ಕೇಂದ್ರಕ್ಕೆ ತಲೆನೋವಾಗಿರುವ ಆಪ್

Update: 2017-05-15 18:40 GMT

ಸದ್ಯಕ್ಕೆ ಮೋದಿ ನೇತೃತ್ವದ ಸರಕಾರವು ದಿಲ್ಲಿಯಲ್ಲಿ ಅಧಿಕಾರ ಹಿಡಿದಿರುವ ಕೇಜ್ರಿವಾಲ್ ಸರಕಾರವನ್ನೇ ತನ್ನ ಪ್ರಬಲ ವಿರೋಧಿಯೆಂದು ಒಪ್ಪಿಕೊಂಡಂತಿದೆ. ಅಷ್ಟೇ ಅಲ್ಲ, ಮೋದಿಯ ವಿರುದ್ಧ ಕೇಜ್ರಿವಾಲ್‌ನ ಧ್ವನಿ ಅದೆಷ್ಟು ಸ್ಪಷ್ಟ ಮತ್ತು ಗಟ್ಟಿಯಾಗಿದೆಯೆಂದರೆ ಉಳಿದೆಲ್ಲ ವಿರೋಧಪಕ್ಷಗಳ ಮಾತುಗಳು ಅದರ ಮುಂದೆ ಪೇಲವವಾಗಿವೆ. ಒಂದು ಪೂರ್ಣ ರಾಜ್ಯವೂ ಆಗಿರದ ದಿಲ್ಲಿಯ ಚುಕ್ಕಾಣಿ ಹಿಡಿದಿರುವ ಕೇಜ್ರಿವಾಲ್ ಅವರಿಗೆ ಮೋದಿಯ ವಿರುದ್ಧ ಪರಿಣಾಮಕಾರಿಯಾಗಿ, ಗುರಿ ನೋಡಿ ಬಾಣ ಬಿಡುವುದು ಸಾಧ್ಯವಾಗುತ್ತದೆಯಾದರೆ ಉಳಿದೆಲ್ಲ ರಾಷ್ಟ್ರೀಯ ಪಕ್ಷಗಳು ಅದೇಕೆ ಮೋದಿಯ ಮುಂದೆ ಮಂಕು ಕವಿದಂತೆ ವರ್ತಿಸುತ್ತಿವೆ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ.

ಅಥವಾ ತಮ್ಮ ವೌನದ ಮೂಲಕವೇ ನರೇಂದ್ರ ಮೋದಿಯವರಿಗೆ ಮುಂದುವರಿಯಲು ಉಳಿದ ರಾಷ್ಟ್ರೀಯ ಪಕ್ಷಗಲು ಸಹಕರಿಸುತ್ತಿವೆೆಯೇ? ನೋಟು ನಿಷೇಧದ ದುಷ್ಪರಿಣಾಮಗಳು ಮುಂದುವರಿದೇ ಇದೆಯಾದರೂ ಯಾವುದೇ ವಿರೋಧಪಕ್ಷಗಳು ಯಾಕೆ ಅದನ್ನು ರಾಜಕೀಯವಾಗಿ ನಗದೀಕರಿಸಲು ಹಿಂಜರಿಯುತ್ತಿವೆ? ನೋಟು ನಿಷೇಧವೇ ಒಂದು ಬೃಹತ್ ಹಗರಣ ಮತ್ತು ಇದೀಗ ನೋಟು ನಿಷೇಧದ ವಾಸ್ತವ ಜನರಿಗೆ ಮನವರಿಕೆಯಾಗ ಹತ್ತಿವೆ. ಕಪ್ಪುಹಣವನ್ನು ತರುವುದು ಪಕ್ಕಕ್ಕಿರಲಿ, ಇರುವ ಅಲ್ಪಸ್ವಲ್ಪ ಆರ್ಥಿಕ ಚೇತರಿಕೆಯನ್ನೂ ಅದು ಕುಸಿಯುವಂತೆ ಮಾಡಿದೆ. ಬ್ಯಾಂಕುಗಳು ಗ್ರಾಹಕರನ್ನು ಸುಲಿಗೆ ಮಾಡತೊಡಗಿವೆ. ಇದೇ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಗೋರಕ್ಷಕ ಗೂಂಡಾಗಳು ವಿಜೃಂಭಿಸುತ್ತಿದ್ದಾರೆ.

