ಜಾಧವ್ ಪ್ರಕರಣ : ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮೇ 15ರಂದು ವಿಚಾರಣೆ

Update: 2017-05-11 13:35 GMT

ಹೊಸದಿಲ್ಲಿ, ಮೇ 11: ಕುಲಭೂಷಣ್ ಜಾಧವ್‌ಗೆ ಪಾಕಿಸ್ತಾನ ನೀಡಿರುವ ಗಲ್ಲುಶಿಕ್ಷೆಗೆ ತಡೆಹಿಡಿಯಬೇಕು ಎಂಬ ಭಾರತದ ಮನವಿಯ ಕುರಿತ ವಿಚಾರಣೆಯನ್ನು ಮೇ 15ರಂದು ನಡೆಸುವುದಾಗಿ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಿಳಿಸಿದೆ.

ನಿವೃತ್ತ ಸೇನಾಧಿಕಾರಿಯಾಗಿರುವ ಜಾಧವ್ ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸುತ್ತಿದ್ದರೆಂದು ಪಾಕ್‌ನ ಮಿಲಿಟರಿ ನ್ಯಾಯಾಲಯ ತೀರ್ಪು ನೀಡಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಮಧ್ಯೆ, ಐಸಿಜೆಯಿಂದ ಪಾಕಿಸ್ತಾನಕ್ಕೆ ಬಂದಿರುವ ಪತ್ರದ ಬಗ್ಗೆ ಪಾಕ್ ಪ್ರಧಾನಿ ನವಾಝ್ ಶರೀಫ್ ಮತ್ತು ಸೇನಾಪಡೆಯ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ಚರ್ಚೆ ನಡೆಸಿದರು.

ಭಾರತದ ಅರ್ಜಿ ಮತ್ತು ಈ ವಿಷಯದಲ್ಲಿ ಐಸಿಜೆಗೆ ಇರುವ ಅಧಿಕಾರದ ಬಗ್ಗೆ ಇಬ್ಬರು ಮುಖಂಡರು ವಿಶ್ಲೇಷಣೆ ನಡೆಸಿದರು ಎಂದು ವಿದೇಶ ವ್ಯವಹಾರ ವಿಷಯದಲ್ಲಿ ಪ್ರಧಾನಿಗೆ ಸಲಹೆಗಾರರಾಗಿರುವ ಸರ್ತಾಜ್ ಅಝೀಝ್ ತಿಳಿಸಿದ್ದಾರೆ.

ಕಾನೂನು ಪ್ರಕ್ರಿಯೆಗೆ ಅನುಗುಣವಾಗಿಯೇ ಜಾಧವ್‌ಗೆ ಶಿಕ್ಷೆ ವಿಧಿಸಲಾಗಿದೆ . ಜಾಧವ್ ವಿಷಯದಲ್ಲಿ ಐಸಿಜೆ ಕೇಳುವ ಯಾವುದೇ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ಒದಗಿಸಲಾಗುವುದು ಎಂದು ಪಾಕಿಸ್ತಾನದ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಘಫೂರ್ ತಿಳಿಸಿದ್ದಾರೆ. ಜಾಧವ್ ವಿಷಯದಲ್ಲಿ ಕೋರ್ಟ್ ನೀಡಿದ ತೀರ್ಪಿನ ಬಳಿಕ ಸೇನೆಯು ಪ್ರಕ್ರಿಯೆಯನ್ನು ಮುಂದುವರಿಸಿದೆ ಎಂದ ಅವರು, ಯಾವ ರೀತಿಯ ಪ್ರಕ್ರಿಯೆ ಎಂಬ ಕುರಿತು ವಿವರಿಸಲು ನಿರಾಕರಿಸಿದರು.

 ‘ಭಾರತದ ಪುತ್ರ’ನ ಪ್ರಾಣ ಉಳಿಸಲು ಮತ್ತು ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಭಾರತವು ಐಸಿಜೆಯನ್ನು ಸಂಪರ್ಕಿಸಲು ನಿರ್ಧರಿಸಿದೆ ಎಂದು ಭಾರತ ತಿಳಿಸಿದೆ. ಜಾಧವ್ ಅವರನ್ನು ‘ಭಾರತದ ಪುತ್ರ’ ಎಂದು ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಈ ಹಿಂದೆ ಸಂಬೋಧಿಸಿದ್ದರು.

