ಸೈನಿಕರ ಆತ್ಮಸ್ಥೈರ್ಯ ಕುಸಿಯದಿರಲಿ

Update: 2017-04-20 18:56 GMT

ನಿರೀಕ್ಷೆಯಂತೆ ಯೋಧ ಬಹದ್ದೂರ್ ಸೇವೆಯಿಂದ ವಜಾಗೊಂಡಿದ್ದಾರೆ. ಬಿಎಸ್‌ಎಫ್‌ನಲ್ಲಿ ಪೂರೈಸಲಾಗುತ್ತಿರುವ ಕಳಪೆ ಆಹಾರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೂರಿಕೊಂಡಿದ್ದ ಇವರು ಅದಕ್ಕಾಗಿ ತನ್ನ ಹುದ್ದೆಯನ್ನೇ ಬಲಿಕೊಡಬೇಕಾಯಿತು. ಒಂದು ಸಮಾಧಾನವೆಂದರೆ, ಬಹುದ್ದೂರ್ ಅವರು ಆತ್ಮಹತ್ಯೆಯಂತಹ ಕೃತ್ಯ ಎಸಗುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಈ ಹಿಂದೆ ಕೇರಳ ಮೂಲದ ಯೋಧನೊಬ್ಬ, ಸೇನೆಯೊಳಗಿನ ಗುಲಾಮಿ ವ್ಯವಸ್ಥೆಯನ್ನು ಬಹಿರಂಗ ಪಡಿಸಿದ ಕಾರಣಕ್ಕಾಗಿ ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಬಹುಶಃ ಯೋಧ ಬಹದ್ದೂರ್ ಯಾದವ್ ಅವರ ಪರವಾಗಿ ಆತನ ಕುಟುಂಬ ಬಲವಾಗಿ ನಿಲ್ಲದೇ ಇದ್ದಿದರೆ ಆತನೂ ಅದೇ ದಾರಿಯನ್ನು ಹಿಡಿಯಬೇಕಾಗಿತ್ತು.

ಒಬ್ಬ ಯೋಧ ಸೇನೆಯೊಳಗಿನ ಅವ್ಯವಸ್ಥೆಯನ್ನು ಬಹಿರಂಗಪಡಿಸುವುದು ಶಿಸ್ತಿನ ಉಲ್ಲಂಘನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ಹೊರಗೆ ಸೇನೆಯ ಕುರಿತಂತೆ ತಪ್ಪು ಅಭಿಪ್ರಾಯಗಳನ್ನು ಬಿಂಬಿಸುತ್ತದೆ. ಸೇನೆಯ ಬಗ್ಗೆ ಹಗುರವಾಗಿ ಮಾತನಾಡುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಸೇನೆಗೆ ಸೇರಬೇಕೆಂದು ಹಂಬಲಿಸುವ ಯುವಕರಲ್ಲಿ ಹಿಂಜರಿಕೆ ಸೃಷ್ಟಿಸುತ್ತದೆ. ಈ ಎಲ್ಲ ಕಾರಣಗಳಿಂದ ಯೋಧ ಬಹುದ್ದೂರ್ ಮಾಡಿರುವುದು ಶಿಸ್ತಿನ ಉಲ್ಲಂಘನೆ ನಿಜ. ಆದರೆ ಇಂತಹದೊಂದು ಅನಿವಾರ್ಯ ಸ್ಥಿತಿಗೆ ಆತನನ್ನು ತಳ್ಳಿದವರು ಯಾರು ಎನ್ನುವುದೂ ಚರ್ಚೆಗೊಳಗಾಗುವುದು ದೇಶದ ಭದ್ರತೆಯ ಹಿತಾಸಕ್ತಿಯಿಂದ ಅತ್ಯಗತ್ಯವಾಗಿದೆ.

