ನೋಟು ಅಮಾನ್ಯದ ಅವಾಂತರ

Update: 2017-05-11 19:04 GMT

ಪ್ರಧಾನಿ ನರೇಂದ್ರ ಮೋದಿ ದಿಢೀರನೆ ನೋಟು ಅಮಾನ್ಯಗೊಳಿಸಿ 6 ತಿಂಗಳಾದವು. ಕಪ್ಪು ಹಣವನ್ನು ಬಯಲಿಗೆಳೆಯಲು, ಭಯೋತ್ಪಾದನೆ ಮತ್ತು ನಕ್ಸಲೀಯ ಚಟುವಟಿಕೆಗಳನ್ನು ಹತ್ತಿಕ್ಕಲು ನೋಟು ಅಮಾನ್ಯ ಮಾಡಿದ್ದಾಗಿ ಪ್ರಧಾನಿ ಆಗ ಸಮರ್ಥಿಸಿಕೊಂಡಿದ್ದರು. ರಿಸರ್ವ್ ಬ್ಯಾಂಕ್‌ಗೂ ಗೊತ್ತಿಲ್ಲದೆ, ಸಚಿವ ಸಂಪುಟದ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಧಾನಿ ನೋಟು ಅಮಾನ್ಯ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆರಂಭದಲ್ಲಿ ಕಪ್ಪು ಹಣವನ್ನು ಬಯಲಿಗೆಳೆಯಲು ನೋಟು ಅಮಾನ್ಯ ಮಾಡಲಾಗಿದೆಯೆಂದು ದೇಶದ ಜನಸಾಮಾನ್ಯರನ್ನು ನಂಬಿಸುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿತ್ತು.

ದೇಶಕ್ಕಾಗಿ ತಮ್ಮ ಪಾಲಿನ ತ್ಯಾಗವನ್ನು ಮಾಡಬೇಕೆಂದು ಜನ ಇದನ್ನು ಒಪ್ಪಿಕೊಂಡಿದ್ದರು. ಆದರೆ, ಕ್ರಮೇಣ ಇದರ ದುಷ್ಪರಿಣಾಮ ಜನಸಾಮಾನ್ಯರ ಮೇಲೆ ಉಂಟಾಗತೊಡಗಿತು. ನೋಟು ಬದಲಾವಣೆಗಾಗಿ ಜನ ಪ್ರತಿನಿತ್ಯವೂ ಬ್ಯಾಂಕ್‌ಗಳ ಮುಂದೆ ಸರತಿಯ ಸಾಲಿನಲ್ಲಿ ನಿಲ್ಲತೊಡಗಿದರು. ಹಲವೆಡೆ ವಯೋವೃದ್ಧರು ಪ್ರಜ್ಞೆತಪ್ಪಿಬಿದ್ದರು. ಕೆಲವರು ಸಾವಿಗೀಡಾದರು. ಆದರೂ ಸರಕಾರ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳುತ್ತಲೇ ಬಂತು. ಮೊದಲು ಭಯೋತ್ಪಾದನೆಯ ವಿರುದ್ಧ ಸರ್ಜಿಕಲ್ ದಾಳಿ ಎಂದು ಹೇಳಿದ ಸರಕಾರ ನಂತರ ನಗದು ರಹಿತ ಆರ್ಥಿಕ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತರಲು ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳತೊಡಗಿತು. ನೋಟು ರದ್ದತಿಯ ಪರಿಣಾಮದಿಂದಾಗಿ ಉಂಟಾಗಿದ್ದ ಜನರ ಪಡಿಪಾಟಲು ಇನ್ನೂ ಕೊನೆಗೊಂಡಿಲ್ಲ. ಎಟಿಎಂಗಳಲ್ಲಿ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಿದ್ದರೂ ಬಹುತೇಕ ಎಟಿಎಂಗಳಲ್ಲಿ ಹಣವೇ ಇಲ್ಲದಂತಹ ಸ್ಥಿತಿಯಿದೆ. ಬ್ಯಾಂಕ್‌ಗೆ ಹೋದರೂ ತಮ್ಮ ಪಾಲಿನ ಹಣ ಸಿಗುವುದೆಂಬ ಖಾತರಿಯಿಲ್ಲ.

