ಅಂಬಾನಿ ಆಡಳಿತಕ್ಕೆ ಮೂರು ವರ್ಷ

Update: 2017-05-18 18:57 GMT

ಮೂರು ವರ್ಷ ಪೂರೈಸುತ್ತಿರುವ ಸಂಭ್ರಮ ಕೇಂದ್ರ ಸರಕಾರದ ಯಾವೊಬ್ಬ ನಾಯಕನ ಮುಖದಲ್ಲೂ ಕಾಣಿಸುತ್ತಿಲ್ಲ. ಅಲ್ಲಿ ಸೂತಕದ ನೆರಳಿದೆ. ತಮ್ಮ ಮೂರು ವರ್ಷವನ್ನು ಸಮರ್ಥಿಸಿಕೊಳ್ಳುವ ಹೊಣೆಯನ್ನು ಉಳಿದೆಲ್ಲ ನಾಯಕರೂ ನರೇಂದ್ರ ಮೋದಿಯವರಿಗೇ ಬಿಟ್ಟಂತಿದೆ. ಒಂದೆಡೆ ಕಾಶ್ಮೀರ ಗಾಯ ಉಲ್ಬಣಗೊಂಡು ಸೋರತೊಡಗಿದೆ. ಈಶಾನ್ಯದ ಭಾರತದಲ್ಲಿ ಅಮಾಯಕ ಸೈನಿಕರ ಮೃತದೇಹ ಮೋದಿಯವರ 56 ಇಂಚಿನ ಎದೆಯನ್ನು ಅಣಕಿಸುವಂತಿದೆ.

ಕಾಶ್ಮೀರದಲ್ಲಿ ನಾಗರಿಕರ ಸ್ಥಿತಿ ಪಕ್ಕಕ್ಕಿರಲಿ, ಸೇನಾ ಸಿಬ್ಬಂದಿಗಳು, ಪೊಲೀಸರ ಬದುಕೇ ಅಭದ್ರತೆಯಲ್ಲಿದೆ. ಗೋರಕ್ಷಕರ ಹಿಂಸೆಗೆ ಸರಕಾರದ ಕೈಗಳು ರಕ್ತಸಿಕ್ತವಾಗಿವೆ. ಮೋದಿ ನೀಡಿರುವ ಆಶ್ವಾಸನೆಗಳೆಲ್ಲ ವೌಲ್ಯ ಕಳೆದುಕೊಂಡು ಕಸದ ಬುಟ್ಟಿ ಸೇರಿರುವ ಒಂದು ಸಾವಿರದ ನೋಟುಗಳಂತಾಗಿವೆ. ಐಟಿ ಬಿಟಿಗಳಲ್ಲಿ ಯುವಕರು ಉದ್ಯೋಗಕಳೆದುಕೊಂಡು ಹತಾಶರಾಗಿದ್ದರೆ, ಗಲ್ಲಿಗಳಲ್ಲಿ ಅಂಡಲೆಯುತ್ತಿರುವ ರೌಡಿಗಳೆಲ್ಲ ಗೋರಕ್ಷಕರಾಗಿ, ಸಂಸ್ಕೃತಿ ರಕ್ಷಕರಾಗಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಇನ್ನೂ ‘ಅಚ್ಛೇ ದಿನ್ ಆನೇ ವಾಲಾ ಹೈ’ ಎನ್ನುವ ಮಾತಿಗೇ ನೇಣು ಹಾಕಿಕೊಳ್ಳುವಂತಹ ಸ್ಥಿತಿ ದೇಶದಲ್ಲಿದೆ.

