ಲಾರಿ ಲಹರಿಗಳಿಗೆ ಕಿವಿಯಾನಿಸೋಣ

Update: 2017-04-05 04:25 GMT

ಜನರನ್ನು ಒತ್ತೆಯಾಳಾಗಿಸಿಕೊಂಡು ಮುಷ್ಕರ ನಡೆಸುತ್ತಿರುವ ಲಾರಿ ಮಾಲಕರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಲಾರಿಗಳೆಂದರೆ ಕೇವಲ ಮಾಲಕರು ಮಾತ್ರವಲ್ಲ, ಚಾಲಕರೂ ಅದರ ಅನಿವಾರ್ಯ ಭಾಗ. ಜೀವ ಒತ್ತೆಯಿಟ್ಟು ದುಡಿಯುವ ಈ ಶ್ರಮಜೀವಿಗಳ ಬೇಡಿಕೆಗಳಿಗೆ ಈ ಮಾಲಕರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಿದ್ದಾರೆ? ಮುಷ್ಕರ ನಿರತ ಮಾಲಕರು ಎದೆ ಮುಟ್ಟಿ ನೋಡಿಕೊಳ್ಳಬೇಕು.

ಈ ದೇಶದಲ್ಲಿ ಜನಸಾಮಾನ್ಯರ ನಡುವೆ ಹೇಗೆ ದರ್ಜೆಗಳಿವೆಯೋ ಹಾಗೆಯೇ ವಾಹನಗಳಲ್ಲೂ ಕೆಲವು ದರ್ಜೆಗಳಿವೆ. ಮರ್ಸಿಡಿಸ್ ಕಾರ್‌ಗಳಿಗಿರುವ ಮರ್ಯಾದೆ ಆಟೊ ರಿಕ್ಷಾಗಳಿಗಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ದೈನಂದಿನ ಬದುಕಿನ ಅನಿವಾರ್ಯ ಚಕ್ರಗಳು ಎಂದು ಗುರುತಿಸಿಕೊಳ್ಳುವ ಲಾರಿಗಳನ್ನು ‘ದಲಿತ ವಾಹನ’ಗಳು ಎಂದೇ ಬಣ್ಣಿಸಬಹುದು. ಯಾಕೆಂದರೆ ಹಗಲು ರಾತ್ರಿ ದುಡಿಯುತ್ತಾ ಜನಜೀವನವನ್ನು ಚಲನೆಯಲ್ಲಿಡುವ ಈ ಲಾರಿಗಳ ಕುರಿತಂತೆ ಜನರಿಗಿರುವಷ್ಟು ತಾತ್ಸಾರ ಯಾವ ವಾಹನಗಳ ಮೇಲೂ ಇಲ್ಲ. ಇಂದು ರಸ್ತೆಯಲ್ಲಿ ನಡೆಯುವ ಎಲ್ಲ ದುರಂತಗಳಿಗೂ ಈ ಲಾರಿಗಳೇ ಕಾರಣ ಎನ್ನುವ ಗಾಢ ನಂಬಿಕೆ ಮೇಲ್‌ಸ್ತರದ ಜನರಲ್ಲಿದೆ. ಲಾರಿ ಚಾಲಕರೆಂದರೆ ಕುಡುಕರು, ಉದ್ದೇಶ ಪೂರ್ವಕವಾಗಿ ಅಪಘಾತವೆಸಗುವ ಉದ್ಧಟರು, ಸಾಂಕ್ರಾಮಿಕ ರೋಗಗಳನ್ನು ಎಲ್ಲೆಡೆಗೆ ಹರಡುವವರು ಎನ್ನುವ ಕೀಳು ಅಭಿಪ್ರಾಯಗಳನ್ನೂ ಹಲವರು ತುಂಬಿಕೊಂಡಿದ್ದಾರೆ. ಸಣ್ಣ ಅಪಘಾತವಾದರೂ ಲಾರಿ ಚಾಲಕನ ಮೇಲೆ ಸಾರ್ವಜನಿಕರು ಬರ್ಬರವಾಗಿ ಎರಗುತ್ತಾರೆ. ಕೆಲವೊಮ್ಮೆ ಲಾರಿಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡುತ್ತಾರೆ.

