ಕಾಶ್ಮೀರಿ ವಿರೋಧಿ ಬ್ಯಾನರ್ : ಉ.ಪ್ರದೇಶ ನವನಿರ್ಮಾಣ ಸೇನೆಯ ಮುಖಂಡನ ಸೆರೆ

Update: 2017-04-23 13:58 GMT

ಮೀರತ್, ಎ.23: ನಗರದಲ್ಲಿ ಕಾಶ್ಮೀರಿಗಳ ವಿರುದ್ಧ ಬ್ಯಾನರ್‌ಗಳನ್ನು ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ನವನಿರ್ಮಾಣ ಸೇನೆಯ ಮುಖ್ಯಸ್ಥ ಅಮಿತ್ ಜಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಶ್ಮೀರದ ಜನರನ್ನು ಬಹಿಷ್ಕರಿಸುವ ಮತ್ತು ಉತ್ತರಪ್ರದೇಶ ಬಿಟ್ಟು ತೊಲಗಲು ಅವರಿಗೆ ಎಚ್ಚರಿಕೆ ನೀಡುವ ಬ್ಯಾನರ್‌ಗಳನ್ನು ರಾಷ್ಟ್ರೀಯ ಹೆದ್ದಾರಿ-58ರಲ್ಲಿ, ಕಾಶ್ಮೀರದ ವಿದ್ಯಾರ್ಥಿಗಳು ಕಲಿಯುತ್ತಿರುವ ಕಾಲೇಜಿನ ಹೊರಭಾಗದಲ್ಲಿ ಅಳವಡಿಸಲಾಗಿದೆ. ಇದು ಆರಂಭ ಮಾತ್ರ. ಕಾಶ್ಮೀರಿಗಳನ್ನು ರಾಜ್ಯದಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿ ಎಪ್ರಿಲ್ 30ರಿಂದ ‘ಹಲ್ಲಾ ಬೋಲ್’ (ನಿಮ್ಮ ಧ್ವನಿ ಏರಿಸಿ) ಅಭಿಯಾನ ಆರಂಭಿಸಲಾಗುವುದು ಎಂದೂ ನವನಿರ್ಮಾಣ ಸೇನೆ ಎಚ್ಚರಿಸಿತ್ತು.

ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದಾಗ ಅಮಿತ್ ತಲೆತಪ್ಪಿಸಿಕೊಂಡಿದ್ದ. ಬಳಿಕ ತನ್ನ ವಕೀಲರ ಮೂಲಕ ವಿಶೇಷ ನ್ಯಾಯಾಲಯದೆದುರು ಶರಣಾಗತಿಯ ಅರ್ಜಿ ಸಲ್ಲಿಸಿದ್ದ. ಶನಿವಾರ ರಾತ್ರಿ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಅಮಿತ್‌ನನ್ನು ಪಾರ್ತಪುರ ಬೈಪಾಸ್ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಯೋಧರು ಹುತಾತ್ಮರಾಗುತ್ತಿರುವುದನ್ನು ವಿರೋಧಿಸಿ ಈ ಬ್ಯಾನರ್ ಅಳವಡಿಸಿರುವುದಾಗಿ ಅಮಿತ್ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News