ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣ ಚೀನಾದ ತಿಕ್ಕಲು ನಡೆ : ಸ್ಥಳೀಯ ಮುಖಂಡರ ಖಂಡನೆ

Update: 2017-04-23 16:50 GMT

ಹೊಸದಿಲ್ಲಿ, ಎ.23: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾವು ಮರುನಾಮಕರಣ ಮಾಡಿರುವುದನ್ನು ಅರುಣಾಚಲ ಪ್ರದೇಶದ ಮುಖಂಡರು ಹಾಗೂ ಸ್ಥಳೀಯರು ವ್ಯಾಪಕವಾಗಿ ಖಂಡಿಸಿದ್ದಾರೆ. ಇದು ಚೀನಾದ ತಿಕ್ಕಲು ನಡೆಗೆ ಒಂದು ದೃಷ್ಟಾಂತ ಎಂದು ಅರುಣಾಚಲ ಪ್ರದೇಶದ ಮುಖಂಡರು ಪಕ್ಷಬೇಧ ಮರೆತು ಟೀಕಿಸಿದ್ದಾರೆ.

ಬೀಜಿಂಗನ್ನು ಮುಂಬೈ ಎಂದು ನಾಮಕರಣ ಮಾಡಿದರೆ ಅದು ಭಾರತದ ಪ್ರದೇಶವಾಗುತ್ತದೆಯೇ ಎಂದು ಅರುಣಾಚಲ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಟೆಚಿ ಲಲ ಪ್ರಶ್ನಿಸಿದ್ದಾರೆ.

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ ಪ್ರಯತ್ನ ಆಧಾರರಹಿತವಾಗಿದೆ ಎಂದು ಅರುಣಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ತಾಪಿರ್ ಗವೊ ತಿಳಿಸಿದ್ದಾರೆ. ಚೀನಾವು 1959ರಲ್ಲಿ ಬಲಾತ್ಕಾರವಾಗಿ ಟಿಬೆಟನ್ನು ಆಕ್ರಮಿಸಿಕೊಂಡಿದ್ದು ಈಗ ಅರುಣಾಚಲ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬಯಸಿದೆ . ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಟಿಬೆಟ್‌ನ ಧಾರ್ಮಿಕ ಗುರು ದಲಾಯಿ ಲಾಮಾ ಈಗಾಗಲೇ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿದ್ದಾರೆ .ಚೀನಾವು ಇತಿಹಾಸದಿಂದ ಪಾಠ ಕಲಿಯಲಿ ಮತ್ತು ತಾನು ಟಿಬೆಟನ್ನು ಬಲಾತ್ಕಾರವಾಗಿ ಆಕ್ರಮಿಸಿಕೊಂಡಿದ್ದೇನೆ ಎಂಬುದನ್ನು ಅರಿತುಕೊಳ್ಳಬೇಕು ಎಂದವರು ಹೇಳಿದ್ದಾರೆ.

ಭಾರತವು ಚೀನಾದೊಂದಿಗೆ ಯಾವುದೇ ಗಡಿ ವ್ಯಾಪ್ತಿ ಹೊಂದಿಲ್ಲ. ಆದರೆ ಟಿಬೆಟ್‌ನೊಂದಿಗೆ ಹೊಂದಿದೆ. ಗಡಿ ವ್ಯಾಪ್ತಿಗೆ ಸಂಬಂಧಿಸಿ 1914ರಲ್ಲಿ ಮೆಕ್‌ಮೋಹನ್ ಶಿಮ್ಲಾದಲ್ಲಿ ಚೀನಾದ ಪ್ರತಿನಿಧಿಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು ಎಂದು ತಾಪಿರ್ ಹೇಳಿದರು.

ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅರುಣಾಚಲ ಪ್ರದೇಶದ ಪ್ರಧಾನ ಕಾರ್ಯದರ್ಶಿ ಶಕುಂತಳಾ ದೋಲೆ ಗಾಮ್ಲಿನ್ ನಿರಾಕರಿಸಿದ್ದಾರೆ. ಈ ವಿಷಯವನ್ನು ವಿದೇಶ ವ್ಯವಹಾರ ಇಲಾಖೆ ನಿಭಾಯಿಸುತ್ತಿದ್ದು ನಮಗೇನೂ ಹೇಳಲಿಕ್ಕಿಲ್ಲ ಎಂದವರು ತಿಳಿಸಿದ್ದಾರೆ.

ಚೀನಾದ ನಡೆಯನ್ನು ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ನಬಾಮ್ ಟುಕಿ ಖಂಡಿಸಿದ್ದಾರೆ. ಇದೊಂದು ವಿವೇಚನಾರಹಿತ ನಡೆ. ಅರುಣಾಚಲ ಪ್ರದೇಶವು ಭಾರತದ ಅಖಂಡ ಭಾಗ ಎಂಬುದು ಎಲ್ಲರಿಗೂ ತಿಳಿದಿದೆ. ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದವರು ಹೇಳಿದ್ದಾರೆ.

ಚೀನಾದ ಕ್ರಮಕ್ಕೆ ಪ್ರತಿರೋಧ ಸೂಚಿಸಿರುವ ಭಾರತ, ನೆರೆಯ ರಾಷ್ಟ್ರದ ನಗರಗಳಿಗೆ ಹೊಸ ಹೆಸರುಗಳನ್ನು ಅನ್ವೇಷಿಸಿ ನಾಮಕರಣ ಮಾಡಿದಾಕ್ಷಣ ಆ ಪಟ್ಟಣಗಳು ತನಗೆ ಸೇರಬೇಕೆಂಬ ಅಕ್ರಮ ಹೇಳಿಕೆ ಸಕ್ರಮಗೊಳ್ಳುತ್ತವೆ ಎಂದು ಭಾವಿಸಬಾರದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News