ದಿಡ್ಡಳ್ಳಿ ಪುನರ್ವಸತಿ: ಬಾಣಲೆಯಿಂದ ಬೆಂಕಿಗೆ?

Update: 2017-04-19 03:45 GMT

ದಿಡ್ಡಳ್ಳಿ ಆದಿವಾಸಿ ಜನರಿಗೆ ಭೂಮಿ ಮಂಜೂರು ವಿಷಯ ಮತ್ತೆ ಜಗ್ಗಾಟ ರೂಪ ಪಡೆದಿದೆ. ದಿಡ್ಡಳ್ಳ್ಳಿ ನಿರಾಶ್ರಿತರು ಈ ಹಿಂದೆ ಎಲ್ಲಿ ನೆಲೆಸಿದ್ದರೋ ಅದೇ ಜಾಗದಲ್ಲಿ ಕೃಷಿ ಭೂಮಿ ಸಹಿತ ನಿವೇಶನವನ್ನು ನೀಡಬೇಕು ಎಂದು ಹೋರಾಟ ಸಮಿತಿ ಆಗ್ರಹಿಸುತ್ತಿದೆ. ಈ ಹಿಂದೆ ಸರಕಾರ ಇದಕ್ಕೆ ಒಪ್ಪಿಗೆ ನೀಡಿತ್ತು ಕೂಡ. ಆದರೆ ಸಮಗ್ರ ಸ್ಥಳ ಪರಿಶೀಲನೆಯ ಬಳಿಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ಭರವಸೆಯಿಂದ ಹಿಂದೇಟು ಹಾಕಿದ್ದಾರೆ. ಅಂದರೆ, ದಿಡ್ಡಳ್ಳಿಯಲ್ಲಿರುವ ಆದಿವಾಸಿಗಳಿಗೆ ಭೂಮಿ ನೀಡುವುದಕ್ಕೆ ಮಾತ್ರ ಬದ್ಧರಾಗಿದ್ದಾರೆ. ದಿಡ್ಡಳ್ಳ್ಳಿ ಜಾಗ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದ ಆ ಜಾಗದಲ್ಲಿ ದಿಡ್ಡಳ್ಳ್ಳಿ ಜನರಿಗೆ ನಿವೇಶನ ನೀಡುವುದಕ್ಕೆ ಸಾಧ್ಯವಿಲ್ಲ. ಪರ್ಯಾಯವಾಗಿ ಬೇರೆ ಕಡೆ ಮನೆಗಳನ್ನು ಮತ್ತು ನಿವೇಶನಗಳನ್ನು ನೀಡಲಾಗುವುದು ಎಂದು ಅವರು ಹೇಳುತ್ತಿದ್ದಾರೆ.

ಈ ಜಗ್ಗಾಟ ಕೇವಲ ದಿಡ್ಡಳ್ಳಿ ಆದಿವಾಸಿಗಳಿಗಷ್ಟೇ ಸಂಬಂಧಿಸಿದ್ದಲ್ಲ ಎನ್ನುವುದನ್ನೂ ನಾವು ಗಮನಿಸಬೇಕಾಗಿದೆ. ಈ ಹಿಂದೆ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವಾಗಲೂ ಇಂತಹದೇ ಬಿಕ್ಕಟ್ಟು ಎದುರಾಗಿತ್ತು. ಆದಿವಾಸಿಗಳು ತಮ್ಮ ಮೂಲ ಸ್ಥಳವನ್ನು ಬಿಟ್ಟು ಹೊರಡುವುದಕ್ಕೆ ಸಿದ್ಧವಿರಲಿಲ್ಲ. ಅದೇ ಹೊತ್ತಿನಲ್ಲಿ, ಸರಕಾರ ಪುನರ್ವಸತಿ ಯೋಜನೆಯನ್ನು ಮುಂದೊಡ್ಡಿ ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸುವುದಕ್ಕೆ ತನ್ನ ಕಾನೂನು ಬಲವನ್ನು ಪ್ರಯೋಗಿಸುತ್ತಿತ್ತು. ‘ಆದಿವಾಸಿಗಳು ಮುಖ್ಯವಾಹಿನಿಗೆ ಬರುವುದು ಬೇಡವೇ? ಅವರು ಕಾಡಲ್ಲೇ ಇರಬೇಕೇ?’ ಎನ್ನುವ ಪ್ರಶ್ನೆಯನ್ನು ಅಂದೂ ಸರಕಾರ ಮಾಧ್ಯಮಗಳ ಮುಂದಿಟ್ಟಿತ್ತು. ಸದ್ಯದ ಆಧುನಿಕ ಬದಲಾವಣೆಗಳ ಮೂಗಿನ ನೇರಕ್ಕೆ ಯೋಚಿಸುವಾಗ ಹೌದಲ್ಲವೇ? ಎಂದು ಅನ್ನಿಸುವುದು ಸಹಜ.

