ಪೊಲೀಸ್ ಇಲಾಖೆಯ ಸುಧಾರಣೆ ಯಾವಾಗ?

Update: 2017-05-16 18:57 GMT

ಪೊಲೀಸರು ಇರುವುದು ಯಾತಕ್ಕಾಗಿ ಎಂಬ ಪ್ರಶ್ನೆ ಪದೇ ಪದೇ ಉದ್ಭವವಾಗುತ್ತಲೇ ಇದೆ. ಜನರ ಜೀವ ಮತ್ತು ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಆರಕ್ಷಕರಿಂದಲೇ ಅತಿರೇಕಗಳು ಉಂಟಾಗುತ್ತಿವೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುತ್ತಿರುವ ವರದಿಗಳನ್ನು ಆಧರಿಸಿ ಹೇಳುವುದಾದರೆ ಕಾನೂನು ಪಾಲಕರಿಂದಲೇ ಕಾನೂನಿನ ಉಲ್ಲಂಘನೆ ಆಗುತ್ತಿದೆ. ಮಾನವೀಯತೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ಬಾಯಿಬಿಡಿಸಲು ಪೊಲೀಸರು ನೀಡುವ ಚಿತ್ರಹಿಂಸೆ ಮತ್ತು ಮೂರನೆ ದರ್ಜೆಯ ಶಿಕ್ಷೆಗಳು ಅನೇಕ ಅಮಾಯಕರ ಸಾವು ನೋವಿಗೆ ಕಾರಣವಾಗುತ್ತಿವೆ. ನ್ಯಾಯಾಲಯಗಳು ಮಾಡುವ ಕೆಲಸಗಳನ್ನು ಅನೇಕ ಸಂದರ್ಭಗಳಲ್ಲಿ ಪೊಲೀಸರೇ ಮಾಡುತ್ತಾರೇನೋ ಎಂಬ ಸಂದೇಹ ಉಂಟಾಗುತ್ತದೆ.

ಹೀಗಾಗಿ ಪೊಲೀಸ್ ಇಲಾಖೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದೆಡೆ ಭೀತಿ ಆವರಿಸಿದ್ದರೆ ಇನ್ನೊಂದೆಡೆ ಆಕ್ರೋಶ ಮಡುಗಟ್ಟಿ ನಿಂತಿದೆ. 2013ರಿಂದೀಚೆಗೆ ಪೊಲೀಸರ ವಶದಲ್ಲಿ ವಿಚಾರಣೆಗೆ ಒಳಪಟ್ಟಿದ್ದ 500ಕ್ಕೂ ಹೆಚ್ಚು ಮಂದಿ ಸಂಶಯಾಸ್ಪದವಾಗಿ ಸಾವಿಗೀಡಾಗಿರುವುದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಬಿಡುಗಡೆಗೊಳಿಸಿರುವ ಅಂಕಿಅಂಶಗಳಿಂದ ನಿಖರವಾಗಿ ತಿಳಿಯುತ್ತದೆ. ವಿಚಾರಣೆಗೆಂದು ಪೊಲೀಸ್ ಠಾಣೆಗೆ ಹೋದವರು ಸುರಕ್ಷಿತವಾಗಿ, ಜೀವಂತವಾಗಿ ವಾಪಸ್ ಬರುವುದಿಲ್ಲ ಎಂಬ ಆರೋಪ ಅಲ್ಲಲ್ಲಿ ಕೇಳಿ ಬರುತ್ತಲೇ ಇದೆ.

ಕಳೆದ ತಿಂಗಳು ಉತ್ತರಾಖಂಡದ ಜಿಲ್ಲೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಅಪಹರಣಕ್ಕೊಳಗಾಗಿದ್ದು, ಈ ಕುರಿತು ಪೊಲೀಸರು 16 ವರ್ಷದ ಯುವಕನೊಬ್ಬನನ್ನು ಬಂಧಿಸಿ ಚಿತ್ರಹಿಂಸೆಗೆ ಗುರಿಪಡಿಸಿದರು. ಆತ ಪೊಲೀಸ್ ಠಾಣೆಯಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾದ. ಬಿಹಾರದ ಭೋಜ್‌ಪುರ್ ಜಿಲ್ಲೆಯಲ್ಲಿ ಅಮಾಯಕ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದವಾಗಿ ಅಸುನೀಗಿದ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲೂ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ.