ಕಳೆದ ಮೂರು ವರ್ಷಗಳಲ್ಲಿ ತನ್ನ ಬೇರೇ ಬೇರೆ ಸ್ಫೋಟಕ ನಿರ್ಧಾರಗಳಿಂದ ಸರಕಾರ ನಿರಂತರ ಸುದ್ದಿಯಲ್ಲಿತ್ತು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಒಬ್ಬ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿ ತೆಗೆದುಕೊಳ್ಳಲು ಹಲವು ಬಾರಿ ಯೋಚಿಸಬೇಕಾದ ನಿರ್ಧಾರಗಳನ್ನೆಲ್ಲ ನರೇಂದ್ರ ಮೋದಿ ಸರಕಾರ ಸಲೀಸಾಗಿದೆ ತೆಗೆದುಕೊಂಡಿದೆ. ಚಿಲ್ಲರೆ ಅಂಗಡಿಗಳನ್ನು ವಿದೇಶಿಯರಿಗೆ ಮುಕ್ತವಾಗಿ ತೆರೆದುಕೊಟ್ಟಿತು. ರಕ್ಷಣಾ ಇಲಾಖೆಯನ್ನು ಮುಕ್ತವಾಗಿಸಿತು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಎಂಬೆಲ್ಲ ಘೋಷಣೆಗಳೊಂದಿಗೆ ಉದಾರೀಕರಣವನ್ನು ದೇಶ ಸಂಪೂರ್ಣವಾಗಿ ಒಪ್ಪಿಕೊಳ್ಳುವಂತೆ ಮಾಡಿತು.

ಉದಾರೀಕರಣದ ಕುರಿತಂತೆ ಈ ಹಿಂದೆ ಯುಪಿಎ ಸರಕಾರ ನಿರ್ಧಾರಗಳನ್ನು ತೆಗೆದುಕೊಂಡಾಗ ವ್ಯಕ್ತವಾದ ಮಾಧ್ಯಮಗಳ ಪ್ರತಿಭಟನೆ ಮೋದಿ ಆಡಳಿತದಲ್ಲಿ ಕಾಣಿಸಿಕೊಳ್ಳಲಿಲ್ಲ. ಈ ದೇಶದ ಯಾವುದೇ ಸರಕಾರ ಮಾಧ್ಯಮವನ್ನು ಇಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ. ಮೂರು ವರ್ಷ ಮೋದಿಯ ವರ್ಚಸ್ಸನ್ನು ಕಾಪಾಡುತ್ತಾ ಬಂದಿರುವುದು ಇದೇ ಮಾಧ್ಯಮಗಳಾಗಿವೆ. ಮಾಧ್ಯಮಗಳು ಮೋದಿಯ ಕುರಿತಂತೆ ಕಟ್ಟಿಕೊಟ್ಟ ವ್ಯಕ್ತಿತ್ವವನ್ನು ದೇಶ ನಂಬಿದ ಪರಿಣಾಮವಾಗಿಯೇ ಜನರು ಎಲ್ಲವನ್ನೂ ಸಹಿಸುತ್ತಾ ಬಂದರು. ಮೋದಿ ತೆಗೆದುಕೊಂಡಿರುವ ನಿರ್ಧಾರಗಳು ಭವಿಷ್ಯದಲ್ಲಿ ಒಳ್ಳೆಯದನ್ನು ಮಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅವರು ಮೂರು ಎರಡು ವರ್ಷವನ್ನು ಕಳೆದರು.

ಒಂದು ಕಾಲದಲ್ಲಿ, ಪಾಕಿಸ್ತಾನದ ವಿರುದ್ಧ ಕೆಂಡ ಕಾರುತ್ತಿದ್ದ ಮೋದಿಯು ನವಾಝ್ ಶರೀಫ್ ಅವರ ಮೊಮ್ಮಗಳ ಮದುವೆಯಲ್ಲಿ ಬಿರಿಯಾನಿ ಉಂಡು ಬಂದಾಗಲೂ ಅದನ್ನು ‘ರಾಜತಾಂತ್ರಿಕತೆ’ ಎಂದು ಒಪ್ಪಿಕೊಂಡು ಜನರು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡರು. ಆದರೆ ಇದಾದ ಬೆನ್ನಿಗೇ ಕಾಶ್ಮೀರದಲ್ಲಿ ಸೇನೆಯ ಮೇಲೆ ಪದೇ ಪದೇ ದಾಳಿ ನಡೆಯತೊಡಗಿದವು. ನಾಗರಿಕರಿಗೆ ರಕ್ಷಣೆ ಕೊಡಬೇಕಾದ ಸೇನೆಯೇ ಉಗ್ರರಿಗೆ ಸುಲಭದಲ್ಲಿ ಬಲಿಪಶುವಾಗುತ್ತಿರುವುದನ್ನು ದೇಶ ಅಸಹಾಯಕತೆಯಿಂದ ನೋಡತೊಡಗಿತು. ಪಠಾಣ್‌ಕೋರ್ಟ್‌ನಲ್ಲಿ ಉಗ್ರರ ದಾಳಿ ಹತ್ತು ಹಲವು ಅನುಮಾನಗಳನ್ನು ಜನರಲ್ಲಿ ಬಿತ್ತಿತು. ಕಾಶ್ಮೀರದಲ್ಲಿ ಸೇನೆಯ ಮೇಲೆ ಉಗ್ರರು ದಾಳಿ ನಡೆಸಿ 20ಕ್ಕೂ ಅಧಿಕ ಸೈನಿಕರನ್ನು ಕೊಂದಾಗ, ಸರಕಾರದ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು.

