ರಾತ್ರೋರಾತ್ರಿ ದಿಲ್ಲಿ ಸರ್ಕಾರ 'ವಶಕ್ಕೆ' ಬಿಜೆಪಿ ಮಾಸ್ಟರ್ ಪ್ಲ್ಯಾನ್ ?

Update: 2017-05-13 11:07 GMT

ಹೊಸದಿಲ್ಲಿ,ಮೇ 13: ಇತ್ತೀಚಿನ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿಯ ಭಾರೀ ಗೆಲುವಿನ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತನ್ನ ಆಪ್ ಪಕ್ಷದೊಳಗಿನಿಂದಲೇ ಪೂರ್ಣಪ್ರಮಾಣದ ಬಂಡಾಯವೊಂದನ್ನು ಎದುರಿಸಿದ್ದರು. ಜಲ ಸಂಪನ್ಮೂಲ ಸಚಿವರಾಗಿದ್ದ ಕಪಿಲ ಮಿಶ್ರಾ ಮತ್ತು ಪ್ರಭಾವಿ ನಾಯಕ ಕುಮಾರ ವಿಶ್ವಾಸ್ ಅವರ ಮೂಲಕ ಆಪ್ ಶಾಸಕಾಂಗ ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಮತ್ತು ದಿಲ್ಲಿ ಸರಕಾರವನ್ನು ಕೈವಶ ಪಡಿಸಿಕೊಳ್ಳಲು ವ್ಯಾಪಕ ಸಂಚೊಂದನ್ನು ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ‘ರಿಮೋಟ್ ಕಂಟ್ರೋಲ್’ ಮೂಲಕ ನಿರ್ವಹಿಸಿತ್ತು ಎನ್ನುವುದಕ್ಕೆ ‘ತಿರಸ್ಕರಿಸಲಾಗದ ಸಾಕ್ಷಾಧಾರಗಳು’ ಈಗ ಆಪ್ ನಾಯಕತ್ವದ ಬಳಿಯಿವೆ.

 ರಕ್ತರಹಿತ ಬಂಡಾಯದ ಬಳಿಕ ಮಿಶ್ರಾರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಮತ್ತು ವಿಶ್ವಾಸ್‌ರನ್ನು ಆಪ್‌ನ ನೂತನ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡುವದು ಈ ಸಂಚಿನ ಉದ್ದೇಶವಾಗಿತ್ತು. ಕೆಲವು ಶಾಸಕರು ಮತ್ತು ಮಿಶ್ರಾರ ಕಚೇರಿಯಲ್ಲಿ ನಿಯೋಜಿತ ಯುವ ವಿಶೇಷ ಕರ್ತವ್ಯಾಧಿಕಾರಿ ಸಕಾಲದಲ್ಲಿ ಕೇಜ್ರಿವಾಲ್‌ಗೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಕೇಜ್ರಿವಾಲ್ ಚುರುಕಿನ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದ್ದು, ಬಂಡಾಯದ ಪ್ರಯತ್ನ ವಿಫಲಗೊಂಡಿತ್ತು.

 ಕೇಜ್ರಿವಾಲ್ ಉಪಸ್ಥಿತಿಯಲ್ಲಿಯೇ ಶಾಸಕರೋರ್ವರು ವಿಶ್ವಾಸ್‌ಗೆ ಕರೆ ಮಾಡಿದ್ದರು ಮತ್ತು ನಾಯಕತ್ವದಲ್ಲಿ ಬದಲಾವಣೆಯನ್ನು ತರಲು 34 ಶಾಸಕರು ಈಗಾಗಲೇ ಒಟ್ಟಾಗಿದ್ದಾರೆ ಮತ್ತು ವಿಧಾನಸಭೆಯಲ್ಲಿ ಬಹುಮತ ಪಡೆಯಲು ಇನ್ನೊಂದೆರಡು ಶಾಸಕರ ಅಗತ್ಯವಿದೆ ಎಂದು ವಿಶ್ವಾಸ್ ಅವರಿಗೆ ತಿಳಿಸಿದ್ದರು. ಆದರೆ ಈ ಪೈಕಿ ಹೆಚ್ಚಿನ ಶಾಸಕರು ಅಡ್ಡಗೋಡೆಯ ಮೇಲಿನ ದೀಪದಂತಿದ್ದು, ಮಿಶ್ರಾರ ಆಟ ಎಷ್ಟರ ಮಟ್ಟಿಗೆ ಸಫಲವಾ ಗುತ್ತದೆ ಎನ್ನುವುದನ್ನು ಕಾಯುತ್ತಿದ್ದರು.

