ಯುದ್ಧದ ಹಂಬಲ

Update: 2017-04-26 16:39 GMT

ಅಪ್ಪಯ ಹೇಳಿದ ಸುದ್ದಿ ಸುಳ್ಳಿನ ಕಂತೆ ಎನ್ನುವುದಕ್ಕೆ ಅತೀ ದೊಡ್ಡ ಸಾಕ್ಷಿಯಾಗಿ ಜಾನಕಿಯಿದ್ದಳು. ವೆಂಕಟನ ಎದೆಗೆ ಎಷ್ಟು ಗುಂಡು ಬಿದ್ದಿತ್ತು ಎನ್ನುವುದನ್ನು ಸ್ಪಷ್ಟ ವಾಗಿ ಹೇಳಿದ್ದಳು ಜಾನಕಿ. ಗುರೂಜಿ ಎಲ್ಲವನ್ನೂ ಆಕೆಗೆ ವಿವರಿಸಿದ್ದಾರೆ. ವೆಂಕಟ ಯುದ್ಧ ಭೂಮಿಯಲ್ಲಿ ಪಾಕಿಸ್ತಾನಿಯರ ವಿರುದ್ಧ ಹೇಗೆ ಹೋರಾಡಿದ, ಹೇಗೆ ತನ್ನ ದೇಹ ತುಂಬಾ ಗಾಯಗಳಿದ್ದರೂ ಪಾಕಿಸ್ತಾನಿ ಶತ್ರುಗಳನ್ನು ಚೆಂಡಾಡಿದ ಎನ್ನುವುದಕ್ಕೆ ಗುರೂಜಿಯೇ ದೊಡ್ಡ ಸಾಕ್ಷಿ. ತನಗೆ ಕನ್ನಡ ಕಲಿಸಿದ ಸುಬ್ಬಣ್ಣ ಭಟ್ಟರೂ ಇದನ್ನು ಭಾಷಣದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ವೆಂಕಟ ವೀರ ಯೋಧ...ನನ್ನ ಊರಿನ ಹೆಮ್ಮೆಯ ತರುಣ....ಎಲ್ಲರೂ ಅವನನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಯಾರೂ ಆತನ ಜಾತಿಯ ಪ್ರಸ್ತಾಪವನ್ನು ಮಾಡಿರಲಿಲ್ಲ. ಎಲ್ಲರೂ ಅವನ ಶವಪೆಟ್ಟಿಗೆಗೆ ಕೈ ಮುಗಿದಿದ್ದರು. ಹೀಗಿರುವಾಗ ಅಪ್ಪಯ್ಯನ ಮಾತುಗಳನ್ನು ನಂಬುವುದು ಹೇಗೆ? ದೇಶದ್ರೋಹಿಗಳು ಹಬ್ಬಿಸಿದ ಸುಳ್ಳು ಸುದ್ದಿ ಇದು.

‘‘ಹೌದು ಸುಳ್ಳು ಸುದ್ದಿ...’’ ಅವನ ಬಾಯಿಯಿಂದ ಅವನಿಗರಿವಿಲ್ಲದೆ ಉದುರಿತು. ಧಗಿಸುವ ಒಲೆಯಿಂದ ಎದ್ದ ಹೊಗೆ ಆತನ ಕಣ್ಣನ್ನು ಮಂಜಾಗಿಸಿತ್ತು. ಶಿಬಿರಕ್ಕೆ ಬಂದ ಆರಂಭದಲ್ಲಿ ಆತನಿಗೆ ಯಾವುದೂ ಸ್ಪಷ್ಟವಾಗಿ ಅರ್ಥವಾಗುತ್ತಿರಲಿಲ್ಲ. ಒಂದೆಡೆ ಕಾಡುತ್ತಿರುವ ಒಬ್ಬಂಟಿತನ. ಎಲ್ಲರ ಅಪಹಾಸ್ಯ. ಇವುಗಳ ಮಧ್ಯೆ, ಯುದ್ಧ ಆರಂಭವಾಗುವುದು ಯಾವಾಗ? ಎನ್ನುವ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿರಲಿಲ್ಲ.