ದೇಶದ ವಿವಿಧೆಡೆ ಪೊಲೀಸರು ನಡೆಸುವ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆಗಾಗ ಬೆಳಕು ಚೆಲ್ಲುತ್ತಲೇ ಇದೆ. ಇಂತಹ ಪ್ರಕರಣಗಳಲ್ಲಿ ಅನೇಕ ಬಾರಿ ನ್ಯಾಯಾಲಯಗಳು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ನಿದರ್ಶನಗಳೂ ಇವೆ. ಆದರೂ ಈ ಅತಿರೇಕ ಕಡಿಮೆಯಾಗಿಲ್ಲ. ದೇಶದಲ್ಲಿ ಸರಾಸರಿ ಪ್ರತೀ ಎರಡು ದಿನಗಳಿಗೊಮ್ಮೆ ಓರ್ವ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗುತ್ತಾನೆ. ಪೊಲೀಸ್ ವ್ಯವಸ್ಥೆ ಸುಧಾರಣೆಯಾಗಲು ಮನಸ್ಸು ಮಾಡುತ್ತಲೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅಮಾನವೀಯಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ.

ಆರೋಪಿಯೊಬ್ಬನನ್ನು ಬಂಧಿಸಿ ಚಿತ್ರಹಿಂಸೆ ನೀಡಿದರೆ ಆತನನ್ನು ಬಾಯಿಬಿಡಿಸುವುದು ಸುಲಭ ಎಂದು ಪೊಲೀಸರು ತಿಳಿದುಕೊಂಡಿದ್ದಾರೆ. ಬ್ರಿಟಿಷ್ ವಸಾಹತುಕಾಲದ ಪೊಲೀಸ್ ಮನೋಭಾವ ಸ್ವಾತಂತ್ರಾನಂತರದ ಏಳು ದಶಕಗಳ ಬಳಿಕವೂ ಬದಲಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ನಮ್ಮನ್ನೇ ನಾವು ಆಳುತ್ತಿರುವಾಗ ಜನಸ್ನೇಹಿಯಾಗಿರಬೇಕಾದ ಪೊಲೀಸರು ಜನರನ್ನು ಶತ್ರುಗಳಂತೆ ಕಾಣುತ್ತಿರುವುದು, ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ. ಪೊಲೀಸರ ಈ ವರ್ತನೆ ಕುಖ್ಯಾತ ಅಪರಾಧ ಹಿನ್ನೆಲೆ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಸಣ್ಣಪುಟ್ಟ ತಪ್ಪುಗಳನ್ನೆಸಗಿ ಮೊದಲ ಬಾರಿ ಪೊಲೀಸ್ ಠಾಣೆಗೆ ಬಂದವನ ಮೇಲೂ ಪೊಲೀಸರು ಇದೇ ರೀತಿ ವರ್ತಿಸುತ್ತಾರೆ.

