ಗೃಹ ಸಚಿವರನ್ನೇ ಗುರಿಯಾಗಿಸಿ ಪೊಲೀಸರು ಬೀಸಿದ ಲಾಠಿ

Update: 2017-04-05 18:43 GMT

  ಕಳೆದ ಕೆಲವು ತಿಂಗಳುಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಜಿಲ್ಲೆಯ ಭವಿಷ್ಯದ ಕುರಿತಂತೆ ಒಳ್ಳೆಯ ಸೂಚನೆಗಳನ್ನು ನೀಡುತ್ತಿಲ್ಲ. ಒಂದೆಡೆ ದುಷ್ಕರ್ಮಿಗಳು ಅಟ್ಟಹಾಸಗೈಯುತ್ತಿದ್ದರೆ. ಮಗದೊಂದೆಡೆ ಜಿಲ್ಲೆಯನ್ನು ಉದ್ಧರಿಸಬೇಕಾದ ಜನಪ್ರತಿನಿಧಿಗಳೇ ಜಿಲ್ಲೆಗೆ ಬೆಂಕಿಹಚ್ಚುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಧೈರ್ಯವನ್ನು, ಭರವಸೆಯನ್ನು ನೀಡಬೇಕಾದವರು ಜಿಲ್ಲಾ ಪೊಲೀಸರು. ಆದರೆ ಜಿಲ್ಲೆಯ ಕೆಟ್ಟ ಬೆಳವಣಿಗೆಗಳಲ್ಲಿ ಪೊಲೀಸರೂ ಶಾಮೀಲಾಗುತ್ತಿರುವುದು ಸದ್ಯಕ್ಕೆ ಇನ್ನೊಂದು ಅತ್ಯಂತ ಆತಂಕಕಾರಿ ವಿಷಯವಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದರೆ, ಇನ್ನು ಈ ಜಿಲ್ಲೆಯನ್ನು ರಕ್ಷಿಸುವವರು ಯಾರು? ಎನ್ನುವ ಪ್ರಶ್ನೆಯ ಜೊತೆಗೆ ಶ್ರೀಸಾಮಾನ್ಯ ಜೀವ ಕೈಯಲ್ಲಿ ಹಿಡಿದು ಬದುಕುವ ಸನ್ನಿವೇಶ ಎದುರಾಗಿದೆ. ಅಹ್ಮದ್ ಖುರೇಷಿ ಎಂಬ ಹುಡುಗನ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯವು, ಜಿಲ್ಲೆಯಲ್ಲಿ ಹೇಗೆ ಕಾನೂನು ಪಾಲಕರೇ ನಿಜವಾದ ಸಮಸ್ಯೆಯಾಗಿ ಪರಿವರ್ತನೆಯಾಗುತಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಕೆಳಸ್ತರದ ಅಧಿಕಾರಿಗಳು ತಪ್ಪು ಮಾಡಿದರೆ ಅದನ್ನು ತನಿಖೆಗೊಳಪಡಿಸಿ, ಸಂತ್ರಸ್ತರಿಗೆ ನ್ಯಾಯ ನೀಡುವುದು ಉನ್ನತ ಪೊಲೀಸ್ ಆಯುಕ್ತರ ಕರ್ತವ್ಯ. ಅವರೂ ಆ ತಪ್ಪನ್ನು ಮುಚ್ಚಿ ಹಾಕಲು ಸಿಬ್ಬಂದಿಗಳ ಜೊತೆಗೆ ಶಾಮೀಲಾದರೆ ಸಂತ್ರಸ್ತರು ತಮ್ಮ ದೂರನ್ನು ಯಾರಿಗೆ ಸಲ್ಲಿಸಬೇಕು? ಒಂದು ತಪ್ಪನ್ನು ಮುಚ್ಚಿ ಹಾಕಲು ಹೊರಟು, ಇನ್ನಷ್ಟು ತಪ್ಪುಗಳೆಡೆಗೆ ಹೆಜ್ಜೆಹಾಕುತ್ತಿರುವ ಆಯುಕ್ತರು ಅಂತಿಮವಾಗಿ ನ್ಯಾಯ ಕೇಳಿದ ಜನರನ್ನು ಲಾಠಿಯಿಂದ ಹೊಡೆದು ಬಡಿದುಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.