ಈ ಪ್ರಶ್ನೆಯನ್ನು ಆತ ಮೃತ್ಯುವಿನಲ್ಲಿ ಕೇಳಿದ ‘‘ಅಲ್ಲ, ನಾವು ಯುದ್ಧಕ್ಕೆ ಹೋಗುವುದು ಯಾವಾಗ?’’

ಅದೊಂದು ದೊಡ್ಡ ಮೂರ್ಖ ಪ್ರಶ್ನೆಯೆಂಬಂತೆ ಮೃತ್ಯು ಗಹಗಹಿಸಿ ನಕ್ಕಿದ್ದ. ಅಷ್ಟೇ ಅಲ್ಲ, ಅದನ್ನು ಎಲ್ಲರೊಂದಿಗೂ ಬಹುದೊಡ್ಡ್ಡ ಜೋಕು ಎಂಬಂತೆ ಹಂಚಿಕೊಂಡಿದ್ದ. ಅಂತಿಮವಾಗಿ ಅದು ಹವಾಲ್ದಾರ್‌ತನಕವೂ ಹೋಗಿತ್ತು.

ಅಂದು ಹವಾಲ್ದಾರ್ ಅವನನ್ನು ಕರೆದು ಕೇಳಿದ ‘‘ಯುದ್ಧಕ್ಕೆ ಹೋಗುವುದಕ್ಕೆ ಅಷ್ಟೂ ಅರ್ಜೆಂಟಿದೆಯಾ? ತಗೋ...ಆ ಕೋವಿ ಕೈಗೆ ತಗೋ...’’

ಬಂದು ಮೂರು ತಿಂಗಳಾಗಿದ್ದರೂ ಅವನಿನ್ನೂ ಕೋವಿಯನ್ನು ಮುಟ್ಟಿಯೇ ಇರಲಿಲ್ಲ. ಆತಂಕದಿಂದ ಅದರೆಡೆಗೆ ನೋಡಿದ.

‘‘ತಗೋ ಕೋವಿ...’’ ಹವಾಲ್ದಾರ್ ಆದೇಶಿಸಿದ. ಪಪ್ಪು ಕೋವಿಯ ಸಮೀಪ ಹೋದ. ಅದನ್ನು ಸುಮ್ಮಗೆ ಮುಟ್ಟಿದ. ಆದರೆ ಎತ್ತುವ ಧೈರ್ಯವಾಗಲಿಲ್ಲ.

ಹವಾಲ್ದಾರ್ ನಕ್ಕ ‘‘ಏ...ಬೊಮ್ಮನ್...ಅದು ಗಂಟೆ ಅಲ್ಲ...ಕೋವಿ...ಕೋವಿ...ಯುದ್ಧ ಎಂದರೆ ತಿಥಿ ಮಾಡೋ ಕೆಲಸ...ಆದರೆ ಅಲ್ಲಿ ತಿಥಿ ಊಟ ಇರೋದಿಲ್ಲ ನೆನಪಿಟ್ಟುಕೋ...’’

ಪಪ್ಪುವಿಗೆ ಭಯಂಕರ ಅವಮಾನವಾಗಿತ್ತು. ಅವನು ತನ್ನ ಕೋಣೆಗೆ ತೆರಳಿ ಮನಸಾರೆ ಅತ್ತಿದ್ದ.