 ಕಳೆದ ಕೆಲವು ತಿಂಗಳುಗಳಿಂದ ಸೇನೆಯೊಳಗಿನ ಹುಳುಕುಗಳು ಒಂದೊಂದಾಗಿ ಹೊರ ಬರುತ್ತಿವೆ ಮತ್ತು ಇದನ್ನು ಸೇನೆಯೊಳಗಿನ ಸಂತ್ರಸ್ತ ಯೋಧರೇ ಬಹಿರಂಗಪಡಿಸುತ್ತಿದ್ದಾರೆ. ಯೋಧ ಬಹದ್ದೂರ್ ತನ್ನ ಹೇಳಿಕೆಯನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡ ಬೆನ್ನಿಗೇ ಬೆಂಗಳೂರಿನಲ್ಲಿ ನಿವೃತ್ತ ಯೋಧನೊಬ್ಬ ಸೇನೆಯೊಳಗೆ ಯೋಧರ ಹೀನಾಯಸ್ಥಿತಿಯನ್ನು ಬಹಿರಂಗಪಡಿಸಿದರು. ಇದರ ಬೆನ್ನಿಗೇ ಕೇರಳ ಮೂಲದ ಯೋಧನೊಬ್ಬ ಸೇನೆಯೊಳಗಿರುವ ಗುಲಾಮಿ ವ್ಯವಸ್ಥೆಯನ್ನು ಬಹಿರಂಗ ಪಡಿಸಿ, ಅಂತಿಮವಾಗಿ ಆತ್ಮಹತ್ಯೆಗೆ ಶರಣಾದರು. ಯೋಧರು ಶಿಸ್ತನ್ನು ಉಲ್ಲಂಘಿಸಿರುವುದು ಎಷ್ಟರಮಟ್ಟಿಗೆ ತಪ್ಪೋ, ಶಿಸ್ತನ್ನು ಉಲ್ಲಂಘಿಸುವುದು ಅವರಪಾಲಿಗೆ ಅನಿವಾರ್ಯ ಮಾಡಿದ ಸೇನೆಯೊಳಗಿನ ಅವ್ಯವಸ್ಥೆ ಅದಕ್ಕಿಂತಲೂ ಗಂಭೀರವಾದುದು. ಒಬ್ಬ ಯೋಧ, ಈ ಹುಳುಕುಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸದೇ ನೇರವಾಗಿ ಅಧಿಕಾರಿಗಳ ಮುಂದಿಡುವಂತಹ ಸ್ವಾತಂತ್ರ ಸೇನೆಯೊಳಗೆ ಇದೆಯೇ? ಎನ್ನುವುದನ್ನೂ ನಾವು ಗಮನಿಸಬೇಕು.

ಸೇನೆಯೊಳಗೆ ಶಿಸ್ತಿನ ಹೆಸರಿನಲ್ಲಿ ಹೇಗೆ ಗುಲಾಮಿ ವ್ಯವಸ್ಥೆ ರೂಪುಗೊಂಡಿದೆ ಎನ್ನುವುದನ್ನು ಆಗಾಗ ಯೋಧರ ಮೂಲಕವೇ ನಾವು ಮನಗಂಡಿದ್ದೇವೆ. ಇಂತಹ ವಾತಾವರಣದಲ್ಲಿ ತಮ್ಮ ಮೇಲಾಧಿಕಾರಿಗಳ ವಿರುದ್ಧವೇ ಒಬ್ಬ ಯೋಧ ದೂರು ನೀಡಿದರೆ ಅವನು ಅಲ್ಲಿ ಸುಗಮವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವೇ? ಮೇಲಧಿಕಾರಿಗಳೇ ಆತನ ಮೇಲೆ ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳಿಲ್ಲವೇ? ಸೇನೆಯೊಳಗೆ ದೂರು ನೀಡುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಯೋಧ ಬಹದ್ದೂರ್, ಜನರ ಮುಂದೆ ತನ್ನ ಅಳಲನ್ನು ತೋಡಿಕೊಂಡಿರುವುದು ತಪ್ಪು ಹೇಗಾಗುತ್ತದೆ? ಒಂದು ವೇಳೆ ಅದು ಶಿಸ್ತಿನ ಉಲ್ಲಂಘನೆಯೇ ಆಗಿದ್ದರೂ, ಸೇನೆಯ ಸುಧಾರಣೆಯ ಸಂದರ್ಭದಲ್ಲಿ ಆ ತಪ್ಪುಗಳನ್ನು ಗುರುತಿಸಿ, ಸರಿಪಡಿಸುವುದು ಸರಕಾರದ ಕರ್ತವ್ಯವಲ್ಲವೇ? ಯೋಧ ಬಹದ್ದೂರ್ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಮಾಹಿತಿಗಳು ತಿಳಿಸುತ್ತವೆಯೇ ಹೊರತು, ಆತನ ಆರೋಪ ಸುಳ್ಳು ಎಂದು ಸಾಬೀತು ಮಾಡಲು ಸೇನೆಗೆ ಇನ್ನೂ ಸಾಧ್ಯವಾಗಿಲ್ಲ. ಆತನಲ್ಲಿ ಎರಡೆರಡು ಮೊಬೈಲ್‌ಗಳು ಇರುವುದು, ಸೇನೆಯೊಳಗಿನ ವಿಷಯವನ್ನು ಬಹಿರಂಗಪಡಿಸಿರುವುದೇ ಇದೀಗ ಮುನ್ನೆಲೆಗೆ ಬಂದಿದೆ.

