ಹಿಂದಿ ಭಾಷಾ ಹೇರಿಕೆ: ಜೇನುಗೂಡಿಗೆ ಕಲ್ಲು

Update: 2017-05-24 18:46 GMT

ಹಿಂದಿ ಹೇರಿಕೆಯ ವಿರುದ್ಧ ಮಾತನಾಡುತ್ತಾ ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರು ‘‘ಈ ಹೇರಿಕೆ ಭಾರತವನ್ನು ಇಬ್ಭಾಗ ಮಾಡಲಿದೆ’’ ಎಂದು ಎಚ್ಚರಿಸಿದ್ದಾರೆ. ದಕ್ಷಿಣ ಭಾರತದ ವಿರುದ್ಧ ಕೇಂದ್ರ ಸರಕಾರದ ಸರ್ವಾಧಿಕಾರವನ್ನು ಮುಕ್ತವಾಗಿ ಖಂಡಿಸಿದ ಅವರು ‘‘ಜೈ ಭಾರತ್, ಜೈ ಹಿಂದ್ ಕೂಗಿನ ಬದಲು ಜೈ ಇಂಡಿಯಾ’ ಎಂದು ಕೂಗಲು ಕರೆ ನೀಡಿದ್ದಾರೆ. ಈಗಾಗಲೇ ಜಾತಿಯ ಹೆಸರಿನಲ್ಲಿ, ಕೋಮು ಹೆಸರಿನಲ್ಲಿ ಈ ದೇಶವನ್ನು ಮಾನಸಿಕವಾಗಿ ಇಬ್ಭಾಗಿಸುತ್ತಾ ಬಂದವರು, ಇದೀಗ ಭಾಷೆಯ ಹೆಸರಿನಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರಲು ಕೇಂದ್ರ ಸರಕಾರ ಹೊರಟಿದೆ.

ಈ ದೇಶ ಒಂದು ಜೇನು ಗೂಡು ಇದ್ದ ಹಾಗೆ. ಇಲ್ಲಿನ ಹತ್ತು ಹಲವು ವೈವಿಧ್ಯತೆಗಳೇ ಒಂದು ದೇಶವಾಗಿ ಜೋಡಿಸಲ್ಪಟ್ಟಿದೆ. ಇಲ್ಲಿರುವ  ಪ್ರತೀ ರಾಜ್ಯಗಳಿಗೆ ಅದರದೇ ಆದ ಅಸ್ಮಿತೆಗಳಿವೆ. ಸ್ವಂತಿಕೆಯಿದೆ. ಬರೇ ಭಾಷೆಯಲ್ಲಿ ಮಾತ್ರವಲ್ಲ, ನಂಬಿಕೆಗಳಲ್ಲೂ ಕೂಡ. ಈ ಅಸ್ಮಿತೆಯನ್ನು ಅಳಿಸಿ, ಇಡೀ ಭಾರತವನ್ನು ಒಂದೇ ಭಾಷೆ, ಒಂದೇ ನಂಬಿಕೆಯ ತಳಹದಿಯ ಮೇಲೆ ನಿಲ್ಲಿಸಲು ಹೊರಟರೆ ಜೇನು ಗೂಡಿಗೆ ಕಲ್ಲೆಸೆದಂತೆಯೇ ಸರಿ. ಅಂದರೆ ಎಲ್ಲ ರಾಜ್ಯಗಳು ತಮ್ಮ ತಮ್ಮ ಗುರುತುಗಳನ್ನು ರಕ್ಷಿಸಿಕೊಳ್ಳುವ ಭರದಲ್ಲಿ ‘ಒಂದೇ ದೇಶ’ ಎನ್ನುವ ಕಲ್ಪನೆಯನ್ನೇ ಅನುಮಾನದಿಂದ ನೋಡಬಹುದು.