ಕೆಲವೇ ದಿನಗಳಲ್ಲಿ ವಿವಾದಾತ್ಮಕ ‘ಸರ್ಜಿಕಲ್ ಸ್ಟ್ರೈಕ್’ನ್ನು ಸರಕಾರ ಘೋಷಿಸಿತು. ರಾತ್ರೋರಾತ್ರಿ ನಮ್ಮ ಸೇನೆ ಗಡಿದಾಟಿ ಪಾಕಿಸ್ತಾನದ ಭಾಗದಲ್ಲಿರುವ ಉಗ್ರರ ಶಿಬಿರಗಳನ್ನು ನಾಶ ಪಡಿಸಿತು ಎಂದು ಸೇನೆಯ ಮುಖ್ಯಸ್ಥರೇ ಪತ್ರಿಕಾಗೋಷ್ಠಿ ಕರೆದರು. ಸರಕಾರದ ಸಚಿವರೂ ಅದರಲ್ಲಿ ಭಾಗವಹಿಸಿದ್ದರು. ತಾನು ಎದುರು ದೇಶಗಳ ಮೇಲೆ ನಡೆಸಿದ ದಾಳಿಯನ್ನು ಸೇನೆ ಪತ್ರಿಕಾಗೋಷ್ಠಿಯನ್ನು ಕರೆದು ವಿವರಿಸುವುದು ದೇಶದ ಇತಿಹಾಸದಲ್ಲೇ ಮೊದಲು. ಸೇನೆಯ ಈ ಕ್ರಮದ ಕುರಿತಂತೆ ಪರ ವಿರೋಧ ಟೀಕೆಗಳು ಕೇಳಿ ಬಂದವು. ಕೆಲವರಂತೂ ಸರ್ಜಿಕಲ್ ದಾಳಿ ನಡೆದೇ ಇಲ್ಲ, ಇದು ಸರಕಾರ ತನ್ನ ಮಾನ ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಎಂದರು.

ಮತ್ತೆ ಕೆಲವರು, ಇಂತಹ ದಾಳಿಗಳು ಉಭಯ ದೇಶಗಳ ನಡುವೆ ಈ ಹಿಂದೆಯೂ ನಡೆದಿದ್ದವು. ಆದರೆ ಸರಕಾರ ಯಾವತ್ತೂ ಅವುಗಳನ್ನು ಬಹಿರಂಗಗೊಳಿಸುತ್ತಿರಲಿಲ್ಲ. ಸೇನೆಯ ಪತ್ರಿಕಾಗೋಷ್ಠಿ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂಬ ವ್ಯಾಖ್ಯಾನಗಳೂ ಹೊರ ಬಿದ್ದವು. ಆದರೆ ಸರ್ಜಿಕಲ್ ಸ್ಟ್ರೈಕ್‌ನ್ನು ಅಣಕಿಸುವಂತೆ ನಮ್ಮ ಸೈನಿಕರು ಬಲಿಪಶುಗಳಾಗುತ್ತಲೇ ಇದ್ದಾರೆ. ಇವುಗಳ ಬೆನ್ನಿಗೇ ಸೇನೆಯ ಒಳಗಿರುವ ಹಲವು ಭಾರತೀಯ ಯೋಧರು, ವ್ಯವಸ್ಥೆಯೊಳಗಿರುವ ಅಕ್ರಮಗಳನ್ನು ಬಹಿರಂಗ ಪಡಿಸಿ ಪ್ರಾಣವನ್ನೂ, ಹುದ್ದೆಯನ್ನು ಕಳೆದುಕೊಂಡರು.