ಕ್ಷಣವೂ ವ್ಯರ್ಥ ಮಾಡದೇ ಕೇಜ್ರಿವಾಲ್ ವಿಶ್ವಾಸ್‌ರನ್ನು ತರಾಟೆಗೆತ್ತಿಕೊಂಡಿದ್ದರು. ತಾನು ಬಂಡಾಯದ ಭಾಗವಾಗಿದ್ದೇನೆ ಎನ್ನುವುದನ್ನು ವಿಶ್ವಾಸ್ ಒಂದೇ ಏಟಿಗೆ ನಿರಾಕರಿಸಿದ್ದರು. ಯಾವಾಗ ವಿಶ್ವಾಸ್ ಹಿಂದೆ ಸರಿದರೋ ಆಗಲೇ ಸಂಚು ದುರ್ಬಲ ಗೊಳ್ಳತೊಡಗಿತ್ತು ಮತ್ತು ಆ 34 ಶಾಸಕರ ಪೈಕಿ ಹೆಚ್ಚಿನವರು ಕೇಜ್ರಿವಾಲ್‌ಗೆ ನಿಷ್ಠೆಯನ್ನು ವ್ಯಕ್ತಪಡಿಸಿದ್ದರು.

 ಆದರೆ ತನ್ನ ಸಮಸ್ಯೆಗಳೆಲ್ಲ ಬಗೆಹರಿದವು ಎಂಬ ಯಾವುದೇ ಭ್ರಮೆ ಕೇಜ್ರಿವಾಲ್‌ಗಿಲ್ಲ. ತಾನು ಈ ಯುದ್ಧವನ್ನು ತಾತ್ಕಾಲಿಕವಾಗಿ ಮಾತ್ರ ಗೆದ್ದಿದ್ದೇನೆ ಎಂದು ಅವರು ಭಾವಿಸಿದ್ದಾರೆ. ತನ್ನ ಪಕ್ಷದಲ್ಲಿ ಒಡಕನ್ನುಂಟು ಮಾಡುವ ಪ್ರಯತ್ನಗಳನ್ನು ಕೇಂದ್ರ ಮತ್ತು ಬಿಜೆಪಿ ನಾಯಕತ್ವ ಮುಂದುವರಿಸಲಿವೆ ಎನ್ನುವುದು ಕೇಜ್ರಿವಾಲ್‌ಗೆ ಚೆನ್ನಾಗಿ ಗೊತ್ತಿದೆ ಎಂದು ಅವರಿಗೆ ನಿಕಟವಾಗಿರುವ ಮೂಲಗಳು ತಿಳಿಸಿದವು. ಇಂತಹ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಸ್ಸಾಂ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಈ ಹಿಂದೆ ಮಾಡಿದ್ದರು.