ಶಿಬಿರಕ್ಕೆ ಬಂದು ಮೂರು ತಿಂಗಳಾಗಿದ್ದರೂ ಬರೇ ಗಿಡಗಳಿಗೆ ನೀರು ಸುರಿಯುವ ಕೆಲಸ, ಅಂಗಳ ಶುಚಿಯಾಗಿಡುವುದು... ಹೀಗೆ ಕೂಲಿಕೆಲಸಗಳನ್ನಷ್ಟೇ ಮಾಡಿಸಲಾಗುತ್ತಿತ್ತು. ಯುದ್ಧದ ಯಾವ ತರಬೇತಿಯೂ ಈವರೆಗೆ ಸಿಕ್ಕಿರಲಿಲ್ಲ. ಯುದ್ಧ ಮಾಡುವುದಕ್ಕಾಗಿ ಈ ಕೆಲಸಗಳನ್ನೆಲ್ಲ ಯಾಕೆ ಮಾಡಬೇಕು? ಎನ್ನುವುದು ಅವನಿಗೆ ಹೊಳೆಯುತ್ತಿರಲಿಲ್ಲ. ಅವನಿಗೆ ತೀರಾ ಅವಮಾನವಾಗಿತ್ತು. ಶಿಬಿರದಲ್ಲಿ ತಾನು ಕಸ ಗುಡಿಸಿರುವುದು, ಬಟ್ಟೆ ಒಗೆದಿರುವುದು, ನೆಲ ಒರೆಸಿರುವುದು ಎಲ್ಲ ಜಾನಕಿಗೆ ಗೊತ್ತಾದರೆ? ಛೆ ಅನ್ನಿಸಿತು. ಒಮ್ಮೆ ಯುದ್ಧ ಶುರುವಾಗಬಾರದೆ, ನಮಗೆಲ್ಲ ಕೋವಿ ಕೊಟ್ಟು ಗಡಿಗೆ ಕಳುಹಿಸಬಾರದೆ ? ಅನ್ನಿಸುತ್ತಿತ್ತು ಪಪ್ಪುವಿಗೆ. ಹೀಗಿರುವಾಗಲೇ ಶಸ್ತ್ರಗಳ ಬಗ್ಗೆ ತರಬೇತಿ ಶುರುವಾಯಿತು. ಆರಂಭದಲ್ಲಿ ಕೃತಕ ಕೋವಿಗಳನ್ನು ಅವರಿಗೆ ಪರಿಚಯಿಸಲಾಯಿತು. ಅದರ ಬೇರೆ ಬೇರೆ ಕಾರ್ಯನಿರ್ವಹಣೆಗಳನ್ನು ಹೇಳಿಕೊಡಲಾಯಿತು. ಮೊತ್ತ ಮೊದಲಬಾರಿಗೆ ಆತ ಕೋವಿಯನ್ನು ಕೈಗೆತ್ತಿಕೊಂಡಾಗ ಅವನಿಗೆ ರೋಮಾಂಚನವಾಗಿತ್ತು. ಅವನ ಕೈ ಸಣ್ಣಗೆ ನಡುಗುತ್ತಿತ್ತು. ಆಗ ಅವನ ಮನದಲ್ಲಿ ಎದ್ದ ಮೊದಲ ಪ್ರಶ್ನೆ ‘‘ನಿಜಕ್ಕೂ ನನ್ನಿಂದ ಯಾರನ್ನಾದರೂ ಈ ಕೋವಿಯಿಂದ ಕೊಂದು ಹಾಕಲು ಸಾಧ್ಯವೇ?’’

