ಉಪಚುನಾವಣೆ: ಸಮಯಸಾಧಕ ರಾಜಕಾರಣಕ್ಕೆ ಪಾಠ

Update: 2017-04-13 18:57 GMT

ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎನ್ನುವುದಕ್ಕಿಂತ ಮುಖ್ಯವಾದುದು, ಈ ಚುನಾವಣೆ ಸಮಯ ಸಾಧಕ ರಾಜಕಾರಣಕ್ಕೆ ಸರಿಯಾದ ಪಾಠವನ್ನು ಕಲಿಸಿದೆ ಎನ್ನುವುದು. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ನ ಗೀತಾ ಮಹದೇವಪ್ರಸಾದ್ ಗೆಲುವನ್ನು ಸಾಧಿಸಿದ್ದರೆ, ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ ಗೆದ್ದಿದ್ದಾರೆ. ಈ ಎರಡೂ ವಿಜಯದ ಹಿಂದೆ ಸಿದ್ದರಾಮಯ್ಯ ಅವರ ಶ್ರಮದ ಪಾಲು ಎಷ್ಟಿದೆಯೋ, ಅಷ್ಟೇ ಪ್ರಮಾಣದಲ್ಲಿ ಬಿಜೆಪಿ ಮಾಡಿಕೊಂಡಿರುವ ಎಡವಟ್ಟುಗಳ ಪಾಲೂ ಇದೆ. ಇದೇ ಸಂದರ್ಭದಲ್ಲಿ ಜೆಡಿಎಸ್ ಚುನಾವಣೆಯಲ್ಲಿ ಭಾಗಶಃ ತಟಸ್ಥವಾಗಿದ್ದುದು ಜಾತ್ಯತೀತ ಮತಗಳು ಒಡೆದು ಹೋಗದಂತೆ ನೋಡಿಕೊಂಡಿತು. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಏನಾದರೂ ಸೋತಿದ್ದರೆ ಅದರೆ ಎಲ್ಲ ಹೊಣೆಯನ್ನು ಸಿದ್ದರಾಮಯ್ಯ ಅವರ ತಲೆಗೆ ಹೊರಿಸಿ ಅವರನ್ನು ಬಲಿ ಹಾಕಲು ಕಾಂಗ್ರೆಸ್‌ನೊಳಗೇ ಒಂದು ಗುಂಪು ಕಾಯುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲ ಪ್ರಯತ್ನಗಳನ್ನು, ಸಂಚುಗಳನ್ನೂ ಮೀರಿ ಉಪಚುನಾವಣೆಯನ್ನು ಸಿದ್ದರಾಮಯ್ಯ ಗೆದ್ದುಕೊಂಡಿದ್ದಾರೆ. ಆ ಮೂಲಕ ತನ್ನ ವರ್ಚಸ್ಸನ್ನು ಪಕ್ಷದಲ್ಲಿ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅವರ ಸೋಲು ಸ್ವತಃ ದಲಿತರಿಗೇ ಅತ್ಯಗತ್ಯವಾಗಿತ್ತು. ಬರೇ ಸಿದ್ದರಾಮಯ್ಯ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಖಾಸಗಿ ಅಜೆಂಡಾವೊಂದನ್ನೇ ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿರುವ ಶ್ರೀನಿವಾಸ ಪ್ರಸಾದ್‌ರನ್ನು ಗೆಲ್ಲಿಸುವ ತುರ್ತು, ಅನಿವಾರ್ಯತೆ ಮತದಾರರಿಗೆ ಇದ್ದಿರಲೇ ಇಲ್ಲ. ಶ್ರೀನಿವಾಸ ಪ್ರಸಾದ್‌ರ ಅಗತ್ಯ ಮತದಾರರ ಅಗತ್ಯವಾಗಿರಲಿಲ್ಲ. ಶ್ರೀಸಾಮಾನ್ಯನಿಗೆ ಏನಾದರೂ ಒಳಿತನ್ನು ಮಾಡಬೇಕು ಎನ್ನುವುದು ಪ್ರಸಾದ್ ಅವರಿಗಿದ್ದಿದ್ದರೆ ತಮ್ಮ ಅಧಿಕಾರಾವಧಿಯಲ್ಲೇ ಅದನ್ನು ಮಾಡುವ ಅವಕಾಶವಿತ್ತು. ಕಂದಾಯದಂತಹ ಮಹತ್ತರ ಖಾತೆಯನ್ನು ಶ್ರೀನಿವಾಸ ಪ್ರಸಾದ್‌ಗೆ ನೀಡಲಾಗಿತ್ತು. ಆ ಸ್ಥಾನವನ್ನು ಬಳಸಿಕೊಂಡು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದರೆ ಅವರು ಸಚಿವಸ್ಥಾನವನ್ನು ಕಳೆದುಕೊಳ್ಳುವ ಸ್ಥಿತಿಯೂ ಬರುತ್ತಿರಲಿಲ್ಲ. ಅವರಿಂದು ತನ್ನ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಬಿಜೆಪಿ ಸೇರಿ ಮತ್ತೊಮ್ಮೆ ಮುಖಭಂಗ ಅನುಭವಿಸುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ. ತನ್ನ ಖಾತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಿದ್ದರೆ ಇಂದಿನ ಚುನಾವಣೆಯಲ್ಲಿ ಜನರು ಶ್ರೀನಿವಾಸ ಪ್ರಸಾದ್‌ರನ್ನು ಕೈ ಬಿಡುತ್ತಿರಲಿಲ್ಲವೋ ಏನೋ.

