ಟಿವಿ ಪರದೆಯಲ್ಲೂ ಪ್ರತಿಭೆ ತೋರಿಸಿದ ಅಕ್ರಂ-ಅಖ್ತರ್

Update: 2017-05-25 05:47 GMT

ಕರಾಚಿ, ಮೇ 25: ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ವೇಗದ ಬೌಲಿಂಗ್ ಮೂಲಕ ಭಯಭೀತಿಗೊಳಿಸುತ್ತಿದ್ದ ಪಾಕಿಸ್ತಾನದ ಮಾಜಿ ಬೌಲರ್‌ಗಳಾದ ಶುಐಬ್ ಅಖ್ತರ್ ಹಾಗೂ ವಸೀಂ ಅಕ್ರಂ ಪಾಕಿಸ್ತಾನದ ಟಿವಿ ಪ್ರೊಮೊದಲ್ಲಿ ಒಟ್ಟಿಗೆ ಭಾಗವಹಿಸಿದ್ದಾರೆ. ಈ ಮೂಲಕ ತಾವೂ ನಟನೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ಅಖ್ತರ್ ಹಾಗೂ ಅಕ್ರಂ ಈ ಹಿಂದೆ ಪಾಕ್ ಪರ ಆಡುತ್ತಿದ್ದಾಗ ಹಲವು ಬಾರಿ ಹೊಸ ಚೆಂಡನ್ನು ಹಂಚಿಕೊಂಡಿದ್ದರು. ಇದೀಗ ಈ ಇಬ್ಬರು ಮಾಜಿ ಕ್ರಿಕೆಟಿಗರು ಟಿವಿ ಪರದೆಯಲ್ಲಿ ಹಾಸ್ಯನಟರಾಗಿ ಕಾಣಿಸಿಕೊಂಡು ಹೊಸ ಅಧ್ಯಾಯ ಆರಂಭಿಸಲು ಮುಂದಾಗಿದ್ದಾರೆ.

 ಟಿವಿ ಗೇಮ್ ಶೋ ‘ಜಿಯೋ ಖೇಲೋ ಪಾಕಿಸ್ತಾನ’ ಪ್ರೊಮೊಶನ್ ವೀಡಿಯೊದಲ್ಲಿ ಅಕ್ರಂ ಹಾಗೂ ಅಖ್ತರ್ ಒಟ್ಟಿಗೆ ನಟಿಸಿದ್ದಾರೆ. ವೀಡಿಯೊವನ್ನು ಟ್ವಿಟರ್ ಪೇಜ್‌ನಲ್ಲಿ ಹಾಕಿರುವ ಅಖ್ತರ್ ಅವರು ಅಕ್ರಂರ ನಟನಾ ಕೌಶಲವನ್ನು ಶ್ಲಾಘಿಸಿದ್ದಾರೆ.

ವಿಡಿಯೋದಲ್ಲಿ ಸಾಮಾನ್ಯ ವ್ಯಕ್ತಿಯ ಪಾತ್ರಧಾರಿ ಅಖ್ತರ್ ಅವರು ವ್ಯಾಪಾರಿ ಅಕ್ರಂಗೆ 40,000 ರೂ.ಗೆ ಕೋಳಿಯೊಂದನ್ನು ನೀಡುತ್ತಾನೆ. ಕೋಳಿ ಚಿನ್ನದ ಮೊಟ್ಟೆ ಇಡುವುದಾಗಿ ಹೇಳುತ್ತಾನೆ. ಹಲವು ದಿನಗಳ ಕಳೆದರೂ ಕೋಳಿ ಚಿನ್ನದ ಮೊಟ್ಟೆ ಇಡುವುದಿಲ್ಲ.ಇದರಿಂದ ಕೋಪಗೊಂಡ ವ್ಯಾಪಾರಿ ಅಕ್ರಂ, ಅಖ್ತರ್‌ಗೆ ತಾನು ನೀಡಿದ್ದ ಹಣ ವಾಪಸು ನೀಡಲು ಕೇಳುತ್ತಾರೆೆ. ಆಗ ಅಖ್ತರ್ ಹಣದ ಬದಲಿಗೆ ಗೇಮ್ ಶೋನ ಟಿಕೆಟ್ ನೀಡುತ್ತಾರೆ. ಗೇಮ್ ಶೋ ಹೇಗಿದೆ ಎಂದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಆದರೆ, ಅಖ್ತರ್ ಹಾಗೂ ಅಕ್ರಂ ಕಿರುತೆರೆಯಲ್ಲಿ ಉತ್ತಮ ನಟನೆಯಿಂದ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News