ಎಲ್ಲ ಮೂಲಭೂತ ಆವಶ್ಯಕತೆಗಳಿಂದ ವಂಚಿತರಾಗಿ ಕಾಡುಗಳಲ್ಲಿ ಇರುವ ಬದಲು, ಸರಕಾರ ನೀಡಿರುವ ಸವಲತ್ತುಗಳ ಜೊತೆಗೆ ಕಾಡುಗಳಿಂದ ಹೊರಬರಬಾರದೆ ಎಂದು ಮುಖ್ಯವಾಹಿನಿ ಎಂದು ವ್ಯವಸ್ಥೆ ನಂಬಿರುವ ನಗರದ ಜನರು ಪ್ರಶ್ನಿಸತೊಡಗಿದ್ದರು. ಹೋರಾಟಗಾರರನ್ನು ಈ ಕಾರಣ ಮುಂದಿಟ್ಟು ಟೀಕಿಸುತ್ತಿದ್ದರು. ಈ ತಿಕ್ಕಾಟ ಅಂತಿಮವಾಗಿ ಪಶ್ಚಿಮಘಟ್ಟದಲ್ಲಿ ನಕ್ಸಲೀಯರು ನೆಲೆ ಪಡೆಯುವುದಕ್ಕೆ ಕಾರಣವಾಯಿತು. ಆದಿವಾಸಿಗಳು ತಲೆತಲಾಂತರಗಳಿಂದ ಕಾಡುಗಳಲ್ಲಿ ವಾಸಿಸುತ್ತಿದ್ದವರು. ಅವರ ಬದುಕು ಆ ವ್ಯವಸ್ಥೆಗೆ ಅವಿನಾಭಾವವಾಗಿ ಜೋಡಿಸಲ್ಪಟ್ಟಿದೆ. ಅತ್ಯಾಧುನಿಕ ಕೃಷಿ, ತೋಟ ಇತ್ಯಾದಿ ದುಡಿಮೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಕಾಡುತ್ಪನ್ನಗಳನ್ನೇ ಬದುಕಿಗಾಗಿ ಅವಲಂಬಿಸಿದವರು.

ಪುನರ್ವಸತಿಯ ಹೆಸರಿನಲ್ಲಿ ಅವರಿಗೆ ಒಂದೆರಡು ಎಕರೆ ಜಮೀನು ಮತ್ತು ಒಂದು ಪುಟ್ಟ ಮನೆ ನೀಡಿದಾಕ್ಷಣ ಅವರ ಬದುಕು ಮುಖ್ಯವಾಹಿನಿಗೆ ಬಂದು ಬಿಡುವುದಿಲ್ಲ. ಬದಲಿಗೆ ಅವರು ಇನ್ನಷ್ಟು ಸಂಕಟಗೀಡಾಗುತ್ತಾರೆ. ಕೃಷಿ ಅವರ ವೃತ್ತಿಯಲ್ಲ. ಈಗಾಗಲೇ ಪರಂಪರಾಗತವಾಗಿ ಕೃಷಿಯನ್ನು ಅವಲಂಬಿಸಿದವರ ದುರಂತಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಹೀಗಿರುವಾಗ, ಸರಕಾರ ನೀಡಿರುವ ಒಣ ಭೂಮಿಯಲ್ಲಿ ಹೊಸದಾಗಿ ಕೃಷಿ ಕಲಿತು, ಬದುಕನ್ನು ಕಟ್ಟಿಕೊಳ್ಳುವುದು ಅಸಾಧ್ಯದ ಮಾತು. ಕಾಡಿನ ಸಂಬಂಧವನ್ನು ಏಕಾಏಕಿ ಕಳಚಿಕೊಂಡರೆ, ಅವರು ಬೇರು ಕಳೆದುಕೊಂಡ ಮರದಂತಾಗುತ್ತಾರೆ. ಮರದ ಬುಡವನ್ನು ಕತ್ತರಿಸಿ ಅದನ್ನು ಬೇರೆಡೆಗೆ ತಂದು ಅದೆಷ್ಟೋ ಗೊಬ್ಬರಗಳನ್ನು ಸುರಿಸಿದರೂ ಅದು ಚಿಗುರು ಬಿಡಲು ಸಾಧ್ಯವೇ? ಇಂತಹದೇ ಸಮಸ್ಯೆಗಳನ್ನು ಆದಿವಾಸಿಗಳೂ ಎದುರಿಸುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ನಾಗರಹೊಳೆಯ ಆದಿವಾಸಿಗಳ ಪುನರ್ವಸತಿ ಯೋಜನೆಯ ವೈಫಲ್ಯಗಳೂ ನಮ್ಮ ಮುಂದಿವೆ.

