ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ಜಮೀನು ಮಂಜೂರು: ಟಿ.ಬಿ.ಜಯಚಂದ್ರ

Update: 2017-05-05 16:12 GMT

ಬೆಂಗಳೂರು, ಮೇ 5: ಡಾ.ಬಿ.ಆರ್.ಶೆಟ್ಟಿ ಅಧ್ಯಕ್ಷತೆಯ ಬಿಆರ್‌ಎಸ್ ಹೆಲ್ತ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್‌ಗೆ ಉಡುಪಿಯಲ್ಲಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಸೌಲಭ್ಯಗಳನ್ನು ಒಳಗೊಂಡ ಕೇಂದ್ರವನ್ನು ಸ್ಥಾಪಿಸಲು ಹೆಚ್ಚುವರಿ 0.12 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ಪ್ರಕಟಿಸಿದರು.

ಈ ಹಿಂದೆ ಉಡುಪಿಯ ಕೆ.ಎಂ.ರಸ್ತೆಯಲ್ಲಿ ಮಂಜೂರು ಮಾಡಿದ್ದ 3.88 ಎಕರೆ ಜಮೀನಿನ ಜೊತೆಗೆ ಈ ಜಮೀನಿನ ಮಧ್ಯೆ ಬರುವ ಸರ್ವೆ ನಂ.125/3ರಲ್ಲಿರುವ 0.12 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಬಿ.ಆರ್.ಶೆಟ್ಟಿ ಸ್ಥಾಪಿಸುತ್ತಿರುವ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರವು ಕಾಲಮಿತಿಯೊಳಗೆ ಕಾರ್ಯಾರಂಭಗೊಳ್ಳುವ ಬಗ್ಗೆ ಹಲವರಿಗೆ ಅನುಮಾನಗಳಿದ್ದವು. ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಆ.14ರಂದು ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಸಚಿವ ಸಂಪುಟದ ಉಪಸಮಿತಿಯ ಶಿಫಾರಸ್ಸಿನಂತೆ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡಕ್ಕೆ ಸಿಆರ್‌ಝೆಡ್‌ಯೇತರ ಪ್ರದೇಶದಲ್ಲಿ ವಿಶೇಷ ಮರಳು ನೀತಿ ಜಾರಿಗೆ ತರುವ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆ ಅಪೂರ್ಣಗೊಂಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸೇವಾ ವಿಲೀನಕ್ಕೆ ಸಮ್ಮತಿ: ಜಿಲ್ಲಾ ಪರಿಷತ್, ತಾಲ್ಲೂಕು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಘದ ನೌಕರರನ್ನು ಕರ್ನಾಟಕ ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಸೇವೆಗಳ ವ್ಯಾಪ್ತಿಯಲ್ಲಿ ವಿಲೀನಗೊಳಿಸುವ ವಿಶೇಷ ನಿಯಮಗಳನ್ನು ಅಂತಿಮಗೊಳಿಸಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ ಎಂದು ಅವರು ಹೇಳಿದರು.

ನೇರ ನೇಮಕಾತಿಗೆ ಒಪ್ಪಿಗೆ: ರಾಜ್ಯ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್‌ಗಳ ವೃಂದ ಮತ್ತು ನೇಮಕಾತಿಗೆ ವಿಶೇಷ ನಿಯಮಾವಳಿಗಳನ್ನು ರೂಪಿಸಿದ್ದು, ಅದರನ್ವಯ ನೇರ ನೇಮಕಾತಿ ಮಾಡಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪರಿಷ್ಕೃತ ಅಂದಾಜು ಅನುಮೋದನೆ: ಮೈಸೂರು ಜಿಲ್ಲೆಯ ಹೆಗ್ಗಡ ದೇವನ ಕೋಟೆ ತಾಲ್ಲೂಕಿನ ಸರಗೂರು-ಹೆಡೆಯಾಲ ರಸ್ತೆಯನ್ನು ಬಡಗಲಪುರ ಮಾರ್ಗವಾಗಿ 12.00 ಕಿ.ಮೀ-15.40 ಕಿ.ಮೀ ಮತ್ತು 16.465 ಕಿ.ಮೀ-31.40 ಕಿ.ಮೀ ವರೆಗೆ 29.84 ಕೋಟಿ ರೂ.ಪರಿಷ್ಕೃತ ಅಂದಾಜು ಮೊತ್ತದಲ್ಲಿ ಪೂರ್ಣಗೊಳಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 300 ಕೋಟಿ ರೂ.ಸಾಲ ಪಡೆಯಲು ರಾಜ್ಯ ಸಚಿವ ಸಂಪುಟ ಖಾತರಿ ನೀಡಲು ಸಮ್ಮತಿ ನೀಡಿದೆ ಎಂದು ಜಯಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News