ಸಾರ್ಕ್ ರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಜಿಸ್ಯಾಟ್-9 ಉಪಗ್ರಹ ಮೇ 5ರಂದು ಉಡಾವಣೆ

Update: 2017-04-30 15:49 GMT

   ಹೊಸದಿಲ್ಲಿ,ಎ.30: ಸಾರ್ಕ್ ರಾಷ್ಟ್ರಗಳಿಗೆ ಉಪಗ್ರಹವೊಂದನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಎರಡೂವರೆ ವರ್ಷಗಳ ಹಿಂದಿನ ಭರವಸೆ ಈ ವಾರ ಈಡೇರ ಲಿದೆ. ಭಾರತ ಸೇರಿದಂತೆ ಏಳು ಸಾರ್ಕ್ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸಲಿರುವ 235 ಕೋ.ರೂ.ವೆಚ್ಚದ ‘ದಕ್ಷಿಣ ಏಷ್ಯಾ ಉಪಗ್ರಹ ’ಮೇ 5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಪಾಕಿಸ್ತಾನವು ಈ ಯೋಜನೆಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದು, ಉಪಗ್ರಹವು ನೇಪಾಳ, ಭೂತಾನ್, ಮಾಲ್ದೀವ್ಸ್, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳ ಅಗತ್ಯಗಳನ್ನು ಪೂರೈಸಲಿದೆ. ಅಫಘಾನಿಸ್ತಾನವೂ ಈ ಸಾಲಿನಲ್ಲಿದ್ದು, ಅದಿನ್ನೂ ಒಪ್ಪಂದಕ್ಕೆ ಸಹಿ ಹಾಕಬೇಕಿದೆ.

 ಜಿಸ್ಯಾಟ್-9 ಎಂದು ಇಸ್ರೋದಿಂದ ನಾಮಕರಣಗೊಂಡಿರುವ 2,230 ಕೆ.ಜಿ.ತೂಕದ ಈ ಸಂವಹನ ಉಪಗ್ರಹವು ಮೂರು ವರ್ಷಗಳಲ್ಲಿ ಸಿದ್ಧಗೊಂಡಿದೆ. ಭಾರತದ ಉಡುಗೊರೆಯಾಗಿರುವ ಈ ಉಪಗ್ರಹ ಯೋಜನೆಗೆ ಸಾರ್ಕ್ ರಾಷ್ಟ್ರಗಳು ಸ್ವತಃ ಮುಂದಾಗಿದ್ದರೆ ಉಪಗ್ರಹದ 12 ವರ್ಷಗಳ ಜೀವಿತಾವಧಿಯಲ್ಲಿ ಸುಮಾರು 1,500 ಮಿ.ಡಾಲರ್‌ಗಳನ್ನು ವ್ಯಯಿಸಬೇಕಾಗುತ್ತಿತ್ತು.

ಈ ಉಪಗ್ರಹವು ನೆರೆರಾಷ್ಟ್ರಗಳಿಗೆ ವಿಶಾಲ ವ್ಯಾಪ್ತಿಯ ಸೇವೆಗಳನ್ನು ಒದಗಿಸಲಿದೆ ಎಂದು ಸರಕಾರವು ತಿಳಿಸಿದೆ. ದೂರಸಂಪರ್ಕ, ಟಿವಿ, ಡಿಟಿಎಚ್, ಟೆಲಿ ಶಿಕ್ಷಣ ಮತ್ತು ಟೆಲಿ ವೈದ್ಯಕೀಯ ಈ ಸೇವೆಗಳಲ್ಲಿ ಸೇರಿವೆ. ಅದು ಈ ರಾಷ್ಟ್ರಗಳ ನಡುವೆ ಹಾಟ್‌ಲೈನ್ ಗಳನ್ನೂ ಒದಗಿಸಲಿದ್ದು, ಭೂಕಂಪ, ಚಂಡಮಾರುತ, ನೆರೆ ಮತ್ತು ಸುನಾಮಿಯಂತಹ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ನೆರವಾಗಲಿವೆ.

ದಕ್ಷಿಣ ಏಷ್ಯಾ ಉಪಗ್ರಹವು 12 ಟ್ರಾನ್ಸ್‌ಪಾಂಡರ್‌ಗಳನ್ನು ಹೊಂದಿದ್ದು, ಪ್ರತಿ ರಾಷ್ಟ್ರಕ್ಕೂ ಕನಿಷ್ಠ ಒಂದು ಟ್ರಾನ್ಸ್‌ಪಾಂಡರ್ ಲಭ್ಯವಾಗಲಿದೆ.
  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವು ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಬಳಿಕ ಉಪಗ್ರಹವೊಂದರ ಯಶಸ್ವಿ ಉಡಾವಣೆಯ ನಂತರ ಇಸ್ರೋ ವಿಜ್ಞಾನಿಗಳನ್ನುದ್ದೇ ಶಿಸಿ ಮಾತನಾಡಿದ ಸಂದರ್ಭ ಪ್ರಧಾನಿ ಮೋದಿ ಅವರು, ಸಾರ್ಕ್ ರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಈ ಉಪಗ್ರಹವನ್ನು ಪ್ರಕಟಿಸಿದ್ದರು.

 2015,ಜೂ.22ರಂದು ನಡೆದಿದ್ದ ಯೋಜನಾ ಸಭೆಯಲ್ಲಿ ಪಾಕಿಸ್ತಾನವು ತಾನು ತನ್ನದೇ ಆದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಂದಿರುವುದರಿಂದ ಉದ್ದೇಶಿತ ಉಪಗ್ರಹ ಯೋಜನೆಯಿಂದ ಹೊರಗುಳಿಯಲು ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News