ಭಗ್ನಗೊಂಡ ಅಡ್ವಾಣಿ ಕನಸು

Update: 2017-04-19 18:56 GMT

ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಹೊಂದಿದ್ದ ಬಿಜೆಪಿಯನ್ನು ಅಧಿಕಾರದ ಹತ್ತಿರ ತಂದು ದೇಶದ ಆಳುವ ಪಕ್ಷವನ್ನಾಗಿ ಮಾಡಿದವರು ಎಲ್.ಕೆ. ಅಡ್ವಾಣಿ. 90ರ ದಶಕದಲ್ಲಿ ಅಡ್ವಾಣಿ ನಡೆಸಿದ ರಥಯಾತ್ರೆಯ ಗಾಲಿಗಳು ಮನುಷ್ಯನ ನೆತ್ತರಿನಲ್ಲಿ ಮಿಂದು ಅಯೋಧ್ಯೆಯನ್ನು ತಲುಪಿದವು. ಈ ರಥಯಾತ್ರೆ ದೇಶಕ್ಕೆ ನೆಮ್ಮದಿ ತರಲಿಲ್ಲ. ಅಂತಿಮವಾಗಿ ಸೌಹಾರ್ದದ ಸಂಕೇತವಾಗಿದ್ದ ಬಾಬರಿ ಮಸೀದಿ ಧ್ವಂಸಗೊಂಡಿತು. ಅಡ್ವಾಣಿ ನಡೆಸಿದ ರಥಯಾತ್ರೆಯ ಪರಿಣಾಮವಾಗಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದರು. ಪ್ರಧಾನಿಯಾಗುವ ಕನಸನ್ನು ಕಾಣುತ್ತಲೇ ರಥವನ್ನೇರಿದ್ದ ಅಡ್ವಾಣಿಯವರು ಸ್ವಪಕ್ಷೀಯರಿಂದ ಮತ್ತು ಸಂಘಪರಿವಾರದಿಂದ ತಿರಸ್ಕಾರಕ್ಕೆ ಒಳಗಾದರು. ಆದರೆ, ಆಗ ನೆಲಸಮಗೊಂಡ ಬಾಬರಿ ಮಸೀದಿ ಇಂದಿಗೂ ಅಡ್ವಾಣಿಯವರನ್ನು ಬೆಂಬಿಡದೆ ಕಾಡುತ್ತಿದೆ.

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿದಂತೆ ಹಲವರು ವಿರುದ್ಧ ಒಳಸಂಚಿನ ಆರೋಪದ ವಿಚಾರಣೆಯನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿದೆ. ಅಷ್ಟೇ ಅಲ್ಲದೆ, ರಾಯ್‌ಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ಲಕ್ನೊ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ಈ ವಿಚಾರಣೆ ಮುಂದಿನ ಎರಡು ವರ್ಷಗಳಲ್ಲಿ ಮುಗಿಯಬೇಕೆಂಬ ಗಡುವು ವಿಧಿಸಿದೆ. ಪ್ರತಿನಿತ್ಯ ವಿಚಾರಣೆ ನಡೆದು ಈ ಪ್ರಕರಣ ಇತ್ಯರ್ಥವಾಗಬೇಕಿದೆ.