ಭಾರೀ ಆಮಿಷಗಳೊಂದಿಗೆ, ಅಭಿವೃದ್ಧಿಯ ಕಡೆಗೆ ಮುನ್ನಡೆಸುವ ಘೋಷಣೆಗಳೊಂದಿಗೆ ಆದಿವಾಸಿಗಳನ್ನು ಅಲ್ಲಿಂದ ಎಬ್ಬಿಸಲಾಯಿತು. ಆದರೆ ಅವರ ಗುರಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವುದು ಆಗಿರಲೇ ಇಲ್ಲ. ನಾಗರಹೊಳೆ ಉದ್ಯಾನವನ ಯೋಜನೆಯ ಭಾಗವಾಗಿ ಆದಿವಾಸಿಗಳನ್ನು ಅಲ್ಲಿಂದ ಎಬ್ಬಿಸಲಾಯಿತು. ಯಾವಾಗ ಸರಕಾರವನ್ನು ನಂಬಿ ಅವರು ಅಲ್ಲಿಂದ ಒಕ್ಕಲೆದ್ದರೋ ಬಳಿಕ ತಾನು ನೀಡಿದ ಭರವಸೆಯನ್ನು ಸರಕಾರ ಪೂರ್ಣವಾಗಿ ಈಡೇರಿಸಲೇ ಇಲ್ಲ. ಅತ್ಯಂತ ಕಳಪೆ ಕಾಮಗಾರಿಯ ಮನೆಗಳು, ನೀರಿನ ಸೆಲೆಯೇ ಇಲ್ಲದ ಜಮೀನು ಇವುಗಳ ಮಧ್ಯೆ ಆದಿವಾಸಿಗಳು ಬೆಂದು ಹೋದರು. ಅಂತಿಮವಾಗಿ ಅವರೆಲ್ಲರೂ ಬದುಕುವುದಕ್ಕಾಗಿ ಕಾಫಿ ತೋಟಗಳ ಜೀತದಾಳುಗಳಾಗಬೇಕಾಯಿತು. ಜಮೀನಿದ್ದೂ ಅವರಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಸರಕಾರ ಕೊಟ್ಟ ಮನೆಗಳು ತಾವು ಕೂಲಿ ಮಾಡುವ ಜಾಗದಿಂದ ಬಹುದೂರದಲ್ಲಿರುವ ಕಾರಣ, ಮನೆಗಳನ್ನೆಲ್ಲ ತೊರೆದು ಲೈನ್‌ಮನೆ ಸೇರಿದರು. ಸರಕಾರದ ಮನೆಗಳು ಪಾಳು ಬಿದ್ದವು. ಈ ಎಲ್ಲ ಕಹಿ ಅನುಭವಗಳು ಅವರಿಗಿರುವ ಕಾರಣದಿಂದಲೇ ಸರಕಾರ ‘ಮುಖ್ಯವಾಹಿನಿ’ ಎಂಬ ಶಬ್ದ ಪ್ರಯೋಗ ಮಾಡಿದಾಕ್ಷಣ ಆದಿವಾಸಿಗಳು ಬೆಚ್ಚಿ ಬೀಳುತ್ತಾರೆ.

