ಮಲಪ್ಪುರಂನ ಈ ಮಸೀದಿಯ ವಿಶೇಷವೇನು ಗೊತ್ತೇ?

Update: 2017-05-23 04:04 GMT

ಮಲಪ್ಪುರಂ, ಮೇ 23: ನಮಾಝ್ ಗೆ ನೀಡುವ ಆಝಾನ್ ಇವರಿಗೆ ಕೇಳಿಸದಿರಬಹುದು. ಆದರೆ ಭಿನ್ನ ಸಾಮರ್ಥ್ಯದವರಿಗಾಗಿಯೇ ನಿರ್ಮಿಸಿರುವ ಇಲ್ಲಿನ ಹೊಸ ಮಸೀದಿಯಲ್ಲಿ ಸಂಕೇತಗಳ ಮೂಲಕ ಧರ್ಮೋಪದೇಶವನ್ನು ಸಾರುವ ವ್ಯವಸ್ಥೆಯನ್ನು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಆರಂಭಿಸಲಾಗಿದೆ. 

ಮಲಪ್ಪುರಂನ ಪುಲಿಕ್ಕಲ್ ಮಸ್ಜಿದ್ ಅಲ್-ರಹ್ಮಾ ಮಸೀದಿಯನ್ನು ಐದು ಎಕರೆ ವಿಶಾಲ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದ್ದು, ಸೋಮವಾರ ಇದು ಲೋಕಾರ್ಪಣೆಯಾಗಿದೆ. ಇಲ್ಲಿನ ವಿಶೇಷವೆಂದರೆ ಶುಕ್ರವಾರದ ನಮಾಝ್ ಪ್ರವಚನ (ಕುತುಬಾ)ವನ್ನು ಸಂಜ್ಞೆ ಅಥವಾ ಸಂಕೇತದ ಭಾಷೆಯಲ್ಲಿ ನೀಡಲಾಗುತ್ತದೆ. ಈ ವ್ಯವಸ್ಥೆ ಆರಂಭಿಸಿರುವ ದೇಶದ ಮೊಟ್ಟಮೊದಲ ಮಸೀದಿ ಎಂಬ ಹೆಗ್ಗಳಿಕೆ ಈ ಮಸೀದಿಯದ್ದು. ಅಂತೆಯೇ ಪ್ರತಿ ಪ್ರಾರ್ಥನಾ ಸಭೆಯ ಧರ್ಮೋಪದೇಶಕ್ಕೂ ಸಂಜ್ಞಾ ಭಾಷೆ ತಜ್ಞರ ಸೇವೆ ಲಭ್ಯ ಇರುತ್ತದೆ. ಇದನ್ನು ಮಸೀದಿ ಗೋಡೆಗಳಿಗೆ ಅಳವಡಿಸಿರುವ ಬೃಹತ್ ಎಲ್‌ಸಿಡಿ ಪರದೆಗಳನ್ನು ಪ್ರದರ್ಶಿಸಲಾಗುತ್ತದೆ. 500 ಮಂದಿ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

"ಇತರ ಅಂಗವೈಕಲ್ಯದ ಜನರಿಗೆ ಧಾರ್ಮಿಕ ಪ್ರವಚನಗಳ, ಧರ್ಮಬೋಧನೆಯ ಸಾರ ತಿಳಿಯುವ ವ್ಯವಸ್ಥೆ ಇತ್ತು. ಆದರೆ ಶ್ರವಣದೋಷ ಹೊಂದಿದವರಿಗೆ ಈ ಸೌಲಭ್ಯ ಇರಲಿಲ್ಲ. ಆದರೆ ಇದೀಗ ಅವರಿಗೂ ಈ ಅವಕಾಶ ದೊರಕಲಿದೆ" ಎಂದು ಎಬಿಲಿಟಿ ಫೌಂಡೇಷನ್ ಅಧ್ಯಕ್ಷ ಮುಸ್ತಫಾ ಮದನಿ ಹೇಳಿದ್ದಾರೆ. ಮಸೀದಿಯ ಶೌಚಾಲಯಗಳಲ್ಲಿ ಕೂಡಾ ರ್ಯಾಂಪ್, ಆರ್ಮ್ ರೆಸ್ಟ್‌ನಂಥ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮದನಿ ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಮಂದಿ ಭಿನ್ನ ಸಾಮರ್ಥ್ಯದ ಮಕ್ಕಳಿದ್ದು, ಈ ಪೈಕಿ 200 ಮಂದಿ ಶ್ರವಣದೋಷ ಹೊಂದಿದವರು. ಈ ಹಿನ್ನೆಲೆಯಲ್ಲಿ ಅವರ ಅಗತ್ಯತೆಯನ್ನು ಮನಗಂಡು ಹೊಸ ಮಸೀದಿಯಲ್ಲಿ ಈ ವಿನೂತನ ವ್ಯವಸ್ಥೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News