 ಮೊದಲ ಬಾರಿ ಆತ ರೈಫಲ್‌ನಿಂದ ಗುಂಡು ಹಾರಿಸಿದಾಗ ಅಷ್ಟು ದೂರ ನೆಗೆದು ಬಿದ್ದಿದ್ದ. ಹೆಗಲ ಮೂಲೆಯನ್ನು ತುಂಡರಿಸಿ, ಯಾರೋ ಅಷ್ಟು ದೂರ ಎಸೆದಂತೆ....ದೂರದಲ್ಲಿ ನಿಂತು ನೋಡುತ್ತಿದ್ದ ಗೆಳೆಯರೆಲ್ಲರೂ ನಗುತ್ತಿದ್ದರು. ಅವರಿಗೆಲ್ಲ ಅದರ ಪೂರ್ವಸೂಚನೆಯಿತ್ತು. ಸುಮಾರು ಒಂದು ತಿಂಗಳ ಕಾಲ ಆ ನೋವು ಆತನನ್ನು ಕಾಡುತ್ತಿತ್ತು. ಆರಂಭದಲ್ಲಿ ಬೆಳ್ಳಂಬೆಳಗ್ಗೆ ಏಳುವುದು, ಓಟ, ದೈಹಿಕ ತರಬೇತಿ ಇವೆಲ್ಲ ಅವನಿಗೆ ನರಕ ಎನ್ನಿಸುತ್ತಿತ್ತು. ಒಮ್ಮೆ ಕೈಗೆ ಕೋವಿ ಸಿಗಲಿ, ಎಲ್ಲ ಸರಿಹೋಗಬಹುದು ಎಂದು ಅವನು ಭಾವಿಸಿದ್ದ. ಇದೀಗ ರೈಫಲನ್ನು ಕಂಡರೆ ನಡುಗುವಂತಾಗಿತ್ತು. ರೈಫಲ್ ಗುರಿಯಿಡಲು ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಕೈ ಸಣ್ಣಗೆ ಕಂಪಿಸುತ್ತಿತ್ತು. ಬಾರಿ ಬಾರಿಗೆ ಹವಾಲ್ದಾರ್‌ನಿಂದ ಆತ ಏಟುಗಳನ್ನು ತಿನ್ನಬೇಕಾಗಿತ್ತು. ತನ್ನ ಎರಡು ತಿಂಗಳ ತರಬೇತಿಯಲ್ಲಿ ಒಂದೇ ಒಂದು ಗುರಿಯನ್ನೂ ಅವನಿಗೆ ಸರಿಯಾಗಿ ಇಡುವುದಕ್ಕೆ ಸಾಧ್ಯವಾಗಿರಲಿಲ್ಲ. ತರಬೇತಿಯಲ್ಲಿ ಆತನ ಕಾರ್ಯನಿರ್ವಹಣೆ ಅತ್ಯಂತ ಕಳಪೆಯೆನ್ನಿಸಿತ್ತು.

ಆದರೂ ಈಗ ಮಾಂಸ ತಿನ್ನಲು ಅವನು ಕಲಿತಿದ್ದ. ಶಿಬಿರದಲ್ಲಿ ಇದು ಅವನ ಅತೀ ದೊಡ್ಡ ಸಾಧನೆ. ಆದರೆ ಮನೆಯವರಿಗೆ ಮಾತ್ರ ಇದನ್ನು ಸಂಪೂರ್ಣ ಮುಚ್ಚಿಟ್ಟ. ಒಳಗೊಳಗೆ ಮಾತ್ರ ಆತನನ್ನು ಯಾವುದೋ ಪಾಪ ಪ್ರಜ್ಞೆ ಕಾಡುತ್ತಿತ್ತು. ಶಿಬಿರದಲ್ಲಿ ಮೊಟ್ಟೆಯನ್ನು ತರಕಾರಿಯ ಪಟ್ಟಿಯಲ್ಲೇ ಘೋಷಿಸಲಾಗುತ್ತದೆ. ಮೊದಲು ಅವನು ಮೊಟ್ಟೆಯ ಕಡೆಗೆ ಆಸಕ್ತಿ ತೋರಿಸಿದ. ಆದರೆ ಬೇಯಿಸಿದ ಮೊಟ್ಟೆ ವಿಪರೀತ ದುರ್ವಾಸನೆಯಿಂದ ಕೂಡಿದೆ ಎನ್ನಿಸಿತು. ಅಪ್ಪಯ್ಯ ಅವನ ಬೆನ್ನಿಗೆ ನಿಂತ. ‘ಮೊದಲು ಮಸಾಲೆಯ ಜೊತೆಗೆ ತಿನ್ನು. ಬರಿ ಮೊಟ್ಟೆ ತಿನ್ನಬೇಡ’ ಎಂದು ಸಲಹೆ ನೀಡಿದ.

