ಕೃಷಿ ವಿವಿಯ 51ನೆ ಘಟಿಕೋತ್ಸವ: ಕೃಷಿಕನ ಮಗನಿಗೆ 11 ಚಿನ್ನದ ಪದಕ

Update: 2017-04-24 12:53 GMT

ಬೆಂಗಳೂರು, ಎ. 24: ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುವುದಕ್ಕೆ ಸಾಕ್ಷಿ ಎಂಬಂತೆ ಕೊಳ್ಳೇಗಾಲದ ಹನೂರು ಗ್ರಾಮದ ರೈತ ದಂಪತಿ ಮಾರಪ್ಪ ಮತ್ತು ಶಿವಮ್ಮ ಎಂಬವರ ಪುತ್ರ ರಘುವೀರ್ ಬಿಎಸ್ಸಿ ಅಗ್ರಿ ಪದವಿ ವಿಭಾಗದಲ್ಲಿ 11 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸೋಮವಾರ ನಗರದ ಜಿಕೆವಿಕೆ ಆವರಣದಲ್ಲಿನ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಿದ್ದ ಬೆಂಗಳೂರು ಕೃಷಿ ವಿವಿಯ 52ನೆ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. 

"ನಾನು ಪದಕಗಳಿಗಾಗಿ ಓದಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತನ್ನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೆರವಾಗಲಿದೆ ಎಂದು ಕಷ್ಟಪಟ್ಟು ಓದಿದೆ. ಆದರೆ ಇಂದು 11 ಚಿನ್ನದ ಪದಕಗಳು ದೊರಕಿರುವುದು ಅಚ್ಚರಿ ಮೂಡಿಸಿದೆ" ಎಂದು ಸಂತಸವನ್ನು ಹಂಚಿಕೊಂಡರು.

ವಿಜ್ಞಾನಿಯಾಗೋ ಕನಸು: "ಮನೆಯಲ್ಲಿ ಬಡತನವಿದ್ದರಿಂದ ತಾತನ ಮನೆಯಲ್ಲಿದ್ದುಕೊಂಡು ಪಿಯುಸಿ ವಿದ್ಯಾಭ್ಯಾಸ ಮುಗಿಸಿದೆ. ಬಳಿಕ ಅಪ್ಪನ ಒತ್ತಾಸೆಯಿಂದ ಕೃಷಿ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದರೆ ಸ್ನಾತಕೋತ್ತರ ಪದವಿಗೆ ಜೆಆರ್‌ಎಫ್ ವಿದ್ಯಾರ್ಥಿ ವೇತನ ಸಿಗುತ್ತದೆ ಎಂಬ ಆಸೆಯಿಂದ ಕಷ್ಟಪಟ್ಟು ಓದಿದೆ. ಆದರೆ ಪದವಿಯಲ್ಲಿ 11 ಚಿನ್ನದ ಪದಕ ಗಳಿಸಿರುವುದು ಸಂತಸ ತಂದಿದೆ. ಇದೇ ರೀತಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತೇನೆ. ಮುಂದೆ ವಿಜ್ಞಾನಿಯಾಗಬೇಕು ಎಂಬ ಗುರಿಯಿದೆ" ಎಂದು ರಘುವೀರ್ ತಿಳಿಸಿದರು.

ಸಂಭ್ರಮದಲ್ಲೂ ಕಾಡಿದ ಅಪ್ಪನ ನೆನಪು: ಬೆಂಗಳೂರು ಕೃಷಿ ವಿವಿಯ 51ನೆ ಘಟಿಕೋತ್ಸವದಲ್ಲಿ 11 ಚಿನ್ನದ ಪದಕಗಳನ್ನು ಗಳಿಸಿರುವ ರಘುವೀರ್ ಅವರ ತಂದೆ ಮಾರಪ್ಪ ಫೆ.14ರಂದು ಇಹಲೋಕ ತ್ಯಜಿಸಿದ್ದಾರೆ. ಪದಕ ಸ್ವೀಕರಿಸುವ ವೇಳೆ ತಂದೆಯನ್ನು ಕಳೆದುಕೊಂಡ ನೋವಿನಿಂದ ರಘುವೀರ್ ಇನ್ನೂ ಹೊರಬಂದಿರಲಿಲ್ಲ. ಪದಕ ಸ್ವೀಕರಿಸಿದ ಬಳಿಕ ವಿದ್ಯಾಭ್ಯಾಸಕ್ಕೆ ಪ್ರೇರಣೆಯಾಗಿದ್ದ ಅಪ್ಪನ ಕುರಿತು ಮಾತನಾಡುವಾಗ ಮಾತುಗಳು ತೊದಲುತ್ತಿದ್ದವು. ಈ ಚಿನ್ನದ ಪದಕಗಳು ನಮ್ಮ ತಂದೆಗೆ ಅರ್ಪಿಸುತ್ತೇನೆ ಎನ್ನುವಷ್ಟರಲ್ಲಿ ರಘುವೀರ್‌ರ ಕಣ್ಣಾಲಿಗಳು ನೀರಾದವು.

