ಕುದುರೆಗಳಿಗೆ ಡ್ರಗ್ಸ್ ನೀಡಿದ ಪ್ರಕರಣ: ಸಿಐಡಿ ಪರಿಶೀಲನೆ

Update: 2017-05-18 18:42 GMT

 ಬೆಂಗಳೂರು, ಮೇ 18: ರಾಜಧಾನಿ ಬೆಂಗಳೂರಿನ ರೇಸ್‌ಕೋರ್ಸ್‌ನಲ್ಲಿ ಕುದುರೆಗಳಿಗೆ ಉದ್ದೀಪನ ನೀಡಿರುವ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಟರ್ಫ್‌ಕ್ಲಬ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕುದುರೆಗಳಿಗೆ ಉದ್ದೀಪನಾ ಮದ್ದುಗಳನ್ನು ನೀಡಿ ರೇಸ್ ಕೋರ್ಸ್‌ನಲ್ಲಿ ಓಡಿಸಲಾಗುತ್ತಿತ್ತು. ಗೆಲ್ಲುವ ಕುದುರೆಗಳನ್ನು ಮೊದಲೇ ಆಯ್ಕೆ ಮಾಡಲಾಗುತ್ತದೆ. ರೇಸ್ ಮುಗಿದ ಬಳಿಕ ಎಲ್ಲಾ ಕುದುರೆಗಳನ್ನು ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಿ ಉದ್ದೀಪನಾ ನೀಡಿರುವ ಕುದುರೆ ಗಳನ್ನು ಅಮಾನತುಗೊಳಿಸಬೇಕು. ಆದರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಚಂದ್ರೇಗೌಡ ಎಂಬುವವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಡೂಪಿಂಗ್ ಟೆಸ್ಟ್‌ನಲ್ಲಿ ಉದ್ದೀಪನ ಸೇವಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಟರ್ಫ್‌ ಕ್ಲಬ್‌ನ ಸಿಇಒ ನಿರ್ಮಲ್ ಪ್ರಸಾದ್, ಪದುಮನ್ ಸಿಂಗ್ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಪ್ರಕರಣವನ್ನು ಸಿಐಡಿ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಇದೀಗ ಸಿಐಡಿ ಅಧಿಕಾರಿಗಳು ಟರ್ಫ್‌ ಕ್ಲಬ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News