‘‘ಹೂ ಕೋಸು ಮತ್ತು ಮೊಟ್ಟೆಗೆ ದೊಡ್ಡ ವ್ಯತ್ಯಾಸ ವೇನೂ ಇಲ್ಲ’’ ಎಂದು ಅಪ್ಪಯ್ಯ ಹುರಿದುಂಬಿಸಿದ.

 ಯಾವುದೇ ತರಬೇತಿಗಿಂತ ಈ ಆಹಾರವೇ ಅತೀ ದೊಡ್ಡ ಸವಾಲು ಎಂದು ಅವನಿಗೆ ಅನ್ನಿಸಿತು. ಮಾಂಸಾಹಾರದ ಮೂಲಕ ಆತ ತನ್ನ ಹೊರ ಒಳಗನ್ನು ಗೆಲ್ಲಬೇಕಾಗಿತ್ತು. ಮುಖ್ಯವಾಗಿ ತಾನು ಬರೇ ಪೆದ್ದು ಬೊಮ್ಮನ್ ಅಲ್ಲ ಎನ್ನುವುದನ್ನು ಸಹಪಾಠಿಗಳಿಗೆ ಸಾಬೀತು ಮಾಡಲು ಮಾಂಸಾಹಾರವನ್ನು ಸೇವಿಸಲೇಬೇಕಿತ್ತು. ಆ ಮೂಲಕ ತಾನೂ ಅವರೊಳಗೊಬ್ಬ ಎನ್ನುವುದನ್ನು ಪ್ರಕಟಪಡಿಸಬೇಕಾಗಿತ್ತು. ಜೊತೆ ಜೊತೆಗೆ ನಾನೂ ಯೋಧ ಎನ್ನುವುದನ್ನು ತನಗೆ ತಾನೇ ಸ್ಪಷ್ಟ ಪಡಿಸಿಕೊಳ್ಳಬೇಕಾಗಿತ್ತು. ಮೊಟ್ಟೆಯ ದುರ್ವಾಸನೆಯನ್ನು ಕ್ರಮೇಣ ಸಹಿಸಲು ಆರಂಭಿಸಿದ. ಅಲ್ಲಿಂದ ನಿಧಾನಕ್ಕೆ ಕೋಳಿ, ಕುರಿ ಮಾಂಸದ ರುಚಿ ನೋಡಲು ಆರಂಭಿಸಿದ. ಮಾಂಸಾಹಾರವನ್ನು ರೂಢಿಸಿಕೊಂಡ ಬಳಿಕವೂ ಅವನು ಅದಕ್ಕೆ ಸಂಪೂರ್ಣವಾಗಿ ಒಗ್ಗಿರಲಿಲ್ಲ. ಮುಖ್ಯವಾಗಿ ಅದು ಇಷ್ಟವೆಂದು ಅವನು ತಿನ್ನುತ್ತಿರಲಿಲ್ಲ.

ಮಾಂಸಾಹಾರವೂ ಯೋಧನ ತರಬೇತಿಯ ಒಂದು ಭಾಗ ಎಂದು ಅದನ್ನು ತಿನ್ನುತ್ತಿದ್ದ. ಆದರೆ ತಾಯಿಯ ನೆನಪಾಗಿ ಒಳಗೊಳಗೆ ಕೊರಗುತ್ತಿದ್ದ. ಖಂಡಿತವಾಗಿಯೂ ಅಮ್ಮ ಇದನ್ನು ಸಹಿಸಲಾರರು. ಮನೆಗೆ ಹೋಗುವುದೂ ಅವನ ಪಾಲಿಗೆ ಭಯದ ಸಂಗತಿಯಾಯಿತು. ಮನೆಗೆ ಹೋದ ಮೇಲೆ ತಾನು ದೇವರ ಕೋಣೆಯನ್ನು ಪ್ರವೇಶಿಸುವುದು ಹೇಗೆ? ಯಾವ ಪಂಚಗವ್ಯದಿಂದಲೂ ಶುದ್ಧೀಕರಿಸಲಾರದಷ್ಟು ನಾನು ಕೆಟ್ಟು ಹೋಗಿದ್ದೇನೆ. ತಾನು ಉಂಡ ಪಾತ್ರೆಯಲ್ಲಿ ಅಮ್ಮನೂ ಉಂಡು ಅವಳನ್ನೂ ಮೈಲಿಗೆ ಮಾಡಲಿದ್ದೇನೆ ಎನ್ನುವುದು ನೆನೆದು ಅವನಿಗೆ ಸಂಕಟವಾಗುತ್ತಿತ್ತು.