ಆದರೆ ಇದಾವುದನ್ನು ಕಂಡೂ ಕಾಣದಂತೆ ಪ್ರತಿಪಕ್ಷಗಳು ವರ್ತಿಸುತ್ತಿವೆ. ತಾವು ವಿರೋಧ ಪಕ್ಷ ಎನ್ನುವುದನ್ನು ಅವುಗಳು ಸಂಪೂರ್ಣ ಮರೆತು ಬಿಟ್ಟಿವೆ. ನೋಟು ನಿಷೇಧದ ಬಳಿಕದ ಪರಿಣಾಮಗಳನ್ನು ಮುಂದಿಟ್ಟು, ಜನಾಂದೋಲವನ್ನು ರೂಪಿಸುವುದು ವಿರೋಧಪಕ್ಷಗಳ ಕರ್ತವ್ಯವಾಗಿತ್ತು. ಆದರೆ ನೋಟು ನಿಷೇಧವನ್ನು ವಿರೋಧಪಕ್ಷಗಳೂ ಒಪ್ಪಿಕೊಂಡಂತೆ ವರ್ತಿಸುತ್ತಿವೆ. ಗೋರಕ್ಷಕರು ನಡೆಸುತ್ತಿರುವ ಹಲ್ಲೆಗಳ ವಿರುದ್ಧ ಪತ್ರಿಕಾಗೋಷ್ಠಿ ಯನ್ನು ಹೊರತು ಪಡಿಸಿ ಯಾವ ಪ್ರತಿಕ್ರಿಯೆಗಳೂ ವಿರೋಧಪಕ್ಷಗಳಿಂದ ಹೊರ ಬರುತ್ತಿಲ್ಲ. ಎಲ್ಲ ದುರ್ಬಲ ಜಾತಿ, ಧರ್ಮಗಳನ್ನು ಸಂಘಟಿಸಿ ಜತೆಯಾಗಿ ಮೋದಿ ನೇತೃತ್ವದ ಕೇಸರಿ ಪಡೆಗಳನ್ನು ಎದುರಿಸುವ ಅಗತ್ಯವನ್ನು ಯಾವ ಪಕ್ಷಗಳೂ ಮನವರಿಕೆ ಮಾಡಿಕೊಂಡಿಲ್ಲ. ಈ ಸಂದರ್ಭದಲ್ಲಿ ಇವಿಎಂ ದುರ್ಬಳಕೆಯ ವಿರುದ್ಧವೂ ಕೇಜ್ರಿವಾಲ್ ಅವರಿಂದ ಹೊರಬಂದಷ್ಟು ಪರಿಣಾಮಕಾರಿಯಾದ ಆಕ್ಷೇಪಗಳು ಇತರ ಪಕ್ಷಗಳಿಂದ ಹೊರ ಬರುತ್ತಿಲ್ಲ. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ಮೋದಿಯ ಪರ್ವ ಕಾಲದಲ್ಲಿ ತಮ್ಮ ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ಸರಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಸೂಚನೆಗಳು ಇವು. ಈ ಕಾರಣದಿಂದಲೇ ಮೋದಿ ಸರಕಾರದ ವಿರುದ್ಧ ಶತಾಯಗತಾಯ ಹೋರಾಟ ನಡೆಸುತ್ತಿರುವ ಕೇಜ್ರಿವಾಲ್ ಅವರು ಎಲ್ಲ ದೌರ್ಬಲ್ಯಗಳ ನಡುವೆಯೂ ಒಂದಿಷ್ಟು ಆಶಾದಾಯಕವಾಗಿ ಕಾಣಿಸಿಕೊಳ್ಳುತ್ತಿರುವುದು.