1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಏನು ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅದು ಒಂದೇ ದಿನದಲ್ಲಿ ಭಾವೋದ್ವೇಗದಲ್ಲಿ ನಡೆದ ಘಟನೆಯಲ್ಲ. ಧ್ವಂಸ ಕಾರ್ಯಾಚರಣೆಗೆ ಜನರನ್ನು ಅಣಿಗೊಳಿಸಲು ಅಡ್ವಾಣಿ ಗುಜರಾತ್‌ನ ಸೋಮನಾಥದಿಂದ ಎರಡು ಬಾರಿ ರಥಯಾತ್ರೆ ನಡೆಸಿದರು. ಬರೀ ಅಡ್ವಾಣಿ ಮಾತ್ರವಲ್ಲ ಸಂಘಪರಿವಾರದ ಇತರ ನಾಯಕರು ಕೂಡಾ ದೇಶವ್ಯಾಪಿಯಾಗಿ ‘ಮಂದಿರವನ್ನು ಅಲ್ಲೇ ಕಟ್ಟುವೆವು’ ಎಂಬ ಘೋಷಣೆಯೊಂದಿಗೆ ಜನರ ಭಾವನೆಯನ್ನು ಕೆರಳಿಸಿದರು. ಪ್ರತೀ ಚುನಾವಣೆ ಸಮೀಪಿಸಿದಾಗೆಲ್ಲ ಇಟ್ಟಿಗೆ ಯಾತ್ರೆ, ಪಾದುಕೆ ಯಾತ್ರೆ, ಶಿಲಾ ಯಾತ್ರೆ ಹೀಗೆ ನಾನಾ ಯಾತ್ರೆಗಳನ್ನು ದೇಶವ್ಯಾಪಿ ನಡೆಸಿದರು. ಹಳ್ಳಿಹಳ್ಳಿಗಳಲ್ಲೂ ದ್ವೇಷದ ದಳ್ಳುರಿಯನ್ನು ಎಬ್ಬಿಸಿದರು. ಒಂದೇ ಊರಿನ ವಿಭಿನ್ನ ಸಮುದಾಯದ ಜನರು ಪರಸ್ಪರ ಸಂಶಯದಿಂದ ನೋಡುವ ವಾತಾವರಣ ಉಂಟು ಮಾಡಿದರು.

ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಸಲುವಾಗಿ ಕೆಲ ಆಯ್ದ ಕರಸೇವಕರಿಗೆ ಗುಜರಾತ್‌ನಲ್ಲಿ ಕಟ್ಟಡ ನೆಲಸಮಗೊಳಿಸುವ ಬಗ್ಗೆ ವಿಶೇಷ ತರಬೇತಿ ನೀಡಲಾಗಿತ್ತು. ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಅಡ್ವಾಣಿಯವರು ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳಲು ಕಾರಣರಾದರು. ಬಾಬರಿ ಮಸೀದಿಯ ಗುಮ್ಮಟಗಳು ನೆಲಕ್ಕೆ ಉರುಳುವಾಗ ಉಡುಪಿಯ ಪೇಜಾವರ ಮಠದ ಸ್ವಾಮೀಜಿಯವರೂ ಅದಕ್ಕೆ ಸಾಕ್ಷಿಯಾಗಿದ್ದರು. ಧ್ವಂಸ ಕಾರ್ಯಾಚರಣೆ ನಡೆಯುತ್ತಿರುವಾಗ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಕುರ್ಚಿ ಹಾಕಿಕೊಂಡು ಎದುರಿಗೆ ಕುಳಿತು ಸಂಭ್ರಮಿಸುತ್ತಿದ್ದರು. ಮುರಳಿ ಮನೋಹರ ಜೋಷಿ ಅವರನ್ನು ತಬ್ಬಿಕೊಂಡಿದ್ದ ಉಮಾಭಾರತಿ ಕೇಕೇ ಹಾಕುತ್ತಿದ್ದರು. ಒಂದೇ ದಿನದಲ್ಲಿ ಮಸೀದಿ ನೆಲಸಮಗೊಂಡಿತು. ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಕಲ್ಯಾಣ್ ಸಿಂಗ್ ಮಸೀದಿಗೆ ರಕ್ಷಣೆ ನೀಡುವುದಾಗಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಅವರ ವೌನ ಸಮ್ಮತಿಯೊಂದಿಗೆ ಮಸೀದಿ ನೆಲಸಮಗೊಂಡಿತು.

