ಉಗ್ರರಿಗೆ 1000 ಕೋಟಿ ಹಣ ಪೂರೈಕೆ: ಜುವೆಲ್ ಗರ್ಲೊಸ, ನಿರಂಜನ್ ಸೇರಿ 16 ಮಂದಿ ತಪ್ಪಿತಸ್ಥರು

Update: 2017-05-23 06:33 GMT

ಗುವಹಾಟಿ,ಮೇ 23 : ಅಸ್ಸಾಂ ರಾಜ್ಯದ ಎನ್ ಸಿ ಹಿಲ್ಸ್ ಜಿಲ್ಲೆಯ ಉಗ್ರರಿಗೆ ರೂ 1000 ಕೋಟಿ ಹಣ ಪೂರೈಕೆ ಮಾಡಿದ ಪ್ರಕರಣದಲ್ಲಿ ಹಿಂದೆ ತೀವ್ರಗಾಮಿಗಳಾಗಿದ್ದು ನಂತರ ರಾಜಕೀಯಕ್ಕೆ ಧುಮುಕಿದ್ದ ಜುವೆಲ್ ಗರ್ಲೊಸ ಮತ್ತು ನಿರಂಜನ್ ಹೊಜೈ ಅವರೂ ಸೇರಿದಂತೆ ಒಟ್ಟು 16 ಮಂದಿಯನ್ನು ಗುವಹಾಟಿಯ ಉಗ್ರ ನಿಗ್ರಹ ನ್ಯಾಯಾಲಯವೊಂದು ದೋಷಿಗಳೆಂದು ಘೋಷಿಸಿದೆ.

ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇಂದು ಘೋಷಿಸಲಿದೆ. ಇದೀಗ ವಿಸರ್ಜಿಸಲ್ಪಟ್ಟಿರುವ ಉಗ್ರ ಸಂಘಟನೆ ಡಿಎಚ್‌ಡಿ(ಜೆ) ಅಧ್ಯಕ್ಷ ಜುವೆಲ್ ಗರ್ಲೊಸ, ಆತನ ಕಮಾಂಡರ್-ಇನ್-ಚೀಫ್ ನಿರಂಜನ್ ಹೊಜೈ ಇದೀಗ ದಿಮ ಹಸಾವೊ ಜಿಲ್ಲೆಯಾಗಿರುವ ಎನ್‌ಸಿ ಹಿಲ್ಸ್ ನಲ್ಲಿ ರೂ 1000 ಕೋಟಿ ಸರಕಾರಿ ಹಣವನ್ನು ವಂಚನೆಯ ಮೂಲಕ ದುರುಪಯೋಗಪಡಿಸಿದ್ದಾರೆಂದು ಆರೋಪಿಸಲಾಗಿತ್ತು.

ಉಗ್ರ ನಿಗ್ರಹ ಕಾಯಿದೆ, ಅಕ್ರಮ ವ್ಯವಹಾರ ನಿಯಂತ್ರಣ ಕಾಯಿದೆ, ಶಸ್ತ್ರಾಸ್ತ್ರ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ ಗಳನ್ವಯ ಅವರನ್ನು ಅಪರಾಧಿಗಳೆಂದು ಘೋಷಿಸಲಾಗಿದೆ.

ಪ್ರಕರಣದ ಚಾರ್ಜ್ ಶೀಟ್ ಅನ್ನು ಎನ್ ಐ ಎ 2009ರಲ್ಲಿ ದಾಖಲಿಸಿತ್ತು. ಎನ್ ಸಿ ಹಿಲ್ಸ್ ಸ್ವಾಯತ್ತ ಕೌನ್ಸಿಲ್ ನ ಮಾಜಿ ಮುಖ್ಯ ಸದಸ್ಯ ಮೊಹೆತ್ ಹೊಜೈ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್ ಎಚ್ ಖಾನ್ ಮತ್ತಿತರ 12 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ.

ಸರಕಾರದ ರೂ 1000 ಕೋಟಿ ಹಣವನ್ನು ಇಲ್ಲದ ಫಲಾನುಭವಿಗಳ ಹೆಸರಿನಲ್ಲಿ ಪಡೆದು ರಾಜ್ಯದಲ್ಲಿ ಉಗ್ರ ಚಟುವಟಿಕೆ ನಡೆಸುವ ಸಲುವಾಗಿ ವಿದೇಶಗಳಿಂದ ಶಸ್ತ್ರಾಸ್ತ್ರ ಖರೀದಿಸಲು ಅವರು ಜುವೆಲ್ ಗೆ ನೀಡಿದ್ದರು.

2009ರಲ್ಲಿ ಕನಿಷ್ಠ ರೂ 16 ಕೋಟಿಯನ್ನು ಆಗ ನೇಪಾಳದಲ್ಲಿ ಅಡಗಿಕೊಂಡಿದ್ದ ಡಿಎಚ್‌ಡಿ ನಾಯಕರಿಗೆ ನೀಡಲಾಗಿತ್ತೆಂದೂ ತನಿಖೆಯಿಂದ ತಿಳಿದು ಬಂದಿತ್ತು.

ಡಿಎಚ್‌ಡಿ (ಜೆ) ಉಗ್ರಗಾಮಿಗಳಾದ ಫೊಜೇಂದ್ರೊ ಹೊಜೈ ಹಾಗೂ ಬಾಬುಲಾಲ್ ಕೆಮ್ರಪಾಲ್ ಅವರನ್ನು ಎಪ್ರಿಲ್ 2009ರಲ್ಲಿ ರೂ 1 ಕೋಟಿ ಶಸ್ತ್ರಾಸ್ತ್ರ ಹಗರಣ ಸಂಬಂಧ ಬಂಧಿಸಿದಾಗ ಇನ್ನೊಂದು ದೊಡ್ಡ ಹಗರಣ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News