ಸಲಿಂಗಿ ವಿವಾಹ: ಐತಿಹಾಸಿಕ ತೀರ್ಪಿಗೆ ತೈವಾನ್ ನಲ್ಲಿ ಕ್ಷಣಗಣನೆ

Update: 2017-05-24 03:39 GMT

ತೈಪೆ, ಮೇ 24: ಸಲಿಂಗಿ ವಿವಾಹವನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ತೈವಾನ್ ಪಾತ್ರವಾಗುವ ನಿರೀಕ್ಷೆ ಇದೆ. ಸಲಿಂಗಿ ವಿವಾಹಕ್ಕೆ ಅವಕಾಶ ನೀಡಬಹುದೇ ಎಂಬ ಬಗೆಗಿನ ಅರ್ಜಿಯನ್ನು ಇತ್ಯರ್ಥಪಡಿಸಿ ಅಲ್ಲಿನ ಸುಪ್ರೀಂಕೋರ್ಟ್ ನೀಡಲಿರುವ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ.

ಈ ದ್ವೀಪರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ವಿವಾಹದ ಹಕ್ಕು ಒದಗಿಸಬೇಕು ಎಂಬ ಚಳವಳಿ ಪ್ರಬಲವಾಗಿದ್ದು, ನ್ಯಾಯಾಲಯದಲ್ಲಿ ತಮ್ಮ ಪರವಾದ ತೀರ್ಪು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಸಲಿಂಗಿ ವಿವಾಹ ಹೋರಾಟಗಾರರು ಇದ್ದಾರೆ. ಆದರೆ ಸಂಪ್ರದಾಯವಾದಿಗಳು, ದೇಶದಲ್ಲಿ ಸಲಿಂಗಿ ವಿವಾಹಕ್ಕೆ ಅನುಕೂಲ ಕಲ್ಪಿಸುವ ಸಂಬಂಧ ಕಾನೂನು ಬದಲಾವಣೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಇಡೀ ಸಮಾಜ ಪರ ಹಾಗೂ ವಿರೋಧಿಗಳ ನಡುವೆ ಇಬ್ಭಾಗವಾಗಿದೆ. ಇಡೀ ದೇಶದಲ್ಲಿ ಪರ- ವಿರೋಧಿಗಳ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.
ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ನ್ಯಾಯಾಲಯ ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 4 ಗಂಟೆಗೆ ತನ್ನ ಆನ್‌ಲೈನ್ ತೀರ್ಪನ್ನು ಪ್ರಕಟಿಸಲಿದೆ. ತೈವಾನ್‌ನಲ್ಲಿ ಸಲಿಂಗಿ ವಿವಾಹಕ್ಕೆ ಅವಕಾಶ ಕಲ್ಪಿಸುವ ಕಾನೂನು ಸಂವಿಧಾನಬಾಹಿರವೇ ಎಂಬ ಬಗ್ಗೆ 14 ಮಂದಿ ನ್ಯಾಯಾಧೀಶರ ನ್ಯಾಯಪೀಠ ತೀರ್ಪು ನೀಡಲಿದೆ.

ಸಲಿಂಗಿ ಹಕ್ಕುಗಳ ಹೋರಾಟಗಾರ ಚಿ ಚಿಯ ವೀ ಈ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಒಯ್ದಿದ್ದರು. "ಸಲಿಂಗಿ ವಿವಾಹವನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಶೇಕಡ 100ರಷ್ಟು ವಿಶ್ವಾಸವಿದೆ" ಎಂದು 30 ವರ್ಷಗಳಿಂದ ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ ಚೀ (59) ಹೇಳುತ್ತಾರೆ. ಕಾನೂನಿಗೆ ಬದಲಾವಣೆ ತಂದಿರುವುದಕ್ಕೆ ಕೋರ್ಟ್ ಸಮ್ಮತಿ ಸೂಚಿಸಿದರೆ, ನಾಳೆಯಿಂದಲೇ ಸಲಿಂಗಿ ದಂಪತಿಯ ವಿವಾಹ ನೋಂದಣಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತೈವಾನ್‌ನ ನಾಗರಿಕ ಸಂಹಿತೆಯಂತೆ ವಿವಾಹ ಎನ್ನುವುದು ಪುರುಷ ಹಾಗೂ ಮಹಿಳೆ ನಡುವಿನ ಒಪ್ಪಂದವಾಗಿದೆ. ಇದಕ್ಕೆ ಬದಲಾವಣೆ ತಂದು, ಸಂವಿಧಾನಾತ್ಮಕವಾಗಿ ವಿವಾಹದ ಸ್ವಾತಂತ್ರ್ಯ ವಿಚಾರದಲ್ಲಿ ಸಮಾನತೆಯನ್ನು ಕಲ್ಪಿಸಬೇಕು ಎನ್ನುವುದು ಸಲಿಂಗಿ ವಿವಾಹದ ಪರವಾಗಿ ಹೋರಾಡುತ್ತಿರುವವರ ನಿಲುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News