ಅಷ್ಟೇ ಅಲ್ಲದೆ, ಜನಪರ ಹೋರಾಟಗಾರರೊಂದಿಗೂ ಪೊಲೀಸರ ವರ್ತನೆ ಅತ್ಯಂತ ಕ್ರೂರವಾಗಿರುತ್ತದೆ. ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರು ಎಂಬ ಅಂಶವನ್ನು ಪರಿಗಣಿಸದೆ ಎಲ್ಲರ ಮೇಲೂ ದೊಣ್ಣೆ ಬೀಸಲು ಪೊಲೀಸರು ಮುಂದಾಗುತ್ತಾರೆ. ಛತ್ತೀಸ್‌ಗಡದಂತಹ ರಾಜ್ಯಗಳಲ್ಲಿ ಮಾವೋವಾದಿಗಳ ದಮನದ ಹೆಸರಿನಲ್ಲಿ ಆದಿವಾಸಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ಮಾಧ್ಯಮಗಳಲ್ಲೂ ಸರಿಯಾಗಿ ವರದಿಯಾಗುವುದಿಲ್ಲ. ಅನೇಕ ಪ್ರಕರಣಗಳಲ್ಲಿ ಭದ್ರತೆಯ ಹೆಸರಿನಲ್ಲಿ ಸತ್ಯಾಂಶವನ್ನು ಮುಚ್ಚಿಡಲಾಗುತ್ತಿದೆ. ಮಾನವಹಕ್ಕು ಸಂಘಟನೆಯ ಕಾರ್ಯಕರ್ತರನ್ನೇ ಮಾವೋವಾದಿಗಳೆಂದು ಜೈಲಿಗೆ ತಳ್ಳಿದ ಉದಾಹರಣೆಗಳಿವೆ. ಕಾಶ್ಮೀರ ಪರಿಸ್ಥಿತಿ ಹದಗೆಡಲು ಪೊಲೀಸರ ಮತ್ತು ಸೇನಾಪಡೆಗಳ ಅತಿರೇಕವೇ ಕಾರಣ. ಉಗ್ರಗಾಮಿಗಳನ್ನು ಹತ್ತಿಕ್ಕುವ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಭದ್ರತಾಪಡೆಗಳು ಹಲ್ಲೆ ನಡೆಸುತ್ತಿವೆ ಎಂದು ಮಾನವಹಕ್ಕು ಸಂಘಟನೆಗಳ ಕಾರ್ಯಕರ್ತರು ಆರೋಪಿಸುತ್ತಲೇ ಇದ್ದಾರೆ.

ಸುಪ್ರೀಂ ಕೋರ್ಟ್ ಕೂಡಾ ಪೊಲೀಸರ ಈ ಅತಿರೇಕದ ಬಗ್ಗೆ ಹಲವಾರು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ವಸಾಹತು ಕಾಲದ ಪೊಲೀಸ್ ವ್ಯವಸ್ಥೆಯನ್ನು ಸುಧಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಧರ್ಮವೀರ್ ಆಯೋಗ ಮೂರು ದಶಕಗಳ ಹಿಂದೆಯೇ ವರದಿಯೊಂದನ್ನು ನೀಡಿದೆ. ಈ ವರದಿ ಗೃಹ ಇಲಾಖೆಯ ಕಡತಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿದೆ. ರಾಷ್ಟ್ರೀಯ ಪೊಲೀಸ್ ಆಯೋಗ ಕೂಡಾ ಪೊಲೀಸ್ ಇಲಾಖೆಯ ಸುಧಾರಣೆಯ ಬಗ್ಗೆ ಹಲವಾರು ಶಿಫಾರಸುಗಳನ್ನು ಮಾಡಿದ್ದರೂ ಅವು ಇಂದಿಗೂ ಜಾರಿಗೆ ಬಂದಿಲ್ಲ. ನಮ್ಮ ದೇಶದ ಬಂದೀಖಾನೆಗಳು ನರಕಯಾತನೆಯ ತಾಣಗಳಾಗಿವೆ. ಪೊಲೀಸರ ತನಿಖೆಗೆ ಯಾರ ಅಭ್ಯಂತರವೂ ಇಲ್ಲ. ಆದರೆ, ತನಿಖಾ ವಿಧಾನ ಬದಲಾಗಬೇಕಾಗಿದೆ.

ಆರೋಪಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸುವ ಬದಲು ಆಧುನಿಕ ವೈಜ್ಞಾನಿಕ ವಿಧಾನಗಳ ಮೂಲಕ ಸತ್ಯಾಂಶವನ್ನು ಬಯಲಿಗೆ ತರಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಸೂಕ್ತ ತರಬೇತಿ ನೀಡುವ ವ್ಯವಸ್ಥೆಯೂ ಇಲ್ಲ. ಈಗ ಇರುವ ತರಬೇತಿ ವ್ಯವಸ್ಥೆಯೂ ಓಬೀರಾಯನ ಕಾಲದ್ದು. ಈ ಲೋಪಗಳನ್ನೆಲ್ಲ ಸರಿಪಡಿಸಬೇಕಾದರೆ ಪೊಲೀಸ್ ಇಲಾಖೆ ಆಧುನೀಕರಣಗೊಳ್ಳಬೇಕು. ಪೊಲೀಸ್ ಠಾಣೆಗಳಲ್ಲಿ ನಡೆಯುವ ಸಂಶಯಾಸ್ಪದ ಸಾವುಗಳ ಬಗ್ಗೆ ಸರಕಾರ ಕ್ರಮವನ್ನೇ ಕೈಗೊಂಡಿಲ್ಲವೆಂದಲ್ಲ. ಆದರೆ, ಈ ಕ್ರಮಗಳು ಕಾಟಾಚಾರಕ್ಕಷ್ಟೇ ಇವೆ. ಪೊಲೀಸ್ ಠಾಣೆಯಲ್ಲಿ ಸಾವು ಸಂಭವಿಸಿದಾಗ ಸಂಬಂಧಿತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಇಲ್ಲವೇ ಅಮಾನತಿನಲ್ಲಿ ಇಡಲಾಗುತ್ತಿದೆ. ಜನ ಕ್ರಮೇಣ ಎಲ್ಲವನ್ನೂ ಮರೆತ ಬಳಿಕ ವರ್ಗಾವಣೆಯಾದವರು ವಾಪಸ್ ಬರುತ್ತಾರೆ. ಅಮಾನತುಗೊಂಡವರು ದೋಷಮುಕ್ತರಾಗಿ ಕೆಲಸಕ್ಕೆ ಹಾಜರಾಗುತ್ತಾರೆ. ಅಂತಲೇ, ಇಂತಹ ಕ್ರಮಗಳು ನಿರುಪಯುಕ್ತವಾಗಿವೆ.

ಪೊಲೀಸ್ ವ್ಯವಸ್ಥೆಯನ್ನು ಸರಿಯಾಗಿ ಪುನರ್ ರೂಪಿಸಬೇಕಾಗಿದೆ. ಅದು ಮಾನವೀಯಗೊಳ್ಳಬೇಕಾಗಿದೆ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ಜಾತ್ಯತೀತಗೊಳ್ಳಬೇಕಾಗಿದೆ. ಪೊಲೀಸ್ ತನಿಖಾ ವಿಧಾನಗಳು ಬದಲಾಗಬೇಕಾಗಿವೆ. ಪೊಲೀಸರಿಗೆ ತರಬೇತಿ ನೀಡುವಾಗ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲತತ್ವಗಳ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಪೊಲೀಸ್ ನೇಮಕಾತಿಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೂ ಸೂಕ್ತ ಪ್ರಾಶಸ್ತ್ಯ ದೊರೆಯಬೇಕು. ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ದೈನಂದಿನ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು. ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸುವಾಗ ಅವರ ಸಮಸ್ಯೆಗಳ ಬಗೆಗೂ ಸರಕಾರ ಗಮನ ನೀಡಬೇಕಾಗುತ್ತದೆ.