ಉತ್ತರ ಪ್ರದೇಶ ವಿಧಾನಸಭೆ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಭಾರೀ ಗೆಲುವಿನ ಬಳಿಕ ಬಿಜೆಪಿಗೆ ಕೇಜ್ರಿವಾಲ್ ಸುಲಭದ ತುತ್ತಾಗಿರುವಂತೆ ಕಂಡುಬರು ತ್ತಿರಬಹುದು. ಬಿಜೆಪಿಗೆ ಹತ್ತಿರವಾಗುತ್ತಿರುವ ಸಮಯಸಾಧಕ ರಾಜಕಾರಣಿಗಳ ಸಂಖ್ಯೆ ಈಗ ಈ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ರಾಜ್ಯದಲ್ಲೀಗ ವಸ್ತುತಃ ರಾಜ್ಯಪಾಲರ ಆಡಳಿತವಿದ್ದು, ಯಾವುದೇ ಮಹತ್ವದ ಕಡತಗಳು ಕೇಜ್ರಿವಾಲ್ ಅಥವಾ ಇತರ ಸಚಿವರ ಬಳಿಗೆ ಬರುತ್ತಿಲ್ಲ, ಬದಲಾಗಿ ಉಪ ರಾಜ್ಯಪಾಲರೇ ಅವುಗಳನ್ನು ಇತ್ಯರ್ಥಗೊಳಿಸು ತ್ತಿದ್ದಾರೆ. ಹೀಗಾಗಿ ದಿಲ್ಲಿ ಮುಖ್ಯಮಂತ್ರಿಗಳ ಅಧಿಕಾರ ವ್ಯಾಪ್ತಿಯು ಮೊಟಕುಗೊಂಡಿದೆ. ಇದು ಆಪ್‌ನಲ್ಲಿ ಒಡಕು ಹುಟ್ಟಿಸಲು ಮತ್ತು ತನ್ನ ಪಕ್ಷವನ್ನು ಸೇರುವಂತೆ ಶಾಸಕರಿಗೆ ಆಮಿಷವನ್ನೊಡ್ಡಲು ಬಿಜೆಪಿಗೆ ಅತ್ಯಂತ ಸೂಕ್ತ ಸನ್ನಿವೇಶವನ್ನು ಒದಗಿಸಿದೆ. ಈ ತಂತ್ರ ಕೇಜ್ರಿವಾಲ್ ಪರ ಸಹಾನುಭೂತಿಯನ್ನೂ ಸೃಷ್ಟಿಸಬಹುದು.

 ಇನ್ನೊಂದೆಡೆ ಆಪ್‌ನಲ್ಲಿ ಬಂಡಾಯವು ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕೇಜ್ರಿವಾಲ್‌ರ ವೈಫಲ್ಯ ಎಂದೂ ಪರಿಗಣಿತವಾಗಬಹುದು. ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳ ಬಳಿಕ ಕೇಂದ್ರವು ವಿಧಾನಸಭಾ ಚುನಾವಣೆಯವರೆಗೂ ಪ್ರಸ್ತುತತೆ ಹೊಂದಿರುವ ಕೆಲವು ವಿಷಯಗಳಲ್ಲಿ ಮುಂದುವರಿಯದಿರಲು ನಿರ್ಧರಿಸಿರುವಂತಿದೆ. ಉದಾಹರಣೆಗೆ ಪಕ್ಷದ ಜಾಹೀರಾತಿಗಾಗಿ ದಿಲ್ಲಿ ಸರಕಾರವು ವ್ಯಯಿಸಿರುವ 97 ಕೋ.ರೂ.ಗಳನ್ನು ಮರಳಿಸುವಂತೆ ಉಪ ರಾಜ್ಯಪಾಲರು ಆಪ್‌ನ್ನು ಒತ್ತಾಯಿಸುವುದಿಲ್ಲ ಎಂದು ಕೇಂದ್ರ ಕಾನೂನು ಅಧಿಕಾರಿ ಇತ್ತೀಚಿಗೆ ನ್ಯಾಯಾಲಯದಲಿ ವಿಧ್ಯುಕ್ತವಾಗಿಯೇ ಸುಳಿವನ್ನು ನೀಡಿದ್ದಾರೆ. ಆಪ್‌ನಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ತಾನು ಮುಂದಾಗಿದ್ದೇನೆ ಎಂದು ತೋರಿಸಿಕೊಳ್ಳುವುದು ಕೇಂದ್ರಕ್ಕೆ ಬೇಕಾಗಿಲ್ಲ ಮತ್ತು ಅದು ಆಪ್ ತಾನಾಗಿಯೇ ಸ್ವಯಂಸ್ಫೋಟಗೊಳ್ಳುವಂತೆ ತೆರೆಮರೆಯ ಕಾರ್ಯತಂತ್ರವನ್ನು ಅದು ನೆಚ್ಚಿಕೊಳ್ಳಬಹುದು ಎನ್ನುವುದನ್ನು ಇದು ಸೂಚಿಸುತ್ತದೆ.

