಟಿಕೊಂಡಂತೆ. ಉತ್ತರ ಪ್ರದೇಶದ ಭಾರೀ ವಿಜಯದ ಬಳಿಕ ಸರಕಾರವೀಗ, ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಸಾಹಸಕ್ಕಿಳಿದಿದೆ.

ನೋಟು ನಿಷೇಧದ ಬೆಳವಣಿಗೆಗಳ ಬಳಿಕ ಕೇಂದ್ರ ಸರಕಾರ ಜನಪರ ಹೋರಾಟಗಾರರಿಂದ ವ್ಯಾಪಕವಾಗಿ ಮಾಹಿತಿ ಹಕ್ಕು ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಬಹುತೇಕ ಅರ್ಜಿಗಳಿಗೆ ಉತ್ತರಿಸಲಾಗದೆ ತಡವರಿಸುತ್ತಿದೆ. ಹಲವು ಅರ್ಜಿಗಳನ್ನು ‘ದೇಶದ ಗೌಪ್ಯತೆ’ಯ ಕಾರಣ ಒಡ್ಡಿ ತಿರಸ್ಕರಿಸಿದೆಯಾದರೂ, ಎಲ್ಲವನ್ನೂ ಅದೇ ರೀತಿಯಲ್ಲಿ ತಿರಸ್ಕರಿಸುವಂತಿಲ್ಲ. ಉತ್ತರಿಸಿದರೆ, ಸರಕಾರದ ಬಂಡವಾಳ ಹೊರ ಬೀಳುತ್ತದೆ. ಈ ಕಾರಣದಿಂದ, ಮಾಹಿತಿಯ ಹಕ್ಕಿನ ಪ್ರಕ್ರಿಯೆಯನ್ನೇ ದುಬಾರಿಗೊಳಿಸಿ, ಕಾಯ್ದೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಿ ಹೋರಾಟಗಾರರನ್ನು ಇಕ್ಕಟ್ಟಿಗೆ ಸಿಲುಕಿಸಲು ಅದು ಹೊರಟಿದೆ.

ಆರ್‌ಟಿಐ ಅರ್ಜಿಯನ್ನು 500 ಪದಗಳಿಗೆ ಸೀಮಿತಗೊಳಿಸುವುದು, ಅರ್ಜಿಶುಲ್ಕವನ್ನು ಹೆಚ್ಚಿಸುವುದು, ಅರ್ಜಿದಾರರು ಆನ್‌ಲೈನ್ ಮೂಲಕ ಮಾತ್ರ ದೂರು ಸಲ್ಲಿಸಲು ಅವಕಾಶ ನೀಡುವುದು, ಒಟ್ಟು ಮಾಹಿತಿಯ ಅಂಚೆ ಚೀಟಿಯ ವೆಚ್ಚವನ್ನು ಹೋರಾಟಗಾರರೇ ಭರಿಸುವುದು ಮೊದಲಾದವುಗಳನ್ನು ಹೊಸದಾಗಿ ಅಳವಡಿಸಲು ಸರಕಾರ ಯೋಚಿಸುತ್ತಿದೆ. ಈ ಹಿಂದೆ 30 ದಿನದೊಳಗೆ ಸಂಬಂಧಿಸಿದವರು ಅರ್ಜಿದಾರರಿಗೆ ಮಾಹಿತಿಯನ್ನು ನೀಡಬೇಕಾಗಿತ್ತು. ಇದೀಗ ಅದನ್ನು 60 ದಿನಗಳವರೆಗೆ ವಿಸ್ತರಿಸಿದೆ.