ಇವಿಎಂ ವಿಷಯದಲ್ಲಿ ಕೇಜ್ರಿವಾಲ್ ಶಕ್ತಿ ಮೀರಿ ಧ್ವನಿಯೆತ್ತಿದಾಗ ಅವರ ಜೊತೆಗೆ ಒಂದಿಷ್ಟು ಧ್ವನಿ ಸೇರಿಸಿದ್ದರೂ ಚುನಾವಣಾ ಆಯೋಗ ಮೆತ್ತಗಾಗುತ್ತಿತ್ತು. ಆದರೆ ಚುನಾವಣಾ ಆಯೋಗ ಇವಿಎಂ ಕುರಿತಂತೆ ಕರೆದ ಸರ್ವ ಪಕ್ಷಗಳ ಸಭೆಯಲ್ಲಿ, ಕಾಂಗ್ರೆಸ್ ಸಹಿತ ಹಲವು ರಾಷ್ಟ್ರೀಯ ಪಕ್ಷಗಳು ಬಲವಾಗಿ ನಿಲ್ಲಲಿಲ್ಲ. ಎಡ ಪಕ್ಷಗಳ ವೌನವೂ ನಿಗೂಢವಾಗಿದೆ. ರಾಷ್ಟ್ರೀಯ ಪಕ್ಷಗಳ ಈ ದೌರ್ಬಲ್ಯಗಳನ್ನು ಬಳಸಿಕೊಂಡ ಆಯೋಗ, ಇವಿಎಂನ್ನು ಇನ್ನಷ್ಟುಸುಧಾರಣೆಯ ಮೂಲಕ ಮುಂದುವರಿಸುವ ಭರವಸೆಯನ್ನು ನೀಡಿತು. ಆದರೆ ಈವರೆಗೆ ನಡೆದಿರುವ ಅಕ್ರಮ, ತಿರುಚುವಿಕೆಯ ಆರೋಪಗಳ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ನೀಡಲಿಲ್ಲ ಮತ್ತು ಆಯೋಗದ ತೀರ್ಮಾನಕ್ಕೆ ಉಳಿದೆಲ್ಲ ಪಕ್ಷಗಳು ತಲೆಕೊಟ್ಟಾಗ, ಆಪ್ ಮಾತ್ರ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಈ ಮಟ್ಟಿಗೆ ತನ್ನ ಜವಾಬ್ದಾರಿಯನ್ನು ಆಪ್ ಉಳಿಸಿಕೊಂಡಿರುವುದು ಶ್ಲಾಘನೀಯ.

