ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-05-18 18:49 GMT

ಕೊಪ್ಪಳ, ಮೇ 18: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2018ರ ವಿಧಾನಸಭಾ ಚುನಾವಣೆ ತನ್ನ ನೇತೃತ್ವದಲ್ಲಿ ನಡೆಯಲಿದ್ದು, ಚುನಾವಣೆ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷದ ಹೈಕಮಾಂಡ್ ಹಾಗೂ ನೂತನ ಶಾಸಕಾಂಗ ಪಕ್ಷ ನಿರ್ಧರಿಸಲಿದೆ ಎಂದರು.

ಪಕ್ಷದಲ್ಲಿ ಚುನಾವಣೆಗೆ ಮೊದಲೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವ ಸಂಪ್ರದಾಯ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ ಎಂದ ಸಿದ್ದರಾಮಯ್ಯ, ಒಗ್ಗಟ್ಟು ಪ್ರದರ್ಶನದ ಹಿನ್ನೆಲೆಯಲ್ಲಿ ಎರಡು ಉಪ ಚುನಾವಣೆಗಳನ್ನು ಗೆದ್ದಿದ್ದೇವೆ ಎಂದರು.

ಪ್ರತ್ಯೇಕ ಪ್ರವಾಸವೇಕೆ: ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿದ್ದರೆ ಪ್ರತ್ಯೇಕವಾಗಿ ಬರ ಅಧ್ಯಯನ ಪ್ರವಾಸ ಏಕೆ ಕೈಗೊಳ್ಳುತ್ತಿದ್ದರು. ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಲೇ ಇನ್ನೂ ಭಿನ್ನಮತ ಶಮನವಾಗಿಲ್ಲ ಎಂಬುದನ್ನು ಬಿಜೆಪಿ ನಾಯಕರು ಪ್ರತ್ಯೇಕ ಪ್ರವಾಸ ಮೂಲಕ ತೋರಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡರಿಗೆ ಸುಳ್ಳು ಹೇಳುವುದರಲ್ಲಿ ತರಬೇತಿಯಾಗಿದೆ. ಹೀಗಾಗಿ ಅವರು ಹೋದ ಕಡೆಯಲ್ಲೆಲ್ಲ ಸುಳ್ಳನ್ನೇ ಹೇಳಿಕೊಂಡು ತಿರುಗಾಡುತ್ತಿರುತ್ತಾರೆ ಎಂದ ಅವರು, ಸುಳ್ಳು ಹೇಳುವುದರಲ್ಲಿ ಬಿಜೆಪಿ ನಾಯಕರು ನಿಸ್ಸೀಮರು, ಸುಳ್ಳು ಹೇಳುವುದೇ ಅವರ ಜಾಯಮಾನ ಎಂದು ಟೀಕಿಸಿದರು.

ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ನಡೆಸುತ್ತಿದ್ದು, ಇದರಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ. ಯಾರ ವಿರುದ್ದವೂ ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದರು.

ಮತ್ತೊಮ್ಮೆ ಶಿಫಾರಸ್ಸು: ವಿಧಾನ ಪರಿಷತ್‌ಗೆ ನಾಮನಿರ್ದೇಶನಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಸಲ್ಲಿಸಲಾಗಿದ್ದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರ ಹೆಸರನ್ನು ತಿರಸ್ಕರಿಸಿದ್ದು, ಈ ಬಗ್ಗೆ ತ್ತೊಮ್ಮೆ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ನನಗಿದ್ದು, ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಕ್ಕರೆ ಮುಂದೆ ಯಾವಾಗಲಾದರೂ ನೋಡೋಣ -ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News