‘ಬದಲಾವಣೆ ಛಾತಿಯುಳ್ಳವರು ರಾಜಕೀಯಕ್ಕೆ ಬರಲಿ’

Update: 2017-05-21 19:06 GMT

ಬೆಂಗಳೂರು, ಮೇ 21: ವೇದಿಕೆಗಳಲ್ಲಿ ಭಾಷಣ ಬೀಗಿಯುವರಿಗಿಂತ ಬದಲಾವಣೆ ಛಾತಿಯುಳ್ಳವರು ಇಂದಿನ ರಾಜಕೀಯಕ್ಕೆ ತೀರಾ ಅಗತ್ಯವಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪಕ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ರಾಜಕಾರಣದಲ್ಲಿದ್ದೇನೆ, ಆದರೆ ಪಕ್ಷದ ರಾಜಕಾರಣದಲ್ಲಿ ಗುರುತಿಸಿಕೊಂಡಿಲ್ಲ. ಪ್ರಸ್ತುತ ರಾಜಕಾರಣ ನೋಡಿದರೆ ಹೇಸಿಗೆ ಹುಟ್ಟಿಸುತ್ತಿದೆ. ಈಗೀನ ರಾಜಕಾರಣಕ್ಕೆ ಮಾತನಾಡುವವರಿಗಿಂತ ಬದಲಾವಣೆ ತರುವ ಧೈರ್ಯವಂತ ವ್ಯಕ್ತಿಗಳು ಬರಬೇಕು. ಇಲ್ಲದಿದ್ದರೆ ಮೂರು ಕಾಸಿನ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.

ಕನ್ನಡ ನಾಡು ನುಡಿ ರಕ್ಷಣೆಗೆ ಪಕ್ಷಗಳನ್ನು ಕಟ್ಟುವ, ಚಳವಳಿಗಳನ್ನು ರೂಪಿಸಲು ನಾನಾ ಪ್ರಯತ್ನಗಳಾಗಿವೆ. ಇವ್ಯಾವು ಸಫಲಗೊಂಡಿಲ್ಲ.ಕನ್ನಡ ಉಳಿಸಿ ಬೆಳೆಸಬೇಕು ಎಂದು ಕೇವಲ ಆಸೆ ಪಟ್ಟರೆ ಸಾಲದು.ಬದಲಾವಣೆ ತರಲು ಪ್ರಯತ್ನಿಸಬೇಕು. ಕನ್ನಡಕ್ಕೆ, ರಾಜ್ಯಕ್ಕೆ ಅನ್ಯಾಯವಾದಾಗ ಕನ್ನಡಪರ ಸಂಘಟನೆಗಳು, ಪಕ್ಷಗಳು ಒಂದುಗೂಡಿ ಕೆಲಸ ಮಾಡುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಯಾರ್ಯಾರಿಗೆ ಟಿಕೇಟ್ ನೀಡಬೇಕು ಎಂಬುವುದು ದೆಹಲಿಯಲ್ಲಿ ನಿರ್ಧಾರವಾಗುತ್ತಿವೆ.ಈ ಪರಿಣಾಮ ಜನತಾ ಪ್ರತಿನಿಧಿಗಳು ಯಾರು ಇಲ್ಲ. ಮೋದಿ, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಪಕ್ಷದ ಪ್ರತಿನಿಧಿಗಳು ಎನ್ನುತ್ತಾರೆಯೇ ವಿನಃ ಜನಪ್ರತಿನಿಧಿಗಳೆಂದು ಹೇಳುಕೊಳ್ಳುವುದಿಲ್ಲ. ನಿಮ್ಮ ಪಕ್ಷದಲ್ಲಿ ಆಗಾಗಬಾರದು. ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನರ ನಿರ್ಧಾರಕ್ಕೆ ಬಿಡಿ. ಪಕ್ಷವನ್ನು ರಚನಾತ್ಮಕವಾಗಿ ಬದಲಾವಣೆ ಸಿದ್ದಾಂತದ ಮೇಲೆ ಪಕ್ಷವನ್ನು ಸಂಘಟಿಸಿ ಎಂದು ಮಾರ್ಗದರ್ಶನ ನೀಡಿದರು.ಇದೇ ವೇಳೆ ಕನ್ನಡ ಪಕ್ಷಕ್ಕೆ ಸೇರ್ಪಡೆಯಾದ ರಂಗಕರ್ಮಿ , ಪಕ್ಷದ ಹಿರಿಯ ಉಪಾಧ್ಯಕ್ಷ ಪ್ರಕಾಶ್ ಬೆಳವಾಡಿ ಮಾತನಾಡಿ,ಕನ್ನಡದಲ್ಲಿ ಹಿಂದಿ ಹೇರಿಕೆ ಹುನ್ನಾರಗಳು ನಡೆಯುತ್ತಿವೆ. ಈ ಹುನ್ನಾರದ ವಿರುದ್ಧ ಕನ್ನಡಿಗರು ಹೋರಾಟ ನಡೆಸದಿದ್ದರೆ ರಾಜ್ಯದಲ್ಲಿ ದ್ವಿತೀಯ ದರ್ಜೆ ಪ್ರಜೆಗಳಂತೆ ಬಾಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ರಕ್ಷಣೆಗಾಗಿ ಅರಸು ಕಾಲದಿಂದ ಯಡಿಯೂರಪ್ಪನವರ ಕಾಲದವರಗೆ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿವೆ. ಇವೆಲ್ಲವೂ ಇಂದು ಮೂಲೆಗುಂಪಾಗಿವೆ. ಇವುಗಳ ಮಧ್ಯೆ ಕೋಮುವಾದವಿಲ್ಲದ, ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲದ, ವ್ಯಕ್ತಿ ಪೂಜೆಯಿಲ್ಲದ ಸಿದ್ದಾಂತಗಳನ್ನು ಕನ್ನಡ ಪಕ್ಷ ಉಳಿಸಿಕೊಂಡಿದೆ.

ಈ ಕಾರಣ ಕನ್ನಡ ಪಕ್ಷವನ್ನು ಆಯ್ಕೆ ಮಾಡಿಕೊಂಡೆ ಎಂದರು.ಚುನಾವಣೆಯಲ್ಲಿ ಸ್ಪರ್ಧಿಸಲು ಕನ್ನಡ ಪಕ್ಷವನ್ನು ಆಯ್ಕೆ ಮಾಡಿಕೊಂಡಿಲ್ಲ. ಪಕ್ಷ ನನಗೆ ದೊಡ್ಡ ಜವಾಬಾರಿಯನ್ನೇ ನೀಡಿದೆ. ಪಕ್ಷದ ಸಿದ್ಧಾಂತಗಳಿಗೆ ಬದ್ಧವಾಗಿ, ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ.ಪಕ್ಷದ ಇತಿಹಾಸವನ್ನು ಜನರಲ್ಲಿ ಅರಿವು ಮೂಡಿಸಿ, ಪಕ್ಷವನ್ನು ಬಲಪಡಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ ಪುರುಷೋತ್ತಮ ಅವರು ಅರ್ಜುನ್, ಮುರಳಿ ಶಿವರಾಮಕೃಷ್ಣ, ನಿವೇದಿತಾ ಯೋಗೇಶ್ ಸೇರಿದಂತೆ ಇತರರನ್ನು ಪಕ್ಷದ ಶಾಲೂ ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.ಈ ವೇಳೆ ಉಪಾಧ್ಯಕ್ಷ ಶ್ರೀಪಾದ್‌ರಾವ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News