ಮಧ್ಯ ರಾತ್ರಿ ಧಕ್ಕನೆ ಎದ್ದು ಅಕಾರಣವಾಗಿ ಒಬ್ಬನೇ ಅಳುತ್ತಿದ್ದ. ಆಗ ಅವನಿಗೆ ಜ್ಞಾಪಕಕ್ಕೆ ಬರುತ್ತಿದ್ದುದು ಜಾನಕಿಯ ಮುಖ. ಆ ಮುಖ ಅವನಿಗೆ ಅದಾವುದೋ ಸಮಾಧಾನವನ್ನು ಹೇಳುತ್ತಿತ್ತು. ದೇಶವೆಂದರೆ ಏನು, ಯುದ್ಧವೆಂದರೆ ಏನು, ಎನ್ನುವುದು ಜಾನಕಿಗೆ, ಗುರೂಜಿಗೆ ಗೊತ್ತಿದೆ. ತಾನು ಯೋಧನಾಗಬೇಕಾದರೆ ಮಾಂಸ ತಿನ್ನಲೇ ಬೇಕು. ಶತ್ರುಗಳನ್ನು ಎದುರಿಸಿ ಗೆಲ್ಲುವ ಯೋಧನಾಗಬೇಕಾದರೆ ನಾನು ಶಕ್ತಿವಂತನಾಗಬೇಕು. ಮಾಂಸ ತಿನ್ನುವುದೂ ಒಂದು ಯುದ್ಧ ತರಬೇತಿಯೇ ಆಗಿದೆ ಎಂದು ಪಪ್ಪು ಗಾಢವಾಗಿ ನಂಬತೊಡಗಿದ. ನಿಧಾನಕ್ಕೆ ಮಾಂಸದ ರುಚಿಗೆ ಒಗ್ಗಿಕೊಳ್ಳತೊಡಗಿದ.

ಶಿಬಿರದ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ದವರ ಮೊದಲ ಸಾಲಿನಲ್ಲಿ ಅಪ್ಪಯ್ಯನೂ ಇದ್ದ. ಅಪ್ಪಯ್ಯ ಊರಿಗೆ ಹೊರಟಾಗ ಪಪ್ಪುವಿಗೆ ತಾನು ಒಬ್ಬಂಟಿಯಾದೆ ಅನ್ನಿಸಿತ್ತು. ನಿಧಾನಕ್ಕೆ ಒಬ್ಬೊಬ್ಬರೇ ತಮ್ಮ ತರಬೇತಿಗಳನ್ನು ಮುಗಿಸಿ ರಜೆಯಲ್ಲಿ ತೆರಳುತ್ತಿದ್ದರು. ತಾನು ಈ ತರಬೇತಿಯನ್ನು ಮುಗಿಸುವುದೇ ಇಲ್ಲವೇ ಎನ್ನುವ ಹಂತದಲ್ಲಿ ಕೊನೆಯ ಹತ್ತು ದಿನವಿರುವಾಗ ಅವನು ನಿಟ್ಟುಸಿರು ಬಿಡುವಂತಹ ಫಲಿತಾಂಶ ಮೇಲಧಿಕಾರಿಗಳಿಂದ ಸಿಕ್ಕಿತು. ಊರಿನ ದಿನಗಳು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮುಗಿದು ಹೋಗಿತ್ತು. ಜಾನಕಿಯ ಬಗ್ಗೆ ಇನ್ನಷ್ಟು ವಿವರಗಳನ್ನು ಸಂಗ್ರಹಿಸಿಕೊಂಡಿದ್ದ. ಆಕೆ ಮಂಗಳೂರಿನಲ್ಲಿ ಬಿಎಸ್‌ಡಬ್ಲೂ ಮಾಡುತ್ತಿದ್ದಾಳೆ ಎಂದು ಅಪ್ಪ ಒಂದು ಮಾತಿನಲ್ಲಿ ವಿಷಯವನ್ನು ಮುಗಿಸಿದ್ದರು. ಇದೇ ಸಂದರ್ಭದಲ್ಲಿ ಬಜತ್ತೂರಿನ ಬಸ್‌ಸ್ಟಾಂಡ್‌ನಲ್ಲಿ ಬಸ್ಸು ಕಾಯುತ್ತಿದ್ದಾಗ ಯಾರೋ ಇನ್ನೇನೇನನ್ನೋ ಅವನ ಕಿವಿಗೆ ಇಳಿಸಿದ್ದರು. ಆದರೆ ಅದೊಂದೂ ಅವನಿಗೆ ಸರಿಯಾಗಿ ಅರ್ಥವಾಗಿರಲಿಲ್ಲ.