ಲಾರಿಗಳ ಬಗ್ಗೆ ಅಸಹನೆ ಬೆಳೆಸಿಕೊಳ್ಳಲು ಬೇರೆ ಬೇರೆ ಪ್ರಾದೇಶಿಕ ಮತ್ತು ಜನಾಂಗೀಯ ಕಾರಣಗಳೂ ಇವೆ. ಪಂಜಾಬಿಗಳು, ತಮಿಳರು, ರಾಜಸ್ತಾನಿಗಳು...ಹೀಗೆ ಬೇರೆ ಬೇರೆ ರಾಜ್ಯಗಳಿಂದ ಲಾರಿಗಳು ಆಗಮಿಸುವುದರಿಂದ ಅವರ್ಯಾರೂ ನಮ್ಮವರಲ್ಲ ಎನ್ನುವಂತಹ ಮನಸ್ಥಿತಿ ಆಳದಲ್ಲಿರುವುದರಿಂದ ಈ ದಾಳಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದಕ್ಕೆ ಕಾರಣವಾಗುತ್ತಿದೆ. ಆದರೆ ಇವರೆಲ್ಲ ಯಾರು? ಲಾರಿಯಲ್ಲಿ ಏನನ್ನು ತುಂಬಿಕೊಂಡು ಬರುತ್ತಾರೆ? ಮತ್ತು ಇವರೆಲ್ಲ ಒಂದೆರಡು ದಿನ ತಮ್ಮ ಕೆಲಸವನ್ನು ನಿಲ್ಲಿಸಿದರೆ ಏನಾಗಬಹುದು? ಐದನೆ ದಿನ ತಲುಪಿರುವ ಲಾರಿ ಮುಷ್ಕರ ಇವೆಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಿದೆ.

ದಿನನಿತ್ಯ ಲಾರಿಗಳು ತುಂಬಿಕೊಂಡು ಸಾಗಿಸುತ್ತಿರುವುದು ಶ್ರೀಸಾಮಾನ್ಯನ ನೆಮ್ಮದಿಯ ಬದುಕನ್ನು ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಬೇಕಾದರೆ ಮುಷ್ಕರ ಇನ್ನೂ ಒಂದು ಹತ್ತು ದಿನ ಮುಂದುವರಿಯಬೇಕಾಗುತ್ತದೆ. ಕೇಂದ್ರ ಸರಕಾರದ ಹೊಸ ನೀತಿಗಳು ಲಾರಿಗಳ ಮೇಲೆ ಬರೆ ಎಳೆದಿದೆ. ಆದರೆ ಈ ಬರೆ ಪರೋಕ್ಷವಾಗಿ ಶ್ರೀಸಾಮಾನ್ಯನ ಬೆನ್ನಿಗೆ ಎಳೆದಿರುವ ಬರೆಯೂ ಹೌದು. ಲಾರಿಗಳ ದಾರಿಗಳಲ್ಲಿ ಅಡೆತಡೆಯಾದರೆ ಅದು ಪರಿಣಾಮ ಬೀರುವುದು ಜನಸಾಮಾನ್ಯರ ಮೇಲೆ. ಯಾಕೆಂದರೆ ಲಾರಿಗಳು ದಿನನಿತ್ಯ ತುಂಬಿಕೊಂಡು ಸಾಗಿಸುವುದು ನಾವು ಉಣ್ಣುವ ಅಕ್ಕಿ, ದವಸಧಾನ್ಯಗಳನ್ನು, ಇತರ ಜೀವನಾವಶ್ಯಕ ಪದಾರ್ಥಗಳನ್ನು ಯಾವ ಲಾರಿಗಳನ್ನು ನಾವು ತುಚ್ಛವಾಗಿ ಕಾಣುತ್ತೇವೆ ಆ ಲಾರಿಗಳಿಲ್ಲದೆ ನಮ್ಮ ಬದುಕೇ ಇಲ್ಲ. ಐಶಾರಾಮಿ ಕೋಣೆಗಳಲ್ಲಿ ಕುಳಿತವರ ಜೀವನದ ಹಿಂದೆ ಲಾರಿ ಉಗುಳುವ ದಟ್ಟ ಹೊಗೆಗಳಿವೆ. ಚಾಲಕನ ಬೆವರುಗಳಿವೆ.ಈ ಕಾರಣದಿಂದಲೇ ಲಾರಿಮಾಲಕರ ಬೇಡಿಕೆಯೇನಿದೆಯೋ ಅದು ಕೇವಲ ಅವರದಷ್ಟೇ ಅಗತ್ಯವಲ್ಲ, ಈ ದೇಶದ ಜನಸಾಮಾನ್ಯರ ಅಗತ್ಯ ಕೂಡ. ಬಹುಶಃ ಇದನ್ನು ಕೇಂದ್ರ ಸರಕಾರವಾಗಲಿ, ಅಧಿಕಾರಿಗಳಲ್ಲಿ ಇನ್ನೂ ಅರ್ಥ ಮಾಡಿಕೊಂಡಂತಿಲ್ಲ. ಅರ್ಥ ಮಾಡಿಕೊಂಡಿದ್ದಿದ್ದರೆ ನಿನ್ನೆ ನಡೆದ ಲಾರಿ ಮಾಲಕರ ಸಂಘಟನೆಯ ನಡುವಿನ ಸಂಧಾನ ಮುರಿದು ಬೀಳುತ್ತಿರಲಿಲ್ಲ. ಇದೀಗ ವಿಮಾಶುಲ್ಕಕ್ಕೆ ಸಂಬಂಧಪಟ್ಟಂತೆ ಪ್ರಾಧಿಕಾರದ ಜೊತೆಗೆ ನಡೆದಿರುವ ಮಾತುಕತೆಗಳು ಕುಸಿದು ಬಿದ್ದಿರುವ ಕಾರಣ, ಮುಷ್ಕರ ದೇಶವ್ಯಾಪಿ ವಿಸ್ತರಿಸುವ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ರಾಜ್ಯಕ್ಕೆ 7 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ.