ದಾಂಪತ್ಯ ಜೀವನವನ್ನು ಬದಿಗಿಟ್ಟು ಬಿಎಸ್ಸಿಯಲ್ಲಿ ಒಟ್ಟು ಏಳು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಬ್ರಾಹ್ಮಣರಹಳ್ಳಿಯ ಆರತಿ ನಗೆ ಬೀರಿದರು. ನನ್ನ ಈ ಸಾಧನೆಗೆ ಅತ್ತೆ-ಮಾವ ಹಾಗೂ ಪತಿಯ ಪ್ರೋತ್ಸಾಹವೇ ಕಾರಣ ಸಂತಸ ಹಂಚಿಕೊಂಡರು. ಅಲ್ಲದೆ 2014ನೆ ಸಾಲಿನಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲಿ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದಾರೆ.

"ಪಿಯುಸಿ ಓದುತ್ತಿರುವಾಗಲೇ ಮದುವೆಯಾದರೂ ನನ್ನ ವಿದ್ಯಾಭ್ಯಾಸಕ್ಕೆ ಮನೆಯವರೆಲ್ಲರೂ ಪ್ರೋತ್ಸಾಹ ನೀಡಿದರು. ವಿಶೇಷವಾಗಿ ಪತಿ ಶಂಕರ್ ತನ್ನ ವಿದ್ಯಾಭ್ಯಾಸಕ್ಕೆ ಪ್ರೇರಣೆಯಾಗಿದ್ದಾರೆ" ಎಂದು ಹೇಳಿದರು. ನಗರದ ಕತ್ತರಿಗುಪ್ಪೆಯ ಪ್ರೀತಿ ಬಿಎಸ್ಸಿ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಾರ್ಯಕ್ರಮದಲ್ಲಿ 953 ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಲಾಯಿತು. ಆ ಪೈಕಿ 646 ಸ್ನಾತಕ ಪದವಿ, 234 ಸ್ನಾತಕೋತ್ತರ ಪದವಿ, 73 ಡಾಕ್ಟರೇಟ್ ಪದವಿಗಳನ್ನು ಪ್ರದಾನಿಸಲಾಯಿತು. 35 ವಿಶ್ವವಿದ್ಯಾಲಯಗಳು, 3 ಸ್ನಾತಕ ಪದವಿ ಹಾಗೂ 5 ಸ್ನಾತಕೋತ್ತರ ಪದವಿ ಆವರಣದ (ಕ್ಯಾಂಪಸ್) ಚಿನ್ನದ ಪದಕಗಳು ಹಾಗೂ 73 ದಾನಿಗಳ ಚಿನ್ನದ ಪದಕಗಳು ಸೇರಿದಂತೆ 48 ವಿದ್ಯಾರ್ಥಿಗಳಿಗೆ 116 ಚಿನ್ನದ ಪದಕಗಳನ್ನು ಪ್ರದಾನಿಸಲಾಯಿತು.

ಅಂತರ್ಜಲ ಮಟ್ಟ ಅಭಿವೃದ್ಧಿಗೆ ಒತ್ತು ನೀಡಲು ಕರೆ ದೇಶದಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಳೆ ನೀರು ಕೊಯ್ಲು, ಅಂತರ್ಜಲ ಮಟ್ಟ ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚು ಗಮನ ನೀಡಬೇಕಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕಾರ್ಯದರ್ಶಿ ಡಾ.ಟಿ.ಮೊಹಾಪಾತ್ರ ಹೇಳಿದ್ದಾರೆ.

ಬೆಂಗಳೂರು ಕೃಷಿ ವಿವಿಯ 51ನೆ ಘಟಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ನೀರಿನ ಸದ್ಬಳಕೆ ಕುರಿತು ಸರಕಾರ ಸೂಕ್ತ ನೀತಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ಸಾಂಪ್ರದಾಯಿಕ ಕೃಷಿಯ ಬದಲಾಗಿ ಯಾಂತ್ರಿಕೃತ ಕೃಷಿ ಪದ್ದತಿಗೆ ಉತ್ತೇಜನ ನೀಡಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ದೇಶದಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ವಿಷಾದದ ಸಂಗತಿಯೂ ಕೂಡ. ಇದರಿಂದ ದೇಶದಲ್ಲಿ ಆಹಾರೋತ್ಪಾದನೆ ಕುಂಠಿತವಾಗಿದೆ. ಕೃಷಿಯತ್ತ ಯುವಕರು ಮುಖ ಮಾಡಬೇಕು. ಕೃಷಿಯಲ್ಲಿ ಪದವಿ ಗಳಿಸಿದ ವಿದ್ಯಾರ್ಥಿಗಳು ಬೇರೆ ಕ್ಷೇತ್ರಗಳಿಗೆ ಉದ್ಯೋಗ ಬಯಸಿ ಹೋಗಬಾರದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ, ಕುಲಪತಿ ಡಾ. ಹೆಚ್. ಶಿವಣ್ಣ ಕುಲಸಚಿವ ಡಾ. ಎಂ.ಬಿ. ರಾಜೇಗೌಡ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News