ಚಂದ್ರಶೇಖರ ಪಾಟೀಲರ ಮಾತುಗಳಲ್ಲಿ ಈ ಆತಂಕ ಎದ್ದು ಕಾಣುತ್ತದೆ. ಬಿಜೆಪಿ ‘ರಾಷ್ಟ್ರೀಯತೆ’ಯ ಮೇಲೆ ನಂಬಿಕೆ ಇಟ್ಟಿದೆ. ‘ಹಿಂದುತ್ವ ರಾಷ್ಟ್ರೀಯತೆ’ಯನ್ನು ಜಾರಿಗೆ ತರಲು ಹೊಂಚು ಹಾಕುತ್ತಿದೆ. ಹಿಂದೂ ಎನ್ನುವ ಸಿದ್ಧಾಂತ, ಧರ್ಮ ಈ ದೇಶದಲ್ಲಿಲ್ಲ. ವೈವಿಧ್ಯಮಯ ಸಂಸ್ಕೃತಿಗಳಿರುವ ಈ ದೇಶದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಯಾವುದನ್ನು ‘ಹಿಂದೂ’ ಎಂದು ಕರೆಯಲು ಮುಂದಾಗಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ವೈದಿಕ ರೀತಿ ರಿವಾಜು, ಆಹಾರ ಸಂಸ್ಕೃತಿಯನ್ನು ಇಡೀ ದೇಶದ ಮೇಲೆ ‘ಹಿಂದುತ್ವ’ದ ಹೆಸರಲ್ಲಿ ಹೇರುವುದಕ್ಕೆ ಹೊರಟಿದೆ. ಒಂದು ರೀತಿಯಲ್ಲಿ ಇಡೀ ದೇಶವನ್ನೇ ಮತಾಂತರಿಸಲು ವೈದಿಕ ಶಕ್ತಿಗಳು ಆರೆಸ್ಸೆಸ್ ಮೂಲಕ ಹೊರಟಿವೆ. ಈ ದೇಶದ ಬಹುಸಂಖ್ಯಾತರು ಸೇವಿಸುವ ಗೋಮಾಂಸ ಆಹಾರದ ಮೇಲೆ ಎರಗಿರುವ ಈ ಶಕ್ತಿಗಳು, ಇದೀಗ ಇತರ ಮಾಂಸಾಹಾರಗಳ ಮೇಲೂ ತನ್ನ ಕೆಂಗಣ್ಣು ಬೀರಿವೆ.

ಮಾಂಸಾಹಾರದ ಕುರಿತಂತೆ ಕೀಳರಿಮೆಯನ್ನು ಹುಟ್ಟಿಸುತ್ತಿವೆ. ಉತ್ತರಭಾರತದಲ್ಲಿ ಹಂತ ಹಂತವಾಗಿ ಈ ಕಾರ್ಯದಲ್ಲಿ ಸರಕಾರ ಯಶಸ್ವಿಯಾಗುತ್ತಿದೆ. ಆದರೆ ದಕ್ಷಿಣ ಮತ್ತು ಈಶಾನ್ಯ ಭಾರತ ಮಾತ್ರ ಕೇಂದ್ರಕ್ಕೆ ಒಂದು ಸವಾಲಾಗಿದೆ. ವೈದಿಕ ಸಂಸ್ಕೃತಿಯನ್ನೇ ಹಿಂದೂ ಸಂಸ್ಕೃತಿಯೆಂದು ನಂಬಿಸುವ ಪ್ರಯತ್ನಕ್ಕೆ ಇಲ್ಲಿನ ಸಂಸ್ಕೃತಿ, ವೈವಿಧ್ಯಮಯ ಭಾಷೆಗಳು, ಆಹಾರ ಪದ್ಧತಿ , ಮಾಂಸಾಹಾರದ ತಳಹದಿಯಲ್ಲಿ ನಿಂತಿರುವ ಆಚರಣೆಗಳು ಉತ್ತರ ಭಾರತದ ವೈದಿಕ ಸಂಚಿಗೆ ಸವಾಲಾಗಿದೆ. ಆದುದರಿಂದಲೇ, ಮೊತ್ತ ಮೊದಲು ಪ್ರಾದೇಶಿಕ ಭಾಷೆಗಳನ್ನು ಮುಗಿಸುವುದಕ್ಕೆ ಕೇಂದ್ರ ಮೊದಲ ಆದ್ಯತೆಯನ್ನು ನೀಡಿದೆ. ಉತ್ತರ-ದಕ್ಷಿಣ ನಡುವೆ ದೊಡ್ಡ ಗೋಡೆಯಾಗಿರುವ ಪ್ರಾದೇಶಿಕ ಭಾಷೆಯೇ ನಾಶವಾದರೆ, ಉಳಿದ ಕಾರ್ಯವೆಲ್ಲ ಸುಲಭ. ನಮ್ಮ ಭಾಷೆ ಅಳಿದಂತೆಯೇ ಅದರ ಜೊತೆ ಜೊತೆಗೇ ನಮ್ಮ ಪರಂಪರೆ, ಆಚಾರ ವಿಚಾರಗಳೂ ನಾಶವಾಗುತ್ತಾ ನಾವು ಹಿಂದಿಯ ಕೈಗೊಂಬೆಗಳಾಗುತ್ತೇವೆ. ಈ ಕಾರಣಕ್ಕಾಗಿಯೇ ನಾವು ಹಿಂದಿಯ ಹೇರಿಕೆಯನ್ನು ಸರ್ವ ರೀತಿಯಲ್ಲಿ ಪ್ರತಿಭಟಿಸಬೇಕಾಗಿದೆ.