ಮುಂದಿನ ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೂ ಮುಷ್ಕರ ಪರಿಣಾಮ ಬೀರಬಹುದು. ಮಾರುಕಟ್ಟೆಗಳಲ್ಲಿ ದಿನಸಿ, ತರಕಾರಿ ಮೊದಲಾದ ಜೀವನಾವಶ್ಯಕ ವಸ್ತುಗಳೂ ದೊರಕದಿರಬಹುದು. ಬೆಲೆಯೇರಿಕೆ ತೀವ್ರವಾಗಬಹುದು. ಒಂದು ರೀತಿಯಲ್ಲಿ ಲಾರಿ ಮಾಲಕರು ಶ್ರೀಸಾಮಾನ್ಯನ ಬದುಕನ್ನು ಒತ್ತೆಯಾಳಾಗಿಸಿಕೊಂಡು ಸರಕಾರವನ್ನು ಬೆದರಿಸುತ್ತಿದ್ದಾರೆ. ಈ ಹಗ್ಗ ಜಗ್ಗಾಟದಲ್ಲಿ ಜನರ ಬದುಕು ಮೂರಾಬಟ್ಟೆಯಾಗುವ ಎಲ್ಲ ಸಾಧ್ಯತೆಗಳೂ ಕಾಣಿಸಿಕೊಳ್ಳುತ್ತಿವೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ ಸೇರಿದಂತೆ ಎಲ್ಲ ಕಡೆಯ ಲಾರಿಗಳೂ ಆಯಾ ಬಂದರಿನಲ್ಲೇ ಬೀಡು ಬಿಟ್ಟಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವ ಬೆದರಿಕೆಯನ್ನು ಸಂಘಟನೆಗಳು ಒಡ್ಡಿವೆ. ಪರಿಸ್ಥಿತಿ ವಿಪರೀತಕ್ಕೆ ತಲುಪುವ ಮೊದಲು ಸರಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚರಗೊಳ್ಳಬೇಕಾಗಿದೆ.ಲಾರಿ ಮಾಲಕರ ಸಮಸ್ಯೆಗಳು ಜನಸಾಮಾನ್ಯರ ಸಮಸ್ಯೆಗಳ ಜೊತೆಗೆ ತಳಕು ಹಾಕಿರುವುರಿಂದ ನಾಡಿನ ಬೇರೆ ಬೇರೆ ಸಂಘಟನೆಗಳೂ ಲಾರಿ ಮಾಲಕರ ಬೇಡಿಕೆಗೆ ಧ್ವನಿ ಸೇರಿಸಿ, ಸರಕಾರ ಮತ್ತು ವಿಮಾ ಪ್ರಾಧಿಕಾರಗಳಿಗೆ ಬಿಸಿ ಮುಟ್ಟಿಸಬೇಕಾಗಿದೆ.

