ಪನ್ನೀರ್‌ ಸೆಲ್ವಂ ಮತ್ತೆ ತಮಿಳುನಾಡು ಸಿಎಂ?

Update: 2017-04-22 03:23 GMT

ಚೆನ್ನೈ, ಎ.22: ತಮಿಳುನಾಡು ರಾಜಕಾರಣ ಮತ್ತೊಂದು ಕ್ಷಿಪ್ರ ಕ್ರಾಂತಿಗೆ ಸಜ್ಜಾಗಿದ್ದು, ಜಯಲಲಿತಾ ಅವರ ಕಟ್ಟಾ ಅಭಿಮಾನಿ ಓ.ಪನ್ನೀರಸೆಲ್ವಂ ಮತ್ತೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಈಗ ಮುಖ್ಯಮಂತ್ರಿಯಾಗಿರುವ ಇ.ಕೆ.ಪಳನಿಸ್ವಾಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಲಿದ್ದಾರೆ. ಈ ಮೂಲಕ ಪಕ್ಷ ಒಗ್ಗೂಡಲಿದೆ.

ಈ ಸಂಧಾನಸೂತ್ರಕ್ಕೆ ಎರಡೂ ಬಣಗಳು ಒಪ್ಪಿಕೊಂಡಿವೆ ಎಂದು ಉನ್ನತ ಮೂಲಗಳು ಹೇಳಿವೆ. "ವಿಲೀನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ಔಪಚಾರಿಕವಾಗಿ ಅಂತಿಮ ಮಾತುಕತೆ ಉಭಯ ಬಣಗಳ ಉನ್ನತ ಮುಖಂಡರ ನಡುವೆ ನಡೆಯುತ್ತಿದೆ. ಪನ್ನೀರಸೆಲ್ವಂ ಅವರಿಗಾಗಿ ಪಳನಿಸ್ವಾಮಿ ಪದತ್ಯಾಗ ಮಾಡಲಿದ್ದು, ಐಟಿ ದಾಳಿಗೆ ಒಳಗಾದ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ಸೆಂತಿಲ್ ಬಾಲಾಜಿ ಮತ್ತು ದಕ್ಷಿಣ ತಮಿಳುನಾಡಿನ ಒಂದೆರಡು ಹೊಸ ಮುಖಗಳು ಸಂಪುಟ ಸೇರಲಿದ್ದಾರೆ" ಎಂದು ಹಿರಿಯ ಎಐಎಡಿಎಂಕೆ ಮುಖಂಡರೊಬ್ಬರು ಹೇಳಿದ್ದಾರೆ.

ಆಡಳಿತ ಬಣದಲ್ಲಿ ಕೇವಲ ಆರು ಶಾಸಕರು ನಡೆಸಿದ ಕ್ಷಿಪ್ರಕ್ರಾಂತಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದು, ಸರ್ಕಾರದ ಅಸ್ತಿತ್ವಕ್ಕೆ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಆಡಳಿತ ಬಣ ಈ ರಾಜಿಸೂತ್ರಕ್ಕೆ ಒಪ್ಪಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಹೊಸದಾಗಿ ಸಂಪುಟ ಸೇರಲಿರುವ ಬಾಲಾಜಿ ಶುಕ್ರವಾರ ಹೇಳಿಕೆ ನೀಡಿ, ವಿಜಯಭಾಸ್ಕರ್ ಹಾಗೂ ಲೋಕಸಭೆ ಉಪಸ್ಪೀಕರ್ ತಂಬಿದೊರೈ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು. ಜಯಲಲಿತಾ ಘೋಷಿಸಿರುವ ಕರೂರು ವೈದ್ಯಕೀಯ ಕಾಲೇಜು ಕಟ್ಟಡ ವಿಳಂಬಕ್ಕೆ ಈ ಇಬ್ಬರು ಮುಖಂಡರು ಹೊಣೆ ಎಂದು ಅವರು ನೇರ ಆರೋಪ ಮಾಡಿದ್ದಾರೆ.

ಸಿಎಂ ಬದಲಾವಣೆ ಕುರಿತಂತೆ ಸೋಮವಾರ ನೂತನ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News