‘ಜಿಎಸ್‌ಟಿ’ ಜಾರಿಯಿಂದ ರಾಜ್ಯಗಳಿಗೆ ಆಗುವ ಆದಾಯ ನಷ್ಟಕ್ಕೆ ಕೇಂದ್ರ ಪರಿಹಾರ ನೀಡಲಿ: ಸಿದ್ದರಾಮಯ್ಯ ಮನವಿ

Update: 2017-04-23 14:51 GMT

ಹೊಸದಿಲ್ಲಿ, ಎ. 23: ಕೇಂದ್ರ ಸರಕಾರ ಜಾರಿಗೊಳಿಸಲಿರುವ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)ಕಾಯ್ದೆ ಅಳವಡಿಕೆಯಿಂದ ರಾಜ್ಯಗಳಿಗೆ ಆಗುವ ಆದಾಯ ನಷ್ಟಕ್ಕೆ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ರವಿವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಜಿಎಸ್ಟಿಯ ಯಶಸ್ವಿ ಮತ್ತು ಸುಸ್ಥಿತಿ ಅನುಷ್ಠಾನಕ್ಕಾಗಿ ಈ ಪರಿಹಾರವನ್ನು ಕಾಲಮಿತಿಯೊಳಗೆ ಬಿಡುಗಡೆ ಮಾಡುವುದು ಅತ್ಯಂತ ಮುಖ್ಯ. ಆ ನಿಟ್ಟಿನಲ್ಲಿ ಕ್ಷಿಪ್ರ ಕ್ರಮ ಕೈಗೊಳ್ಳುವುದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ಸೌಹಾರ್ದಯುತ ಬಾಂಧವ್ಯ ವೃದ್ಧಿಯಾಗುತ್ತದೆ. ಕೇಂದ್ರ ಸರಕಾರದ ಜಿಎಸ್ಟಿ ಯಶಸ್ವಿಯಾಗಿ ಕಾರ್ಯಗತಗೊಳ್ಳಲು ರಾಜ್ಯಗಳ ಸಹಕಾರವೂ ಮುಖ್ಯ. ಈ ನಿಟ್ಟಿನಲ್ಲಿ ನಷ್ಟ ಭರಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದರು.

ಪರಿಹಾರದ ಮೊತ್ತ ಕಡಿಮೆ: ಆರು ವರ್ಷಗಳಿಂದ ಸತತವಾಗಿ ರಾಜ್ಯದ ರೈತರು ಭೀಕರ ಬರಗಾಲದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ವರ್ಷವೂ ಮುಂಗಾರು ಹಂಗಾಮಿನಲ್ಲಿ 135 ತಾಲೂಕುಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ 160 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮಗೆ ಕೊಟ್ಟಿರುವ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದ ಸಿದ್ದರಾಮಯ್ಯ, ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಅಂಕಿ-ಅಂಶ ಸಮೇತ ಪ್ರಧಾನಿಯವರಿಗೆ ವಿವರಿಸಿದರು. ವಿವಿಧ ಯೋಜನೆಗಳಲ್ಲಿ ರಾಜ್ಯಕ್ಕೆ ನೀಡುತ್ತಿರುವ ಕೇಂದ್ರದ ಪಾಲಿನ ಅನುದಾನವೂ ಕಡಿಮೆಯಾಗಿರುವ ಸಂಗತಿಯನ್ನು ಅವರು ಗಮನಕ್ಕೆ ತಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಗಳ ಅನುದಾನ ಮೊತ್ತದಲ್ಲಿ ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದರಿಂದ ರಾಜ್ಯಕ್ಕೆ ತೊಂದರೆಯಾಗಿದೆ. ಈ ಕಾರಣದಿಂದ ಆಗಿರುವ ಕೊರತೆ ನೀಗಿಸಲು ಪರಿಹಾರವಾಗಿ 118.62 ಕೋಟಿ ರೂ.ಹೆಚ್ಚುವರಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಉಂಟಾಗಿರುವ ಹಿಂಗಾರು ಬೆಳೆ ನಷ್ಟಕ್ಕೆ 3,310 ಕೋ.ರೂ. ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ ಅವರು, ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಾಜ್ಯದಲ್ಲಿ ಅನ್ವೇಷಣಾತ್ಮಕ ರೀತಿಯಲ್ಲಿ ಬರ ಪರಿಹಾರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ನಮ್ಮ ಸರಕಾರ ಕಾರ್ಯೋನ್ಮುಖವಾಗಿದೆ. ಇದಕ್ಕೆ ಸೂಕ್ತ ನಿದರ್ಶನ ಎಂದರೆ ಪರಿಹಾರ ತಂತ್ರಾಂಶ ಬಳಸಿ 16 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಇನ್‌ಪುಟ್ ಸಬ್ಸಿಡಿ ವಿತರಿಸಲಾಗಿದೆ. ಈ ಮೂಲಕ ಬೆಳೆ ನಷ್ಟ ಪರಿಹಾರ ಸರಿದೂಗಿಸಲು ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಕುಶಲ ನೀತಿ ಜಾರಿ: ರಾಜ್ಯವು ಕರ್ನಾಟಕ ಕುಶಲ ನೀತಿ-2017 ಜಾರಿಗೊಳಿಸಲು ಅಂತಿಮ ಸಿದ್ಧತೆಯಲ್ಲಿದೆ. ಇದಕ್ಕಾಗಿ ಪ್ರತ್ಯೇಕ ವಿಭಾಗ ರಚಿಸಲಾಗಿದ್ದು, ಕುಶಲ ಕರ್ಮಿಗಳಿಗೆ ಅನುಕೂಲ ಕಲ್ಪಿಸಲು ಕೈಗಾರಿಕೆ ತರಬೇತಿಗೆ ಭದ್ರ ಬುನಾದಿ ಹಾಕಲಾಗಿದೆ. ಮೂರು ವರ್ಷಗಳಲ್ಲಿ 2.21 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ 3.7ಲಕ್ಷ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ. ಅಲ್ಲದೆ, ನೂರು ಹೊಸ ಕೈಗಾರಿಕೆ ತರಬೇತಿ ಸಂಸ್ಥೆಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಸಿದ್ದರಾಮಯ್ಯ ಸಭೆಗೆ ವಿವರಿಸಿದರು

ಸ್ವಚ್ಛ ಭಾರತ ಅಭಿಯಾನದ ಉದ್ದೇಶಗಳನ್ನು ಈಡೇರಿಸಲು ಕರ್ನಾಟಕ ಸೂಕ್ತ ಗಮನ ಹರಿಸಿದೆ. ರಾಜ್ಯವನ್ನು ಬಹಿರ್ದೆಸೆ ಮುಕ್ತವಾಗಿಸಲು ಕ್ರಮ ಕೈಗೊಂಡಿದ್ದು, ನಾಲ್ಕು ವರ್ಷಗಳಲ್ಲಿ 30 ಲಕ್ಷ ಕುಟುಂಬ ಘಟಕಗಳಿಗೆ (ಮನೆಗಳು) ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News