​ಲೇಖಕನ ಪುಸ್ತಕ ಓದುವುದೇ ನಿಜವಾದ ಸನ್ಮಾನ: ನ್ಯಾಯಮೂರ್ತಿ ಕೋ.ಚೆನ್ನಬಸಪ್ಪ

Update: 2017-04-23 13:29 GMT

ಬೆಂಗಳೂರು, ಎ.23: ಬರಹಗಾರರು ಬರೆದ ಪುಸ್ತಕಗಳನ್ನು ಹೆಚ್ಚು ಜನರು ಓದುವುದೇ ಲೇಖಕನಿಗೆ ಸಲ್ಲಿಸುವ ನಿಜವಾದ ಸನ್ಮಾನ ಎಂದು ನಿವೃತ್ತ ನ್ಯಾಯಮೂರ್ತಿ, ಹಿರಿಯ ಸಾಹಿತಿ ಡಾ.ಕೋ.ಚೆನ್ನಬಸಪ್ಪ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ವಿದ್ಯಾರ್ಥಿನಿಲಯಗಳ ವಾರ್ಷಿಕೋತ್ಸವ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಹಾಗೂ ‘ಬೇಡಿ ಕಳಚಿತು ದೇಶ ಒಡೆಯಿತು’ ಕೃತಿ ಪರಿಚಯ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಅನೇಕರು ಪುಸ್ತಕ ಬರೆಯುತ್ತಾರೆ. ಆದರೆ, ಒಂದೆರಡು ಕೃತಿಗಳನ್ನು ರಚಿಸಿದ ಕೂಡಲೇ ಸನ್ಮಾನಗಳನ್ನು ಮಾಡಿ ವೈಭವೀಕರಿಸುತ್ತಾರೆ. ಇದರಿಂದ ಏನು ಪ್ರಯೋಜನವಾಗುವುದಿಲ್ಲ. ಬದಲಿಗೆ ಬರಗಾರರ ಕೃತಿಗಳನ್ನು ಕೊಂಡು ಓದಬೇಕು. ಬರಹಗಾರರು ಬರೆದ ಕೃತಿಗಳನ್ನು ಓದುವವರು ಇಲ್ಲದಿದ್ದರೆ, ಬರಹಗಾರನ ಶ್ರಮ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ ಎಂದರು.

ಕುವೆಂಪು ವಿಶ್ವಮಾನವರಾಗಿ ಎನ್ನುತ್ತಾರೆ, ಪಂಪ ಮನುಜಮತ ತಾನೊಂದೆ ವಲಂ ಎನ್ನುತ್ತಾರೆ. ಹೀಗೆ ಹಲವು ವಿಭಿನ್ನ ವಲಯಗಳಲ್ಲಿ ನಾಡಿನ ಸಾಹಿತಿಗಳು, ಕವಿಗಳು ನಾವೆಲ್ಲಾ ಒಂದೇ ಎಂಬುದನ್ನು ಸಾರಿ ಹೇಳಿದ್ದಾರೆ. ಶಿಕ್ಷಣದಿಂದ ಪರಿಹರಿಸಲಾಗದ ಯಾವುದೇ ಸಮಸ್ಯೆಗಳು ಇಲ್ಲ ಎಂದು ವಿವೇಕಾನಂದರೇ ಹೇಳಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ತಾವು ಪಡೆದುಕೊಂಡ ಶಿಕ್ಷಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಲೋಕಾಯುಕ್ತ ಪಿ.ವಿಶ್ವನಾಥಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸಮಾಜಮುಖಿ ಚಿಂತನೆಗಳಿಂದ ಬಲವಾದ ರಾಷ್ಟ್ರವನ್ನು ನಿರ್ಮಾಣ ಮಾಡಬಹುದಾಗಿದೆ. ಒಳ್ಳೆಯದ್ದನ್ನು ಆಲೋಚಿಸುವುದನ್ನು ಕಲಿಯಬೇಕು. ಸಮಾಜದಲ್ಲಿ ಗೌರವಸ್ಥಾನ ಪಡೆಯಬೇಕಾದರೆ ವಯಸ್ಸು ಹಾಗೂ ದೇಹದ ಅಗತ್ಯವಿಲ್ಲ, ಒಳ್ಳೆಯ ಮನಸ್ಸಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಟಿಯು ನ ವಿಶ್ರಾಂತ ಉಪಕುಲಪತಿ ಪ್ರೊ.ಎಚ್. ಪಿ.ಖಿಂಚ, ಇತಿಹಾಸಕಾರ ಡಾ. ಎಚ್.ಎಸ್.ಗೋಪಾಲ ರಾವ್, ಪ್ರೊ.ಕೆ.ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News