ಆಪ್‌ನ ಬಾಣಗಳು ನೇರವಾಗಿ ಕೇಂದ್ರ ಸರಕಾರದ ಮರ್ಮವನ್ನು ಚುಚ್ಚುತ್ತಿರುವುದರಿಂದಲೇ ಅದು ಇತರೆಲ್ಲ ರಾಜಕೀಯ ಪಕ್ಷಗಳಿಗಿಂತ ಆಪ್ ಪಕ್ಷವನ್ನೇ ಗಂಭೀರವಾಗಿ ತೆಗೆದುಕೊಂಡಿದೆ. ಅಕ್ರಮ ದಾರಿಯಲ್ಲಿ ಕೇಜ್ರಿವಾಲ್ ಅವರ ಪ್ರಜಾಸತ್ತಾತ್ಮಕ ಸರಕಾರವನ್ನು ಉರುಳಿಸುವ ಅದರ ಪ್ರಯತ್ನವನ್ನು ಮುಂದುವರಿಸಿದೆ. ಅದರ ಭಾಗವಾಗಿಯೇ ಕಪಿಲ್‌ಶರ್ಮಾ ಎನ್ನುವ ಹೊಸ ತಲೆನೋವು ಕೇಜ್ರಿವಾಲ್‌ನ್ನು ಸುತ್ತಿಕೊಂಡಿದೆ. ಉಚ್ಚಾಟಿತ ಮುಖಂಡ ಕಪಿಲ್ ಶರ್ಮಾ ಅವರು ಸಾರ್ವಜನಿಕವಾಗಿ ಹಮ್ಮಿಕೊಂಡಿರುವ ಪ್ರಹಸನಗಳು ಮತ್ತು ಅದನ್ನು ವೈಭವೀಕರಿಸುತ್ತಿರುವ ಮಾಧ್ಯಮಗಳ ಹಿಂದೆ ಬಿಜೆಪಿಯ ಕೈವಾಡವಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಈ ಹಿಂದೆ ಕೇಜ್ರಿವಾಲ್ ಅವರ ಸರಕಾರವನ್ನು ಲೆ.ಗವರ್ನರ್ ಮೂಲಕ ನಿಯಂತ್ರಿಸಿ, ದುರ್ಬಲಗೊಳಿಸಲು ಸಕಲ ಪ್ರಯತ್ನ ನಡೆಸಿದ ಮೋದಿ ಸರಕಾರ, ಇದೀಗ ಪಕ್ಷದೊಳಗಿರುವ ಶಾಸಕರನ್ನು ಇಬ್ಭಾಗಗೊಳಿಸುವ ಪ್ರಯತ್ನದಲ್ಲಿದೆ.

ಒಂದು ಮೂಲದ ಪ್ರಕಾರ ಆಪ್ ಸರಕಾರವನ್ನು ಒಡೆದು, ಕೇಜ್ರಿವಾಲ್‌ರನ್ನು ಕೆಳಗಿಳಿಸಿ ಇನ್ನೋರ್ವ ಮುಖಂಡನನ್ನು ಅಧಿಕಾರಕ್ಕೇರಿಸುವ ಬಿಜೆಪಿಯ ಸಂಚು ಕೂದಲೆಳೆಯ ಅಂತರದಲ್ಲಿ ವಿಫಲಗೊಂಡಿದೆ. ಅದರ ಭಾಗವಾಗಿಯೇ ಆಪ್ ಮುಖಂಡ ಕಪಿಲ್ ಮಿಶ್ರಾ ಅವರು ವಜಾಗೊಂಡಿದ್ದಾರೆ. ಉಚ್ಚಾಟನೆಗೊಂಡ ಬೆನ್ನಿಗೇ ಮಿಶ್ರಾ ಅವರು ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಹಾಗಾದರೆ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಯಾಕೆ ಮಿಶ್ರಾ ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಲಿಲ್ಲ? ‘ಎರಡು ಕೋಟಿ ಹಣವನ್ನು ಡೊನೇಶನ್ ಆಗಿ ಕೇಜ್ರಿವಾಲ್ ಪಡೆದುಕೊಂಡಿದ್ದಾರೆ’ ಎಂಬ ಮಿಶ್ರಾ ಆರೋಪ ನೆಲಕಚ್ಚಿದ ಬೆನ್ನಿಗೇ 16 ಬೇನಾಮಿ ಸಂಸ್ಥೆಗಳ ಮೂಲಕ ಹವಾಲ ಹಣವನ್ನು ಪಡೆದಿದ್ದಾರೆ ಎಂದೂ ಮಿಶ್ರಾ ಆರೋಪಿಸಿದ್ದಾರೆ.

