ಸಾಮಾಜಿಕ ನ್ಯಾಯದ ಹೋರಾಟಕ್ಕೆ ಅಂಬೇಡ್ಕರ್ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-05-23 17:19 GMT

ಬೆಂಗಳೂರು, ಮೇ 23: ಜಾತಿ ವ್ಯವಸ್ಥೆ ನಿರ್ಮೂಲನೆಯಾಗದೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧ್ಯವಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದು ಶ್ಲಾಘಿಸಿದ್ದಾರೆ.

ಮಂಗಳವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್‌ರವರ 125ನೆ ಜನ್ಮ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಸಾಮಾಜಿಕ ನ್ಯಾಯ ಮತ್ತು ಅಂಬೇಡ್ಕರ್’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಅಸ್ಪಶ್ಯತೆ, ಜಾತಿಯ ಅಸಮಾನತೆಯನ್ನು ಕೇವಲ ಕಾನೂನುಗಳಿಂದ ತೊಡೆದು ಹಾಕಲು ಸಾಧ್ಯವಿಲ್ಲ. ಅಸ್ಪಶ್ಯತೆ ಆಚರಿಸುವವರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಬೇಕೆಂದ ಅವರು, ಒಂದು ವೇಳೆ ಅಂಬೇಡ್ಕರ್ ಅವರು ಹುಟ್ಟದೆ ಹೋಗಿದ್ದರೆ, ‘ಸಾಮಾಜಿಕ ನ್ಯಾಯ’ ತತ್ವದ ತಳಹದಿಯ ಮೇಲೆ ನಿಂತ ಸಂವಿಧಾನ ರೂಪಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದರು.

‘ರಾಜಕೀಯ ಅಧಿಕಾರ ಶ್ರೀಮಂತರ ಕೈಯಲ್ಲಿ ಇರಬಾರದು’ ಎಂದು ಅಂಬೇಡ್ಕರ್ ಹೇಳುತ್ತಿದ್ದರು ಎಂದ ಸಿದ್ಧರಾಮಯ್ಯ, ಬಹಳಷ್ಟು ಜನರಿಗೆ ತಾವು ಗುಲಾಮಗಿರಿಯಲ್ಲಿ ಬದುಕುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಅವರಿಗೆ ಚುಚ್ಚಿ ಹೇಳಿದಾಗ ಅರಿವಿಗೆ ಬರುತ್ತದೆ ಎಂದು ಅಂಬೇಡ್ಕರ್ ನಂಬಿದ್ದರು. ಅದೇ ಕಾರಣಕ್ಕಾಗಿ ಅವರು ಹೋರಾಟ ಮಾಡಿದ್ದಾರೆ. ಆದರೂ, ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ ಎಂದು ಉಲ್ಲೇಖಿಸಿದರು.

ದಲಿತ, ಹಿಂದುಳಿದ ಮತ್ತು ಶೋಷಣೆಗೆ ಗುರಿಯಾದ ಜನರಿಗೆ ಅವಕಾಶಗಳನ್ನು ಕಲ್ಪಿಸಬೇಕು. ಅನ್ಯಾಯಕ್ಕೊಳಗಾದವರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಸಿದ್ಧರಾಮಯ್ಯ ಹೇಳಿದರು.

ಅಂಬೇಡ್ಕರ್ ಅವರ ಜನ್ಮ ವರ್ಷಾಚರಣೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಜುಲೈ 21ರಿಂದ 3 ದಿನಗಳ ಕಾಲ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗುವುದು. ಒಟ್ಟು 58 ದೇಶಗಳ ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿದ ವ್ಯಕ್ತಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಊಟದಿಂದ ಪರಿವರ್ತನೆ ಅಸಾಧ್ಯ: ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ತರುತ್ತೇವೆ ಎಂದು ಕೆಲವರು ಭಾವಿಸಿದ್ದಾರೆ. ಇನ್ನು ಕೆಲವರು ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ತೆಗೆದುಕೊಂಡು ಹೋಗಿ ದಲಿತರ ಮನೆಯಲ್ಲಿ ತಿನ್ನುತ್ತಾರೆ. ಪೀಠೋಪಕರಣ, ಹವಾನಿಯಂತ್ರಿತ ವ್ಯವಸ್ಥೆಯನ್ನು ತೆಗೆದುಕೊಂಡು ಹೋಗಿ ದಲಿತರ ಮನೆಯಲ್ಲಿ ವಾಸ್ತವ್ಯದ ನಾಟಕ ಆಡುತ್ತಿದ್ದಾರೆಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರನ್ನು ಟೀಕಿಸಿದರು.

ದೇಶವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವವರಿಂದ ನಾವು ರಾಷ್ಟ್ರೀಯತೆಯ ಪಾಠ ಕಲಿಯಬೇಕಿಲ್ಲ. ಅಂಬೇಡ್ಕರ್ ನಮ್ಮೆಲ್ಲರಿಗೂ ನೈಜ ರಾಷ್ಟ್ರೀಯತೆಯೇನು ಎಂಬುದನ್ನು ಕಲಿಸಿದ್ದಾರೆ. ಶೋಷಣೆ, ಜಾತಿಯ ವರ್ಗೀಕರಣದ ಮಧ್ಯೆಯೂ ನಾವು ಹೇಗೆ ಒಗ್ಗಟ್ಟಾಗಿರಬೇಕೆಂದು ಗೊತ್ತಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದೇ ಸಂದರ್ಭದಲ್ಲಿ ದಲೈಲಾಮಾ ರಚಿಸಿರುವ ‘ಪ್ರೀತಿ ಮತ್ತು ಕರುಣೆ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ವಿಚಾರ ಸಂಕಿರಣದಲ್ಲಿ ನೊಬಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಬೌದ್ಧದಮ್ಮ ಗುರು ದಲೈಲಾಮಾ, ಲೋಕೋಪಯೋಗಿ ಸಚಿವ ಡಾ.ಎಚ್. ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News