ಇನ್ನು ಮುಂದೆ ಕೇಜ್ರಿವಾಲ್ ಯಾವ ಕಾರ್ಯತಂತ್ರವನ್ನು ಅನುಸರಿಸಬಹುದು? ಸದ್ಯಕ್ಕೆ ಅವರು ದಿಲ್ಲಿಯಲ್ಲಿ ಪಕ್ಷದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಲು ಹೆಚ್ಚಿನ ಗಮನವನ್ನು ಹರಿಸಬಹುದು. ಬಿಜೆಪಿ ತನ ವರ್ಚಸ್ಸನ್ನು ಕೆಡಿಸಲು ಕಟಿಬದ್ಧವಾಗಿದೆ ಮತ್ತು ಕಾಂಗ್ರೆಸ್ ಇದರಿಂದ ಒಳಗೊಳಗೇ ಸಂತಸ ಪಟ್ಟುಕೊಳ್ಳುತ್ತದೆ ಎನ್ನುವುದು ಕೇಜ್ರಿವಾಲ್‌ಗೆ ಗೊತ್ತಿರುವುದರಿಂದ ಇದು ಅಷ್ಟೊಂದು ಸುಲಭವಲ್ಲ. ತಾನು ಇನ್ನೋರ್ವ ಸಚಿವರಿಂದ ಎರಡು ಕೋ.ರೂ.ಸ್ವೀಕರಿಸಿದ್ದೇನೆ ಎಂಬ ಮಿಶ್ರಾ ಆರೋಪವನ್ನು ಎದುರಿಸುವಲ್ಲಿ ಕೇಜ್ರಿವಾಲ್ ಯಶಸ್ವಿಯಾಗಿದ್ದಾರೆ.

ಕೇಜ್ರಿವಾಲ್ ಈಗ ಗೋಡೆಗೆ ಬೆನ್ನು ಕೊಟ್ಟು ಹೋರಾಡುತ್ತಿದ್ದಾರೆ. ಮೂಲೆಗೆ ಒತ್ತಲ್ಪಟ್ಟಾಗಲೆಲ್ಲ ಹೋರಾಡುವುದರಲ್ಲಿ ತಾನು ಗಟ್ಟಿಗ ಎನ್ನುವುದನ್ನು ಅವರು ಈ ಹಿಂದೆ ತೋರಿಸಿದ್ದಾರೆ. ಆದರೆ ಆ ಸಾಮರ್ಥ್ಯವನ್ನು ಈಗ ಅವರು ವಿಭಿನ್ನವಾಗಿ ಪ್ರದರ್ಶಿಸ ಬೇಕಾಗಬಹುದು. ಪಕ್ಷವು ಮೋದಿಯವರನ್ನು ವೈಯಕ್ತಿಕವಾಗಿ ಟೀಕಿಸುವುದನ್ನು ಬಿಡಬೇಕು ಮತ್ತು ಬಿಜೆಪಿ ಸುಲಭದಲ್ಲಿ ಕೈಗೆ ಸಿಗಬಹುದಾದ ವಿಷಯಗಳತ್ತ ಗಮನ ಹರಿಸಬೇಕು ಎನ್ನುವುದನ್ನು ಆಪ್‌ನ ಉನ್ನತ ನಾಯಕತ್ವ ಅರ್ಥ ಮಾಡಿಕೊಂಡಿದೆ. ಸಮಾನ ರಂಗವೊಂದನ್ನು ರೂಪಿಸಲು ಕಾಂಗ್ರೆಸೇತರ ಪಕ್ಷಗಳೊಂದಿಗೆ ಸೇರಿಕೊಂಡು ಪ್ರಯತ್ನಿಸುವುದು ಕೇಜ್ರಿವಾಲ್‌ರ ಹೊಸ ಕಾರ್ಯತಂತ್ರದ ಭಾಗವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News