ಮಸೀದಿ ನೆಲಸಮಗೊಂಡ ಆನಂತರ ಎಲ್.ಕೆ.ಅಡ್ವಾಣಿಯವರು ಇದು ನನ್ನ ಪಾಲಿನ ಅತ್ಯಂತ ಕರಾಳ ದಿನ ಎಂದು ವಿಷಾದ ವ್ಯಕ್ತಪಡಿಸಿದ್ದರು. ಅಡ್ವಾಣಿಯವರು ಎರಡು ಬಾರಿ ರಥ ಯಾತ್ರೆ ನಡೆಸಿದಾಗ ಮತ್ತು ಮಸೀದಿ ನೆಲಸಮಗೊಳ್ಳುವಾಗ ಅವರ ಜೊತೆಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ತಾಂತ್ರಿಕ ಕಾರಣದಿಂದ ಆರೋಪಿ ಸ್ಥಾನದಲ್ಲಿ ನಿಲ್ಲಲಿಲ್ಲ. ಮೇಲ್ನೋಟಕ್ಕೆ ಅವರ ಮೇಲೆ ಯಾವ ಮೊಕದ್ದಮೆಯೂ ಇಲ್ಲ. ಆದರೆ, ಗುಜರಾತ್‌ನಲ್ಲಿ ಮಾಡಬಾರದ್ದನ್ನು ಮಾಡಿ ದೇಶದ ಪ್ರಧಾನಿ ಸ್ಥಾನದಲ್ಲಿ ಕುಳಿತರು. ವಾಜಪೇಯಿಯ ಬಳಿಕ ತಾನು ದೇಶದ ಪ್ರಧಾನಿಯಾಗಬೇಕೆಂದು ಎಲ್.ಕೆ.ಅಡ್ವಾಣಿ ಕನಸು ಕಾಣುತ್ತಿದ್ದರು. ಆದರೆ, ರಥಯಾತ್ರೆಗೆ ಅವರನ್ನು ಬಳಸಿಕೊಂಡ ಆರೆಸ್ಸೆಸ್ ಬಳಿಕ ಕೈಕೊಟ್ಟು ‘ನಿಮಗೆ ವಯಸ್ಸಾಗಿದೆ ನಿವೃತ್ತರಾಗಿ’ ಎಂದು ಆದೇಶ ನೀಡಿತು.

ಕಳೆದ ಲೋಕಸಭಾ ಚುನಾವಣೆಯ ನಂತರವಾದರೂ ಪ್ರಧಾನಿಯಾಗುವ ಅವಕಾಶ ಸಿಗಬಹುದು ಎಂದು ಅಡ್ವಾಣಿಯವರು ನಿರೀಕ್ಷಿಸಿದ್ದರು. ಆದರೆ, ಅವರ ಶಿಷ್ಯ ನರೇಂದ್ರ ಮೋದಿಯೇ ಅವರ ಆಸೆಯನ್ನು ಭಗ್ನಗೊಳಿಸಿದರು. ಗುಜರಾತ್ ಹತ್ಯಾಕಾಂಡ ನಡೆದಾಗ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಟ್ಟುಹಿಡಿದಿದ್ದರು. ಆದರೆ, ಅಡ್ವಾಣಿಯವರು ತನ್ನ ಶಿಷ್ಯನ ರಕ್ಷಣೆಗೆ ಬಂದರು. ಮೋದಿ ರಾಜೀನಾಮೆ ಕೊಡುವುದು ಬೇಡ ಎಂದು ಅವರು ಪಟ್ಟು ಹಿಡಿದಿದ್ದರು. ಈ ರೀತಿ ತನ್ನ ರಕ್ಷಣೆಗೆ ಬಂದಿದ್ದ ಗುರುವಿಗೆ ಪ್ರಧಾನಿಯಾಗುವ ಅವಕಾಶವನ್ನೇ ಮೋದಿ ತಪ್ಪಿಸಿದರು. ಪ್ರಧಾನಿ ಸ್ಥಾನವೇನೋ ತಪ್ಪಿ ಹೋಯಿತು. ಆದರೆ, ರಾಷ್ಟ್ರಪತಿ ಆಗಬೇಕೆಂದು ಈಗ ಅಡ್ವಾಣಿ ಕನಸು ಕಾಣುತ್ತಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಬಹುಮತ ಪಡೆದಿರುವುದರಿಂದ ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರಬೇಕೆಂದು ಅವರು ಆಶಿಸಿದ್ದರು. ಆದರೆ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ರಾಷ್ಟ್ರಪತಿಯಾಗುವ ಅಡ್ವಾಣಿಯವರ ಕನಸು ಕೂಡಾ ಭಗ್ನಗೊಂಡಿದೆ. ಪ್ರಧಾನಿ ಸ್ಥಾನದಲ್ಲಿರುವ ಅವರ ಶಿಷ್ಯ ನರೇಂದ್ರ ಮೋದಿ ಮನಸ್ಸು ಮಾಡಿದ್ದರೆ ಈ ಪ್ರಕರಣದಿಂದ ಅವರನ್ನು ರಕ್ಷಿಸಬಹುದಾಗಿತ್ತು. ಯಾವುದ್ಯಾವುದೋ ಚಿಕ್ಕಪುಟ್ಟ ಕಾರಣಗಳಿಗಾಗಿ ಸಿಬಿಐ ಅನ್ನು ಬಳಸಿಕೊಳ್ಳುವ ಮೋದಿ ಈ ಪ್ರಕರಣದಲ್ಲಿ ಸಿಬಿಐಗೆ ಮುಕ್ತ ಅವಕಾಶ ನೀಡಿದರು. ಏನೇನೋ ತಂತ್ರ ಮಾಡಿ ಅಡ್ವಾಣಿ ರಾಷ್ಟ್ರಪತಿ ಆಗುವುದನ್ನು ಮೋದಿ ತಪ್ಪಿಸಿದ್ದಾರೆಂದು ಬಿಜೆಪಿ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.

ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಯಲ್ಲಿ ಉಮಾಭಾರತಿ ಆರೋಪಿಯಾಗಿರುವುದರಿಂದ ಅವರು ತನ್ನ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾದ ಪ್ರಸಂಗ ಬರಬಹುದು. ಸರ್ವಜನಾಂಗದ ಶಾಂತಿಯ ತಾಣವಾಗಿದ್ದ ಭಾರತವನ್ನು ಜನಾಂಗ ದ್ವೇಷದ ಕದನ ಭೂಮಿಯನ್ನಾಗಿ ಮಾಡಿದ ಅಡ್ವಾಣಿಯವರು ವಿಚಾರಣೆ ಎದುರಿಸಬೇಕಾಗಿ ಬಂದಿದೆ. ಆದರೆ, ಈ ಪ್ರಕರಣದಲ್ಲಿ ಅವರೊಬ್ಬರೇ ಆರೋಪಿಯಲ್ಲ. ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸಂಘಪರಿವಾರದ ಅನೇಕ ನಾಯಕರು ಮತ್ತು ದೇಶಕ್ಕೆಲ್ಲಾ ಉಪದೇಶ ನೀಡುವ ಕೆಲ ಮಠಾಧೀಶರೂ ಇದರಲ್ಲಿ ಶಾಮೀಲಾಗಿದ್ದಾರೆ. ಅವರನ್ನೂ ವಿಚಾರಣೆಗೊಳಪಡಿಸುವುದು ಅಗತ್ಯವಾಗಿದೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ಅಶೋಕ್ ಸಿಂಘಾಲ್ ಈಗ ಇಲ್ಲ. ಆದರೆ, ವಿಶ್ವಹಿಂದೂ ಪರಿಷತ್‌ನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಈಗಲೂ ಪ್ರಚೋದನಾಕಾರಿ ಹೇಳಿಕೆ ನೀಡುತ್ತಲೇ ಇದ್ದಾರೆ.