ಬರದಂತಹ ಗಂಭೀರ ಸಮಸ್ಯೆಯನ್ನು ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿದ್ದಾಗ, ಅಂದಿನ ಸಚಿವ ಶ್ರೀನಿವಾಸ ಪ್ರಸಾದ್ ಆಸ್ಪತ್ರೆಯನ್ನೇ ಖಾಯಂ ನಿವಾಸವನ್ನಾಗಿ ಮಾಡಿಕೊಂಡಿದ್ದರು. ಈ ಕಾರಣದಿಂದಲೇ ಅವರು ಸಚಿವ ಸ್ಥಾನವನ್ನು ಕಳೆದುಕೊಂಡರು. ಹೀಗಿರುವಾಗ, ಒಂದಿಷ್ಟೂ ಆತ್ಮವಿಮರ್ಶೆಯನ್ನು ಮಾಡಿಕೊಳ್ಳದೇ, ಸಚಿವ ಸ್ಥಾನ ತಪ್ಪಲು ಕೇವಲ ಸಿದ್ದರಾಮಯ್ಯ ಅವರನ್ನಷ್ಟೇ ಹೊಣೆ ಮಾಡಿದ್ದು ಶ್ರೀನಿವಾಸ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಂಪೂರ್ಣ ದುರ್ಬಲರಾಗಿ ಹೋದ ಸಂಕೇತವಾಗಿತ್ತು. ಅವಮಾನವಾಯಿತೆಂದು ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದೇನೋ ಸರಿ, ಆದರೆ ತನ್ನ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಬಿಜೆಪಿ ಸೇರಿ, ಅಲ್ಲಿಂದ ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕಿಳಿದದ್ದು ಅವರ ಇನ್ನೊಂದು ಅಸ್ವಸ್ಥ ನಡೆಯಾಗಿತ್ತು. ಸಿದ್ದರಾಮಯ್ಯರಿಂದ ತನಗೆ ಅವಮಾನವಾಯಿತು ಎಂದು, ಶತಶತಮಾನಗಳಿಂದ ತಮ್ಮ ಸಮುದಾಯವನ್ನೇ ಅವಮಾನಿಸುತ್ತಾ ಬಂದಿರುವ ಮನುವಾದಿ ಸಿದ್ಧಾಂತದ ತಳಹದಿಯಲ್ಲಿ ನಿಂತ ಪಕ್ಷದಲ್ಲಿ ತನ್ನ ಆತ್ಮಗೌರವ ಉಳಿಯುತ್ತದೆ ಎಂಬ ಅವರ ನಂಬಿಕೆಯೇ ವಿರೋಧಾಭಾಸದಿಂದ ಕೂಡಿದ್ದು. ತನ್ನ ವೈಯಕ್ತಿಕ ಸೇಡಿನ ರಾಜಕಾರಣಕ್ಕಾಗಿ ಇಡೀ ದಲಿತ ಸಮೂಹವನ್ನೇ ಬಲಿಕೊಡಲು ಶ್ರೀನಿವಾಸ ಪ್ರಸಾದ್ ಸಿದ್ಧವಾಗಿದ್ದರು.

