​ಸಾಂಸ್ಕೃತಿಕವಾಗಿ ಬೆಳೆದರೆ ಮಾತ್ರ ನಿಜವಾದ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-05-03 16:23 GMT

ಬೆಂಗಳೂರು, ಮೇ 3: ಆರ್ಥಿಕವಾಗಿ ಬೆಳೆದರೆ ಮಾತ್ರ ರಾಜ್ಯ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಕಲೆ, ಸಂಸ್ಕೃತಿ, ಸಾಂಸ್ಕೃತಿಕವಾಗಿ ಬೆಳೆದಾಗ ಮಾತ್ರ ಅಭಿವೃದ್ಧಿಗೆ ಒಂದು ಅರ್ಥ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ 2016ನೆ ಸಾಲಿನ ‘ಬಸವ’ ಮತ್ತು ‘ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹಿಂದಿನ ಕಾಲದಲ್ಲಿನ ರಾಜ-ಮಹಾರಾಜರು ಸಾಹಿತ್ಯ ಮತ್ತು ಸಾಂಸ್ಕೃತಿಕ, ಸಂಗೀತ, ನೃತ್ಯ ಕಲೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದರು. ಅಂದಿನಿಂದಲೂ ಉತ್ತಮ ಕಲಾಕಾರರು, ಸಾಹಿತಿಗಳು, ಸಂಗೀತಗಾರರನ್ನು ಗುರುತಿಸಿ ಗೌರವವನ್ನು ಸಲ್ಲಿಸಲಾಗುತ್ತಿತ್ತು. ನಾವಿಂದು ಅದನ್ನು ಮುಂದುವರಿಸಿದ್ದೇವೆ ಎಂದರು.

ನಮ್ಮ ನಾಡಿನಲ್ಲಿನ ಜಾನಪದ ಕಲೆ ಮೊದಲಿನಿಂದಲೂ ಇದೆ. ಇಂದಿನ ದಿನಗಳಲ್ಲಿ ದಾಖಲೆಯಾದ ಎಷ್ಟೋ ವಿಷಯಗಳು ಉಳಿದಿಲ್ಲ. ಆದರೆ, ದಾಖಲಾಗದ ಜಾನಪದ ಸಾಹಿತ್ಯ ಇಂದಿಗೂ ಉಳಿದುಕೊಂಡಿದೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ ಅಗತ್ಯವಿದೆ. ಕವಿಗಳು, ನಾಟಕಕಾರರು, ಚಿತ್ರಕಾರರು, ನೃತ್ಯಪಟುಗಳು, ಗಾಯಕರು, ಶಿಲ್ಪಿಗಳು, ಜಾನಪದ ಕಲಾವಿದರು ನಮ್ಮ ಸಮಾಜವನ್ನು ಆರೋಗ್ಯದಿಂದ ಕಾಪಾಡಿಕೊಂಡು ಬಂದಿದ್ದಾರೆ. ಇವೆಲ್ಲವೂ ಇನ್ನುಮುಂದೆಯೂ ಸಮೃದ್ಧವಾಗಿ ಉಳಿಯಬೇಕು. ಮುಂದಿನ ಪೀಳಿಗೆಗೆ ನಾವೆಲ್ಲ ಏನನ್ನು ಬಿಟ್ಟುಹೋಗುತ್ತೇವೆ ಎನ್ನುವುದು ಮುಖ್ಯ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ನಾಲ್ಕು ವರ್ಷಗಳಲ್ಲಿ ಹೊಸದಾಗಿ ಅಂದಾಜು 7 ಸಾವಿರ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ಈ ವರ್ಷದ ಜುಲೈನಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲಾಗುವುದು ಎಂದು ತಿಳಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕೆಟ್ಟು ನಿಂತಿರುವ ಬೆಳಕು ಮತ್ತು ಧ್ವನಿ ವ್ಯವಸ್ಥೆಯನ್ನು ಸದ್ಯದಲ್ಲೇ ಸುಧಾರಿಸಲಾಗುವುದು. ಈ ಬಗ್ಗೆ ಬಂದಿರುವ ದೂರುಗಳನ್ನು ಆಧರಿಸಿ, ಲೋಕೋಪಯೋಗಿ ಇಲಾಖೆಯ ಜತೆ ಮಾತುಕತೆ ನಡೆಸಲಾಗಿದೆ. ಮುಂದಿನ 4-5 ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮೋಹನ್ ಚಕ್ರವರ್ತಿ, ನಿರ್ದೇಶಕ ಕೆ.ಎ. ದಯಾನಂದ ಉಪಸ್ಥಿತರಿದ್ದರು.