 ನೋಟು ರದ್ದತಿಯ ಆನಂತರದ ಆರು ತಿಂಗಳ ಕಾಲಾವಧಿಯ ವಿದ್ಯಮಾನಗಳನ್ನು ಗಮನಿಸಿದರೆ ಇಡೀ ಪ್ರಕರಣದಲ್ಲಿ ಸರಕಾರದ ವೈಫಲ್ಯ ಎದ್ದು ಕಾಣುತ್ತದೆ. ಸರಕಾರ ಮುಂಚೆ ಹೇಳಿದಂತೆ ಕಪ್ಪು ಹಣ ಹೊರಗೆ ಬರಲಿಲ್ಲ. ವಿಶ್ವ ಸಂಸ್ಥೆಯ ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ.25ರಷ್ಟು ಕಪ್ಪು ಹಣವಿದೆ. ಅದರಲ್ಲಿ ನಗದಿನ ಪ್ರಮಾಣ ಶೇ.10ರಷ್ಟು ಮಾತ್ರ. ನೋಟು ರದ್ದತಿಯಿಂದ ಕಪ್ಪುಹಣದ ಸೃಷ್ಟಿ ಕಡಿಮೆಯಾಗಿಲ್ಲ. ಅದು ನಿರ್ಮೂಲಗೊಳ್ಳಬೇಕಾದರೆ ಎಲ್ಲ ರೀತಿಯ ಅಘೋಷಿತ ಆಸ್ತಿಗಳನ್ನು ಹೊರಗೆಳೆಯಬೇಕು. ಜಿಎಸ್‌ಟಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನೋಟು ಅಮಾನ್ಯಗೊಳಿಸಿದಾಗ ದೇಶದ ಕಪ್ಪು ಹಣ ಮತ್ತು ಖೋಟಾ ನೋಟು ದಂಧೆ ಸಂಪೂರ್ಣವಾಗಿ ನಾಮಾವಶೇಷವಾಗಲಿದೆ ಎಂದು ಪ್ರಧಾನಿ ಹೇಳಿದ್ದರು. ಆದರೆ, ಸರಕಾರ ಭಾವಿಸಿದಂತೆ ಕಳ್ಳನೋಟು ವಹಿವಾಟುದಾರರು ಬೀದಿಗೆ ಬೀಳಲಿಲ್ಲ. ದೇಶದಲ್ಲಿ ಎಷ್ಟು ಪ್ರಮಾಣದ ಕಾಳಧನ ಪತ್ತೆಯಾಯಿತು ಎಂಬುದು ಈವರೆಗೆ ಬೆಳಕಿಗೆ ಬಂದಿಲ್ಲ. ಎಷ್ಟು ಪ್ರಮಾಣದ ಖೋಟಾ ನೋಟುಗಳು ಬಯಲಿಗೆ ಬಂದವು ಎಂಬ ಪ್ರಶ್ನೆಗೂ ಉತ್ತರವಿಲ್ಲ. ನೋಟು ರದ್ದತಿ ಕ್ರಮದ ಭಾಗವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸರಕಾರಿ ಖಜಾನೆಗೆ ವಾಪಸ್ ಬಂದ ಅಮಾನ್ಯಗೊಂಡ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳ ಒಟ್ಟು ಮೊತ್ತ ಎಷ್ಟು? ಎಂಬುದು ಈವರೆಗೆ ಬಯಲಾಗಿಲ್ಲ.