  ಇದೇ ಸಂದರ್ಭದಲ್ಲಿ, ಲಾರಿ ಮಾಲಕರಿಗೂ ಕೆಲವು ಜವಾಬ್ದಾರಿಗಳಿವೆ. ಜನಸಾಮಾನ್ಯರ ಬದುಕು ತಮ್ಮ ಕೈಯಲ್ಲಿದೆ ಎಂದು ಅವರನ್ನು ಪದೇ ಪದೇ ಒತ್ತೆಯಾಳಾಗಿಸಿಕೊಳ್ಳುವುದರಿಂದ ಸಾರ್ವಜನಿಕ ಅನುಕಂಪ ಅವರಿಗೆ ಸಿಗದೇ ಹೋಗಬಹುದು. ತಮ್ಮ ಬೇಡಿಕೆಗಳಿಗೆ ಸಂಪೂರ್ಣ ಕಟ್ಟು ಬೀಳದೆ ಮಧ್ಯಮ ದಾರಿ ಆರಿಸಿಕೊಂಡು, ತಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಗಳನ್ನು ಲಾರಿ ಮಾಲಕರು ಎತ್ತಿ ಹಿಡಿಯಬೇಕು. ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಲಾರಿಗಳೆಂದರೆ ಕೇವಲ ಲಾರಿ ಮಾಲಕರು ಮಾತ್ರವಲ್ಲ. ಲಾರಿ ಚಾಲಕರೇ ಅದರ ನಿಜವಾದ ಒಡೆಯರು.

ಮಾಲಕರೇ ಲಾರಿ ಚಲಾಯಿಸುವುದು ತೀರಾ ಕಡಿಮೆ. ಬಹುತೇಕ ಲಾರಿಗಳನ್ನು ಪ್ರತ್ಯೇಕ ಚಾಲಕರೇ ನಿರ್ವಹಿಸುತ್ತಾರೆ ಮತ್ತು ಅವರ ಬದುಕನ್ನು ಹಸನು ಮಾಡಲು ತಾವೆಷ್ಟು ಪ್ರಯತ್ನಿಸಿದ್ದೇವೆ ಎನ್ನುವ ಬಗ್ಗೆ ಲಾರಿ ಮಾಲಕರು ಎದೆ ಮುಟ್ಟಿನೋಡಿಕೊಳ್ಳಬೇಕು. ಸಣ್ಣ ವೇತನಕ್ಕಾಗಿ ನೂರಾರು ಕಿ.ಮೀ. ಗಳನ್ನು ಹಗಲು, ರಾತ್ರಿಯೆನ್ನದೇ ನಿದ್ದೆಕಳೆದು ಚಲಾಯಿಸುವ ಚಾಲಕರನ್ನು ಲಾರಿ ಮಾಲಕರು ಮಾತ್ರವಲ್ಲ, ಸಾರ್ವಜನಿಕರೂ ಗೌರವಿಸಬೇಕಾದ ಅಗತ್ಯಗಳಿವೆ. ಅವರ ಮೇಲೆ ಎರಗುವ ದೌರ್ಜನ್ಯಗಳು, ಶೋಷಣೆಗಳು ಮುಂದುವರಿಯುತ್ತಲೇ ಇವೆಯಾದರೂ, ಈವರೆಗೆ ಅವರಿಗೆ ಮುಷ್ಕರ ಮಾಡುವಂತಹ ಅಥವಾ ಪ್ರತಿಭಟನೆ ಮಾಡುವಂತಹ ಅವಕಾಶಗಳು ಸಿಕ್ಕಿಲ್ಲ. ಒಂದು ವೇಳೆ ಈ ಎಲ್ಲ ಚಾಲಕರು ಸಂಘಟಿತರಾಗಿ ಮಾಲಕರ ವಿರುದ್ಧ ತಿರುಗಿ ಬಿದ್ದರೆ ಆಗ ಪರಿಸ್ಥಿತಿ ಈಗಿರುವ ಮುಷ್ಕರದ ಪರಿಸ್ಥಿತಿಗಿಂತಲೂ ಭೀಕರವಾಗಬಹುದು. ಹೆಚ್ಚಿನ ಲಾರಿ ಚಾಲಕರು ಅಸಂಘಟಿತರು. ಅಶಿಕ್ಷಿತರು. ಅವರಿಗೆ ಸಿಗುವ ಮೂಲಭೂತ ಸೌಲಭ್ಯಗಳನ್ನು ಮಾಲಕರು ಒದಗಿಸಿಕೊಡುವುದು ಕಡಿಮೆ. ಉತ್ತರ ಭಾರತದಲ್ಲಂತೂ ಲಾರಿ ಚಾಲಕರ ಬದುಕು ಅಸಹನೀಯವಾಗಿದೆ. ಜೊತೆಗೆ ಸಮಾಜದ ತಿರಸ್ಕಾರ ಬೇರೆ. ಆದುದರಿಂದ, ಲಾರಿಗಳ ಯೋಗಕ್ಷೇಮವೆಂದರೆ ಬರೇ ಮಾಲಕರ ಯೋಗಕ್ಷೇಮ ಮಾತ್ರವಲ್ಲ, ಚಾಲಕರ ಯೋಗಕ್ಷೇಮವೂ ಅದರಲ್ಲಿ ಸೇರಿದೆ.