ದೇಶದಲ್ಲಿ ಈಗ ಪೊಲೀಸ್ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಅತಿ ಗಣ್ಯ ವ್ಯಕ್ತಿಗಳ ಭದ್ರತಾ ಕಾರ್ಯದಲ್ಲೇ ಶೇ.25ರಷ್ಟು ಪೊಲೀಸರು ತೊಡಗಿಕೊಳ್ಳುವುದರಿಂದ ಉಳಿದ ಸಿಬ್ಬಂದಿಯ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಉಳಿದ ಸರಕಾರಿ ಇಲಾಖೆಗಳ ನೌಕರರಂತೆ ಪೊಲೀಸರಿಗೆ ನಿರ್ದಿಷ್ಟ ಕೆಲಸದ ಮಿತಿ ಇಲ್ಲ. ದಿನಕ್ಕೆ 12ರಿಂದ 16 ತಾಸು ಪೊಲೀಸರು ಕೆಲಸ ಮಾಡಬೇಕಾಗುತ್ತದೆ. ಹೀಗೆ ವಿಪರೀತ ಕೆಲಸದ ಒತ್ತಡದಿಂದ ಹತಾಶಗೊಳ್ಳುವ ಪೊಲೀಸರು ಒಮ್ಮೆಮ್ಮೆ ತಮಗೆ ಗೊತ್ತಿಲ್ಲದೆಯೇ ಅತಿರೇಕಗಳಿಗೆ ಕಾರಣರಾಗುತ್ತಾರೆ. ತಳಹಂತದ ಪೊಲೀಸರಿಗೆ ದೊರೆಯುವ ಸಂಬಳ ಮತ್ತು ಭತ್ತೆಗಳು ಅವರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಕುಖ್ಯಾತ ಅಪರಾಧಿಗಳನ್ನು ಬಂಧಿಸಲು ಹೋದ ಪೊಲೀಸರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ.

ಇಂತಹವರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು ಮತ್ತು ಅವರ ಮಕ್ಕಳಿಗೆ ಸರಕಾರ ಉದ್ಯೋಗಾವಕಾಶಗಳನ್ನೂ ನೀಡಬೇಕು. ಇದನ್ನೆಲ್ಲ ಮಾಡಬೇಕಾದರೆ ಪೊಲೀಸ್ ಇಲಾಖೆಯ ಸುಧಾರಣೆಗಳ ಬಗ್ಗೆ ನ್ಯಾಯಮೂರ್ತಿ ಧರ್ಮವೀರ ಆಯೋಗ ಮತ್ತು ಇತರ ಆಯೋಗಗಳ ಶಿಫಾರಸುಗಳನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಲ್ಲದೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮಾಜದಲ್ಲಿರುವ ಅಪರಾಧಿ ಹಿನ್ನೆಲೆಯ ವ್ಯಕ್ತಿಗಳು ಮತ್ತು ಶಕ್ತಿಗಳೊಂದಿಗೆ ನಂಟನ್ನು ಹೊಂದಿರುತ್ತಾರೆ ಎಂಬ ಆರೋಪವಿದೆ. ಇದಕ್ಕೆ ಬರೀ ಪೊಲೀಸರನ್ನು ದೂರಿದರೆ ಪ್ರಯೋಜನವಿಲ್ಲ. ರಾಜಕಾರಣಿಗಳು ಕೂಡಾ ಇಂತಹ ಅಕ್ರಮ ವ್ಯವಹಾರಗಳಲ್ಲಿ ನಂಟನ್ನು ಹೊಂದಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಎಲ್ಲ ಅಂಶಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ತುರ್ತಾಗಿ ನಿವಾರಿಸಬೇಕು ಮತ್ತು ಪೊಲೀಸರ ಜೀವನದ ಸ್ಥಿತಿಗತಿಗಳಿಗೆ ಮತ್ತು ಕೌಟುಂಬಿಕ ಜೀವನದ ಸುಗಮ ನಿರ್ವಹಣೆಗೆ ಅಗತ್ಯವಿರುವಷ್ಟು ಸಂಬಳ ಭತ್ತೆಗಳನ್ನು ನೀಡಬೇಕು. ವಿಪರೀತ ಕೆಲಸದ ಒತ್ತಡದಿಂದಾಗಿ ಪೊಲೀಸರಿಗೆ ತಮ್ಮ ಮನೆಯ ಕೆಲಸಗಳಿಗಾಗಿ ಲಭ್ಯವಿರುವ ರಜೆಯನ್ನು ಬಳಸಿಕೊಳ್ಳುವ ಅವಕಾಶವೂ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಿದರೆ ಮಾತ್ರ ಈ ಲೋಪಗಳನ್ನು ಕೊಂಚಮಟ್ಟಿಗೆ ಸರಿಪಡಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News