ಹಾಗಾದರೆ ೆ ಸರಕಾರ ಏಕಾಏಕಿ ನೋಟು ಅಮಾನ್ಯಗೊಳಿಸಿದ್ದು ಏಕೆ?. ಭಾರೀ ಕಾರ್ಪೊರೇಟ್ ಕಂಪೆನಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ಒಂದೂವರೆ ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ನೀಡಿ ಬ್ಯಾಂಕ್‌ಗಳು ದಿವಾಳಿಯಾಗುವ ಸ್ಥಿತಿಯಲ್ಲಿದ್ದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ರಕ್ಷಿಸಲು ಸರಕಾರ ಏಕಾಏಕಿ ನೋಟು ಅಮಾನ್ಯ ಮಾಡಿತು ಎಂಬ ಆರೋಪವಿದೆ. ಈ ಆರೋಪಕ್ಕೆ ಸರಕಾರದ ಬಳಿ ಉತ್ತರವಿಲ್ಲ. ಹಳೆಯ ನೋಟುಗಳು ರದ್ದಾಗಿದ್ದರಿಂದ ಖೋಟಾ ನೋಟುಗಳು ಉಪಯೋಗಕ್ಕೆ ಬರುವುದಿಲ್ಲ ಹಾಗೂ ಹೊಸದಾಗಿ ಖೋಟಾ ನೋಟುಗಳನ್ನು ಚಲಾವಣೆಗೆ ತರುವುದು ಕಷ್ಟ ಎಂದು ಹೇಳಲಾಗಿತ್ತು. ಆದರೆ ಹೊಸ 500 ಮತ್ತು 2,000 ರೂ.ನ ಖೋಟಾ ನೋಟುಗಳೂ ಚಲಾವಣೆಯಲ್ಲಿವೆ. ಇದಕ್ಕೂ ಸರಕಾರದ ಬಳಿ ಉತ್ತರವಿಲ್ಲ. ನೋಟು ಅಮಾನ್ಯಗೊಳಿಸಿದಾಗ ಪ್ರಧಾನಿ ನರೇಂದ್ರ ಮೋದಿ ಟಿವಿಯಲ್ಲಿ ಹೇಳಿದ ಮಾತು ಸುಳ್ಳೆಂಬುದು ಇದೀಗ ಸ್ಪಷ್ಟವಾಗಿದೆ. ನೋಟು ರದ್ದತಿಯ ಬಿಸಿಯನ್ನು ಅನುಭವಿಸಿದ ಜನ ಈಗ ಬ್ಯಾಂಕ್‌ನತ್ತ ಸುಳಿಯಲೂ ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ದೇಶದ ಬಹುತೇಕ ಎಟಿಎಂಗಳ ಮುಂದೆ ನೋ ಕ್ಯಾಶ್ ಎಂಬ ಬೋರ್ಡು ತೂಗಾಡುತ್ತಿದೆ. ನಗದು ಹಣ ಚಲಾವಣೆ ಕಡಿಮೆ ಮಾಡಿ ಡಿಜಿಟಲ್ ಪಾವತಿ ಹೆಚ್ಚಿಸಿದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿತ್ತು. ಹಾಗಾಗಿ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲಾಯಿತು.ಇದೇ ಕಾರಣಕ್ಕಾಗಿ ನೋಟು ರದ್ದತಿಯನ್ನು ಮಾಡಲಾಗಿತ್ತು. ಆದರೆ, ಶತಮಾನಗಳಿಂದ ನಗದು ರೂಪದಲ್ಲೇ ವ್ಯವಹಾರ ಮಾಡುತ್ತ ಬಂದಿರುವ ಗ್ರಾಮೀಣ ಜನತೆಗೆ ಡಿಜಿಟಲ್ ವ್ಯವಹಾರವನ್ನು ಹೊಸದಾಗಿ ಕಲಿಸುವುದು ಅಷ್ಟು ಸುಲಭವಲ್ಲ. ನೋಟು ರದ್ದತಿಯ ಆರಂಭದ ಕೆಲವು ತಿಂಗಳಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾಗಿತ್ತು. ರಿಯಲ್ ಎಸ್ಟೇಟ್, ಆಭರಣ ಖರೀದಿ ಸೇರಿದಂತೆ 2 ಲಕ್ಷ ರೂ.ಗೆ ಮೇಲ್ಪಟ್ಟ ಎಲ್ಲ ಹಣಕಾಸು ವ್ಯವಹಾರಗಳು ಕಡ್ಡಾಯವಾಗಿ ಡಿಜಿಟಲ್ ಪಾವತಿಯಲ್ಲೇ ಆಗಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಯಿತು. ಜೈಭೀಮ್‌ನಂತಹ ಡಿಜಿಟಲ್ ಪಾವತಿ ಮೊಬೈಲ್ ಆ್ಯಪ್‌ಗಳು ಜನರನ್ನು ಡಿಜಿಟಲ್ ವ್ಯವಹಾರದತ್ತ ಸೆಳೆದವು.