ಇಂದು ತಮ್ಮ ಮೇಲೆ ಸರಕಾರ ವಿಧಿಸುತ್ತಿರುವ ಹೆಚ್ಚುವರಿ ಶುಲ್ಕ, ತೆರಿಗೆಗಳ ಬಗ್ಗೆ ಧ್ವನಿಯೆತ್ತಿ ಮುಷ್ಕರಕ್ಕಿಳಿದಿರುವ ಲಾರಿ ಮಾಲಕರು ಇದೇ ಸಂದರ್ಭದಲ್ಲಿ ಲಾರಿ ಚಾಲಕರಿಗೆ ಆಗುತ್ತಿರುವ ಅನ್ಯಾಯಗಳನ್ನು ಪರಿಹರಿಸುವ ಬಗ್ಗೆಯೂ ಯೋಚಿಸಬೇಕು. ಅವರ ಬದುಕನ್ನು ಯೋಗ್ಯಗೊಳಿಸುವುದಕ್ಕೆ ಯೋಜನೆ ರೂಪಿಸಲೂ ಸರಕಾರಕ್ಕೆ ಒತ್ತಡ ಹೇರಬೇಕು. ಲಾರಿಯೆಂದರೆ ಶ್ರಮ ಜೀವಿ. ಅದರ ಮೇಲೆ ಬರೆ ಹಾಕಿದಷ್ಟೂ ಅದರಿಂದ ಸಮಾಜಕ್ಕೆ ನಷ್ಟ. ಆದುದರಿಂದ ದಲಿತ ಜೀವನ ಮಾಡುತ್ತಿರುವ ಲಾರಿಗಳ ಸಂಕಟಗಳನ್ನು ಸರಕಾರ ಪ್ರಾಮಾಣಿಕವಾಗಿ ಆಲಿಸಬೇಕಾಗಿದೆ. ಮಾಲಕರ ಜೊತೆಗೆ ಚಾಲಕರ ಬೇಡಿಕೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಅತೀ ಬೇಗ ಈಡೇರಿಸುವುದು ಸರಕಾರದ ಕರ್ತವ್ಯ. ಹಾಗೆಯೇ ಲಾರಿ ಚಾಲಕರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಈ ವೃತ್ತಿಯನ್ನು ಇನ್ನಷ್ಟು ಗೌರವಯುತವಾಗಿಸಬೇಕು. ಆ ಮೂಲಕ ಶ್ರಮಜೀವಿಗಳಿಗೆ ಸರಕಾರ ಪ್ರೋತ್ಸಾಹ ನೀಡಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News