ಮುಸ್ಲಿಮ್ ಬಾಹುಳ್ಯದ ಈ ಗ್ರಾಮದಲ್ಲಿ ಹೈನುಗಾರಿಕೆಯೇ ಪ್ರಧಾನ ಉದ್ಯೋಗ

Update: 2017-04-07 16:07 GMT

 ಚಂಡೀಗಢ, ಎ.7: ಗೋರಕ್ಷಕರಿಂದ ಅಮಾನುಷ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲೂಖಾನ್ ಹರ್ಯಾಣಾದ ಮೇವಟ್ ಜಿಲ್ಲೆಯ ಜೈಸಿಂಗ್‌ಪುರ ಗ್ರಾಮದ ನಿವಾಸಿ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಈ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿರುವ 1000 ಕುಟುಂಬಗಳ ಪೈಕಿ ಸುಮಾರು 800 ಕುಟುಂಬಗಳು ಹೈನುಗಾರಿಕೆಯನ್ನೇ ಜೀವನಧಾರವನ್ನಾಗಿ ನೆಚ್ಚಿಕೊಂಡಿವೆ.

 ಜೈಪುರದ ಮಾರುಕಟ್ಟೆಗೆ ಹೋಗಿ ತಮಗೆ ಬೇಕಾದ ಗೋವುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವುದು ಈ ಕುಟುಂಬಗಳು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಪದ್ದತಿಯಾಗಿತ್ತು. ಈ ಗ್ರಾಮದಿಂದ ಹಾಲನ್ನು ದಿಲ್ಲಿ, ಫರೀದಾಬಾದ್ ನಗರಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಇದೀಗ ಈ ಗ್ರಾಮದವರು ಭಯದ ನೆರಳಲ್ಲೇ ದಿನ ಕಳೆಯುವ ಪರಿಸ್ಥಿತಿ ಬಂದಿದೆ.

 ಗೋವುಗಳನ್ನು ತಮ್ಮ ಕುಟುಂಬ ಸದಸ್ಯರಂತೆಯೇ ಇಲ್ಲಿ ಪರಿಗಣಿಸಲಾಗುತ್ತದೆ. 56 ವರ್ಷದ ಮುಹಮ್ಮದ್ ಯೂನುಸ್ ಎಂಬವರಿಗೆ ಹೈನುಗಾರಿಕೆಯೇ ಪ್ರಧಾನ ಉದ್ಯೋಗ. ಇವರ ದನದ ಹಟ್ಟಿಯಲ್ಲಿ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಪ್ರತೀ ತಿಂಗಳೂ ಸುಮಾರು 50000 ರೂ.ಯನ್ನು ಪಶುಗಳ ಆಹಾರಕ್ಕೆಂದೇ ವ್ಯಯಿಸುತ್ತಿದ್ದಾರೆ.

  ಆದರೆ ಈ ಕುಟುಂಬಗಳು ಈಗ ಭಯದ ನೆರಳಲ್ಲಿ ಬದುಕುವಂತಾಗಿದೆ. ಪೆಹ್ಲೂಖಾನ್ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ಕಣ್ಣಾರೆ ಕಂಡಿದ್ದರು ಮುಹಮ್ಮದ್ ಯೂನುಸ್. ಪೆಹ್ಲೂಖಾನ್ ಮೇಲೆ ಹಲ್ಲೆ ನಡೆಸಿದ ಗುಂಪು ಬಳಿಕ ಅಝ್ಮತ್ ಮೇಲೆ ಹಲ್ಲೆ ನಡೆಸಿದಾಗ ಆತ ಪ್ರಜ್ಞೆತಪ್ಪಿ ರಸ್ತೆಯಲ್ಲೇ ಕೆಳಗುರುಳಿದ. ಆದರೂ ಆತನ ಮೇಲೆ ಹಾಕಿಸ್ಟಿಕ್‌ನಿಂದ ಹಲ್ಲೆ ನಡೆಸಲಾಯಿತು. ನಾನು ಹೇಗೆ ಬದುಕಿ ಬಂದೆ ಎಂದು ಈಗಲೂ ಅಚ್ಚರಿಯಾಗುತ್ತಿದೆ ಎಂದು ಯೂನುಸ್ ತಿಳಿಸಿದ್ದಾರೆ.

ನಾವು ಮುಸ್ಲಿಮರೆಂಬ ಏಕೈಕ ಕಾರಣಕ್ಕೆ ಹಸುಗಳ ಮೇಲೆ ನಮಗೆ ಮಮತೆಯಿಲ್ಲ ಎಂದು ಪರಿಗಣಿಸುವುದು ಸರಿಯಲ್ಲ . ಈ ಗ್ರಾಮದಲ್ಲಿರುವ ಜನರು ಗೋವುಗಳ ಬಗ್ಗೆ ಗೋರಕ್ಷಕರಿಗಿಂತ ಹೆಚ್ಚಿನ ಕಾಳಜಿ ಹೊಂದಿದ್ದಾರೆ ಎನ್ನುತ್ತಾರೆ ಜಬಿನ್ ಎಂಬ ಸ್ಥಳೀಯ ನಿವಾಸಿ.

