ಈಜಿಪ್ಟ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Update: 2017-04-10 04:33 GMT

ಕೈರೊ, ಎ.10: ಅವಳಿ ಚರ್ಚ್ ಬಾಂಬ್ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಪತೇಹ್ ಅಲ್-ಸಿಸಿ ದೇಶದಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಅಲೆಕ್ಸಾಂಡ್ರಿಯಾ ಹಾಗೂ ತಂತಾ ನಗರಗಳಲ್ಲಿ ಚರ್ಚ್‌ಗಳ ಮೇಲೆ ರವಿವಾರ ನಡೆದ ದಾಳಿಯಲ್ಲಿ 44ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಬಣ ಈ ದಾಳಿಯ ಹೊಣೆ ಹೊತ್ತಿದೆ. ತುರ್ತು ಪರಿಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಬಂಧನ, ಮೇಲ್ವಿಚಾರಣೆ ಹಾಗೂ ವಶಪಡಿಸಿಕೊಳ್ಳುವಿಕೆಗೆ ಅವಕಾಶ ಇದೆ. ಜತೆಗೆ ಮುಕ್ತ ಚಲನೆಯನ್ನು ನಿಯಂತ್ರಿಸುವ ಅಧಿಕಾರವೂ ಪೊಲೀಸರಿಗೆ ಇರುತ್ತದೆ.

ಈಜಿಪ್ಟ್‌ನಲ್ಲಿ ಹಲವು ದಶಕಗಳ ಕಾಲ ತುರ್ತು ಪರಿಸ್ಥಿತಿ ಇತ್ತು. ಮಹ್ಮದ್ ಮೊರ್ಸಿ 2012ರಲ್ಲಿ ಅಧಿಕಾರಕ್ಕೆ ಬರುವ ಕೆಲ ತಿಂಗಳ ಮುನ್ನ ಇದನ್ನು ತೆರವುಗೊಳಿಸಲಾಗಿತ್ತು. ಇದು 2011ರ ಈಜಿಪ್ಟಿಯನ್ನರ ಹಕ್ಕುಗಳ ಚಳವಳಿಗಾರರ ಮುಖ್ಯ ಬೇಡಿಕೆಯೂ ಆಗಿತ್ತು. ಮೊರ್ಸಿಯವರ ಪದಚ್ಯುತಿ ಬಳಿಕ ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಅಲ್-ಸಿಸಿ 2013ರಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಒಂದು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News