ಒಂದೆಡೆ ಹಿಂದಿಯನ್ನು ಬೇರೆ ಬೇರೆ ರೀತಿಯಲ್ಲಿ ಹೇರುತ್ತಲೇ ದಕ್ಷಿಣ ಭಾರತೀಯರ ಗುರುತುಗಳನ್ನು ನಾಶ ಮಾಡಲು ಇನ್ನಿತರ ರಾಜಕೀಯ ತಂತ್ರಗಳನ್ನೂ ಅನುಸರಿಸುತ್ತಿದೆ. ಮುಖ್ಯವಾಗಿ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವುದು ಅವುಗಳ ತಂತ್ರಗಳಲ್ಲಿ ಬಹುಮುಖ್ಯವಾದುದು. ತಮಿಳುನಾಡಿನಲ್ಲಿ ಈ ಪ್ರಯೋಗ ಭಾಗಶಃ ಯಶಸ್ವಿಯೂ ಆಗಿದೆ. ಪ್ರಾದೇಶಿಕ ಪಕ್ಷಗಳ ಹಿಡಿತ ಇರುವುದರಿಂದಲೇ ದಿಲ್ಲಿಯಲ್ಲಿ ತಮಿಳುನಾಡು ತನ್ನ ನಿಯಂತ್ರಣವನ್ನು ಹೊಂದಿದೆ. ಆಂಧ್ರಪ್ರದೇಶದ ನಾಯಕರಿಗೂ ದಿಲ್ಲಿಯ ವರಿಷ್ಠರು ಹೆದರುವುದು ಇದೇ ಕಾರಣಕ್ಕಾಗಿ. ಇದೀಗ ಜಯಲಲಿತಾ ಅವರ ನಿಧನದ ಬಳಿಕ ಅಣ್ಣಾ ಡಿಎಂಕೆಯನ್ನು ಒಡೆದು, ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಸ್ಥಾಪಿಸಲು ಹುನ್ನಾರ ನಡೆಯುತ್ತಿದೆ.

ಪನ್ನೀರ್ ಸೆಲ್ವಂ ಎನ್ನುವ ವ್ಯಕ್ತಿ ಕೇಂದ್ರದ ದಾಳವಾಗಿದ್ದಾರೆ. ಒಂದು ವೇಳೆ ಈ ತಂತ್ರದಲ್ಲಿ ಬಿಜೆಪಿ ಏನಾದರೂ ಯಶಸ್ವಿಯಾದರೆ ದಕ್ಷಿಣ ಭಾರತದ ಮೇಲೆ ಅದು ತೀವ್ರ ಪರಿಣಾಮವನ್ನು ಬೀರಲಿದೆ. ದ್ರಾವಿಡ ಸಂಸ್ಕೃತಿಯ ಮೇಲೆ ಮತ್ತೊಮ್ಮೆ ಆರ್ಯರ ಪ್ರಾಬಲ್ಯ ಸ್ಥಾಪನೆಯಾದಂತಾಗುತ್ತದೆ. ದಕ್ಷಿಣ ಭಾರತೀಯ ಆಚಾರ ವಿಚಾರಗಳೇ ಬೇರೆ, ಉತ್ತರ ಭಾರತೀಯರ ಸಂಸ್ಕೃತಿ, ಪರಂಪರೆಗಳೇ ಬೇರೆ. ದಕ್ಷಿಣ ಭಾರತದಲ್ಲಿ ಬಲಿ ಚಕ್ರವರ್ತಿ ಆಗಮಿಸುವ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಉತ್ತರ ಭಾರತೀಯರ ಮನಸ್ಸಿನಲ್ಲಿ ‘ಬಲಿ ಚಕ್ರವರ್ತಿ’ಯ ಕುರಿತಂತೆ ಏನಿದೆ ಎನ್ನುವುದು ಇತ್ತೀಚೆಗೆ ಅಮಿತ್ ಶಾ ಅವರಿಂದ ಬಯಲಾಗಿದೆ. ಅವರ ಪ್ರಕಾರ ‘ಓಣಂ’ ಆಚರಿಸುವುದು ತಪ್ಪು. ಬದಲಿಗೆ ಅದನ್ನು ‘ವಾಮನ ಜಯಂತಿ’ ಎಂದು ಆಚರಿಸಬೇಕಂತೆ. ವಾಮನ ಮೋಸದಿಂದ ನಾಶ ಮಾಡಿದ ಬಲಿಚಕ್ರವರ್ತಿ ಅವರ ಪಾಲಿಗೆ ಖಳನಾಯಕ.