ಆದಿವಾಸಿಗಳನ್ನು ಶಿಕ್ಷಣ, ಸೌಲಭ್ಯಗಳನ್ನು ಕೊಟ್ಟು ಮೇಲೆತ್ತುವ ಉದ್ದೇಶಕ್ಕಿಂತ, ಅರಣ್ಯ ವ್ಯಾಪ್ತಿಯಿಂದ ಅವರನ್ನು ಹೊರಹಾಕುವುದು ಸರಕಾರದ ಮುಖ್ಯ ಅಜೆಂಡಾ. ಈ ಕಾರಣಕ್ಕಾಗಿಯೇ ಎಲ್ಲ ಪುನರ್ವಸತಿ ಯೋಜನೆಗಳೂ ಇಂದು ವಿಫಲವಾಗಿ ಕೂತಿದೆ. ದಿಡ್ಡಳ್ಳ್ಳಿ ಪ್ರಕರಣದ ಜಗ್ಗಾಟ ಮೇಲಿನೆಲ್ಲದರ ಮುಂದುವರಿದ ಭಾಗವೇ ಆಗಿದೆ. ದಿಡ್ಡಳ್ಳ್ಳಿಯ ಜನರು, ನಮಗೆ ಇರುವ ಜಾಗದಲ್ಲೇ ಜಮೀನು, ನಿವೇಶನ ನೀಡಬೇಕು ಎಂದು ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ‘ಆದಿವಾಸಿಗಳು ಮುಖ್ಯವಾಹಿನಿಗೆ ಬರುವುದು ಬೇಡವೇ?’ ಎಂಬ ಪ್ರಶ್ನೆಯನ್ನು ಎಸೆದು, ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾರೆ. ಸದ್ಯಕ್ಕೆ ಅರಣ್ಯ ಭೂಮಿಯ ಮೂಲಕವೇ ಇರಲಿ ಅಥವಾ ಸರಕಾರ ನೀಡುವ ಜಮೀನಿನ ಮೂಲಕವೇ ಇರಲಿ, ದಿಡ್ಡಳ್ಳ್ಳಿಯ ಜನರಿಗೆ ತುರ್ತಾಗಿ ಪರಿಹಾರ ನೀಡಬೇಕಾಗಿದೆ. ಆ ಪರಿಹಾರ ಆ ಜನರನ್ನು ಇನ್ನಷ್ಟು ಅತಂತ್ರರನ್ನಾಗಿಸುವ, ಇನ್ನೊಬ್ಬ ಜಮೀನ್ದಾರನ ಜೀತದಾಳುಗಳನ್ನಾಗಿಸುವ ಕಡೆಗೆ ಒಯ್ಯಬಾರದು. ಪರ್ಯಾಯ ಜಮೀನನ್ನು ಬೇರೆಡೆ ನೀಡುತ್ತೇನೆ ಎನ್ನುವ ಕಂದಾಯ ಸಚಿವರು ತಮ್ಮ ಭರವಸೆಯನ್ನು ಮತ್ತೊಮ್ಮೆ ಪರಿಶೀಲಿಸಿ ನೋಡಬೇಕು.

ಯಾವುದೋ ನೀರಿಲ್ಲದ, ಕೃಷಿಗೆ ಯೋಗ್ಯವಲ್ಲದ ಅಥವಾ ಬರಡು ಭೂಮಿಯನ್ನು ಕೊಟ್ಟು ಆದಿವಾಸಿಗಳನ್ನು ಅಲ್ಲಿಗೆ ರವಾನಿಸಿದರೆ ಅವರು ಹೊಸದಾಗಿ ಬದುಕು ಕಟ್ಟಿಕೊಳ್ಳುವುದು ಹೇಗೆ? ಈಗ ಇರುವ ಪರಿಸರದಲ್ಲಿ ಬದುಕುವುದಕ್ಕೆ ಅವರಿಗೆ ಬೇರೆ ಬೇರೆ ಮಾರ್ಗಗಳಿವೆ. ಆದರೆ ಸಚಿವರ ಮುಖ್ಯವಾಹಿನಿ ಅಂತಿಮವಾಗಿ ಇವರನ್ನು ಮತ್ತೆ ಜೀತದಾಳುಗಳನ್ನಾಗಿಸುವ ಸಾಧ್ಯತೆಗಳಿವೆ. ಆದುದರಿಂದ, ಅವರಿಗೆ ನೀಡುವ ಜಮೀನು ಯಾವ ರೀತಿಯದು, ಅವರು ಅಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವುದಕ್ಕೆ ಸಂಪನ್ಮೂಲಗಳು ಹೇಗೆ ಒದಗಿಸಲ್ಪಡುತ್ತವೆ, ಭವಿಷ್ಯದಲ್ಲಿ ಅವರು ತಮ್ಮ ದೈನಂದಿನ ಕೂಳುಗಳನ್ನು ಹೇಗೆ ಸಂಪಾದಿಸಿಕೊಳ್ಳುತ್ತಾರೆ ಈ ಎಲ್ಲ ದಿಕ್ಕಿನಲ್ಲಿ ಆಲೋಚಿಸಿದ ಬಳಿಕವೇ ಸಚಿವರು ಒಂದು ತೀರ್ಮಾನಕ್ಕೆ ಬರಬೇಕು. ಆ ಮೂಲಕ ಅದು ನಿಜವಾದ ಅರ್ಥದ ಪುನರ್ವಸತಿ ಆಗಬೇಕು. ಇಲ್ಲವಾದರೆ ದಿಡ್ಡಳ್ಳ್ಳಿ ಆದಿವಾಸಿಗಳ ಸ್ಥಿತಿ, ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗುತ್ತದೆ ಮತ್ತು ಅದರ ಹೊಣೆಯನ್ನು ಸರಕಾರವೇ ಹೊತ್ತುಕೊಳ್ಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News