ಈ ನಡುವೆ ಬಾಬರಿ ಮಸೀದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸಂಬಂಧಿಸಿದವರಿಗೆ ಸಲಹೆ ನೀಡಿದೆ. ಆದರೆ, ಸೌಹಾರ್ದಯುತವಾಗಿ ಹೇಗೆ ಬಗೆಹರಿಸಿಕೊಳ್ಳಬೇಕೆಂಬ ಬಗ್ಗೆ ಯಾವುದೇ ಸೂತ್ರಗಳನ್ನು ಅದು ನೀಡಿಲ್ಲ. ಬಾಬರಿ ಮಸೀದಿ ನೆಲಸಮಗೊಂಡು ಎರಡೂವರೆ ದಶಕಗಳ ಆನಂತರ ಅಡ್ವಾಣಿ, ಮುರಳಿಮನೋಹರ ಜೋಷಿ, ಉಮಾ ಭಾರತಿ ವಿಚಾರಣೆ ಎದುರಿಸಬೇಕು. ಈ ಪ್ರಕರಣ ಕೈಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಇಂತಹದ್ದೇ ದಿಟ್ಟ ಕ್ರಮ ಕೈಗೊಂಡರೆ ಇನ್ನೂ ಅನೇಕರು ಜೈಲಿನ ಕಂಬಿ ಎಣಿಸಬೇಕಾಗಿ ಬರುತ್ತದೆ. ಅಧಿಕಾರ ರಾಜಕಾರಣಕ್ಕಾಗಿ ಒಂದು ಧರ್ಮದ ಪ್ರಾರ್ಥನಾ ಸ್ಥಳವನ್ನು ನೆಲಸಮಗೊಳಿಸುವುದು ಸರಿಯಲ್ಲ ಎಂಬುದು ಅಡ್ವಾಣಿ ಮತ್ತು ಅವರ ಸಹೋದ್ಯೋಗಿಗಳಿಗೆ ಈಗಲಾದರೂ ಮನವರಿಕೆಯಾಗಬೇಕು. ರಾಷ್ಟ್ರಪತಿಯಂತಹ ಉನ್ನತ ಸ್ಥಾನದಲ್ಲಿರಬೇಕಾದ ಅವರು ಈಗ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂದಿದೆ. ಇಂತಹ ಸನ್ನಿವೇಶದಲ್ಲಿ ಅಡ್ವಾಣಿ ಮತ್ತು ಅವರ ಸಂಗಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ಜಾಗದಲ್ಲಿ ಮಂದಿರ ನಿರ್ಮಾಣ ಮಾಡುವ ತನ್ನ ಯೋಜನೆಯನ್ನು ವಿಶ್ವ ಹಿಂದೂ ಪರಿಷತ್ ಕೈಬಿಟ್ಟಿಲ್ಲ. ಅದಕ್ಕಾಗಿ ದೇಶ ವಿದೇಶಗಳಲ್ಲಿ ನೂರಾರು ಕೋಟಿ ರೂ. ಸಂಗ್ರಹಿಸಿದೆ.

ಬಾಬರಿ ಮಸೀದಿ ಮಾತ್ರವಲ್ಲ ಮಥುರಾ, ವಾರಣಾಸಿಗಳಲ್ಲೂ ವಿವಾದ ಹುಟ್ಟುಹಾಕಲು ಅದು ಯತ್ನಿಸುತ್ತಿದೆ. ಇಂತಹ 3,000 ಮಸೀದಿಗಳ ಪಟ್ಟಿಯನ್ನು ಅದು ಸಿದ್ಧಪಡಿಸಿದೆ. ಇಂತಹ ಸನ್ನಿವೇಶದಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಜನರ ಭಾವನೆಯನ್ನು ಕೆರಳಿಸುವ ಸಂಘಪರಿವಾರದ ಪ್ರಚೋದನಾಕಾರಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಆದರೆ, ಆರೆಸ್ಸೆಸ್‌ನ ಸೂತ್ರದ ಗೊಂಬೆಯಂತೆ ಕಾರ್ಯನಿರ್ವಹಿಸುತ್ತಿರುವ ಅವರು ಪ್ರಧಾನಿಯಾಗಿ ದೇಶಕ್ಕೆ ಶಾಂತಿ ಮತ್ತು ನೆಮ್ಮದಿಯ ದಿನಗಳನ್ನು ತಂದುಕೊಡುತ್ತಾರೆಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ.

ಈಗಾಗಲೇ ಗೋಹತ್ಯೆಯ ಹೆಸರಿನಲ್ಲಿ ದೇಶದ ಕೆಲವೆಡೆ ನಡೆದ ನರಹತ್ಯೆಗಳು ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಯ ನೇಮಕದಲ್ಲಿ ಸಂಘಪರಿವಾರದ ಆದೇಶವನ್ನು ಅವರು ಚಾಚೂತಪ್ಪದೆ ಪಾಲಿಸಿದ್ದಾರೆ. ಆದ್ದರಿಂದ ಬಾಬರಿ ಮಸೀದಿಯಂತಹ ಘಟನೆಗಳು ಮತ್ತೆ ಮರುಕಳಿಸುವುದಿಲ್ಲ ಎಂದು ಜನ ನಂಬಬೇಕಾದರೆ ಪ್ರಧಾನಿ ಮೋದಿ ಅವರು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News