ದಕ್ಷಿಣ ಭಾರತೀಯರು ಮತ್ತು ಈಶಾನ್ಯ ಭಾರತೀಯರು ಮಹಿಷಾಸುರನನ್ನು ಶ್ರೇಷ್ಠ ರಾಜ ಎಂದು ಭಾವಿಸುತ್ತಾರೆ. ಆದರೆ ಹಿಂದಿ ಪ್ರಾಬಲ್ಯವಿರುವ ಉತ್ತರ ಭಾರತೀಯರಿಗೆ ಆತನೊಬ್ಬ ರಾಕ್ಷಸ. ತುಳುನಾಡನ್ನೇ ತೆಗೆದುಕೊಳ್ಳೋಣ. ಇಲ್ಲಿನ ಹೆಚ್ಚಿನ ದೈವಗಳು ಜಾತಿವಾದವನ್ನು ವಿರೋಧಿಸಿ ಪ್ರಾಣ ಅರ್ಪಿಸಿಕೊಂಡವುಗಳು. ಆದರೆ ಇಂದಿಗೂ ಅವುಗಳನ್ನೆಲ್ಲ ಮರೆಮಾಚಿ, ತುಳು ದೈವಗಳನ್ನೇ ವೈದಿಕೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದುದರಿಂದ ಹಿಂದಿ ಹೇರಿಕೆ ಎನ್ನುವುದು ಬರೇ ಭಾಷೆಗಷ್ಟೇ ಸಮೀತವಾಗಿಲ್ಲ, ಆ ಮೂಲಕ ವೈದಿಕ ಸಂಸ್ಕೃತಿಯನ್ನು ಬಲವಂತವಾಗಿ ದ್ರಾವಿಡ ಸಂಸ್ಕೃತಿಯ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಇಂದು ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿಯೂ ಕೇಂದ್ರದ ಹೇರಿಕೆಯನ್ನು ವಿರೋಧಿಸಬೇಕು.

ಈ ಹೇರಿಕೆಯ ಹಿಂದಿರುವುದು ಸರಕಾರವಲ್ಲ, ಬದಲಿಗೆ ಆರೆಸ್ಸೆಸ್ ಚಿಂತನೆಗಳು. ಈ ಚಿಂತನೆಗಳಿಗೆ ದೇಶದ ವೈವಿಧ್ಯತೆಯ ಬಗ್ಗೆ ಅದರಲ್ಲೂ ದಕ್ಷಿಣ ಭಾರತೀಯ ನಂಬಿಕೆಗಳ ಬಗ್ಗೆ ಯಾವ ಗೌರವವೂ ಇಲ್ಲ. ಬದಲಿಗೆ ಅಸಹನೆಯಿದೆ. ಇತ್ತೀಚೆಗೆ ಬಿಜೆಪಿಯ ನಾಯಕನೊಬ್ಬ ‘‘ದಕ್ಷಿಣ ಭಾರತೀಯರ ಜೊತೆಗೆ ನಾವು ಬದುಕುತ್ತಿಲ್ಲವೇ?’’ ಎಂದು ಪ್ರತಿಕ್ರಿಯಿಸುವ ಮೂಲಕ ತನ್ನ ಜನಾಂಗೀಯ ಮನಸ್ಥಿತಿಯನ್ನು ಬಹಿರಂಗಪಡಿಸಿರುವುದೇ ಇದಕ್ಕೆ ಉದಾಹರಣೆ. ಉತ್ತರ ಭಾರತದ ಬಹುತೇಕ ನಾಯಕರಲ್ಲಿ ದಕ್ಷಿಣ ಭಾರತೀಯರ ಕುರಿತಂತೆ ಇಂತಹದೊಂದು ಅಸಹನೆಯಿದೆ. ಆದುದರಿಂದ, ಕೇಂದ್ರ ಸರಕಾರದ ಯಾವುದೇ ಹೇರಿಕೆ ಈ ದೇಶವನ್ನು ಉತ್ತರ ಭಾರತ-ದಕ್ಷಿಣ ಭಾರತ ಎಂದು ಸ್ಪಷ್ಟವಾಗಿ ಇಬ್ಭಾಗಿಸುವುದರಲ್ಲಿ ಅನುಮಾನವಿಲ್ಲ. ಜೇನುಗೂಡಿಗೆ ಕಲ್ಲೆಸೆಯುವ ಮೊದಲು ಕೇಂದ್ರ ಮತ್ತು ಆರೆಸ್ಸೆಸ್ ಇನ್ನೊಮ್ಮೆ ಯೋಚಿಸುವುದು ಒಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News