ಇದೇ ಸಂದರ್ಭದಲ್ಲಿ, ಹಗಲು ರಾತ್ರಿ, ಚಳಿ ಮಳೆಯಲ್ಲಿ ಕೆಲಸ ಮಾಡುವ ಯೋಧರಿಗೆ ಅತ್ಯಂತ ಕಳಪೆ ಆಹಾರ ನೀಡಿದ ಅಧಿಕಾರಿಗೆ ಏನು ಶಿಕ್ಷೆ ನೀಡಲಾಗಿದೆ ಎನ್ನುವುದು ಮಾತ್ರ ಇನ್ನೂ ಹೊರಬಿದ್ದಿಲ್ಲ. ಯೋಧ ಬಹದ್ದೂರ್‌ರ ಬಾಯಿಮುಚ್ಚಿಸಿದಾಕ್ಷಣ, ಸೇನೆಯೊಳಗಿನ ಹುಳುಕುಗಳನ್ನು ಸರಿಪಡಿಸಿದಂತಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸೇನೆಯೊಳಗಿನ ದೌರ್ಬಲ್ಯಗಳನ್ನು ಬೇರೆ ಯೋಧರು ಭಯದಿಂದ ಬಹಿರಂಗ ಪಡಿಸಲಾರರು ನಿಜ. ಆದರೆ, ಕಳಪೆ ಆಹಾರ, ಮೇಲಧಿಕಾರಿಗಳ ದೌರ್ಜನ್ಯ ಇವುಗಳ ನಡುವೆ ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರೊಳಗೆ ಒಂದು ಅಸಹನೆ ಸೃಷ್ಟಿಯಾಗುವುದಂತೂ ಖಂಡಿತ.

ಇದು ಮೇಲಧಿಕಾರಿಗಳು ಮತ್ತು ತಳಮಟ್ಟದ ಯೋಧರ ನಡುವೆ ಅಂತರಗಳನ್ನು ಬಿತ್ತಬಹುದು. ಸೇನೆಯಲ್ಲಿ ಕೆಲಸ ಮಾಡಬೇಕಾದರೆ ಪರಸ್ಪರ ನಂಬಿಕೆ, ವಿಶ್ವಾಸ ಅತ್ಯಂತ ಅಗತ್ಯ. ಬರೇ ಆದೇಶಗಳಿಂದ ಸೈನಿಕರನ್ನು ದುಡಿಸುವ ಬದಲು, ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಮೇಲಧಿಕಾರಿಗಳು ಅವರನ್ನು ತಮ್ಮವರನ್ನಾಗಿಸುವ ಅಗತ್ಯವಿದೆ ಎನ್ನುವುದನ್ನು ಇತ್ತೀಚಿನ ಬೆಳವಣಿಗೆಗಳು ಹೇಳುತ್ತವೆ. ಆದುದರಿಂದ ತೇಜ್‌ಬಹದ್ದೂರ್ ಮಾಡಿದ ಆರೋಪಗಳ ಸತ್ಯಾಸತ್ಯತೆಯನ್ನು ಮನಗಂಡು ಅದನ್ನು ಸರಿಪಡಿಸುವುದು ದೇಶದ ಹಿತಾಸಕ್ತಿಯಿಂದ ಅತ್ಯಗತ್ಯವಾಗಿದೆ. ದೇಶಕ್ಕಾಗಿ ಪ್ರಾಣಕೊಡುವ ಯೋಧನೊಬ್ಬನಿಗೆ, ಒಳ್ಳೆಯ ರೊಟ್ಟಿ ಮತ್ತು ದಾಲ್‌ನ್ನು ಕೇಳುವ ಹಕ್ಕು ಖಂಡಿತಾ ಇದೆ. ಸೇನೆಯೊಳಗಿನ ಯೋಧರ ಅಳಲನ್ನು, ದೂರನ್ನು ಆದೇಶಗಳ ಮೂಲಕ, ಕೋರ್ಟ್ ಮಾರ್ಷಲ್‌ಗಳ ಮೂಲಕ ಮಟ್ಟ ಹಾಕುವುದಕ್ಕೆ ಶುರು ಮಾಡಿದರೆ, ಅದು ಸೈನಿಕರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮವನ್ನು ಬೀರಬಹುದು. ಈ ನಿಟ್ಟಿನಲ್ಲಿ, ಯೋಧ ಬಹದ್ದೂರ್ ಯಾದವ್ ಅವರ ಪ್ರಶ್ನೆಗಳಿಗೆ ಉತ್ತರ ಸಿಗಲೇ ಬೇಕು. ಹಾಗೆಯೇ, ಆತ ಮಾಡಿದ ಆರೋಪಗಳಲ್ಲಿ ಸತ್ಯಾಂಶಗಳಿವೆ ಎಂದಾದರೆ ಆತನಿಗೆ ಮತ್ತೆ ಸೇನೆ ಸೇರುವ ಅಥವಾ ಸೇನೆಯ ಸವಲತ್ತುಗಳು ಏನಿದೆಯೋ ಅದನ್ನು ಆತನ ಕುಟುಂಬಕ್ಕೆ ಒದಗಿಸುವ ಹೊಣೆಗಾರಿಕೆಯೂ ಸರಕಾರದ್ದಾಗಿದೆ.

