ಪ್ರಯಾಣ ನಿಷೇಧ: ಟ್ರಂಪ್‌ಗೆ ನ್ಯಾಯಾಲಯ ಮಂಗಳಾರತಿ

Update: 2017-05-26 03:45 GMT

ವಾಷಿಂಗ್ಟನ್, ಮೇ 26: ಆರು ಮುಸ್ಲಿಂ ಬಾಹುಳ್ಯದ ದೇಶಗಳ ಮಂದಿ ಅಮೆರಿಕಕ್ಕೆ ಆಗಮಿಸುವುದನ್ನು ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಕಾರ್ಯಾದೇಶವನ್ನು ಅಮೆರಿಕದ ಫೆಡರಲ್ ಅಪೀಲ್ಸ್ ಕೋರ್ಟ್ ತಳ್ಳಿಹಾಕಿದೆ. ಟ್ರಂಪ್ ಆಡಳಿತ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.

"ಅಧ್ಯಕ್ಷ ಟ್ರಂಪ್ ಅವರ ಪರಿಷ್ಕೃತ ಪ್ರವಾಸ ನಿಷೇಧ ಆದೇಶದಲ್ಲಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಗೊಂದಲಕಾರಿ ಅಂಶಗಳಿವೆ. ಆದರೆ ಧಾರ್ಮಿಕ ಅಸಹಿಷ್ಣುತೆ, ದ್ವೇಷಭಾವನೆ ಹಾಗೂ ತಾರತಮ್ಯದ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸಲಾಗುತ್ತಿದೆ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಮೆರಿಕದ ಸರ್ಕ್ಯೂಟ್ ಕೋಟ್ ಆಫ್ ಅಪೀಲ್ಸ್‌ನ ನಾಲ್ಕನೇ ಸರ್ಕ್ಯೂಟ್ ಕೋರ್ಟ್, ಈ ತೀರ್ಪನ್ನು 10-3 ಮತಗಳಿಂದ ನ್ಯಾಯಮೂರ್ತಿಗಳು ಆಂಗೀಕರಿಸಿದರು. ಈ ನಿಷೇಧ ಕ್ರಮವು ದೇಶದ ಸಂವಿಧಾನದ ತತ್ವಗಳನ್ನು ಉಲ್ಲಂಘಿಸುವಂಥದ್ದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇರಾನ್, ಲಿಬಿಯಾ, ಸೋಮಾಲಿಯಾ, ಸೂಡಾನ್, ಸಿರಿಯಾ ಮತ್ತು ಯೆಮನ್ ದೇಶಗಳ ಪ್ರಜೆಗಳ ವೀಸಾ ಕಡಿತಗೊಳಿಸುವುದನ್ನು ತಡೆಹಿಡಿದಿರುವ ಕೆಳ ನ್ಯಾಯಾಲಯದ ತೀರ್ಪನ್ನು ಕೋರ್ಟ್ ಆಫ್ ಅಪೀಲ್ಸ್ ಎತ್ತಿಹಿಡಿದಿದೆ.

ಪ್ರವಾಸ ನಿರ್ಬಂಧ ನೀತಿಯನ್ನು ಪರಿಷ್ಕರಿಸಿ, ಟ್ರಂಪ್ ಆಡಳಿತ ಕಳೆದ ಮಾರ್ಚ್‌ನಲ್ಲಿ ಆದೇಶ ಹೊರಡಿಸಿತ್ತು. ವರ್ಜೀನಿಯಾ ಮೂಲದ 4ನೇ ಸರ್ಕ್ಯೂಟ್ ಕೋರ್ಟ್ ಪರಿಷ್ಕೃತ ಆದೇಶದ ಬಗ್ಗೆ ಮೊದಲ ಬಾರಿಗೆ ತೀರ್ಪು ನೀಡಿದೆ. ಹವಾಲಿ ಫೆಡರಲ್ ನ್ಯಾಯಾಧೀಶರು ಕೂಡಾ ಈಗಾಗಲೇ ಈ ನಿರ್ಧಾರಕ್ಕೆ ತಡೆ ಒಡ್ಡಿದ್ದು, ಸ್ಯಾನ್‌ಫ್ರಾನ್ಸಿಸ್ಕೊ ಅಪೀಲ್ಸ್ ಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News