ಸರಕಾರವೇ ಹೇಳಿಕೊಂಡಂತೆ ‘ನೋಟು ನಿಷೇಧ’ ಮೋದಿ ನೇತೃತ್ವದಲ್ಲಿ ನಡೆದ ಇನ್ನೊಂದು ಸರ್ಜಿಕಲ್ ಸ್ಟ್ರೈಕ್. ದೇಶದೊಳಗಿರುವ ಕಪ್ಪು ಹಣವನ್ನು ಹೊರಗೆ ತರಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೋದಿ ಘೋಷಿಸಿದರು. ಕಪ್ಪು ಹಣ ಬರಲಿಲ್ಲ. ಭಯೋತ್ಪಾದನೆಯನ್ನು ತಡೆಯಲು, ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಲ್ಲಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆ ಬಳಿಕ ತಿದ್ದಿದರು. ಕಾಶ್ಮೀರದಲ್ಲಿ ಉಗ್ರರ ದಾಂಧಲೆ ಹೆಚ್ಚಾಗಿದೆ. ಕಲ್ಲು ತೂರಾಟ ನಿಲ್ಲಲಿಲ್ಲ. ಇದೆಲ್ಲ ಮುಗಿದ ಬಳಿಕ ‘ಕ್ಯಾಶ್‌ಲೆಸ್ ಇಕಾನಮಿ’ಯೇ ಮುಖ್ಯ ಉದ್ದೇಶ ಎಂದು ಸರಕಾರ ಹೇಳಿಕೊಂಡಿತು. ಭ್ರಷ್ಟರ ಹಣವೆಲ್ಲ ದೇಶದ ಖಜಾನೆಗೆ ತಲುಪುತ್ತದೆ ಎಂದು ಜನರು ಕಷ್ಟಗಳನ್ನು ಸಹಿಸಿಕೊಂಡರಾದರೂ, ದೇಶದ ಖಜಾನೆಗೆ ಯಾವ ಭ್ರಷ್ಟರ ಹಣವೂ ಬಂದು ಬೀಳಲಿಲ್ಲ. ಈವರೆಗೆ ವಶಪಡಿಸಿಕೊಂಡ ಕಪ್ಪು ಹಣ ಎಷ್ಟು ಎನ್ನುವುದನ್ನು ಸರಕಾರ ವಿವರಿಸಲು ಸಂಪೂರ್ಣ ವಿಫಲವಾಗಿದೆ.

ನೋಟಿನ ಕೊರತೆಯನ್ನು ಸರಿಪಡಿಸಲು ಸರಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಡಿಜಿಟಲ್ ಬ್ಯಾಂಕಿಂಗ್‌ನಿಂದಾಗಿ ಕಾರ್ಪೊರೇಟ್ ಸಂಸ್ಥೆಗಳು ಅಪಾರ ಲಾಭಗಳನ್ನು ತಮ್ಮದಾಗಿಸಿಕೊಂಡವು. ಮುಳುಗುತ್ತಿದ್ದ ಬ್ಯಾಂಕುಗಳೂ ಚೇತರಿಸಿಕೊಂಡವು. ಆದರೆ ಸಣ್ಣ ಪುಟ್ಟ ಉದ್ದಿಮೆಗಳು ಸಂಪೂರ್ಣ ನೆಲಕಚ್ಚಿದವು. ಇಂದಿಗೂ ಈ ಉದ್ದಿಮೆಗಳು ತಲೆಯೆತ್ತಿ ನಿಲ್ಲುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೋಟು ನಿಷೇಧದಿಂದಾಗಿ ತೀವ್ರ ನಿರುದ್ಯೋಗ ಕಾಡುತ್ತಿವೆ. ಕೃಷಿ ಉದ್ಯಮದ ಮೇಲೂ ಹಾನಿ ಮಾಡಿದೆ. ನೋಟುಗಳ ಮೇಲೆ ಬ್ಯಾಂಕ್‌ಗಳು ಸಂಪೂರ್ಣ ನಿಯಂತ್ರಣ ಹೊಂದಿರುವುದರಿಂದ, ವ್ಯವಹಾರಗಳ ಸರಪಣಿಗಳಿಗೇ ಘಾಸಿಯಾಗಿದೆ. ಚಿಲ್ಲರೆ ಅಂಗಡಿಗಳು ಮುಚ್ಚುವ ಹಂತಕ್ಕೆ ಬಂದಿದ್ದರೆ, ಬೃಹತ್ ಮಾಲ್‌ಗಳು ಚಿಗುರಿಕೊಳ್ಳುತ್ತಿವೆ. ದೇಶದ ಉತ್ಪಾದನೆಯಲ್ಲಿ ಗಣನೀಯ ಇಳಿಕೆಗಳು ಕಂಡು ಬರುತ್ತಿವೆ.

