ಬೆಂಗಳೂರಿನಾದ್ಯಂತ ಐಎಚ್‌ಡಿಎಸ್‌ಎಸ್ ತಂತ್ರಜ್ಞಾನ ಅಳವಡಿಕೆ: ಕಾಯಿಲೆಗಳ ಪತ್ತೆಗೆ ಬಿಬಿಎಂಪಿ ಹೊಸ ಪ್ರಯೋಗ

Update: 2017-05-08 18:03 GMT

ಬೆಂಗಳೂರು, ಮೇ 8: ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್, ಮಲೇರಿಯಾ, ಚಿಕುನ್‌ ಗುನ್ಯ, ನಿರ್ಜಲೀಕರಣ, ಅತಿಸಾರ, ಜಾಂಡೀಸ್ ಸೇರಿದಂತೆ ಹಲವು ಮಾರಕ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇಂಟಿಗ್ರೇಟೆಡ್ ಹೆಲ್ತ್ ಡಿಸೀಸಸ್ ಸರ್ವೆಲೈನ್ಸ್ ಸಿಸ್ಟಮ್‌ವೊಂದನ್ನು ಅಭಿವೃದ್ಧಿ ಪಡಿಸಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.

ನಗರದಲ್ಲಿ 5ರಿಂದ 10 ವರ್ಷದೊಳಗಿನ ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳ ಪ್ರಮಾಣ ಅತಿಯಾಗುತ್ತಿದೆ. 100 ರೋಗಿಗಳಲ್ಲಿ ಶೇ.30 ಜನರಲ್ಲಿ ಜ್ವರ, ವಾಂತಿ-ಭೇದಿ ಸೇರಿದಂತೆ ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವಂತಹ ಕಾಯಿಲೆಗಳು, ಸೋಂಕು ಪ್ರಕರಣಗಳು ಕಂಡು ಬಂದಿವೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಯಾವ ಭಾಗದಲ್ಲಿ ಯಾವ ಕಾಯಿಲೆ ಜಾಸ್ತಿಯಾಗಿದೆ, ಎಷ್ಟು ಜನರಿಗೆ, ಯಾವ-ಯಾವ ರೀತಿಯ ಕಾಯಿಲೆಗಳು ಹರಡುತ್ತಿವೆ, ವಿವಿಧ ಕಾಯಿಲೆಗಳಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖ ಆದವರೆಷ್ಟು ಹಾಗೂ ಎಷ್ಟು ಜನ ಸಾವನ್ನಪ್ಪಿದ್ದಾರೆಂಬ ಅಧಿಕೃತ ಮಾಹಿತಿ ತಿಳಿಯಲು ಇದೀಗ ಬಿಬಿಎಂಪಿ ಅಭಿವೃದ್ಧಿ ಪಡಿಸಿರುವ ಈ ತಂತ್ರಾಂಶ ಸಹಕಾರಿಯಾಗಲಿದೆ.

ಜನಸಂಖ್ಯೆ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಹೊಸ ರೀತಿಯ ಕಾಯಿಲೆಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದರಿಂದ ಮುಕ್ತಿ ಪಡೆಯಲು ಹಾಗೂ ಜನರಿಗಾಗುತ್ತಿರುವ ತೊಂದರೆ ನಿವಾರಿಸಲು ಈ ವ್ಯವಸ್ಥೆ ಅನುಸರಿಸಲಾಗುತ್ತಿದೆ. ಪ್ರತಿಬಾರಿ ಹಲವು ಕಾಯಿಲೆಗಳು ಹರಡಿಕೊಂಡು ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿತ್ತು. ಇದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.