ಯಾಕೆಂದರೆ, ಎಲ್ಲ ವಿಪತ್ತುಗಳನ್ನು ಎದುರು ಹಾಕಿಕೊಂಡು ಸತ್ಯ ಹೇಳುವುದಕ್ಕೆ ಮುಂದಾದ ಬಹದ್ದೂರ್ ಒಬ್ಬ ಯೋಧನಿಗಿರಬೇಕಾದ ಸ್ಥೈರ್ಯವನ್ನೇ ತೋರಿಸಿದ್ದಾರೆೆ. ಶತ್ರು ಗಡಿಯ ಹೊರಗೆ ಮಾತ್ರವಿಲ್ಲ, ಒಳಗೂ ಇದ್ದಾನೆ ಎನ್ನುವುದನ್ನು ಪ್ರಾಣ ಒತ್ತೆಯಿಟ್ಟು ಬಹಿರಂಗ ಪಡಿಸಿದ ಬಹದ್ದೂರ್ ಯಾದವ್ ಧೈರ್ಯವನ್ನು ಸರಕಾರ ಯಾವ ಕಾರಣಕ್ಕೂ ಅವಮಾನಿಸಬಾರದು. 2009ರಿಂದ 2015ರವರೆಗೆ 700ಕ್ಕೂ ಅಧಿಕ ಭಾರತೀಯ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಸೇನೆಯೊಳಗಿರುವ ಒತ್ತಡವೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಸೇನೆಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಹೇಳುವುದಕ್ಕೆ ಈ ಅಂಕಿಅಂಶಗಳೇ ಧಾರಾಳ ಸಾಕು. ಇದೇ ಸಂದರ್ಭದಲ್ಲಿ ಸಹೋದ್ಯೋಗಿಗಳ ಮೇಲೆ ಗುಂಡು ಹಾರಾಟ, ಮೇಲಧಿಕಾರಿಗಳ ಹತ್ಯೆ ಯತ್ನದಂತಹ ಪ್ರಕರಣಗಳೂ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಸಂಭವಿಸುತ್ತಿವೆ.

ಸೇನೆಯ ಗೌಪ್ಯತೆಯ ಕಾರಣಕ್ಕಾಗಿ ಇಂತಹ ಬಹುತೇಕ ಪ್ರಕರಣಗಳನ್ನು ಕಾಟಾಚಾರಕ್ಕಷ್ಟೇ ತನಿಖೆ ಮಾಡಿ ಮುಚ್ಚಿ ಹಾಕಲಾಗುತ್ತದೆ. ಸೇನೆಯೊಳಗೆ ನಡೆಯುವ ಆತ್ಮಹತ್ಯೆಯ ಹಿಂದಿನ ಕಾರಣಗಳನ್ನು ಸಮೀಕ್ಷೆ ಮಾಡಿದರೆ, ಸೈನಿಕರ ಒಳ ಮಾತುಗಳನ್ನು ಆಲಿಸಲು ಒಂದು ತಂಡವನ್ನು ರಚಿಸಿದರೆ, ಸೇನೆ ಇನ್ನಷ್ಟು ಸುಧಾರಣೆಯಾಗಬಹುದು. ಸೈನಿಕರ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಿ, ಆಧುನಿಕ ಶಸ್ತ್ರಾಸ್ತ್ರಗಳಿಗೆ ಅದೆಷ್ಟು ಹಣ ಸುರಿದರೂ ಅದರಿಂದ ವಿಶೇಷ ಫಲಿತಾಂಶ ದೊರಕಲಾರದು ಎನ್ನುವುದನ್ನು ನಮ್ಮ ವ್ಯವಸ್ಥೆ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News