ಇದು ದಲಿತರಿಗೂ ಸ್ಪಷ್ಟವಾಗಿ ಅರ್ಥವಾಗಿತ್ತು. ಇತ್ತ ಈ ಸಮಯಸಾಧಕ ರಾಜಕಾರಣಿಯನ್ನು ಬಿಜೆಪಿಯ ತಳಮಟ್ಟದ ಕಾರ್ಯಕರ್ತರೂ ಪೂರ್ತಿಯಾಗಿ ಸ್ವೀಕರಿಸಿರಲಿಲ್ಲ. ಮತದಾರರಿಗಂತೂ, ಶ್ರೀನಿವಾಸ ಪ್ರಸಾದ್‌ಗೆ ಮತ ನೀಡಲು ಕಾರಣವೇ ಇರಲಿಲ್ಲ. ಬರೇ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡುವುದಕ್ಕಾಗಿ ಪ್ರಸಾದ್‌ರನ್ನು ಗೆಲ್ಲಿಸುವ ಅಗತ್ಯ ಮತದಾರರಿಗೆ ಇರಲಿಲ್ಲ. ಒಂದು ರೀತಿಯಲ್ಲಿ, ಶ್ರೀನಿವಾಸ ಪ್ರಸಾದ್ ಅವರ ಸೋಲು ಈ ನಾಡಿನ ದಲಿತರ ಗೆಲುವಾಗಿದೆ. ದಲಿತರ ಹೆಸರಲ್ಲಿ ಸಮಯಸಾಧಕ ರಾಜಕಾರಣ ಮಾಡಲು ಹೊರಟ ತಮ್ಮದೇ ನಾಯಕನಿಗೆ ಈ ನಾಡಿನ ದಲಿತರೇ ಸರಿಯಾದ ಉತ್ತರ ನೀಡಿದ್ದಾರೆ.

ಅಳಿದುಳಿದ ದಲಿತ ಚಳವಳಿ ಈ ನಾಡಿನಲ್ಲಿ ಮುಂದುವರಿಯಬೇಕಾದರೆ ಶ್ರೀನಿವಾಸ ಪ್ರಸಾದ್ ಸೋಲಲೇ ಬೇಕಾಗಿತ್ತು ಮತ್ತು ಅವರು ಸೋತಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಎನ್ನುವ ಪಿತ್ರಾರ್ಜಿತ ಆಸ್ತಿಯನ್ನು ಇರುವಷ್ಟು ಕಾಲ ತಿಂದು ತೇಗಿ, ಇದೀಗ ಅಲ್ಲಿಂದ ಮೆಲ್ಲಗೆ ಬಿಜೆಪಿಯ ಕಡೆಗೆ ತಲೆ ಹೊರಳಿಸಿರುವ ಎಸ್. ಎಂ. ಕೃಷ್ಣ, ಜಾಫರ್ ಶರೀಫ್‌ರಂತಹ ಹಿರಿಯರಿಗೂ ಈ ಫಲಿತಾಂಶ ಸರಿಯಾದ ತಪರಾಕಿಯನ್ನು ನೀಡಿದೆ. ಅವರ ಯೋಗ್ಯತೆಯನ್ನು ನಾಡಿಗೆ ತೆರೆದಿಟ್ಟಿದೆ. ಮುಂದಿನ ದಿನಗಳಲ್ಲಿ ತನ್ನ ಸ್ವಾಭಿಮಾನಕ್ಕೆ ಬಿಜೆಪಿಯಲ್ಲಿ ಸಿಗುವ ಬೆಲೆ ಎಷ್ಟು ಎನ್ನುವುದು ಶೀಘ್ರವೇ ಶ್ರೀನಿವಾಸ ಪ್ರಸಾದ್‌ರ ಅರಿವಿಗೆ ಬರಲಿದೆ.
  
ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ ಪ್ರಸಾದ್ ಅವರಿಗೆ ಅನುಕಂಪದ ಅಲೆಗಳಿದ್ದವು. ಅವರು ಗೆಲ್ಲುವ ಸಾಧ್ಯತೆಯನ್ನು ಸ್ವತಃ ಬಿಜೆಪಿ ನಾಯಕರೇ ತಮ್ಮ ಹರಕು ಬಾಯಿಯಿಂದ ಇನ್ನಷ್ಟು ಸುಲಭ ಮಾಡಿಕೊಟ್ಟರು. ಉತ್ತರ ಪ್ರದೇಶದ ಚುನಾವಣೆಯ ಭಾಷೆಯನ್ನು ಕರ್ನಾಟಕದಲ್ಲೂ ಬಳಸಲು ಯತ್ನಸಿದ ಪ್ರತಾಪಸಿಂಹನಂತಹ ಅಪ್ರಬುದ್ಧ, ಅವಿವೇಕಿ ಸಂಸದನಿಂದಾಗಿ ಬಿಜೆಪಿ ಇನ್ನಷ್ಟು ಕಳೆದುಕೊಳ್ಳಬೇಕಾಯಿತು. ಎಸ್. ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್‌ರಂತಹ ಕಾಂಗ್ರೆಸ್‌ನ ಹಳೆ ಸರಕುಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಬಿಜೆಪಿಯೊಳಗೂ ಸಾಕಷ್ಟು ಅಸಮಾಧಾನಗಳಿದ್ದವು. ಎಲ್ಲವೂ ಒಟ್ಟು ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಿತು. ಜೊತೆಗೆ ಬಿಜೆಪಿಯ ಕೋಮು ರಾಜಕಾರಣಕ್ಕಿಂತ, ಅಭಿವೃದ್ಧಿ ರಾಜಕಾರಣದ ಕಡೆಗೆ ಶ್ರೀಸಾಮಾನ್ಯರು ಉಪಚುನಾವಣೆಯಲ್ಲಿ ಒಲಿದಿದ್ದಾರೆ. ಜೆಡಿಎಸ್‌ನ ಸಹಕಾರವನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್ ಸ್ಮರಿಸಲೇ ಬೇಕು.

ಇದೇ ಸಂದರ್ಭದಲ್ಲಿ ಈ ಗೆಲುವನ್ನು ನಂಬಿ ಕಾಂಗ್ರೆಸ್ ಮುಂದಿನ ವಿಧಾನಸಭೆಯಲ್ಲಿ ಗೆಲುವು ತನ್ನದೇ ಎಂದು ಭ್ರಮೆ ಪಟ್ಟುಕೊಂಡರೆ, ಅದು ಆತ್ಮಹತ್ಯೆಯ ದಾರಿಯಾಗಬಹುದು. ಈ ಗೆಲುವಿನ ಹಿಂದಿರುವ ಕಾರಣಗಳನ್ನು ಗುರುತಿಸಿ, ಮುಂದೆಯೂ ಅದನ್ನೇ ಚುನಾವಣಾ ತಂತ್ರವಾಗಿ ಬಳಸಿಕೊಳ್ಳಬೇಕು. ಜಾತ್ಯತೀತ ಮತಗಳು ಒಡೆದು ಹೋಗದಂತೆ ಜಾಗರೂಕತೆ ವಹಿಸಿದರೆ, ಮೈತ್ರಿ ಮಾಡಬೇಕಾದ ಸಂದರ್ಭದಲ್ಲಿ ಒಣ ಪ್ರತಿಷ್ಠೆಗಳನ್ನು ಬದಿಗಿಟ್ಟು ಕೈ ಚಾಚಿದರೆ, ಬಿಜೆಪಿ ಕರ್ನಾಟಕದಲ್ಲಿ ಮುಂದೆಯೂ ಅಧಿಕಾರ ಹಿಡಿಯುವುದು ಕಷ್ಟವಾಗಬಹುದು. ಈ ಗೆಲುವನ್ನು ನಂಬಿ ಕಾಂಗ್ರೆಸ್ ಅಹಂಕಾರದಿಂದ ಮೆರೆದರೆ, ಮುಂದಿನ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಸರ್ವನಾಶವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News