ಈ ಹಿಂದೆ ಸಂಬಂಧಿತ ಇಲಾಖೆಗಳಿಗೆ ದೂರಿನ ಪ್ರತಿಯನ್ನು ಕಳುಹಿಸಿದರೆ ಸಾಕಿತ್ತು. ಇದೀಗ ಮಾಹಿತಿ ಅಧಿಕಾರಿಗೆ ಪ್ರತಿ ಕಳುಹಿಸದೇ ಇದ್ದರೆ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸುಳ್ಳು ಮಾಹಿತಿ ಕೋರಲಾಗಿದೆ ಎಂದು ಹೇಳುವ ಅವಕಾಶವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಈ ಮೂಲಕ ಅರ್ಜಿದಾರರನ್ನೇ ಸುಳ್ಳುಗಾರರನ್ನಾಗಿ ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವಕಾಶ ಅಧಿಕಾರಿಗಳಿಗಿದೆ. ಇದು ಮಾಹಿತಿ ಹಕ್ಕು ಹೋರಾಟಗಾರರ ನೈತಿಕ ಶಕ್ತಿಯನ್ನು ಕುಗ್ಗಿಸುವ ಹುನ್ನಾರದ ಭಾಗವಾಗಿದೆ.

ಯಾವ ಸರಕಾರ ಜನರಿಂದ ಮಾಹಿತಿಯನ್ನು ಮುಚ್ಚಿಡುವುದಕ್ಕೆ ಹವಣಿಸುವುದೋ ಆ ಸರಕಾರ ಜನರು ತಿಳಿಯಬಾರದ ಅಕ್ರಮಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಶಾಮೀಲಾಗಿದೆ ಎಂದು ಅರ್ಥ. ನೋಟು ನಿಷೇಧದ ಬಳಿಕದ ಪರಿಣಾಮಗಳನ್ನು ಸರಕಾರ ಸಂಪೂರ್ಣ ಮುಚ್ಚಿಟ್ಟಿದೆ. ಇದಾದ ಬಳಿಕ ಅದು ತರುತ್ತಿರುವ ಒಂದೊಂದು ಕಾನೂನುಗಳೂ ಜನವಿರೋಧಿಯಾಗಿವೆ. ಇಂತಹ ಸಂದರ್ಭದಲ್ಲಿ ಅದರ ವಿವರಗಳನ್ನು ತಿಳಿಯಲು ಜನರಿಗಿರುವ ಒಂದೇ ಒಂದು ದಾರಿ ಆರ್‌ಟಿಐ. ಅದನ್ನೂ ಮುಚ್ಚಿಸಿ ಬಿಟ್ಟರೆ ಅಥವಾ ದುರ್ಬಲಗೊಳಿಸಿದರೆ ಜನಸಾಮಾನ್ಯರ ಧ್ವನಿಯನ್ನು ಸಂಪೂರ್ಣ ಅಡಗಿಸಿದಂತಾಗುತ್ತದೆ.

ಮಾಹಿತಿ ಹಕ್ಕು ಸರಕಾರ ಜನರಿಗೆ ಮಾಡಿರುವ ಉಪಕಾರವಲ್ಲ. ತಾನು ಮತ ನೀಡಿದ ಸರಕಾರ ಏನು ಮಾಡುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳುವ ಅಧಿಕಾರ ಪ್ರತೀ ಮತದಾರನಿಗೂ ಇದೆ. ಆ ಅಧಿಕಾರವನ್ನು ಕಿತ್ತುಕೊಳ್ಳುವುದೆಂದರೆ ಪ್ರಜಾಸತ್ತೆಯ ಬೆನ್ನು ಮೂಳೆಯನ್ನೇ ಮುರಿದು ಬಿಡುವುದು ಎಂದರ್ಥ. ಆದುದರಿಂದ, ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ಸರಕಾರದ ಪ್ರಯತ್ನವನ್ನು, ಈ ದೇಶದ ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ, ಅದು ಇನ್ನಷ್ಟು ಗಟ್ಟಿಯಾಗಬೇಕು ಎಂಬ ಬಯಕೆಯಿರುವ ಪ್ರತಿಯೊಬ್ಬ ನಾಗರಿಕನೂ ವಿರೋಧಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News