ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಮಾದರಿ: ಮುಖ್ಯಮಂತ್ರಿ

Update: 2017-04-19 14:59 GMT

ಬೆಂಗಳೂರು, ಎ.19: ನಮ್ಮ ರಾಜ್ಯಕ್ಕೆ ಗುಜರಾತ್, ಉತ್ತರಪ್ರದೇಶ ಸೇರಿದಂತೆ ಬೇರೆ ಯಾವುದೇ ರಾಜ್ಯದ ಮಾದರಿಯ ಅಗತ್ಯವಿಲ್ಲ. ನಮ್ಮ ಸರಕಾರದ್ದು ಎಲ್ಲರನ್ನೂ ಒಳಗೊಂಡ ‘ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಮಾದರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ಕೆ.ಆರ್.ಪುರ ಕ್ಷೇತ್ರದ ಅಗರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ವತಿಯಿಂದ ಆಯೋಜಿಸಲಾಗಿದ್ದ 1,886 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು ನಗರದ 110 ಹಳ್ಳಿಗಳಿಗೆ ಕಾವೇರಿ ನೀರಿನ ಪೂರೈಕೆ ಮಾಡುವ ಯೋಜನೆಯ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯು 226 ಚ.ಕಿ.ಮೀ ನಷ್ಟಿತ್ತು. 110 ಹಳ್ಳಿಗಳು, 7 ನಗರಸಭೆಗಳು ಹಾಗೂ 1 ಪುರಸಭೆಯನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿದ ಬಳಿಕ 800 ಚ.ಕಿ.ಮೀಗೆ ವಿಸ್ತರಿಸಿತು. ಈ ಪ್ರದೇಶಗಳನ್ನು ಸೇರಿಸಿದಕ್ಕಾಗಿ ನಮ್ಮ ವಿರೋಧವಿಲ್ಲ. ರಾಜಕೀಯ ಲಾಭಕ್ಕಾಗಿ ಈ ತೀರ್ಮಾನ ಕೈಗೊಂಡಿರಬಹುದು. ಆದರೆ, ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು ಸರಕಾರ ಹಾಗೂ ನಗರ ಪಾಲಿಕೆಗಳ ಕರ್ತವ್ಯ ಎಂದು ಅವರು ಹೇಳಿದರು.

ಈ 110 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರಿ 10 ವರ್ಷಗಳು ಕಳೆದಿವೆ. ಆದರೆ, ಈವರೆಗೆ ಇವರಿಗೆ ಕುಡಿಯಲು ನೀರು ಒದಗಿಸಲು ಅಗತ್ಯವಾದ ಅನುದಾನ, ಯೋಜನೆಯನ್ನು ರೂಪಿಸಿರಲಿಲ್ಲ. ನಮ್ಮ ಪಕ್ಷದ ಶಾಸಕರ ಒತ್ತಾಸೆಯಿಂದಾಗಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಂಗಳೂರಿಗೆ ಕಾವೇರಿ ನೀರು ತರುವ ಯೋಜನೆ ಸಾಕಾರಗೊಂಡಿದ್ದು 1973ರಲ್ಲಿ. ಈವರೆಗೆ ಕಾವೇರಿ ಕುಡಿಯುವ ನೀರಿನ ನಾಲ್ಕು ಹಂತಗಳು ಪೂರ್ಣಗೊಂಡಿವೆ. 5ನೆ ಹಂತದ 775 ದಶಲಕ್ಷ ಲೀಟರ್ ಕುಡಿಯುವ ನೀರಿನ ಯೋಜನೆ ಮತ್ತು 110 ಹಳ್ಳಿಗಳಿಗೆ ಅಳವಡಿಸಬೇಕಾಗಿರುವ ತ್ಯಾಜ್ಯ ನೀರಿನ ಮುಖ್ಯ ಕೊಳವೆ ಮತ್ತು ಟ್ರಂಕ್ ಸಿವರ್‌ಗಳು, ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಐಎಸ್‌ಪಿಎಸ್‌ಗಳನ್ನು ನಿರ್ಮಿಸಲು ಅಂದಾಜು 5052 ಕೋಟಿ ರೂ.ಗಳಿಗೆ ಸಿದ್ದಪಡಿಸಿದ ಸವಿಸ್ತಾರವಾದ ಯೋಜನಾ ವರದಿಗೆ ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಯೋಜನೆಗೆ ಬೇಕಾಗಿರುವ ಹಣಕಾಸನ್ನು ಶೇ.85ರಷ್ಟು ಜೈಕಾ ನೆರವು ಹಾಗೂ ಶೇ.7.5ರಷ್ಟು ರಾಜ್ಯ ಸರಕಾರದ ನೆರವು ಮತ್ತು ಶೇ.7.5ರಷ್ಟು ಜಲಮಂಡಲಿ ಭರಿಸಲು ಯೋಜಿಸಲಾಗಿದೆ. ಈ ಪ್ರಸ್ತಾಪಯನ್ನು ಕೇಂದ್ರ ಸರಕಾರಕ್ಕೆ ಬಾಹ್ಯ ಹಣಕಾಸಿನ ವ್ಯವಸ್ಥೆಯನ್ನು ಪಡೆಯಲು ಅನುಮೋದನೆ ಕೋರಿ ಸಲ್ಲಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

110 ಹಳ್ಳಿಗಳಿಗೆ 1886 ಕೋಟಿ ರೂ.ವೆಚ್ಚದಲ್ಲಿ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿದ್ದೇವೆ. ಮುಂದಿನ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದರಿಂದಾಗಿ 12 ಲಕ್ಷ ಜನರಿಗೆ ಉಪಯೋಗವಾಗಲಿದೆ. ಬೆಂಗಳೂರು ನಗರಕ್ಕೆ ಪ್ರಸ್ತುತ 19 ಟಿಎಂಸಿ ನೀರು ಸರಬರಾಜು ಆಗುತ್ತಿದೆ. 5ನೆ ಹಂತದಲ್ಲಿ 10 ಟಿಎಂಸಿ ನೀರು ಸಿಗುತ್ತದೆ. ಅಲ್ಲದೆ, ಎತ್ತಿನಹೊಳೆ ಯೋಜನೆ ಯಿಂದಲೂ 2.5 ಟಿಎಂಸಿ ನೀರು ಲಭ್ಯವಾಗುತ್ತದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನದ ಕೆಲವು ಭಾಗಗಳಿಗೆ ಕುಡಿಯುವ ನೀರು ಒದಗಿಸಲು 13 ಸಾವಿರ ಕೋಟಿ ರೂ.ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆಯನ್ನು ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News