ಜೊತೆಗೆ ಉಪವಾಸ ಸತ್ಯಾಗ್ರಹದ ನಾಟಕವಾಗಿ, ತಾನೂ ‘ಅಣ್ಣಾ ಹಝಾರೆ’ಯಾಗುವ ಪ್ರಯತ್ನ ಮಾಡಿದ್ದಾರೆ. ಆದರೆ ನಿರೀಕ್ಷಿತ ಪರಿಣಾಮ ಬೀರಿಲ್ಲ. ಈ ಹಿಂದೆ ಉತ್ತರಾಖಂಡ, ಅರುಣಾಚಲದಲ್ಲಿ ಅಲ್ಲಿನ ಸರಕಾರದೊಳಗೆ ಭಿನ್ನಮತ ಬಿತ್ತಿ, ಶಾಸಕರನ್ನು ಒಡೆದು ರಾಷ್ಟ್ರಪತಿ ಆಳ್ವಿಕೆ ಹೇರಿದಂತೆ, ದಿಲ್ಲಿಯಲ್ಲೂ ಮಾಡಲು ಹೋಗಿ ಬಿಜೆಪಿ ಕೈ ಸುಟ್ಟುಕೊಂಡಿದೆ. ಇದೀಗ ಮಿಶ್ರಾ ಮೂಲಕ ಕೇಜ್ರಿವಾಲ್‌ನ ‘ವಿಶ್ವಾಸಾರ್ಹತೆ’ಗೆ ಕಳಂಕ ಹಚ್ಚಲು ಯತ್ನಿಸುತ್ತಿದೆ. ವಿಪರ್ಯಾಸವೆಂದರೆ, ಬಿಜೆಪಿಯ ಈ ಸಂಚಿನ ಜೊತೆಗೆ ಕಾಂಗ್ರೆಸ್ ಪಕ್ಷವೂ ಅತ್ಯುತ್ಸಾಹದಿಂದ ಕೈಜೋಡಿಸಿರುವುದು. ಇದೇ ಸಂದರ್ಭದಲ್ಲಿ ಬಿಜೆಪಿಯ ವಿವಿಧ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಮಾಧ್ಯಮಗಳು ಮಹಾ ವೌನವನ್ನು ತಾಳಿದೆ.

ಒಂದಂತೂ ಸತ್ಯ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜಕೀಯ ಪಕ್ಷವಾಗಿ ಬೇರೂರಿ ದಿಲ್ಲಿಯಲ್ಲಿ ಅಧಿಕಾರ ಹಿಡಿದು, ಪಂಜಾಬಿನಲ್ಲಿಯೂ ಪ್ರಬಲ ಪಕ್ಷವಾಗಿ ಹೊರ ಹೊಮ್ಮಿರುವ ಆಪ್, ಉಳಿದ ‘ಪುರಾತನ’ ಪಕ್ಷಗಳಿಗೆ ಮಾದರಿಯಾಗುವಂತೆ ವಿರೋಧ ಪಕ್ಷ ಸ್ಥಾನವನ್ನು ನಿರ್ವಹಿಸುತ್ತಿದೆ. ಉಳಿದ ರಾಜಕೀಯ ಪಕ್ಷಗಳ ನಿಸ್ತೇಜ ಸ್ಥಿತಿಯೇ ಒಂದು ಸಣ್ಣ ಪಕ್ಷ ರಾಷ್ಟ್ರಮಟ್ಟದಲ್ಲಿ ಈ ರೀತಿ ಸುದ್ದಿಯಾಗಲು ಕಾರಣವಾಗಿದೆ. ಈ ಹೋರಾಟದಲ್ಲಿ ಕೇಜ್ರಿವಾಲ್ ದಿಲ್ಲಿಯ ಮೇಲೆ ಹಿಡಿತ ಕಳೆದುಕೊಂಡರೂ ಅವರು ‘ಹುತಾತ್ಮ’ರಾಗುವುದು ಖಂಡಿತ. ಆದರೆ ಉಳಿದ ರಾಷ್ಟ್ರೀಯ ಪಕ್ಷಗಳ ‘ಆತ್ಮಹತ್ಯೆ’ಗಿಂತ ಈ ಹುತಾತ್ಮ ಪದವಿಯೇ ವಾಸಿ ಅಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News