 ಪ್ರಕರಣವೊಂದಕ್ಕೆ ಹಾಜರಾಗಲೆಂದು ನ್ಯಾಯಾಲಯಕ್ಕೆ ಬಂದಿದ್ದ ಅಹ್ಮದ್ ಖುರೇಷಿ ಎಂಬ ಆರೋಪಿಯೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಸಿಸಿಬಿ ಪೊಲೀಸರು ಮಾ. 21ರಂದು ಅಪಹರಿಸಿ ಸುಮಾರು ಆರು ದಿನಗಳ ಕಾಲ ಆತನಿಗೆ ಬರ್ಬರ ಚಿತ್ರಹಿಂಸೆ ನೀಡಿ ಮಾ. 27ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದು ಸಂತ್ರಸ್ತನ ಕುಟುಂಬದ ಆರೋಪ. ಇದೇ ಸಂದರ್ಭದಲ್ಲಿ ತಾವು ಆತನನ್ನು 21ರಂದು ಬಂಧಿಸಿರುವುದಲ್ಲ, 27ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ ಎಂದು ಪೊಲೀಸರು ವಾದಿಸುತ್ತಿದ್ದಾರೆ.

ಅದೇನೇ ಇರಲಿ, ಆದರೆ ಹಾಗೆ ಹಾಜರು ಪಡಿಸಿದ ಖುರೇಷಿ ಇಂದು ಸಾವು ಬದುಕಿನ ನಡುವೆ ವೆನ್ಲಾಕ್ ಆಸ್ಪತ್ರೆಯ ಐಸಿಯುವಿನಲ್ಲಿ ಮಲಗಿದ್ದಾನೆ. ಆತನ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು, ಡಯಾಲಿಸಿಸ್ ಮೂಲಕ ಜೀವಂತವಿದ್ದಾನೆ. ಇದು ಸಂಭವಿಸಿದ್ದು ಹೇಗೆ? ಎನ್ನುವ ಪ್ರಶ್ನೆಗೂ ಪೊಲೀಸರೇ ಉತ್ತರಿಸುತ್ತಿದ್ದಾರೆ. ಈ ಗಾಯಗಳು ಹೇಗಾಯಿತು ಎಂಬ ಪ್ರಶ್ನೆಗೆ ‘ಅಪಘಾತದಿಂದ ಈ ಗಾಯಗಳಾಗಿದ್ದು ಸಂತ್ರಸ್ತನೇ ಇದನ್ನು ಒಪ್ಪಿಕೊಂಡಿದ್ದಾನೆ’ ಎಂದು ಅವರು ಹೇಳುತ್ತಾರೆ. ಆದರೆ ಅಪಘಾತದಿಂದ ಕಿಡ್ನಿ ವೈಫಲ್ಯವಾಗುವುದು ಹೇಗೆ?

 ಪೊಲೀಸರ ಹೇಳಿಕೆಗಳು ಸುಳ್ಳು ಎನ್ನುವುದಕ್ಕೆ ಹಲವು ಸಾಕ್ಷಗಳಿವೆ. 21ರಂದು ಆತ ಒಂದು ಪ್ರಕರಣಕ್ಕೆ ಹಾಜರಾಗಲೆಂದು ನ್ಯಾಯಾಲಯಕ್ಕೆ ಬಂದಿದ್ದ. ಆದರೆ ಆತ ಹಾಜರಾಗುವ ಮೊದಲೇ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ನ್ಯಾಯವಾದಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಸುಮಾರು ಐದು ದಿನಗಳ ಕಾಲ ಆತನನ್ನು ಯಾವ ಆಧಾರದಲ್ಲಿ ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡರು? ಮತ್ತು ಕುಟುಂಬಸ್ಥರು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಿದ ಬಳಿಕವಷ್ಟೇ 27ರಂದು ಏಕಾಏಕಿ ಅವನನ್ನು ಪೊಲೀಸರು ಹೇಗೆ ಹಾಜರು ಪಡಿಸಿದರು? ಇವೆಲ್ಲವೂ ಉತ್ತರಗಳಿಲ್ಲದ ಪ್ರಶ್ನೆಗಳಾಗಿವೆ. ಇಷ್ಟಕ್ಕೂ ಖುರೇಷಿಗೆ ಅಪಘಾತವಾಗಿರುವುದು ನಿಜವೇ ಆಗಿದ್ದರೆ ಅದು ಸಂಭವಿಸಿದ್ದು ಎಲ್ಲಿ? ಹೇಗೆ? ಈ ಅಪಘಾತ ಸಂಬಂಧ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ? ಇದರ ಬಗ್ಗೆಯೂ ಪೊಲೀಸರಲ್ಲಿ ಮಾಹಿತಿ ಇಲ್ಲ. ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟದಲ್ಲಿರುವ ವ್ಯಕ್ತಿಯನ್ನು ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸುವುದು ಕಾನೂನು ಪ್ರಕ್ರಿಯೆಯ ರೀತಿಯೇ? ಆತನಿಗೆ ಯೋಗ್ಯ ಚಿಕಿತ್ಸೆಯನ್ನು ನೀಡುವುದು ಪೊಲೀಸರ ಕರ್ತವ್ಯವಲ್ಲವೆ?

  ಮೇಲಿನೆಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಜನರು ಪ್ರಶ್ನಿಸಿದರೆ ಅದಕ್ಕೆ ಉತ್ತರಿಸುವುದು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳ ಕರ್ತವ್ಯ. ಸಂತ್ರಸ್ತನ ಕುಟುಂಬ ತಮ್ಮ ಮನೆಯ ಸದಸ್ಯ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಆಯುಕ್ತರ ಬಳಿ ದೂರು ಒಯ್ದರೆ ಅದಕ್ಕೆ ಅವರು ತಕ್ಷಣ ಸ್ಪಂದಿಸಿದಾಗ ಆ ಕುಟುಂಬಕ್ಕೆ ಆತ್ಮಸ್ಥೈರ್ಯ ಬರುತ್ತದೆ. ಮಂಗಳೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಇಲಾಖೆಯ ಅವ್ಯವಸ್ಥೆ ಈಗಾಗಲೇ ಸುದ್ದಿಯಲ್ಲಿರುವುದರಿಂದ ಕುಟುಂಬದ ಮನವಿಗೆ ಓಗೊಟ್ಟು ಅವರಿಗೆ ಧೈರ್ಯ ಕೊಡುವುದು ಪೊಲೀಸ್ ಕಮಿಷರ್ ಕರ್ತವ್ಯ. ಆದರೆ ವಿಷಾದನೀಯ ಸಂಗತಿಯೆಂದರೆ, ಸಂತ್ರಸ್ತ ಕುಟುಂಬ ತಮ್ಮ ಮಗನಿಗಾಗಿರುವ ಅನ್ಯಾಯವನ್ನು ಬರೆದು ಮನವಿ ಸಲ್ಲಿಸಿದರೆ ಪೊಲೀಸ್ ಇಲಾಖೆ ಅದನ್ನು ಸ್ವೀಕರಿಸಲೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸ್ ಆಯುಕ್ತರೂ ಅದನ್ನು ತಿರಸ್ಕರಿಸಿದರು. ಬಹುಶಃ ಪೊಲೀಸ್ ಆಯುಕ್ತರು ಮನವಿಯನ್ನು ಸ್ವೀಕರಿಸಿ, ತನಿಖೆಯ ಭರವಸೆಯನ್ನು ನೀಡಿದ್ದಿದ್ದರೆ ಮರುದಿನ ಸಾರ್ವಜನಿಕರು ಪ್ರತಿಭಟನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ.

ಪೊಲೀಸರ ಅನುಮಾನಾಸ್ಪದ ನಡೆ, ಅಂತಿಮವಾಗಿ ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲೇಬೇಕಾದಂತಹ ಸನ್ನಿವೇಶ ನಿರ್ಮಾಣ ಮಾಡಿತು. ಸರಿ, ಈ ಪ್ರತಿಭಟನಾಕಾರರಿಗಾದರೂ ಆಯುಕ್ತರು ಸೂಕ್ತ ಭರವಸೆಯನ್ನು ಕೊಡಬಹುದಿತ್ತು. ಆದರೆ ಪ್ರತಿಭಟನಾಕಾರರನ್ನು ಲಾಠಿಗಳ ಮೂಲಕ ಬರ್ಬರವಾಗಿ ದಮನಿಸಲಾಯಿತು. ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣಕ್ಕಾಗಿ ಲಾಠಿ ಬೀಸಲಾಯಿತು ಎಂದು ಪೊಲೀಸ್ ಇಲಾಖೆಯವರು ಹೇಳುತ್ತಿದ್ದಾರೆ ಮತ್ತು ಕೆಲವು ಪೊಲೀಸರು ಆಸ್ಪತ್ರೆಗೆ ದಾಖಲಾಗಿ ಪ್ರತಿಭಟನಾಕಾರರ ಮೇಲೆ ದೂರು ದಾಖಲಿಸಿದ್ದಾರೆ. ಆದರೆ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ತೆಗೆಯಲಾಗಿರುವ ವೀಡಿಯೊಗಳು ನಿಜವಾಗಿ ನಡೆದಿರುವುದು ಏನು ಎನ್ನುವುದನ್ನು ಬಹಿರಂಗಪಡಿಸುತ್ತದೆ. ಪೊಲೀಸರು ಲಾಠಿಯಿಂದ ಪ್ರತಿಭಟನಾಕಾರರ ತಲೆಗೂ ಬಡಿದಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯ ಮೇಲೆ ಈ ಪರಿಯ ದಾಳಿ ನಡೆಸಿ ಪೊಲೀಸ್ ಇಲಾಖೆ ಮುಚ್ಚಿ ಹಾಕಲು ಹೊರಟಿರುವುದಾದರೂ ಏನನ್ನು?

