ಫಿಲಿಪ್ಪಿನ್ಸ್ ಕ್ಯಾಸಿನೊದಲ್ಲಿ ಗುಂಡುಹಾರಾಟ: ಕನಿಷ್ಠ 34 ಮಂದಿ ಸಾವು

Update: 2017-06-02 05:16 GMT

  ಮನಿಲಾ, ಜೂ.2: ಫಿಲಿಪ್ಪಿನ್ಸ್ ರಾಜಧಾನಿ ಮನಿಲಾದ ಕ್ಯಾಸಿನೊ ಒಂದರಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಗುಂಡು ಹಾರಾಟದಲ್ಲಿ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ. ದರೋಡೆ ಯತ್ನದ ಭಾಗವಾಗಿ ದುಷ್ಕರ್ಮಿ ಈ ಕೃತ್ಯ ಎಸಗಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ರೆಸಾರ್ಟ್ ವರ್ಲ್ಡ್ ಮನಿಲಾ ಎಂಟರ್‌ಟೈನ್‌ಮೆಂಟ್ ಕಾಂಪ್ಲೆಕ್ಸ್‌ಗೆ ನುಸುಳಿದ ದಾಳಿಕೋರ ಗ್ಯಾಬ್ಲಿಂಗ್ ಮಿಶನ್‌ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದರಿಂದ ಕ್ಯಾಸಿನೊದಲ್ಲಿ ಬೆಂಕಿ ಹತ್ತಿಕೊಂಡಿದೆ. ರೈಫಲ್‌ನಿಂದ ನೆರೆದಿದ್ದ ಜನರನ್ನು ಹೆದರಿಸಿದ್ದ ಗನ್ ಮ್ಯಾನ್ ಜನರಿಂದ ಕ್ಯಾಸಿನೊ ಚಿಪ್ಸ್‌ನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಕ್ಯಾಸಿನೊ ಒಳಗಿದ್ದವರು ದಟ್ಟವಾಗಿ ಹರಡಿದ್ದ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.

ಗುಂಡಿನ ದಾಳಿಯ ಬಳಿಕ ಹೊಟೇಲ್ ಕೊಠಡಿಯೊಳಗೆ ಪ್ರವೇಶಿಸಿದ್ದ ದುಷ್ಕರ್ಮಿ ಮೈಮೇಲೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನ್ಯಾಶನಲ್ ಪೊಲೀಸ್ ಮುಖ್ಯಸ್ಥ ರೊನಾಲ್ಡ್ ಡೆಲಾ ರೋಸಾ ಹೇಳಿದ್ದಾರೆ.

ಘಟನೆಯಿಂದ ಕನಿಷ್ಠ 54 ಮಂದಿ ಗಾಯಗೊಂಡಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಗ್ರರು ದಾಳಿ ನಡೆಸಿದ್ದಾರೆಂಬ ಭಾವಿಸಿದ್ದ ಜನರು ಕ್ಯಾಸಿನೊದಿಂದ ಪಾರಾಗಲು ಯತ್ನಿಸಿದ್ದಾರೆ. ‘‘ಇದೊಂದು ಉಗ್ರಗಾಮಿಯ ದಾಳಿಯಾಗಿ ಕಾಣಿಸುತ್ತಿಲ್ಲ. ಇದನ್ನು ದರೋಡೆಯ ದೃಷ್ಟಿಕೋನದಿಂದ ನೋಡಬಹುದು. ಏಕೆಂದರೆ ದುಷ್ಕರ್ಮಿ ಯಾರಿಗೂ ಗಾಯ ಮಾಡಿಲ್ಲ. ಕ್ಯಾಸಿನೊ ಚಿಪ್ಸ್ ಸ್ಟೋರೆಜ್‌ರೂಮ್‌ಗೆ ನೇರವಾಗಿ ಪ್ರವೇಶಿಸಿದ್ದ ಶಸ್ತ್ರಾಸ್ತ್ರಧಾರಿ, ಕ್ಯಾಸಿನೊ ಒಳಗೆ ನುಗ್ಗಿ ದೊಡ್ಡ ಗಾತ್ರದ ಟಿವಿ ಪರದೆಯನ್ನು ಧ್ವಂಸಗೊಳಿಸಿದ್ದ. ಟೇಬಲ್ ಮೇಲೆ ಪೆಟ್ರೊಲ್ ಸುರಿದ ಕಾರಣ ಬೆಂಕಿ ಹತ್ತಿಕೊಂಡಿದೆ ಎಂದು ಡೆಲಾ ರೊಸಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News