ಆದರೆ, ಕ್ರಮೇಣ ಜನ ಮತ್ತೆ ನಗದು ವ್ಯವಹಾರದ ಮೊರೆಹೋಗುತ್ತಿದ್ದಾರೆ. ಭಾರತದಂತಹ ದೇಶದಲ್ಲಿ ಡಿಜಿಟಲ್ ವ್ಯವಹಾರ ಅಷ್ಟು ಸುಲಭವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನೋಟು ರದ್ದತಿಯಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವಾರು ಅರ್ಥಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರು. ನೋಟು ಅಮಾನ್ಯದ ಆರಂಭದ ದಿನಗಳಲ್ಲಿ ಉಂಟಾಗಿದ್ದ ನಗದು ಕೊರತೆಯಿಂದಾಗಿ ಕೃಷಿ, ಕೈಗಾರಿಕೆಗಳ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಉಂಟಾಗಿತ್ತು. ಆದರೆ ಸರಕಾರ ಮಾತ್ರ ಅಂತಹ ಪರಿಣಾಮ ಉಂಟಾಗಿಲ್ಲವೆಂದು ಅಂಕಿಅಂಶಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿದೆ. ಆದರೆ, ಅಕ್ರಮ ಸಂಪತ್ತು ಕೂಡಿಟ್ಟವರೆಲ್ಲ ಬೀದಿಗೆ ಬೀಳುತ್ತಾರೆ ಎಂಬ ಜನಸಾಮಾನ್ಯರ ನಂಬಿಕೆ ಹುಸಿಯಾಗಿದೆ.

ಭಾರತದಂತಹ ಬೃಹತ್ ದೇಶದಲ್ಲಿ ಚಲಾವಣೆಯಲ್ಲಿರುವ ಶೇ.86ರಷ್ಟು ಹಣವನ್ನು ವಾಪಸ್ ಪಡೆದಿರುವುದು ಗಂಭೀರ ವಿದ್ಯಮಾನ ಎಂದು ಜಾಗತಿಕ ಮಟ್ಟದಲ್ಲೂ ಚರ್ಚೆ ನಡೆಯಿತು. ಪ್ರತಿಪಕ್ಷಗಳೂ ಮೋದಿಯವರ ಕ್ರಮವನ್ನು ಖಂಡಿಸಿದವು. ನೋಟು ಅಮಾನ್ಯದ ಆರು ತಿಂಗಳ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದರೆ ಅರ್ಥಶಾಸ್ತ್ರಜ್ಞರು ವ್ಯಕ್ತಪಡಿಸಿದ್ದ ಆತಂಕದಲ್ಲಿ ಹುರುಳಿಲದೇ ಇಲ್ಲ. ನೋಟು ಅಮಾನ್ಯಗೊಂಡ ಆರು ತಿಂಗಳ ನಂತರವೂ ಅಗತ್ಯ ಪ್ರಮಾಣದ ನೋಟು ಮುದ್ರಣ ಮಾಡಲು ಈವರೆಗೆ ಸಾಧ್ಯವಾಗಿಲ್ಲ. ಬ್ಯಾಂಕ್ ಸಿಬ್ಬಂದಿ ಕೊರತೆ , ಎಟಿಎಂಗಳ ತಾಂತ್ರಿಕ ಬದಲಾವಣೆಯಲ್ಲಿ ಉಂಟಾದ ವಿಳಂಬ, ಖಾಲಿ ಬಿದ್ದ ಎಟಿಎಂಗಳು, ನಗದು ವ್ಯವಹಾರದ ಮೇಲಿನ ಮಿತಿ, ಹಣ ಹಿಂಪಡೆಯುವ ಮೊತ್ತದ ಮೇಲಿನ ನಿರ್ಬಂಧ ಇತ್ಯಾದಿ ಕಾರಣಗಳಿಂದಾಗಿ ಸುಮಾರು 50 ದಿನಗಳ ಕಾಲ ಉಂಟಾಗಿದ್ದ ಉಸಿರುಗಟ್ಟಿರುವ ವಾತಾವರಣ ಈಗಲೂ ಇದೆ.