 ಅದ್ಯಾವುದೋ ಮುಸ್ಲಿಮ್ ತರುಣನೊಬ್ಬ ಆಕೆಗೆ ಪ್ರೀತಿಸಬೇಕು ಎಂದು ಚಿತ್ರಹಿಂಸೆ ನೀಡುತ್ತಿದ್ದನೆಂದೂ, ಅದು ಪುತ್ತೂರಿನಲ್ಲಿ ದೊಡ್ಡ ಗಲಾಟೆಯಾಗಿ ಪರಿವರ್ತನೆ ಯಾಯಿತೆಂದೂ, ಅದರಿಂದ ಆಕೆ ಕಾಲೇಜು ತೊರೆದು ಮನೆಗೆ ಬರಬೇಕಾಯಿತೆಂದೂ...ಹೀಗೆ. ಆದರೆ ಅದ್ಯಾ ವುದೂ ಪಪ್ಪುವಿಗೆ ಬೇಕಾಗಿರಲಿಲ್ಲ. ಮೊತ್ತ ಮೊದಲು ತಾನು ಯೋಧನ ಸಮವಸ್ತ್ರ ಧರಿಸಿ ಪರಿಪೂರ್ಣನಾಗಿ ಜಾನಕಿಯ ಮುಂದೆ ನಿಂತುಕೊಳ್ಳಬೇಕು. ಆಕೆ ಅದನ್ನು ಕಣ್ತುಂಬ ನೋಡುತ್ತಲೇ ಅವಳ ಎಲ್ಲ ಸಮಸ್ಯೆಗಳೂ ಮುಗಿಯುತ್ತವೆ. ಆದುದರಿಂದಲೇ ಮನೆಗೆ ಬಂದ ಆತ ಮರಳಿ ಶಿಬಿರಕ್ಕೆ ಹೋಗಲು ತಹತಹಿಸುತ್ತಿದ್ದ. ತನ್ನ ಮತ್ತು ಜಾನಕಿಯ ಸಮಾಗಮದ ದಿನಗಳು ಹತ್ತಿರವಾಗುತ್ತಿರುವ ಸೂಚನೆಗಳು ಅವನಿಗೆ ಸಿಕ್ಕುತ್ತಿದ್ದವು. ಆದರೆ ಇದೀಗ ಆತನ ಭಾವಪ್ರಪಂಚದೊಳಗೆ ಅಪ್ಪಳಿಸುವಂತೆ ಅಪ್ಪಯ್ಯ ಸುದ್ದಿಯೊಂದನ್ನು ಅರುಹಿದ್ದ. ಅದು ವೆಂಕಟನ ಸಾವಿನ ಕುರಿತಂತೆ. ತಾನು ಮತ್ತು ಜಾನಕಿ ಯಾವ ವೆಂಕಟನ ಮೃತದೇಹ ಪೆಟ್ಟಿಗೆಯ ಮುಂದೆ ಪ್ರತಿಜ್ಞೆಗಳನ್ನು ಮಾಡಿದ್ದೆವೋ ಆ ಪ್ರತಿಜ್ಞೆಯ ಕಸುವನ್ನೇ ಅಪ್ಪಯ್ಯ ಹೇಳಿದ ಮಾತು ಕಸಿದುಕೊಂಡಿತ್ತು. ಪಪ್ಪುವಿನ ಮುಖ ನೋಡಿದ ಬಳಿಕ ತಾನು ಆ ಸತ್ಯವನ್ನು ಹೇಳಬಾರದಿತ್ತು ಅನ್ನಿಸಿತ್ತು ಅಪ್ಪಯ್ಯನಿಗೆ.