ಕಾನೂನು ವ್ಯಾಪ್ತಿಯ ವಿಷಯವನ್ನು ಬೇರೆ ಯಾರೂ ನಿರ್ಧರಿಸಲು ಸಾಧ್ಯವಿಲ್ಲ. ಐಸಿಜೆ ನಿರ್ಧರಿಸಲಿದೆ . ಅವರು ನಮ್ಮ ಅರ್ಜಿಯನ್ನು ಪರಿಗಣಿಸಿದ್ದಾರೆ ಮತ್ತು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯ ಕಾನೂನಿನ 73 ಮತ್ತು 74ನೇ ಅನುಬಂಧವು ಐಸಿಜೆ ಅಧ್ಯಕ್ಷರಿಗೆ ನೀಡಲಾಗಿರುವ ಅಧಿಕಾರದ ಕುರಿತು ತಿಳಿಸುತ್ತದೆ ಎಂದು ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ. ಐಸಿಜೆ ಕಾಯ್ದೆಯ73 ಮತ್ತು 74ನೇ ಅನುಬಂಧವು ತಾತ್ಕಾಲಿಕ ರಕ್ಷಣೆ ಕುರಿತಾಗಿದೆ.

ಜಾಧವ್ ಅವರನ್ನು ಪಾಕಿಸ್ತಾನದಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದ್ದು ಅವರ ಜೀವಕ್ಕೆ ಅಪಾಯವಿದೆ. ಜಾಧವ್ ಬಿಡುಗಡೆ ಮಾಡುವಂತೆ ರಾಯಭಾರಿ ಮಟ್ಟದಲ್ಲಿ ಭಾರತವು ಪಾಕ್‌ಗೆ 16 ಬಾರಿ ಮನವಿ ಸಲ್ಲಿಸಿತ್ತು . ಆದರೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಆರೋಪ ಪಟ್ಟಿ, ನ್ಯಾಯಾಲಯದ ದಾಖಲೆ, ಸಾಕ್ಷಿ.. ಇತ್ಯಾದಿಗಳ ದಾಖಲೆ ಒದಗಿಸುವಂತೆ ಭಾರತ ಮಾಡಿದ್ದ ಮನವಿಗೂ ಪಾಕಿಸ್ತಾನದ ಪ್ರತಿಕ್ರಿಯೆ ಇಲ್ಲ. ಅಲ್ಲದೆ ಜಾಧವ್‌ಗೆ ಮರಣದಂಡನೆ ವಿಧಿಸಿರುವ ಆದೇಶವನ್ನು ಮರುಪರಿಶೀಲಿಸಬೇಕೆಂದು ಜಾಧವ್ ಕುಟುಂಬ ಸಲ್ಲಿಸಿದ್ದ ಅರ್ಜಿಯ ಸ್ಥಿತಿಗತಿಯ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದು ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.

ಜಾಧವ್ ಕುಟುಂಬಕ್ಕೆ ವೀಸ ದೊರಕಿಸಿಕೊಡುವಂತೆ ಕೋರಿ ಎಪ್ರಿಲ್ 27ರಂದು ಸುಷ್ಮಾ ಸ್ವರಾಜ್ ಸರ್ತಾಜ್ ಅಝೀಝ್‌ಗೆ ಪತ್ರ ಬರೆದಿದ್ದರು. ಇದಕ್ಕೂ ಅವರಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಿರುವಾಗ, ಅಪಹರಿಸಲ್ಪಟ್ಟು ಪಾಕ್‌ನಲ್ಲಿ ಅಕ್ರಮವಾಗಿ ಬಂಧನಲ್ಲಿರುವ ಮತ್ತು ತನ್ನ ನಿರ್ದೋಷಿತ್ವವನ್ನು ಸಾಬೀತುಪಡಿಸಲು ಆರೋಪಿಗೆ ಯಾವುದೇ ಅವಕಾಶ ನೀಡದ ಅನುಚಿತ ವಿಚಾರಣೆಯ ಬಳಿಕ ಇದೀಗ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ದೇಶದ ಅಮಾಯಕ ಪ್ರಜೆಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತೆ ಕೋರಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News