 ನಮ್ಮಲ್ಲಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಮಾತ್ರ 10 ಲಕ್ಷ ರೂ. ಕೊಡಲಾಗುತ್ತಿದ್ದು, ಉಳಿದ ಪ್ರಶಸ್ತಿಗಳಿಗೆ ತಲಾ 3 ಲಕ್ಷ ರೂ. ನಗದು ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಎಲ್ಲ ರಾಜ್ಯ ಪ್ರಶಸ್ತಿಗಳಿಗೆ 5 ಲಕ್ಷ ಹಾಗೂ ರಾಷ್ಟ್ರ ಪ್ರಶಸ್ತಿಗಳಿಗೆ 10 ಲಕ್ಷ ನೀಡಲಾಗುವುದು.
-ಸಿದ್ದರಾಮಯ್ಯ ಮುಖ್ಯಮಂತ್ರಿ

ನಾನು ಮಹಾರಾಷ್ಟ್ರದಲ್ಲಿ ಅನಾಥ ಮಕ್ಕಳ ಪಾಲಿಗೆ ತಾಯಿಯಾಗಿದ್ದೆ. ಇಂದಿಲ್ಲಿ ಕರೆಸಿ ರಾಷ್ಟ್ರ ಮಟ್ಟದ ‘ಬಸವ’ ಪುರಸ್ಕಾರವನ್ನು ಕೊಡುವುದರ ಮೂಲಕ ಕರ್ನಾಟಕಕ್ಕೂ ತಾಯಿ ಮಾಡಿರುವುದಕ್ಕೆ ನಾನು ಆಭಾರಿಯಾಗಿರುತ್ತೇನೆ.
-ಸಿಂಧೂತಾಯಿ ಸಪ್ಕಾಳ್, ‘ಬಸವಶ್ರೀ’ ಪುರಸ್ಕೃತೆ

ಪ್ರಶಸ್ತಿ ಪುರಸ್ಕೃತರು :

  • ಸಿಂಧೂತಾಯಿ ಸಪ್ಕಾಳ್, ಪುಣೆ (ಬಸವ ರಾಷ್ಟ್ರೀಯ ಪುರಸ್ಕಾರ, 10 ಲಕ್ಷ ರೂ)
  • ಟಿ.ಎಚ್. ವಿನಾಯಕರಾಮ್, ಚೆನ್ನೈ (ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, 10 ಲಕ್ಷ ರೂ)
  • ಶಾಂತಿ ನಾಯಕ (ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, 3 ಲಕ್ಷ ರೂ.)
  • ಹನಸ್ ನಯೀಂ ಸುರಕೋಡ (ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, 3 ಲಕ್ಷ ರೂ)
  • ಚೆನ್ನಣ್ಣ ವಾಲೀಕಾರ (ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, 3 ಲಕ್ಷ ರೂ.)
  • ಚಿಂದೋಡಿ ಶ್ರೀಕಂಠೇಶ್ (ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, 3 ಲಕ್ಷ ರೂ.)
  • ಶ್ರೀನಿವಾಸ ಜಿ. ಕಪ್ಪಣ್ಣ (ಬಿ.ವಿ. ಕಾರಂತ ಪ್ರಶಸ್ತಿ, 3 ಲಕ್ಷ ರೂ.)
  • ಪಂ. ಗಣಪತಿ ಭಟ್ ಹಾಸಣಗಿ (ನಿಜಗುಣ-ಪುರಂದರ ಪ್ರಶಸ್ತಿ, 3 ಲಕ್ಷ ರೂ)
  • ಎನ್.ಆರ್. ಜ್ಞಾನಮೂರ್ತಿ (ಕುಮಾರವ್ಯಾಸ ಪ್ರಶಸ್ತಿ, 3 ಲಕ್ಷ ರೂ.)
  • ವೈ.ಕೆ. ಮುದ್ದುಕೃಷ್ಣ (ಸಂತ ಶಿಶುನಾಳ ಷರೀ ಪ್ರಶಸ್ತಿ, 3 ಲಕ್ಷ ರೂ.)
  • ಉಷಾ ದಾತಾರ್ (ಶಾಂತಲಾ ನಾಟ್ಯ ಪ್ರಶಸ್ತಿ, 3 ಲಕ್ಷ ರೂ.)
  • ವೈ.ಯಂಕಪ್ಪ (ಜಕಣಾಚಾರಿ ಪ್ರಶಸ್ತಿ, 3 ಲಕ್ಷ ರೂ.)
  • ಮಹಾವೀರ ರಾಯಪ್ಪ ಬಾಳಿಕಾಯಿ (ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, 3 ಲಕ್ಷ ರೂ.)
  • ಲಲಿತಾ ರಾಚಪ್ಪ ಪಾತ್ರೋಟ (ಜಾನಪದ ಶ್ರೀ ಪ್ರಶಸ್ತಿ, 3 ಲಕ್ಷ ರೂ.)

‘ಟಿ ಚೌಡಯ್ಯ ಪ್ರಶಸ್ತಿ’ಗೆ ಪಾತ್ರರಾಗಿರುವ ವಿದ್ವಾನ್ ಟಿ.ಎಚ್. ವಿನಾಯಕರಾಮ್ ಮತ್ತು ‘ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಪಾತ್ರರಾಗಿರುವ ಹಸನ್ ನಯೀಂ ಸುರಕೋಡ್ ಸಮಾರಂಭದಲ್ಲಿ ಉಪಸ್ಥಿತರಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News