​ಕೊಳಚೆ ಪ್ರದೇಶದ ಜನರಿಗೆ ಉಚಿತ ನೀರು ಪೂರೈಕೆ: ಟಿ.ಬಿ.ಜಯಚಂದ್ರ

Update: 2017-05-05 16:15 GMT

ಬೆಂಗಳೂರು, ಮೇ 5: ಬೆಂಗಳೂರು ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ನೀರು ಶುಲ್ಕದ ಬಾಕಿ ಹಾಗೂ ಬಡ್ಡಿ ಮೊತ್ತವನ್ನು ಮನ್ನಾ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಆ ಪ್ರದೇಶದಲ್ಲಿರುವ 20 x 30 ಅಡಿಗಳಿಗಿಂತಲೂ ಕಡಿಮೆ ಅಳತೆಯ ವಸತಿ ಗೃಹಗಳಿಗೆ ಉಚಿತವಾಗಿ ನೀರು ಒದಗಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಪ್ರಸಕ್ತ ಸಾಲಿನ ಮಾರ್ಚ್ ಮಾಸಾಂತ್ಯಕ್ಕೆ ನೀರು ಶುಲ್ಕದ ಬಾಕಿ 23.11 ಕೋಟಿ ರೂ.ಗಳನ್ನು ಬೆಂಗಳೂರು ಜಲ ಮಂಡಳಿಗೆ ಪಾವತಿಸಲು ಹಾಗೂ ಅದರ ಮೇಲಿನ 16.94 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಅವರು ಹೇಳಿದರು.

ಪ್ರಸ್ತುತ ನಗರದ ವ್ಯಾಪ್ತಿಯಲ್ಲಿರುವ 70,947 ಸಂಪರ್ಕಗಳಿಗೆ ಮಾಸಿಕ ಹತ್ತು ಸಾವಿರ ಲೀಟರ್‌ನಂತೆ ಪ್ರತಿ ತಿಂಗಳು ಪ್ರತಿ ಮನೆಗೆ 148 ರೂ. ವೆಚ್ಚವಾಗುತ್ತದೆ. ಈ ಬಾಬ್ತಿಗೆ ಪ್ರತಿ ತಿಂಗಳು ತಗಲುವ ವೆಚ್ಚ 1.05 ಕೋಟಿ ರೂ.ಆಗಿದೆ. ಇದರ ವಾರ್ಷಿಕ ವೆಚ್ಚ 12.60 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಿ ಕೊಳಗೇರಿ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ತರ ಯೋಜನೆ ಇದಾಗಿದೆ. ಇದು ಬಜೆಟ್‌ನಲ್ಲಿ ನೀಡಿದ ಭರವಸೆಯಾಗಿತ್ತು ಎಂದು ಜಯಚಂದ್ರ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News