ಎಲ್ಲಕ್ಕಿಂತ ಮುಖ್ಯವಾಗಿ ಸರಕಾರ ದಿಢೀರನೆ ನೋಟು ಅಮಾನ್ಯಗೊಳಿಸಲು ಯಾಕೆ ಮುಂದಾಯಿತು. ನೋಟು ರದ್ದತಿಯ ನಿಜವಾದ ಉದ್ದೇಶ ಈಡೇರಿದೆಯೇ? ನೋಟು ರದ್ದತಿಯ ಪರಿಣಾಮವಾಗಿ ಬ್ಯಾಂಕ್‌ನಲ್ಲಿ ಸಂಗ್ರಹಗೊಂಡ ಹಣ ಎಷ್ಟು? ಅಮಾನ್ಯಗೊಂಡ 500, 1000 ರೂ. ಮುಖಬೆಲೆಯ ನೋಟುಗಳು ಎಷ್ಟು ಸಂಖ್ಯೆಯಲ್ಲಿ ಬ್ಯಾಂಕ್‌ಗೆ ಬಂದವು. ಈ ಪ್ರಶ್ನೆಗಳಿಗೆ ಸರಕಾರ ಉತ್ತರ ಕೊಡಬೇಕಾಗಿದೆ. ನೋಟು ನಿಷೇಧಕ್ಕಿಂತ ಮುಂಚೆ ಎಟಿಎಂಗಳಿಗೆ ಹಾಕಲಾಗುತ್ತಿದ್ದ ಹಣದ ಅರ್ಧದಷ್ಟು ಮಾತ್ರ ಈಗ ಹಾಕಲಾಗುತ್ತಿದೆ. ಹೀಗಾಗಿ ಎಟಿಎಂಗಳ ಮುಂದೆ ಜನರ ಪರದಾಟ ಇನ್ನೂ ಕೊನೆಗೊಂಡಿಲ್ಲ.

 ಹೀಗೆ ನೋಟು ರದ್ದತಿ ಪ್ರಕರಣದಲ್ಲಿ ಹಲವಾರು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಬೇಕಾಗಿದೆ. ಕಳೆದ ಆರು ತಿಂಗಳಲ್ಲಿ ಏನಾಯಿತು ಎಂಬುದನ್ನು ಜನ ತಿಳಿದುಕೊಳ್ಳಬೇಕಾಗಿದೆ. ಸತ್ಯಸಂಗತಿಯನ್ನು ಸರಕಾರ ಜನರಿಂದ ಮುಚ್ಚಿಡಬಾರದು. ಈ ನಡುವೆ ಬ್ಯಾಂಕ್‌ಗಳ ವಿಲೀನೀಕರಣದ ಮೂಲಕ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಸ್ತವ್ಯಸ್ಥಗೊಳಿಸಲು ಸರಕಾರ ಮುಂದಾಗಿದೆ ಎಂಬ ಆರೋಪವಿದೆ. ಅದಕ್ಕೂ ಕೂಡಾ ಜನರಿಗೆ ಸಮಾಧಾನಕರ ಉತ್ತರ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News