ಮುಸ್ಲಿಮರೂ ದನದ ಹಾಲು ಕುಡಿಯುತ್ತಾರೆ, ದನದ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರೂ ಕೂಡಾ ಗೋರಕ್ಷಕರೇ ಎನ್ನುತ್ತಾರೆ ಮತ್ತೋರ್ವ ಸ್ಥಳೀಯ ನಿವಾಸಿ ಮುಸ್ತಾಕ್ ಅಹ್ಮದ್. ಗೋರಕ್ಷಕರು ಡಕಾಯಿತರು. ಹಸುಗಳ ರಕ್ಷಣೆಯ ನೆಪ ನೀಡಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಹಸುಗಳ ಅಕ್ರಮ ಸಾಗಾಟಗಾರರ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ನಮ್ಮಂತಹ ಗೋ ಪಾಲಕರು ಹಲ್ಲೆಗೊಳಗಾಗಿ ಪ್ರಾಣ ಬಿಡುತ್ತಿದ್ದಾರೆ ಎನ್ನುತ್ತಾರೆ ಅಹ್ಮದ್.

   ಜೈಪುರದಲ್ಲಿ ನಡೆಯುವ ಜಾನುವಾರು ಜಾತ್ರೆಗೆ ಹೋಗಿ ಖರೀದಿಸುವುದು ಹಲವಾರು ವರ್ಷಗಳಿಂದ ನಡೆದುಕೊಂಡ ಬಂದಿರುವ ಪ್ರಕ್ರಿಯೆಯಾಗಿದೆ. ಅಲ್ಲಿ ಗೋವುಗಳು ಕಡಿಮೆ ದರದಲ್ಲಿ ದೊರೆಯುತ್ತವೆ. ಹೈನುಗಾರರಲ್ಲಿ ಜನಪ್ರಿಯವಾಗಿರುವ ಶೆಖಾವತಿ ತಳಿಯ ಗೋವುಗಳು ಜೈಪುರ ಜಾನುವಾರು ಜಾತ್ರೆಯಲ್ಲಿ ದೊರೆಯುತ್ತದೆ. ಹೈನುಗಾರಿಕೆ ನಡೆಸಲೂ ಗೋವುಗಳನ್ನು ತರುವಂತಿಲ್ಲ ಎಂದಾದರೆ ಮತ್ತೆ ಇಲ್ಲಿ ಹೇಳಲೇನು ಉಳಿದಿದೆ ಎಂದು ಪ್ರಶ್ನಿಸುತ್ತಾರೆ ಹೈನುಗಾರಿಕೆ ವೃತ್ತಿಯ ಉಮರ್ ಮುಹಮ್ಮದ್. ಪ್ರತೀ ದಿನ 1000 ಲೀಟರ್‌ಗೂ ಹೆಚ್ಚಿನ ಹಾಲು ಇಲ್ಲಿ ಉತ್ಪಾದನೆಯಾಗುತ್ತಿದೆ. ಬಹುತೇಕ ಹೈನುಗಾರರು ಮುಸ್ಲಿಮರು. ದಿನಕ್ಕೆ ಎರಡು ಬಾರಿ ಹಾಲನ್ನು ಸಂಗ್ರಹಿಸಿ ದಿಲ್ಲಿ , ಗುರ್ಗಾಂವ್ ಮತ್ತು ಫರೀದಾಬಾದ್‌ನಲ್ಲಿರುವ ಹಾಲಿನ ಡೈರಿಗೆ ರವಾನಿಸಲಾಗುತ್ತದೆ ಎಂದು ಈ ಪ್ರಕ್ರಿಯೆಯ ಉಸ್ತುವಾರಿ ವಹಿಸಿರುವ ಅಬ್ದುಲ್ ಖಯೂಂ ತಿಳಿಸಿದ್ದಾರೆ.

ಆದರೆ ಇದೀಗ ಗ್ರಾಮದಲ್ಲಿ ನೀರವ ವೌನದ ವಾತಾವರಣವಿದೆ. ಗೋರಕ್ಷಕರು ನಡೆಸಿದ ಹಲ್ಲೆಯ ಕುರಿತ ವರದಿ, ಇತ್ತೀಚಿನ ಬೆಳವಣಿಗೆಯನ್ನು ಟಿವಿಯಲ್ಲಿ ವೀಕ್ಷಿಸುತ್ತಾ, ಮುಂದೇನಾಗಬಹುದು ಎಂಬ ಭಯದಲ್ಲೇ ದಿನ ಕಳೆಯುತ್ತಿದ್ದಾರೆ ಜೈಸಿಂಗ್‌ಪುರ ಗ್ರಾಮದ ಹೈನುಗಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News