ಅಧಿಕಾರಕ್ಕೇರಿದ ಸಂದರ್ಭದಲ್ಲಿ ತನ್ನೆಲ್ಲ ಆರ್ಥಿಕ ನೀತಿಯ ಬದಲಾವಣೆಗಳಿಗೆ ಮೋದಿಯವರು ನೀಡಿದ ದೊಡ್ಡ ಸಮರ್ಥನೆ ದೇಶದಲ್ಲಿ ಉದ್ಯೋಗಗಳು ಹೆಚ್ಚುತ್ತವೆ ಎನ್ನುವುದಾಗಿತ್ತು. ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿಯವರು, ಪ್ರತಿವರ್ಷ ಒಂದು ಕೋಟಿ ಉದ್ಯೋಗಾವಕಾಶಗಳ ಭರವಸೆಯನ್ನು ನೀಡಿದ್ದರು. ಆದರೆ ಈ ಭರವಸೆಯನ್ನು ನರೇಂದ್ರ ಮೋದಿಯವರಿಗೆ ಈಡೇರಿಸಲು ಸಾಧ್ಯವಾಗಲಿಲ್ಲ ಮಾತ್ರವಲ್ಲ, ನೋಟು ನಿಷೇಧದಿಂದಾಗಿ ಗ್ರಾಮೀಣ ಪ್ರದೇಶ ತೀವ್ರ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ಎದುರಿಸುವಂತಾಗಿದೆ. ದೇಶದ ಹಿಂಸೆ ನಿಧಾನಕ್ಕೆ ಹೆಚ್ಚುತ್ತಾ ಇದ್ದರೆ, ಅದರ ಹಿಂದೆ ಈ ನಿರುದ್ಯೋಗದ ಸಮಸ್ಯೆ ತನ್ನ ಪರಿಣಾಮ ಬೀರಿರುವುದನ್ನು ನಿರಾಕರಿಸುವಂತಿಲ್ಲ.

ಈ ಮೂರು ವರ್ಷದಲ್ಲಿ ಕಾರ್ಪೊರೇಟ್ ವಲಯ ಸರ್ವ ರೀತಿಯಲ್ಲಿ ದೇಶದ ಆರ್ಥಿಕ ನೀತಿಯನ್ನು ತಮಗೆ ಪೂರಕವಾಗಿ ಬದಲಿಸಿಕೊಂಡಿದೆ ಮತ್ತು ದೇಶದಲ್ಲಿ ಬಡವರು-ಶ್ರೀಮಂತರ ನಡುವಿನ ಅಂತರ ಇನ್ನಷ್ಟು ಹೆಚ್ಚಿದೆ. ಪ್ರಧಾನಿ ಮೋದಿಯನ್ನು ಕಾರ್ಪೊರೇಟ್ ಶಕ್ತಿಗಳೇ ಸರ್ವ ರೀತಿಯಲ್ಲಿ ನಿಯಂತ್ರಿಸುತ್ತಾ ಬಂದಿರುವ ಪರಿಣಾಮ ಇದು. ಆದುದರಿಂದಲೇ, ಮೋದಿ ಸರಕಾರಕ್ಕೆ ಮೂರು ವರ್ಷ ಎನ್ನುವುದಕ್ಕಿಂತ ಅಂಬಾನಿ ಸರಕಾರಕ್ಕೆ ಮೂರು ವರ್ಷ ಎನ್ನುವ ಸಾಲೇ ದೇಶದ ಸದ್ಯದ ಸ್ಥಿತಿಯನ್ನು ಸಮರ್ಥವಾಗಿ ವ್ಯಾಖ್ಯಾನಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News