***

ತರಬೇತಿ ಮುಗಿದ ಬಳಿಕ ಪ್ರತಾಪ್ ಮರಾಠ ರೆಜಿಮೆಂಟಿಗೆ ಆಯ್ಕೆಯಾಗಿದ್ದ. ಅವನ ಅದೃಷ್ಟವೆಂಬಂತೆ ಅಪ್ಪಯ್ಯನೂ ಅದೇ ರೆಜಿಮೆಂಟಿಗೆ ಸೇರ್ಪಡೆಗೊಂಡಿದ್ದ. ಆದರೆ ಆತನ ದುರದೃಷ್ಟವೆಂದರೆ, ಮಿಲಿಟರಿ ವ್ಯಾನು ಪಾಕಿಸ್ತಾನದ ಗಡಿಯ ಕಡೆಗೆ ಸಾಗದೆ, ಅರುಣಾಚಲದ ಕಡೆಗೆ ಸಾಗಿತ್ತು. ಪಪ್ಪುವಿಗೆ ನೇರವಾಗಿ ಪಾಕಿಸ್ತಾನದ ಕಡೆಗೇ ಸಾಗಬೇಕಾಗಿತ್ತು. ಯಾಕೆಂದರೆ ಗುರುಗಳಿಗೆ ನೂರು ಪಾಕಿಸ್ತಾನಿ ತಲೆಗಳನ್ನು ಗುರುದಕ್ಷಿಣೆಯಾಗಿ ಕೊಟ್ಟು, ಜಾನಕಿಯನ್ನು ತನ್ನವಳನ್ನಾಗಿಸಿಕೊಳ್ಳುವುದೇ ಅವನ ಗುರಿಯಾಗಿತ್ತು. ಆದರೆ ದಾರಿ ತಿರುವು ಪಡೆದುಕೊಂಡಿತು.

‘‘ನನಗೆ ಪಾಕಿಸ್ತಾನದ ಗಡಿಯಲ್ಲಿ ಕೆಲಸ ಮಾಡ ಬೇಕು...’’ ಅಪ್ಪಯನ ಕಿವಿಯಲ್ಲಿ ಹೇಳಿದ ಪಪ್ಪು.

ಅಪ್ಪಯ ನಕ್ಕು ಸುಮ್ಮಗಾದ.

‘‘ಬೇಗನೇ ಯುದ್ಧ ಶುರುವಾಗಬಹುದೇ?’’ ಪಪ್ಪು ಮತ್ತೆ ಕೇಳಿದ್ದ.

‘‘ಯಾಕೆ ಅಷ್ಟು ಅವಸರ?’’

‘‘ಜಾನಕಿಯಲ್ಲಿ ನಾನು ನನ್ನ ಪ್ರೇಮವನ್ನು ಹೇಳಬೇಕು’’

‘‘ಅದಕ್ಕೂ ಇದಕ್ಕೂ ಏನು ಸಂಬಂಧ?’’

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News