  ಯಾವುದೇ ಪರವಾನಿಗೆಯಿಲ್ಲದೆ ಪ್ರತಿಭಟನೆ ನಡೆಸಿದ ಕಾರಣ ಅದನ್ನು ದಮನಿಸಬೇಕಾಯಿತು ಎಂದು ಇಲಾಖೆ ಸಮಜಾಯಿಷಿ ನೀಡುತ್ತಿದೆ. ಸ್ವತಃ ಪೊಲೀಸರ ಅನ್ಯಾಯವನ್ನೇ ಪ್ರಶ್ನಿಸಿ ನಡೆಸುತ್ತಿರುವ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿತ್ತೇ? ಕುಟುಂಬಸ್ಥರು ನೀಡಿದ ಮನವಿಯನ್ನೇ ಸ್ವೀಕರಿಸಲು ಸಿದ್ಧವಿಲ್ಲದ ಪೊಲೀಸ್ ಇಲಾಖೆ, ಪ್ರತಿಭಟನೆಯನ್ನು ನಡೆಸುವುದಕ್ಕೆ ಅವಕಾಶ ನೀಡುತ್ತದೆ ಎಂದು ನಂಬುವುದೇ ಮೂರ್ಖತನ. ಒಂದು ರಾಜ್ಯದ ಮುಖ್ಯಮಂತ್ರಿ ಜಿಲ್ಲೆಗೆ ಕಾಲಿಡಬಾರದು ಎಂದು ಸಂಘಪರಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದಾಗ ಅದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡುತ್ತದೆ ಮಾತ್ರವಲ್ಲ ಪೂರ್ಣ ಭದ್ರತೆಯನ್ನು ನೀಡುತ್ತದೆ.

ಆದರೆ ಒಬ್ಬ ವ್ಯಕ್ತಿಯ ಮೇಲೆ ಪೊಲೀಸರು ನಡೆಸಿದ ಅಮಾನವೀಯ ದೌರ್ಜನ್ಯವನ್ನು ಖಂಡಿಸಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಲು ಮಾತ್ರ ಅವಕಾಶವಿಲ್ಲ ಎಂದಾದರೆ ಮಂಗಳೂರಿನ ಸ್ಥಿತಿ ಎತ್ತ ಸಾಗುತ್ತಿದೆ ಎನ್ನುವುದನ್ನು ಊಹಿಸಬಹುದಾಗಿದೆ. ಆದುದರಿಂದಲೇ, ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ದೌರ್ಜನ್ಯ ಘಟನೆಗೆ ಸಂಬಂಧಿಸಿ ಗೃಹ ಸಚಿವರೇ ಮಧ್ಯ ಪ್ರವೇಶಿಸಬೇಕು. ಮುಖ್ಯವಾಗಿ ಅಹ್ಮದ್ ಖುರೇಷಿಯ ಮೇಲೆ ನಡೆದ ದೌರ್ಜನ್ಯ ತನಿಖೆಗೊಳಗಾಗಬೇಕು ಮತ್ತು ಭಾಗಿಯಾಗಿರುವ ಪೊಲೀಸರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಲಾಠಿಯ ಮೂಲಕ ದಮನಿಸಿದ ಪೊಲೀಸ್ ಇಲಾಖೆಯ ಕ್ರಮವೂ ಪ್ರಶ್ನೆಗೊಳಗಾಗಬೇಕು. ದಲಿತ ಗೃಹ ಸಚಿವರಿರುವ ನಾಡಿನಲ್ಲಿ ದಲಿತರು, ಅಲ್ಪಸಂಖ್ಯಾತರು ತಮ್ಮ ನ್ಯಾಯಕ್ಕಾಗಿ ಬೀದಿಗಿಳಿದರೆ ಗೃಹ ಇಲಾಖೆ ಲಾಠಿ ಬೀಸುತ್ತದೆ ಎಂದಾದರೆ, ಲಾಠಿ ಪೆಟ್ಟು ಗೃಹಸಚಿವ ಪರಮೇಶ್ವರ್ ಅವರ ಸ್ಥಾನಕ್ಕೆ ಮಾಡಿದ ಅಗೌರವ ಎನ್ನುವುದನ್ನು ಸರಕಾರ ನೆನಪಿಲ್ಲಿಟ್ಟುಕೊಂಡು, ತಕ್ಷಣ ಮಂಗಳೂರು ಕಡೆಗೆ ತನ್ನ ಗಮನವನ್ನು ಹರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News