ಈ ತಂತ್ರಾಂಶ ಆಧರಿಸಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಾಯಿಲೆ ಹರಡುತ್ತಿರುವ ಪ್ರದೇಶದಲ್ಲಿ ಜನ ಜಾಗೃತಿ, ವಿಶೇಷ ಕ್ಯಾಂಪ್‌ಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸೇವೆ ಜಾರಿಗೊಳ್ಳುವುದರ ಮೂಲಕ ರೋಗಿಗಳ ಸಮಗ್ರ ಮಾಹಿತಿಯ ವಿವರ ಸೇರಿದಂತೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆಯೇ? ಚಿಕಿತ್ಸೆಗೆ ರೋಗಿಯು ಸ್ಪಂದಿಸುತ್ತಿದ್ದಾರಾ ಅಥವಾ ಇಲ್ಲವಾ? ಎಷ್ಟು ಮಂದಿ ಗುಣಮುಖರಾಗಿದ್ದಾರೆ ಹಾಗೂ ಎಷ್ಟು ಜನ ಮರಣ ಹೊಂದಿದ್ದಾರೆ ಎಂಬ ಮಾಹಿತಿ ದಾಖಲಿಸಿ ಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ: ಬಿಬಿಎಂಪಿ ಅಭಿವೃದ್ಧಿಪಡಿಸಿರುವ ಐಎಚ್‌ಡಿಎಸ್‌ಎಸ್ ವ್ಯವಸ್ಥೆಯನ್ನು ಮೊದಲಿಗೆ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುತ್ತಿದ್ದ ರೋಗಿಗಳ ಸಂಖ್ಯೆ ಹಾಗೂ ರೋಗದ ಬಗ್ಗೆ ಸಮರ್ಪಕವಾಗಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲಾ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟಾರೆಯಾಗಿ 1,600ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗಿದೆ.

ಕೇಂದ್ರದಿಂದ ಮೆಚ್ಚುಗೆ
ಪಾಲಿಕೆಯ ಇಂಟಿಗ್ರೇಟೆಡ್ ಹೆಲ್ತ್ ಡಿಸಿಸಸ್ ಸರ್ವೆಲೆನ್ಸ್ ಸಿಸ್ಟಂಗೆ ಕೇಂದ್ರ ಸರಕಾರವೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಾಲಿಕೆಯ ಕಾರ್ಯವನ್ನು ಶ್ಲಾಘಿಸಿ ಪತ್ರ ಬರೆದಿದೆ. ಜತೆಗೆ ಈ ವ್ಯವಸ್ಥೆಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಅಳವಡಿಸುವ ಉದ್ದೇಶದಿಂದ ಸಾಫ್ಟ್‌ವೇರ್ ಕುರಿತು ಮಾಹಿತಿ ನೀಡುವಂತೆಯೂ ಪಾಲಿಕೆಯನ್ನು ಕೋರಿದೆ. ಶೀಘ್ರದಲ್ಲಿಯೇ ಪಾಲಿಕೆ ಅಧಿಕಾರಿಗಳು ಕೇಂದ್ರಕ್ಕೆ ಸಾಫ್ಟ್‌ವೇರ್ ಕುರಿತು ಮಾಹಿತಿ ನೀಡಲಿದ್ದಾರೆಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಪಾಲಿಕೆಯಿಂದ ಅಭಿವೃದ್ಧಿಪಡಿಸಿರುವ ಇಂಟಿಗ್ರೇಟೆಡ್ ಹೆಲ್ತ್ ಡಿಸಿಸಸ್ ಸರ್ವೆಲೆನ್ಸ್ ಸಿಸ್ಟಂ ವ್ಯಾಪ್ತಿಯಲ್ಲಿ ನಗರದ 1600 ಪಾಲಿಕೆ ಆಸ್ಪತ್ರೆಗಳಿದ್ದು, ಯಾವ ಪ್ರದೇಶದಲ್ಲಿ ಯಾವ ಕಾಯಿಲೆ ಹೆಚ್ಚಾಗಿದೆ ಎಂಬ ಮಾಹಿತಿ ಇದರಿಂದ ತಿಳಿಯಲಿದೆ. ಜತೆಗೆ ಆಯಾ ಕ್ಷಣದ ಅಂಕಿ-ಅಂಶಗಳು ದೊರೆಯಲಿದ್ದು, ಆ ಮೂಲಕ ಕಾಯಿಲೆ ಹೆಚ್ಚಾಗದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪಾಲಿಕೆಯ ಈ ಕಾರ್ಯವನ್ನು ಕೇಂದ್ರ ಸರಕಾರ ಮೆಚ್ಚಿಕೊಂಡಿದ್ದು, ದೇಶದಾದ್ಯಂತ ಅದನ್ನು ಅಳವಡಿಸಲು ಚಿಂತನೆ ನಡೆಸಿರುವ ಮಾಹಿತಿ ಇದೆ’
-ಎನ್.ಮಂಜುನಾಥ ಪ್ರಸಾದ್ , ಬಿಬಿಎಂಪಿ ಆಯುಕ್ತ

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News